ತೆಲುಗು ಚಿತ್ರ `ಲೋಫರ್'ನಿಂದ ತನ್ನ ಅಭಿನಯ ಕೆರಿಯರ್ ಆರಂಭಿಸಿದ ನಟಿ ದಿಶಾ ಮೂಲತಃ ಉತ್ತರಾಖಂಡದವಳು. ಆದರೆ ಆಕೆ ಜನಿಸಿದ್ದು ಬರೇಲಿಯಲ್ಲಿ. ಈಕೆಯ ಕುಟುಂಬ ಈಗಲೂ ಬರೇಲಿಯಲ್ಲಿ ವಾಸಿಸುತ್ತಿದೆ. ತಂದೆ ಜಗದೀಪ್ ಪಟಾನಿ ಡಿಎಸ್‌ಪಿ ಆಗಿದ್ದಾರೆ. ಅವರ ಸೋದರಿ ಖುಶ್ಬೂ ಪಟಾನಿ ಸೇನೆಯಲ್ಲಿದ್ದಾರೆ. ದಿಶಾ ಕೂಡ ಪೈಲಟ್ ಆಗಲು ಯೋಚಿಸಿದ್ದಳು. ಆದರೆ ಕಾಲೇಜು ದಿನಗಳಲ್ಲಿ ಮುಂಬೈನಲ್ಲಿ ನಡೆದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಳು. ಬಳಿಕ ಶೂಟಿಂಗ್‌ಗಾಗಿ ಮುಂಬೈಗೆ ಹೋಗುವಂತಾಯಿತು.
ಮುಂಬೈಗೆ ಹೋದಾಗೆಲ್ಲ 1-2 ದಿನ ಹೆಚ್ಚಿಗೆ ಇದ್ದು, ಆಡಿಶನ್ ಕೊಟ್ಟು ಬರುತ್ತಿದ್ದಳು. ಇದರಿಂದಾಗಿ ಅವಳಿಗೆ ಮಾಡೆಲಿಂಗ್‌ನಲ್ಲಿ ಅವಕಾಶಗಳು ಸಿಗತೊಡಗಿದವು. ಬಳಿಕ ಚಲನಚಿತ್ರಗಳಲ್ಲೂ ಆಫರ್ ಬರತೊಡಗಿದವು. 2015ರಲ್ಲಿ ಮಿಸ್ ಇಂಡಿಯಾದ ರನ್ನರ್ ಅಪ್ ಕೂಡ. `ಧೋನಿ ಆ್ಯನ್ ಅನ್‌ಟೋಲ್ಡ್ ಸ್ಟೋರಿ' ಅವಳ ಮೊದಲ ಚಿತ್ರ. ಸಿನಿಮಾದಲ್ಲಿನ ಇವಳ ಅಭಿನಯ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.
ಆಡಿಶನ್‌ನಿಂದ ಅಭಿನಯ ಕಲಿತೆ
ದಿಶಾಗೆ `ಕುಂಗ್‌ಫು ಯೋಗಾ'ದಲ್ಲಿ ಸೂಪರ್ ಸ್ಟಾರ್ ಜಾಕಿ ಚ್ಯಾನ್ ಜೊತೆಗೆ ಅಭಿನಯಿಸುವ ಅವಕಾಶ ದೊರೆತಿತ್ತು. ಆದರೆ ಈ ಚಿತ್ರ ಹೆಚ್ಚು ಓಡಲಿಲ್ಲವಾದರೂ ದಿಶಾ ಅಭನಯಕ್ಕೆ ಒಳ್ಳೆಯ ಮಾತುಗಳು ಕೇಳಿ ಬಂದವು. ಆ ಬಳಿಕ `ಬಾಗಿ-2' ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದಳು.
ದಿಶಾ ಆ್ಯಕ್ಟಿಂಗ್‌ನ ಹೊರತಾಗಿ ಮಾಡೆಲಿಂಗ್ ಕೂಡ ಮಾಡುತ್ತಾಳೆ. ಈವರೆಗಿನ ತನ್ನ ಕೆಲಸದ ಬಗ್ಗೆ ಅವಳಿಗೆ ಸಂಪೂರ್ಣ ತೃಪ್ತಿ ಇದೆ. ಏಕಾಂಗಿಯಾಗಿರುವುದು ಮತ್ತು ತನಗಾಗಿ ಕೆಲವು ವಿಶೇಷ ರೆಸಿಪಿ ಮಾಡಿಕೊಳ್ಳುವುದು ಅವಳಿಗಿಷ್ಟ. ಆಡಿಶನ್‌ನಿಂದಲೇ ಅಭಿನಯ ಕರಗತವಾಯಿತು ಎಂದು ಹೇಳುತ್ತಾಳೆ.
``ನಾನು ಬಾಲ್ಯದಿಂದಲೇ ಸಂಕೋಚ ಪ್ರವೃತ್ತಿಯವಳು. ಅಭಿನಯದ ಬಗ್ಗೆ ಎಂದೂ ಯೋಚಿಸಿದವಳೇ ಅಲ್ಲ. ನಾನು ಈ ಕ್ಷೇತ್ರಕ್ಕೆ ಬಂದಾಗ ಅದೆಷ್ಟು ಆಡಿಶನ್ ಕೊಟ್ಟೆ ಎಂದರೆ, ನನ್ನ ಭಯ ಓಡಿಹೋಯಿತು,'' ಎಂದು ದಿಶಾ ತನ್ನ ಮನಸ್ಸಿನ ಮಾತನ್ನು ಹೇಳುತ್ತಾಳೆ.
ಅವಳ ಈ ಅಭಿನಯ ಪಯಣದಲ್ಲಿ ಕುಟುಂಬದವರ ಸಹಕಾರ ಸಾಕಷ್ಟು ದೊರೆಯಿತು. ಎಷ್ಟೋ ಸಲ ಅವಳಿಗೆ ತಾನು ಗುರಿ ತಲುಪಲು ಆಗುವುದಿಲ್ಲ, ಮನೆಗೆ ವಾಪಸ್ ಹೋಗಬೇಕೆಂದು ಅನಿಸುತ್ತಿತ್ತು. ಆಗ ಕುಟುಂಬದವರು ಅಕೆಗೆ ಧೈರ್ಯ ನೀಡಿ ಪ್ರಯತ್ನ ಕೈಬಿಡಬಾರದೆಂದು ಹೇಳಿದರು.
``ನನ್ನ ಕುಟುಂಬದವರು ನನ್ನ ಮೇಲೆ ವಿಶ್ವಾಸ ಇಟ್ಟರು ಹಾಗೂ ಏಜೆನ್ಸಿ ಒಳ್ಳೆಯ ಸಿನಿಮಾ ದೊರಕಿಸಿಕೊಡುವಲ್ಲಿ ಸಂಪೂರ್ಣ ಸಹಕಾರ ನೀಡಿತು. ಹೊಸ ಕಲಾವಿದೆಯೊಬ್ಬಳಿಗೆ ಸೂಕ್ತ ಏಜೆನ್ಸಿ ದೊರಕುವುದು ಅತ್ಯವಶ್ಯ. ಇದರಲ್ಲಿ ಸಂಘರ್ಷ ಕಡಿಮೆ ಇತ್ತು. ನಾನು ಕಠಿಣ ಪರಿಶ್ರಮದಲ್ಲಿ ವಿಶ್ವಾಸ ಇಡುತ್ತೇನೆ. ಎಷ್ಟೇ ಸಲ ಕೆಳಕ್ಕೆ ಬಿದ್ದರೂ ಒಂದು ದಿನ ನನ್ನ ವ್ಯಕ್ತಿತ್ವ ಏನು ಎನ್ನುವುದನ್ನು ನಿರೂಪಿಸಬೇಕು.''
ಗಾಳಿಮಾತುಗಳಿಂದ ಕಂಗೆಡುವುದಿಲ್ಲ. ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸುವುದು ಮತ್ತು ಸವಾಲನ್ನು ಸ್ವೀಕರಿಸುವುದೆಂದರೆ ದಿಶಾಗೆ ಬಲು ಖುಷಿ. ಅವಳ ಪ್ರಕಾರ, ಪಾತ್ರ ಚಿಕ್ಕದಾಗಿರಬಹುದು, ಆದರೆ ಆ ಪಾತ್ರ ಪ್ರಭಾವಶಾಲಿಯಾಗಿರಬೇಕು. ಸಂಕೋಚದ ಸ್ವಭಾವದವಳಾದ್ದರಿಂದ ಅವಳಿಗೆ ಸ್ನೇಹಿತರ ಸಂಖ್ಯೆ ತುಂಬಾ ಕಡಿಮೆ. ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದು ಅಷ್ಟಕ್ಕಷ್ಟೆ. `ಬಾಗಿ-2' ಬಳಿಕ ಟೈಗರ್ ಶ್ರಾಫ್ ಒಳ್ಳೆಯ ಸ್ನೇಹಿತನಾದ. ಅವನ ಜೊತೆ ಲಂಚ್ ಮತ್ತು ಡಿನ್ನರ್ ಮಾಡುವುದು ಇಷ್ಟವಾಗುತ್ತದೆ.