- ರಾಘವೇಂದ್ರ ಅಡಿಗ ಎಚ್ಚೆನ್.
ರೆಬಲ್ ಸ್ಟಾರ್ ದಿವಂಗತ ಅಂಬರೀಶ್ ಅವರ 7ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ, ಅವರ ಹುಟ್ಟೂರಾದ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬರೀಶ್ ಪುತ್ಥಳಿ ಮಂಟಪವನ್ನು ಇಂದು ಅನಾವರಣ ಮಾಡಲಾಯಿತು.
ಗ್ರಾಮದ ಅಭಿಮಾನಿಗಳು ಸಮಾಧಿ ಸ್ಥಳದಲ್ಲೇ ಪ್ರೀತಿಪೂರ್ವಕವಾಗಿ ಪುತ್ಥಳಿ ಮಂಟಪವನ್ನು ನಿರ್ಮಿಸಿದ್ದು, ಅದನ್ನು ದಿವಂಗತ ಅಂಬರೀಶ್ ಅವರ ಪತ್ನಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪೂಜೆ ಸಲ್ಲಿಸಿ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಅಭಿಮಾನಿ ಅಂಬಿ ಪುಟ್ಟಣ್ಣ ನಿರ್ಮಿಸಿ ನಿರ್ದೇಶಿಸಿದ ‘ಗಂಜೇಂದ್ರ C/O…’ ಚಿತ್ರದ ಟೀಸರ್‌ನ್ನೂ ಬಿಡುಗಡೆ ಮಾಡಲಾಯಿತು.
ಮಂಟಪ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, “ಅಂಬರೀಶ್ ಅವರ ಪುಣ್ಯಸ್ಮರಣೆ ದಿನದಂದು ಅವರ ಪುತ್ಥಳಿಗೆ ಮಂಟಪ ನಿರ್ಮಿಸಿ ಅನಾವರಣ ಮಾಡಿರುವುದು ನನ್ನ ಮನಸ್ಸಿಗೆ ಅಪಾರ ಸಂತಸ. ಅಂಬರೀಶ್ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿ, ಗೌರವಕ್ಕೆ ನಾನು ಸದಾ ಚಿರಋಣಿ ಎಂದರು.
ಇನ್ನೂ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ನಿಧನಕ್ಕೆ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮದಲ್ಲೇ ಸುಮಲತಾ ಅಂಬರೀಶ್ ಅವರು ಸಂತಾಪ ವ್ಯಕ್ತಪಡಿಸಿದರು. ಧರ್ಮೇಂದ್ರ ಜೊತೆಗೆ ನಟಿಸಿದ ದಿನಗಳನ್ನು ನೆನೆಪು ಮಾಡಿಕೊಂಡ ಅವರು, “ಹಿಂದಿ ಚಿತ್ರ ಕ್ಷತ್ರಿಯದಲ್ಲಿ ನಾನು ಧರ್ಮೇಂದ್ರ ಅವರ ಪತ್ನಿಯಾಗಿ ಅಭಿನಯಿಸಿದ್ದೆ. ಆ ಸಮಯದ ಸ್ಮೃತಿಗಳು ನನ್ನ ಮನದಲ್ಲಿ ಇನ್ನೂ ಹಸಿರಾಗಿವೆ.
“ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ,” ಎಂದರು.





