ಮಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಸಿನಿಮಾದ ರೆಕಾರ್ಡ್ ಬ್ರೇಕ್ ಆಗಿದೆ. ಮೋಹನ್ ಲಾಲ್ ಚಿತ್ರ ಜೀವನದಲ್ಲೇ 300 ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿದ್ದ ದೃಶ್ಯಂ 3 ದಾಖಲೆಯನ್ನ ಬಾಲಿವುಡ್ ನ ದೃಶ್ಯಂ 3 ಬ್ರೇಕ್ ಮಾಡಿದೆ. ದೃಶ್ಯಂ 3: ದಿ ಕನ್‌ಕ್ಲೂಷನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಟ ಅಜಯ್ ದೇವಗನ್ ಅಭಿನಯದಲ್ಲಿ ಚಿತ್ರಕಥೆಯನ್ನ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿ ಇಡೀ ಬಾಲಿವುಡ್ ನ್ನೇ ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ದೃಶ್ಯಂ 3 ಬಾಲಿವುಡ್ ನಲ್ಲಿ ದಾಖಲೆ ಬರೆದಿದೆ. ಕೇವಲ 8 ದಿನಗಳಲ್ಲಿ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 407 ಕೋಟಿ ಬಾಚಿದೆ. ಇನ್ನು ಕೆಲವೇ ದಿನಗಳಲ್ಲಿ 500 ಕೋಟಿ ದಾಟುವ ಎಲ್ಲಾ ಲಕ್ಷಣ ಹೊಂದಿದೆ. ಈ ಮೂಲಕ ಅಜಯ್ ದೇವಗನ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಮೊದಲ ಸಿನಿಮಾ ಇದಾಗಿದೆ.
ಅಕ್ಟೋಬರ್ 2ರ ಗಾಂಧಿ ಜಯಂತಿಯ ಶುಭ ದಿನದಂದು ಜಾಗತಿಕವಾಗಿ ತೆರೆಕಂಡ ಈ ಸಿನಿಮಾಗೆ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ದೃಶ್ಯಂ' ಸರಣಿಯ ಕಥೆಯ ಜೀವಾಳವಾಗಿರುವ 'ವಿಜಯ್ ಸಲ್ಗಾಂವ್ಕರ್' ಪಾತ್ರದಲ್ಲಿ ಅಜಯ್ ದೇವಗನ್ ಮತ್ತೊಮ್ಮೆ ಪ್ರೇಕ್ಷಕರನ್ನ ಅಚ್ಚರಿಯ ತುದಿಗೆ ತಳ್ಳಿದ್ದಾರೆ. ಅಭಿಷೇಕ್ ಪಾಠಕ್ ನಿರ್ದೇಶನದ ಈ ಸಿನಿಮಾ ಮೂಲ ಮಲಯಾಳಂ 'ದೃಶ್ಯಂ 3' ಸಿನಿಮಾ ಮಾದರಿಯಾಗಿದ್ರೂ, ಹಿಂದಿ ಆವೃತ್ತಿಯ ಕ್ಲೈಮ್ಯಾಕ್ಸ್‌ನಲ್ಲಿ ಕೆಲವೊಂದು ರೋಚಕ ಬದಲಾವಣೆಗಳನ್ನ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆಗೆ ಶ್ರಿಯಾ ಶರಣ್, ಟಬು ಹಾಗೂ ಇಶಿತಾ ದತ್ತಾ ಪ್ರಮುಖ ಪಾತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ ಈ ಭಾಗದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಅವರ ಪ್ರಬಲ ಪಾತ್ರಗಳು ಸಿನಿಮಾದ ಕಥೆಗೆ ಹಾಗೂ ರೋಚಕತೆಗೆ ಇನ್ನಷ್ಟು ಬಲ ತುಂಬಿವೆ.





