Sj*
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 'ಹೈವಾನ್' ಸಿನಿಮಾದ ಮೊದಲ ಹಾಡು 'ಮೇರೆ ಹೀರೋ ಹೈ ವೋ' ಜೀ ಮ್ಯೂಸಿಕ್ ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನಗೆಲ್ಲುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದ ಟೀಸರ್ ಬೆನ್ನಲ್ಲೇ ಈ ಭಾವಪೂರ್ಣ ಹಾಡನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರೀತಮ್ ಅವರ ಸುಮಧುರ ಸಂಗೀತ ಸಂಯೋಜನೆ, ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರ ಅರ್ಥಗರ್ಭಿತ ಸಾಹಿತ್ಯ ಹಾಗೂ ಜನಪ್ರಿಯ ಗಾಯಕ ಶಾನ್ ಮತ್ತು ಪುಟಾಣಿ ಗಾಯಕಿ ವನಿಕಾ ನಾಯಕ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆ ಪ್ರೇಕ್ಷಕರನ್ನು ಚಿತ್ರದ ಜಗತ್ತಿಗೆ ಮತ್ತಷ್ಟು ಹತ್ತಿರವಾಗಿಸಿದೆ.
ರೋಮಾಂಚಕ ಹಾಗೂ ಗಂಭೀರ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ಸೂಕ್ಷ್ಮ ಮತ್ತು ಮುಗ್ಧ ಸೈಡ್ ಅನ್ನು ಈ ಹಾಡು ಅನಾವರಣಗೊಳಿಸಿದೆ. ನಟ ಸೈಫ್ ಅಲಿ ಖಾನ್ ಮತ್ತು ಬಾಲ ನಟಿ ಪಹಲ್ ಚೌಧರಿ ನಡುವಿನ ಆಪ್ತ ಹಾಗೂ ವಾತ್ಸಲ್ಯಮಯ ಬಾಂಧವ್ಯವನ್ನು ಈ ಟ್ರ್ಯಾಕ್‌ನಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಡಲಾಗಿದೆ. ಚಿತ್ರದ ತೀವ್ರತೆಯ ನಡುವೆಯೂ ಪ್ರೀತಿ, ಮಮತೆ ಮತ್ತು ಮುಗ್ಧತೆಯನ್ನು ಸಾರುವ ಬಲವಾದ ಭಾವನಾತ್ಮಕ ಅಡಿಪಾಯವಾಗಿ ಈ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಬೊಮನ್ ಇರಾನಿ, ಸಯಾಮಿ ಖೇರ್ ಹಾಗೂ ಶ್ರಿಯಾ ಪಿಲ್ಗಾಂವ್ಕರ್ ತಾರಾಗಣದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಶೈಲಜಾ ದೇಸಾಯಿ ಫೆನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಜೀ ಮ್ಯೂಸಿಕ್ ಕಂಪನಿ ಆಡಿಯೋ ಹಕ್ಕು ಪಡೆದುಕೊಂಡಿರುವ 'ಹೈವಾನ್' ಚಿತ್ರವು ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.





