– ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಸಿನಿರಂಗದ ದಂತಕತೆ ನಟ, ಬಾಲಿವುಡ್‌ನ ‘ಹೀ-ಮ್ಯಾನ್’ ಎನ್ನಿಸಿಕೊಂಡ ಧರ್ಮೇಂದ್ರ ಅವರ ನಿಧನದಿಂದ ಸಿನಿಮಾ ಲೋಕದಲ್ಲಿ ಆಘಾತ ತಂದಿದೆ. ಧರ್ಮೇಂದ್ರ ಅವರು 89 ವರ್ಷದ ವಯಸ್ಸಿನಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಕಳೆದ ಕೆಲವು ವಾರಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ವಲ್ಪ ಚೇತರಿಕೆ ಕಂಡ ನಂತರ ಮನೆಗೆ ಬಂದಿದ್ದರೂ, ಅಂತಿಮವಾಗಿ ಉಸಿರಾಟದ ತೊಂದರೆಗಳು ತೀವ್ರಗೊಂಡು ಇಂದು ಇಹಲೋಕ ತ್ಯಜಿಸಿದ್ದಾರೆ.

ಬಾಲಿವುಡ್‌ನ ‘ಹೀ-ಮ್ಯಾನ್’ ಎನ್ನಿಸಿಕೊಂಡ ಧರ್ಮೇಂದ್ರ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಧರ್ಮೇಂದ್ರ ಅವರನ್ನು “ಅಪ್ರತಿಮ ನಟ” ಎಂದು ಕರೆಯುತ್ತ, ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದಲ್ಲಿ “ಒಂದು ಯುಗದ ಅಂತ್ಯ” ಸಂಭವಿಸಿದೆ ಎಂದು ಬರೆದಿದ್ದಾರೆ. “ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಅಪರೂಪದ ನಟರು. ವೈವಿಧ್ಯಮಯ ಪಾತ್ರಗಳಲ್ಲಿ ಅವರು ತೋರಿದ ನಟನಾ ಸಾಮರ್ಥ್ಯ ಅನೇಕ ತಲೆಮಾರುಗಳನ್ನು ಮೆಚ್ಚಿಸಿದೆ. ಅವರ ಸರಳತೆ, ವಿನಯ, ಅಭಿಮಾನಿಗಳ ಮೇಲಿನ ಪ್ರೀತಿ ಎಲ್ಲವೂ ಅವರನ್ನು ವಿಶಿಷ್ಟ ವ್ಯಕ್ತಿತ್ವವನ್ನಾಗಿ ನಿರ್ಮಿಸಿತು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ನಿಲ್ಲುತ್ತೇನೆ. ಓಂ ಶಾಂತಿ,” ಎಂದು ಮೋದಿ ಸ್ಮರಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ತಮ್ಮ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. “ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ಮತ್ತು ಐಕಾನಿಕ್ ನಟ ಧರ್ಮೇಂದ್ರ ಅವರ ನಿಧನ ತೀವ್ರ ಬೇಸರ ತಂದಿದೆ. ಅವರ ಮರೆಯಲಾಗದ ಅಭಿನಯ, ದಶಕಗಳ ಕಾಲ ಸಿನಿಮಾ ಸಂಸ್ಕೃತಿಗೆ ನೀಡಿದ ಕೊಡುಗೆ ಅನೇಕ ತಲೆಮಾರುಗಳ ಮೇಲೆ ಅಚ್ಚಳಿಯದ ಗುರುತು ಬಿತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಸಿಎಂ ಬರೆದಿದ್ದಾರೆ.

ಬಾಲಿವುಡ್ ಹೀ-ಮ್ಯಾನ್ ಧರ್ಮೇಂದ್ರ ವಿಧಿವಶ: ಹಲವು ಗಣ್ಯರಿಂದ ಸಂತಾಪ

ಬಾಲಿವುಡ್‌ ಚಿತ್ರರಂಗದ ಒಬ್ಬ ದಿಗ್ಗಜ, ‘ಹೀ-ಮ್ಯಾನ್’ ಎಂದೇ ಪ್ರಸಿದ್ಧಿ ಪಡೆದಿದ್ದ ನಟ ಧರ್ಮೇಂದ್ರ ವಯೋಸಹಜ ಖಾಯಿಲೆಯಿಂದ  ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 89ರ ವರ್ಷದಲ್ಲಿ ಅಸುನೀಗಿದ್ದಾರೆ. ಇದಕ್ಕೆ ಚಿತ್ರರಂಗದ ಹಲವಾರು ನಟ ನಟಿಯರು ಹಾಗೂ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಧರ್ಮೇಂದ್ರ ಅವರು 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅನಂತರ ಅವರು ‘ಅನ್ಪದ್’, ‘ಬಂದಿನಿ’, ‘ಅನುಪಮಾ’ ಮತ್ತು ‘ಆಯಾ ಸಾವನ್ ಝೂಮ್ ಕೆ’ ನಂತಹ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಹೃದಯಗಳಲ್ಲಿ ಸ್ಥಾನ ಪಡೆದುಕೊಂಡರು.

ಆದರೆ, ‘ಶೋಲೆ’, ‘ಧರಮ್ ವೀರ್’, ‘ಚುಪ್ಕೆ ಚುಪ್ಕೆ’, ‘ಮೇರಾ ಗಾಂವ್ ಮೇರಾ ದೇಶ್’ ಮತ್ತು ‘ಡ್ರೀಮ್ ಗರ್ಲ್’ ನಂತಹ ಅನೇಕ ಸೂಪರ್‌ಹಿಟ್ ಚಿತ್ರಗಳ ಮೂಲಕ ಅವರು ಬಾಲಿವುಡ್‌ನ ಅತ್ಯಂತ ನೆಚ್ಚಿನ ನಟರಲ್ಲಿ ಒಬ್ಬರಾದರು. ‘ಶೋಲೆ’ ಚಿತ್ರದಲ್ಲಿ ವೀರನಾಥನ ಪಾತ್ರವು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿ ನಿಲ್ಲುವುದರ ಜೊತೆಗೆ, ಅಮಿತಾಭ್ ಬಚ್ಚನ್ ಅವರೊಂದಿಗಿನ ಅವರ ಜೋಡಿಯನ್ನು ಚಿತ್ರ ಪ್ರೇಮಿಗಲು ಹೆಚ್ಚು ಇಷ್ಟ ಪಟ್ಟರು.

ತಮ್ಮ ವೃತ್ತಿಜೀವನದುದ್ದಕ್ಕೂ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ಇತ್ತೀಚೆಗೆ ‘ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ಅಭಿನಯಿಸಿದ್ದರು. ಈ ಚಿತ್ರವು ಅವರ ಕೊನೆಯ ಚಿತ್ರವಾಗಿ ಉಳಿಯಿತು. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು, ಐದು ದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ ಧರ್ಮೇಂದ್ರ ಅವರ ಪಾತ್ರ ಅಪಾರ.

ಅವರ ಅಪಾರ ಕೊಡುಗೆಯನ್ನ ಗುರುತಿಸಿ, ಭಾರತ ಸರಕಾರವು 2012ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವೈಯಕ್ತಿಕ ಜೀವನದಲ್ಲಿ, ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ನಂತರ, ನಟಿ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ಅವರು ತಮ್ಮ ಪತ್ನಿ ಹೇಮಾ ಮಾಲಿನಿ, ಪುತ್ರರು ಬಾಬಿ ಡಿಯೋಲ್ ಮತ್ತು ಸನ್ನಿ ಡಿಯೋಲ್, ಪುತ್ರಿಯರು ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಧರ್ಮೇಂದ್ರ ಅವರ ನಿಧನದ ಸುದ್ದಿಯು ಭಾರತೀಯ ಚಿತ್ರರಂಗದಲ್ಲಿ ಅಪಾರ ಸಂತಾಪವನ್ನು ವ್ಯಕ್ತವಾಗಿದೆ ಹಾಗೂ ಬಾಲಿವುಡ್‌ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಧರ್ಮೇಂದ್ರ ಅವರ ಪತ್ನಿ ಹಾಗೂ ಸಂಸದೆ ಹೇಮಾ ಮಾಲಿನಿ, ಮಕ್ಕಳಾದ ಬಾಬಿ ಡಿಯೋಲ್, ಸನ್ನಿ ಡಿಯೋಲ್, ಇಶಾ ಡಿಯೋಲ್, ಅಹಾನಾ ಡಿಯೋಲ್ ಅವರ ಮೊಮ್ಮಕ್ಕಳು ಹಾಗೂ ಚಿತ್ರಪ್ರೇಮಿಗಳನ್ನು ಧರ್ಮೇಂದ್ರ ಅಗಲಿದ್ದಾರೆ.

ಧರ್ಮೇಂದ್ರ ಅವರ ನಿಧನವು ಭಾರತೀಯ ಸಿನಿಮಾದ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರ ಅಭಿನಯ, ಅಣಕು ಮತ್ತು ಹೃದಯಸ್ಪರ್ಶಿ ಪಾತ್ರಗಳು ಚಿರಸ್ಮರಣೀಯವಾಗಿ ಉಳಿಯುವುದರ ಜೊತೆಗೆ, ಭವಿಷ್ಯದ ತಲೆಮಾರಿನ ನಟರು ಮತ್ತು ಪ್ರೇಕ್ಷಕರಿಗೆ ಪ್ರೇರಣೆಯಾಗಿ ಉಳಿಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ