- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ನಾಡಿನ ಪ್ರತಿಭೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿಸಿದೆ. ಖ್ಯಾತ ಉದ್ಯಮಿ ಮತ್ತು ನಿರ್ಮಾಪಕಿ ಅಮೃತ ವಿಜಯ ಟಾಟಾ ಅವರು ಚೀನಾದಲ್ಲಿ ನಡೆದ 2025 ಸಾಲಿನ ‘ವಿಮೆನ್ಸ್ ಆಫ್ ದಿ ಯೂನಿವರ್ಸ್’ (Women of the Universe) ಸೌಂದರ್ಯ ಮತ್ತು ಪ್ರತಿಭೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದು ಅಮೃತ ಅವರ ಅಂತರರಾಷ್ಟ್ರೀಯ ಮೆರವಣಿಗೆಯಲ್ಲಿ ಇನ್ನೊಂದು ಸುವರ್ಣ ಅಧ್ಯಾಯವಾಗಿದೆ. ಈ ಹಿಂದೆ, ಭಾರತದಲ್ಲಿ ನಡೆದ ‘ಮಿಸ್ಸಸ್ ಇಂಡಿಯಾ’ ಸ್ಪರ್ಧೆಯಲ್ಲಿ ಅವರು ವಿಜೇತರಾಗಿ ತಮ್ಮ ಮೊದಲ ಪ್ರಮುಖ ಕಿರೀಟವನ್ನು ಗೆದ್ದಿದ್ದರು. ಮೂಲತಹ ಪಂಜಾಬ್ನವರಾದ ಅಮೃತ, ಬೆಂಗಳೂರಿನಲ್ಲಿ ನೆಲೆಸಿದ್ದು, ಕರ್ನಾಟಕದೊಂದಿಗೆ ತಮ್ಮ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಅವರು ‘ಮಿಸ್ಸಸ್ ಇಂಡಿಯಾ’ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಕಿರೀಟವನ್ನು ಪಡೆದಿದ್ದಾರೆ.
ಸೌಂದರ್ಯ ಸ್ಪರ್ಧೆಯ ವಿಜಯವೇ ಅವರ ಏಕೈಕ ಗುರಿಯಲ್ಲ. ಅಮೃತ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿರ್ಮಾಪಕಿಯಾಗಿ ತಮ್ಮ ಗುರುತನ್ನು ಸ್ಥಾಪಿಸುತ್ತಿದ್ದಾರೆ. ‘ಮಿಸ್ಸಸ್ ಇಂಡಿಯಾ’ ಗೆದ್ದ ಆ ಸಂತೋಷ ಮತ್ತು ಗೌರವದ ಕ್ಷಣದ ಸಾಕ್ಷಿಯಾಗಿಯೇ ಅವರು ‘ಸಿನಿ ಕ್ರಾಫ್ಟ್’ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದರು. ಈ ಸಂಸ್ಥೆಯ ಮೂಲಕ ಅವರು ಹಲವಾರು ಕನ್ನಡ ಚಲನಚಿತ್ರಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.
‘ವಿಮೆನ್ಸ್ ಆಫ್ ದಿ ಯೂನಿವರ್ಸ್’ ಖಿತಾಬವು ಅಮೃತ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ, ಬೆಂಗಳೂರು ಮತ್ತು ಸಂಪೂರ್ಣ ಕರ್ನಾಟಕಕ್ಕೆ ಸಲ್ಲುವ ಗೌರವವಾಗಿದೆ. ಚೀನಾದ ಸ್ಟೇಜ್ನಲ್ಲಿ ಕನ್ನಡತಿಯೊಬ್ಬರು ವಿಜೇತರಾಗಿ ನಿಂತು, ರಾಜ್ಯದ ಕೀರ್ತಿಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಭಾರತದ ‘ಮಿಸ್ಸಸ್ ಇಂಡಿಯಾ’ ಆಗಿ ಪ್ರಾರಂಭಿಸಿದ ಪ್ರಯಾಣ, ‘ವಿಮೆನ್ಸ್ ಆಫ್ ದಿ ಯೂನಿವರ್ಸ್’ ಆಗಿ ಜಗತ್ತಿನ ಮಟ್ಟಕ್ಕೆ ಎದ್ದು ಕಾಣುವಂತಹ ಸಾಧನೆಯಾಗಿ ಮಾರ್ಪಟ್ಟಿದೆ.
ಅಮೃತ ವಿಜಯ ಟಾಟಾ ಅವರ ಈ ಸಾಧನೆ ಸಾಕಷ್ಟು ಪ್ರೇರಣಾದಾಯಕವಾಗಿದೆ. ಸೌಂದರ್ಯ, ಪ್ರತಿಭೆ, ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ಈ ಎಲ್ಲಾಕ್ಷೇತ್ರದಲ್ಲೂ ಅವರು ತಮ್ಮ ಚಾಪು ಮೂಡಿಸಿದ್ದಾರೆ.ಹೀಗೆ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಗಳಿಸುವುದರಲ್ಲಿ ಅವರು ಮಾರ್ಗದರ್ಶಿಯಾಗಿದ್ದಾರೆ. ಕರ್ನಾಟಕದ ಮಣ್ಣು ಮತ್ತು ಸಂಸ್ಕೃತಿಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡು, ಅದರ ಹೆಸರನ್ನು ಜಗತ್ತಿಗೆ ತಲುಪಿಸುತ್ತಿರುವ ಅಮೃತ ಅವರಿಗೆ ರಾಜ್ಯದ ಕನ್ನಡಿಗರ ಪಕ್ಷದಿಂದ ಅಭಿನಂದನೆಗಳು.





