- ರಾಘವೇಂದ್ರ ಅಡಿಗ ಎಚ್ಚೆನ್.
2025 ಮುಗಿಯುತ್ತಾ ಬಂದಿದೆ. ರಿಲೀಸ ಆಗಿದ್ದು 250ಕ್ಕೂ ಹೆಚ್ಚು ಚಿತ್ರಗಳು. . ಆದರೆ ಎಂದಿನಂತೆ ಗೆದ್ದ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಈ ವರ್ಷ ಹಿಟ್ ಆದ ಸಿನಿಮಾಗಳೆಷ್ಟು.. ಬಾಕ್ಸಾಫೀಸಿನಲ್ಲಿ ಗೆದ್ದ ಸಿನಿಮಾಗಳಷ್ಟು.. ಯಾವ ಚಿತ್ರ ಎಷ್ಟರಮಟ್ಟಿಗೆ ದುಡ್ಡು ಮಾಡಿತು.. ಒಂದು ಜನರಲ್ ಲೆಕ್ಕಾಚಾರ ಇಲ್ಲಿದೆ.
ವರ್ಷದ ಟಾಪ್ 10 ಸಿನಿಮಾಗಳನ್ನ ನೋಡಿದ್ದಾದರೆ. ಅನುಮಾನವೇ ಇಲ್ಲದೆ ಕಾಂತಾರ ಚಾಪ್ಟರ್ 01 ಇದ್ದೇ ಇರುತ್ತೆ. ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್-1 ಸಿನಿಮಾ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಕನ್ನಡ ಸಿನಿಮಾ. ಅದೇ ನಂ.1. . ಸುಮಾರು ₹125 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ಈವರೆಗೆ ಬರೋಬ್ಬರಿ ₹847.5 ಕೋಟಿ ಬಿಸಿನೆಸ್ ಮಾಡಿದೆ. ಇದು ಕೇವಲ ಥಿಯೇಟರ್ ಕಲೆಕ್ಷನ್ ಲೆಕ್ಕ. ಟಿವಿ, ಮ್ಯೂಸಿಕ್, ಒಟಿಟಿ.. ಲೆಕ್ಕಗಳನ್ನ ಇಲ್ಲಿ ತಗೊಂಡಿಲ್ಲ.

ಟಾಪ್ 2 ಸ್ಥಾನದಲ್ಲಿ ಕೂಡ ಹೊಂಬಾಳೆಯ ಸಿನಿಮಾನೇ. ಮಹಾವತಾರ ನರಸಿಂಹ, ಆನಿಮೇಷನ್ ಸಿನಿಮಾಗೆ 40 ಕೋಟಿ ಖರ್ಚು ಮಾಡಿದ್ರಂತೆ. ಅದು ಯಾವ ಮಟ್ಟಿಗೆ ಹಿಟ್ ಆಯ್ತಂದ್ರೆ, 326ರಿಂದ 330 ಕೋಟಿ ಬಿಸಿನೆಸ್ ಮಾಡ್ತು. ಅಂದಹಾಗೆ ಇದರಲ್ಲಿ ಹಿರಣ್ಯ ಕಶಿಪು-ಮಹಾವಿಷ್ಣು-ಭಕ್ತ ಪ್ರಹ್ಲಾದನ ಕಥೆ ಇತ್ತು.
ಟಾಪ್ 3 ಸ್ಥಾನದಲ್ಲಿ ಸು ಫ್ರಂ ಸೋ. ರಾಜ್ ಬಿ ಶೆಟ್ಟಿ ನಿರ್ಮಾಣದ ಸಿನಿಮಾ, ಈ ವರ್ಷದ ಅನಿರೀಕ್ಷಿತ ಬ್ಲಾಕ್ ಬಸ್ಟರ್. ಜಸ್ಟ್ ಐದೂವರೆ ಕೋಟಿ ಬಜೆಟ್ಟಿನ ಸಿನಿಮಾ 122 ಕೋಟಿ ಬಿಸಿನೆಸ್ ಮಾಡಿತ್ತು.. ಅದೊಂಥರ ಬೇರೆಯದೇ ಮ್ಯಾಜಿಕ್ ಮಾಡಿದ ಸಿನಿಮಾ.

ಟಾಪ್ 4ನಲ್ಲಿ ಬರೋದು ಎಕ್ಕ. ಯುವರಾಜ್ ಕುಮಾರ್ ಅಭಿನಯದ 2ನೇ ಸಿನಿಮಾ. ಮೊದಲ ಸಿನಿಮಾ ಯುವ ಚಿತ್ರ ಆವರೇಜ್ ಆಗಿತ್ತು. ಒಟ್ಟಾರೆ ಬಿಸಿನೆಸ್ಸಲ್ಲಿ ಲಾಭ ಮಾಡ್ಕೊಂಡಿತ್ತು. ಯುವ ಥಿಯೇಟರಲ್ಲಿ ಹಿಟ್ ಆಗಿರಲಿಲ್ಲ. ಆದರೆ, ಎಕ್ಕ ಹಾಗಲ್ಲ. ಥಿಯೇಟರಲ್ಲೂ ಒಳ್ಳೆ ಕಲೆಕ್ಷನ್ ಕಂಡಿದೆ. ಸುಮಾರು 8 ಕೋಟಿ ಬಜೆಟ್ಟಿನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ 12 ಕೋಟಿ ಬಿಸಿನೆಸ್ ಮಾಡಿತ್ತು. ಪ್ರೊಡ್ಯೂಸರ್ ಅಶ್ವಿನಿ ಪುನೀತ್, ಕಾರ್ತಿಕ್ ಗೌಡ, ಜಯಣ್ಣ ಖುಷಿ ಆಗಿದ್ದರು.
ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ, ಶ್ರೀಲೀಲಾ ಅಭಿನಯದ ಜೂನಿಯರ್ ಸಿನಿಮಾ, ಕನ್ನಡ ಮತ್ತು ತೆಲುಗಿನಲ್ಲಿ 12 ಕೋಟಿ ಬಿಸಿನೆಸ್ ಮಾಡಿತ್ತು. ಆದರೆ ಕಲೆಕ್ಷನ್ 12 ಕೋಟಿ ಆದರೂ ಲಾಭ ಸಿಕ್ಕಿಲ್ಲ. ಯಾಕಂದರೆ ಸಿನಿಮಾಗೆ ಹಾಕಿದ್ದ ಬಜೆಟ್ಟು 25 ಕೋಟಿ.
ಇನ್ನು ವಿನೋದ ಪ್ರಭಾಕರ್ ಅಭಿನಯದ ಮಾದೇವ ಚಿತ್ರ 6 ಕೋಟಿ ಬಿಸಿನೆಸ್ ಮಾಡಿತು.. ಚಿತ್ರಕ್ಕೆ ಹಾಕಿದ್ದ ಬಜೆಟ್ 4 ಕೋಟಿ.

ಶರಣ್ ಅಭಿನಯದ ಛೂಮಂತರ್ ಚಿತ್ರ 7 ಕೋಟಿ ಬಿಸಿನೆಸ್ ಮಾಡಿದ್ರೂ, ಲಾಭ ಆಗಲಿಲ್ಲ. ಕಾರಣ, ಚಿತ್ರಕ್ಕೆ ಹಾಕಿದ್ದ ಬಜೆಟ್ 5 ಕೋಟಿ, ಲೇಟ್ ಆಗಿ ರಿಲೀಸ್ ಆದ ಕಾರಣಕ್ಕೆ 8 ಕೋಟಿಗೆ ಏರಿತ್ತು. ಆ ಲೆಕ್ಕಕ್ಕೆ ನೋಡಿದರೆ ಬ್ರಾಟ್ ಸಿನಿಮಾನ ಹಿಟ್ ಅನ್ನಬಹುದು. 3 ಕೋಟಿ ಬಜೆಟ್ಟಿನ ಸಿನಿಮಾ, 5 ಕೋಟಿ ಕಲೆಕ್ಷನ್ ಮಾಡಿತ್ತು.
ಇವನ್ನ ಹೊರತಾಗಿ ಅಜೇಯ್ ರಾವ್ ಅವರ ಯುದ್ಧಕಾಂಡ 02, ರಾಣಾ ಅಭಿನಯದ ಏಳುಮಲೆ, ಯೋಗರಾಜ್ ಭಟ್ಟರ ಮನದ ಕಡಲು, ರವಿ ಬಸ್ರೂರು ಅವರ ವೀರ ಚಂದ್ರಹಾಸ ಚಿತ್ರಗಳು ನಿರ್ಮಾಪಕರಿಗೆ ಮೋಸ ಮಾಡ್ಲಿಲ್ಲ. ಹಾಕಿದ್ದ ಬಂಡವಾಳವನ್ನ ಥಿಯೇಟರ್, ಒಟಿಟಿ, ಟಿವಿ ರೈಟ್ಸ್ ಇಂದ ರಿಟರ್ನ್ ತಂದುಕೊಟ್ಟಿದೆ.





