– ರಾಘವೇಂದ್ರ ಅಡಿಗ ಎಚ್ಚೆನ್.
ನಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ. ಶೆಟ್ಟಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ವಿತರಣೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ರಾಜ್ ಬಿ. ಶೆಟ್ಟಿ ಒಡೆತನದ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಈಗಾಗಲೇ ಯಶಸ್ಸು ಕಂಡಿದೆ. ಕನ್ನಡ ಸಿನಿಮಾಗಳ ನಿರ್ಮಾಣ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳ ವಿತರಣೆಯಲ್ಲೂ ಈ ಸಂಸ್ಥೆ ಸೈ ಎನಿಸಿಕೊಂಡಿದೆ. ಈ ಮೊದಲು ಮಲಯಾಳಂ ಭಾಷೆಯ ‘ಲೋಕ:’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ರಾಜ್ ಬಿ. ಶೆಟ್ಟಿ ಲಾಭ ಮಾಡಿಕೊಂಡಿದ್ದರು. ಈಗ ಇನ್ನೊಂದು ಮಲಯಾಳಂ ಸಿನಿಮಾ ‘ಇಕೋ’ ಕೂಡ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಕೂಡ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯೇ ವಿತರಣೆ ಮಾಡಿದೆ.

ಈ ಮೂಲಕ ಮಲಯಾಳಂ ಸಿನಿಮಾ ವಿತರಣೆಯಲ್ಲಿ ರಾಜ್ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಮತ್ತೊಂದು ದಾಖಲೆ ಮಾಡುತ್ತಿದೆ. ನವೆಂಬರ್ 21ರಂದು ‘ಇಕೋ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾಗೆ ಅತ್ಯುತ್ತಮ ವಿಮರ್ಶೆಗಳು ಸಿಕ್ಕಿವೆ. ‘ಲೋಕಃ’ ಸಿನಿಮಾ ರೀತಿಯೇ ‘ಇಕೋ’ ಸಿನಿಮಾ ಕೂಡ ಭರ್ಜರಿಯಾಗಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ.

ಒಟ್ಟಿನಲ್ಲಿ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಈ ಸಂಸ್ಥೆಯ ಪಾಲಿಗೆ 2025 ಭಾರಿ ಸಕ್ಸಸ್ ತಂದುಕೊಟ್ಟಿರುವ ವರ್ಷ. ಇದೇ ಬ್ಯಾನರ್ ಮೂಲಕ ನಿರ್ಮಾಣ ಆಗಿದ್ದ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯಿತು. ಈ ಸಂಸ್ಥೆ ಮೂಲಕ ವಿತರಣೆಯಾದ ‘ಲೋಕಃ’ ಕೂಡ ಧೂಳೆಬ್ಬಿಸಿತು. ಈಗ ‘ಇಕೋ’ ಸಿನಿಮಾದ ಸರದಿ.

ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಮೂಲಕ ಗೆಲುವು ಕಂಡ ಖುಷಿ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಗೆ ಇದೆ. ವಿಶೇಷ ಕಥಾಹಂದರದ ಕಾರಣದಿಂದ ಮಲಯಾಳಂ ಸಿನಿಮಾಗಳು ಗಮನ ಸೆಳೆಯುತ್ತವೆ. ‘ಇಕೋ’ ಸಿನಿಮಾ ಕೂಡ ಈ ವಿಷಯದಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಬೆಂಗಳೂರಲ್ಲಿ ಹೌಸ್ಫುಲ್ ಆಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

‘ಇಕೋ’ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಇದೆ. ಸಂದೀಪ್ ಪ್ರದೀಪ್, ವಿನೀತ್, ಸೌರಭ ಸಚ್ದೇವ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಸ್ಟಾರ್ ಸಿನಿಮಾಗಳಿಗೆ ಕೂಡ ‘ಇಕೋ’ ಚಿತ್ರ ಪೈಪೋಟಿ ನೀಡುತ್ತಿದೆ. ಈ ಸಿನಿಮಾದಲ್ಲಿನ ತಾಂತ್ರಿಕ ಗುಣಮಟ್ಟ, ಕಲಾವಿದರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.





