Sj*
ಅಂತಾರಾಷ್ಟ್ರೀಯ ಕ್ರೀಡಾಪಟು, ಸಮಾಜಸೇವಕ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಎ.ವಿ.ರವಿ (ಜಿಮ್ ರವಿ) ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಲಾರ ಮೂಲದ ಜಿಮ್ ರವಿ ಅವರು ದೇಹದಾರ್ಢ್ಯ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. 100ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದಿರುವ ಅವರು, ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ, ಕರ್ನಾಟಕ ಶ್ರೀ ಹಾಗೂ ಏಕಲವ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಭಾರತ ತಂಡದ ನಾಯಕ ಹಾಗೂ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ರವಿ ಜಿಮ್ ನಡೆಸುತ್ತಿರುವ ಅವರು, ಈವರೆಗೆ ಸುಮಾರು 1.80 ಲಕ್ಷ ಜನರಿಗೆ ತರಬೇತಿ ನೀಡಿದ್ದಾರೆ. ನಟರಾಗಿಯೂ ಗುರುತಿಸಿಕೊಂಡಿರುವ ಅವರು, ದಕ್ಷಿಣ ಭಾರತದ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುರುಷೋತ್ತಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಕ್ರೀಡಾ ಸಾಧನೆಯ ಜೊತೆಗೆ ಸಮಾಜಸೇವೆಯಲ್ಲೂ ಜಿಮ್ ರವಿ ಅವರ ಕೊಡುಗೆ ಗಮನಾರ್ಹ. ಸುಮಾರು ನಾಲ್ಕರಿಂದ ಐದು ಸಾವಿರ ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿರುವ ಅವರು, ಯುವಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದರ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ತಂದೆಯ ಕಾಶಿಯಾತ್ರೆಯ ಆಸೆಯನ್ನು ಈಡೇರಿಸಲಾಗದ ಕೊರಗನ್ನು ಸಮಾಜಸೇವೆಯ ಸಂಕಲ್ಪವನ್ನಾಗಿಸಿಕೊಂಡು, 101 ಅಶಕ್ತರಿಗೆ ವಿಮಾನದ ಮೂಲಕ ಕಾಶಿ–ಅಯೋಧ್ಯೆ ಯಾತ್ರೆ ಮಾಡಿಸಿರುವುದು ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.
ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿರುವ ಜಿಮ್ ರವಿ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಬೆಂಗಳೂರಿನ ನಾಗರಬಾವಿಯಲ್ಲಿ ಉದ್ಯಾನವನ, ವೃತ್ತ ಹಾಗೂ ಬಸ್ ನಿಲ್ದಾಣಗಳಿಗೆ ಅವರ ಹೆಸರನ್ನಿಡಲಾಗಿದೆ. ಇದು ಅವರ ಸೇವೆ ಮತ್ತು ಸಾಧನೆಗೆ ಸಾರ್ವಜನಿಕವಾಗಿ ದೊರೆತ ಗೌರವದ ಪ್ರತೀಕವಾಗಿದೆ.

ಜಿಮ್ ರವಿ ಅವರ ಸಾಧನೆ ಹಾಗೂ ಜೀವನದ ಹಾದಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಜುನಾಥ ಮಾಗೋದಿ ಅವರು ‘ರವಿ ನೀನು ಆಗಸದಲ್ಲಿ’ ಎಂಬ ಜೀವನಚರಿತ್ರೆಯ ಪುಸ್ತಕವನ್ನು ರಚಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಕೃತಿಯ ಲೋಕಾರ್ಪಣೆಯೂ ನಡೆದಿದ್ದು, ಜಿಮ್ ರವಿ ಅವರ ಸಾಧನೆ ಮತ್ತು ಸಮಾಜಸೇವೆಯ ಪಯಣಕ್ಕೆ ಅಕ್ಷರರೂಪದ ದಾಖಲೆಯಾಗಿದೆ.
ಜಿಮ್ ರವಿ ಅವರ ಕ್ರೀಡಾ ಸಾಧನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ದುಬೈಯ ಹೆಮ್ಮೆಯ ಕನ್ನಡ ಸಂಘವು ಅವರಿಗೆ ‘ವಿಶ್ವ ಶ್ರೇಷ್ಠ ಕ್ರೀಡಾ ಸಾಧಕ 2025’ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದಂತಾಗಿದೆ.
ಕ್ರೀಡೆ, ಕಲೆ ಹಾಗೂ ಸಮಾಜಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಜಿಮ್ ರವಿ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿರುವುದು ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಸಂತಸ ಮೂಡಿಸಿದೆ.





