ಮಾನವ ಬಲು ಭಾವಜೀವಿ. ಅದರಲ್ಲೂ ನೊಂದ ಹೆಣ್ಣುಮಕ್ಕಳು ತಮಗಿನ್ನು ಭವಿಷ್ಯವೇ ಇಲ್ಲ ಎಂದು ಸದಾ ನಿರಾಶಾಕೂಪದಲ್ಲಿ ಮುಳುಗಿಹೋಗುತ್ತಾರೆ. ನಮಗಿಂತ ಕಷ್ಟದಲ್ಲಿರುವವರನ್ನು ಕಂಡು, ನಾವು ಹೇಗೆ ಹಂತ ಹಂತವಾಗಿ ಮೇಲೇರಬಹುದು ಎಂದು ಅರಿತು, ಅದಕ್ಕಾಗಿ ಸ್ವಪ್ರಯತ್ನದಿಂದ ಮುಂದೆ ಯಶಸ್ಸನ್ನು ಪಡೆಯುವ ದಾರಿಯ ಬಗ್ಗೆ ತಿಳಿಯೋಣವೇ.......?
ಪ್ರತಿಯೊಬ್ಬ ಹೆಣ್ಣುಮಕ್ಕಳ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ವೈಫಲ್ಯಗಳು ಎದುರಾಗುತ್ತಲೇ ಇರುತ್ತವೆ. ಹುಟ್ಟಿನಿಂದಲೇ ಕೆಲವು ನ್ಯೂನತೆಗಳು ಇರುವುದು, ಗುಣವಾಗದ ಕಾಯಿಲೆಗಳು ಬರುವುದು, ನೌಕರಿ ಸಿಗದಿರುವುದು, ವೃತ್ತಿಯಲ್ಲಿ ಬಡತಿ ತಪ್ಪಿ ಹೋಗುವುದು, ಪ್ರೇಮ ವೈಫಲ್ಯ, ದಾಂಪತ್ಯದಲ್ಲಿ ಬಿರುಕು, ಗೆಳೆಯ ಗೆಳತಿಯರಲ್ಲಿ, ಕುಟುಂಬದರಲ್ಲಿ ಜಗಳ, ಹಣಕಾಸಿನಲ್ಲಿ ಅಥವಾ ಇನ್ನೇನೋ ರೀತಿಯಲ್ಲಿ ವೆಚನೆಗೊಳಗಾಗುವುದು ಹೀಗೆ..... ಇದತ್ತೆ ಕೊನೆಯೇ ಇಲ್ಲ. ಬೇರೆ ಬೇರೆ ರೀತಿಯಲ್ಲಿ ಆಘಾತಗಳು, ನಿರಾಸೆಗಳು ಉಂಟಾದಾಗ ಜೀವನವೇ ಸಾಕೆನ್ನುವ ಭಾವನೆಗಳು ಬರಲು ಆರಂಭಿಸುತ್ತದೆ. ದುಡುಕಿನ ಅಸಮರ್ಪಕ ನಿರ್ಧಾರ ತೆಗೆದುಕೊಳ್ಳುವ ಬದಲು ನಿಧಾನವಾಗಿ ಯೋಚಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ ಎಂದು ಭರವಸೆ ಇಟ್ಟುಕೊಂಡು ಬದುಕುವುದು ಲೇಸು.
`ನಮ್ಮ ದಾರಿಯಲ್ಲಿ ಯಾವುದೇ ಅಡೆತಡೆಗಳಿಲ್ಲದಿದ್ದರೆ ಆ ದಾರಿ ನಮ್ಮನ್ನು ಎಲ್ಲಿಗೂ ಕರೆದೊಯ್ಯಲಾರದು,' ಎಂದು ಅಮೆರಿಕಾದ ಪ್ರಸಿದ್ಧ ಪ್ರಚನಕಾರ ಫ್ರಾಂಕ್ ಕ್ಲರ್ಕ್ ಅಭಿಪ್ರಾಯ ಪಟ್ಟಂತೆ, ಜೀವನದಲ್ಲಿ ಯಶಸ್ಸು ಗಳಿಸಬೇಕೆಂದಾದರೆ ನಾವು ಅದನ್ನು ಕಷ್ಟಪಟ್ಟು ಸಂಪಾದಿಸಬೇಕು. ಬಂಗಾರದ ತಟ್ಟೆಯಲ್ಲಿಟ್ಟು ಯಾರೂ ಕೊಡುವುದಿಲ್ಲ. ರಭಸದಿಂದ ಹರಿಯುವ ನೀರಿಗೆ ಯಾವುದೇ ಅಡೆ ತಡೆ ಇರದೆ ಇರುತ್ತಿದ್ದರೆ, ಅದು ಹರಿದು ಸಮುದ್ರಕ್ಕೆ ಸೇರುತ್ತಿತ್ತಷ್ಟೆ. ಅಂತಹ ನೀರಿಗೆ ಅಣೆಕಟ್ಟು ಎಂಬ ಅಡ್ಡಿ ಎದುರಾದ ಬಳಿಕ ವಿದ್ಯುಚ್ಛಕ್ತಿ ಉತ್ಪಾದನೆ ಆಯಿತು. ವಿದ್ಯುಚ್ಛಕ್ತಿಯಿಂದ ಎಷ್ಟೆಲ್ಲ ಉಪಯೋಗಗಳಿವೆ, ಅದರಿಂದ ನಾಗರಿಕತೆ ಎಷ್ಟೊಂದು ಮುಂದುವರಿಯಿತು, ತಂತ್ರಜ್ಞಾನ ಎಷ್ಟೊಂದು ಬೆಳೆಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.
ಹಾಗೆಯೇ ಇಂತಹ ಅಡ್ಡಿ ಎದುರಿಸಿ ಅಣೆಕಟ್ಟಿನೊಳಗೆ ಬಂಧಿಯಾದ ನೀರು ಕೋಟ್ಯಂತರ ಜನರ ದಾಹವನ್ನು ತೀರಿಸುತ್ತಿರುವುದಷ್ಟೆ ಅಲ್ಲ, ಬೆಳೆ ಬೆಳೆಸಲು ಸಹಕಾರಿಯಾಗಿ ನಮ್ಮೆಲ್ಲರ ಹೊಟ್ಟೆ ತುಂಬಿಸುವ ಆಹಾರವನ್ನು ಉತ್ಪಾದಿಸಲು ತನ್ನ ಪ್ರಮುಖ ದೇಣಿಗೆಯನ್ನು ನೀಡುತ್ತಲೇ ಬಂದಿದೆ. ತನ್ನನ್ನು ಬಂಧಿಸಿದ್ದಾರೆಂದು ನೀರು ಎಲ್ಲಿಯಾದರೂ ಅಸಮಾಧಾನ ಗೊಳ್ಳುವಂತಿದ್ದರೆ ಎಷ್ಟೊಂದು ಅನರ್ಥ ಉಂಟಾಗುತ್ತಿತ್ತು ಅಲ್ಲವೇ....? ನಮಗುಂಟಾದ ಅಡ್ಡಿಯಿಂದ ಪ್ರಪಂಚಕ್ಕೆ ಏನೋ ಒಂದು ಅನುಕೂಲವಾಗಲೂಬಹುದು ಎಂಬ ಯೋಚನೆ ಕ್ಷಣ ಕಾಲ ಬಂದರೂ ನಾವು ಅಂತಹ ಅಡ್ಡಿಗಾಗಿ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.
ಕಥೆಯಿಂದ ನೀತಿ
ರೈತನೊಬ್ಬನು ಸಾಕಿದ್ದ ಕತ್ತೆಯೊದು ಮುದಿಯಾಗಿ ಒಮ್ಮೆ ಅದು ತಪ್ಪಿ ಹಾಳು ಬಾವಿಯೊಂದಕ್ಕೆ ಬಿತ್ತು. ಕತ್ತೆ ಹೇಗೂ ಮುದಿಯಾಗಿದೆ, ಅದನ್ನು ಮೇಲೆಕ್ಕೆತ್ತಿ ಏನು ಪ್ರಯೋಜನ ಎಂದು ರೈತ ಅದನ್ನು ಅಲ್ಲಿಯೇ ಹೂತು ಹಾಕಲು ತನ್ನ ಮನೆಯ ಸುತ್ತಮುತ್ತ ಇದ್ದ ಕಸ ಕಡ್ಡಿ, ಮಣ್ಣು, ಕಲ್ಲುಗಳನ್ನೆಲ್ಲ ಬಾವಿಗೆ ಸುರಿಯಲು ಶುರು ಮಾಡಿದ. ಮೊದ ಮೊದಲು ತನ್ನ ಮೈ ಮೇಲೆ ಇದೆಲ್ಲ ಬೀಳುತ್ತಿದ್ದ ಕಲ್ಲು ಮಣ್ಣುಗಳ ಹೊಡೆತಕ್ಕೆ ಅರಚುತ್ತಿದ್ದ ಕತ್ತೆ, ನಂತರ ಅವುಗಳನ್ನು ಕೊಡವಿಕೊಂಡು ಅವು ಕೆಳಗೆ ಬಿದ್ದ ಮೇಲೆ ಅವುಗಳ ಮೇಲೆಯೇ ಹತ್ತಿ, ನೋಡು ನೋಡುತ್ತಿದ್ದಂತೆಯೇ, ತನ್ನ ಸ್ವಪ್ರಯತ್ನದಿಂದ, ಬಾವಿಯಿಂದ ಮೇಲೆದ್ದು ಬಂದೇ ಬಿಟ್ಟಿತು!





