ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸಿಕೊಂಡಾಗ ಕೇವಲ ನಟರು ಮತ್ತು ಸಂಗೀತ ನಿರ್ದೇಶಕರಷ್ಟೇ ಅಲ್ಲ, ತಮ್ಮ ಕಲ್ಪನೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನದ ಮೂಲಕ ಚಿತ್ರಗಳಿಗೆ ಜೀವ ತುಂಬಿದ ಅನೇಕ ಮಹನೀಯರು ನೆನಪಾಗುತ್ತಾರೆ. ಒಬ್ಬ ಅಗ್ರಗಣ್ಯ ನಾಟಕಕಾರ, ಸಂಭಾಷಣೆಗಾರ, ಚಿತ್ರಕಥೆಗಾರ, ಗೀತರಚನೆಕಾರ, ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಸಾಧಕರಾಗಿದ್ದಂತಹ ಶ್ರೀ ಹುಣಸೂರು ಕೃಷ್ಣಮೂರ್ತಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ,
ವಿಶೇಷವಾಗಿ ಪೌರಾಣಿಕ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಅವರು, ಡಾ. ರಾಜ್ಕುಮಾರ್ ಅವರ ಅಭಿನಯ ಸಾಮರ್ಥ್ಯಕ್ಕೆ ಸವಾಲೊಡ್ಡುವಂತಹ ಶಕ್ತಿಶಾಲಿ ಪಾತ್ರಗಳು ಮತ್ತು ಸಂಭಾಷಣೆಗಳನ್ನು ರೂಪಿಸಿದ ನಿರ್ದೇಶಕರಲ್ಲಿ ಒಬ್ಬರು. ಸತ್ಯ ಹರಿಶ್ಚಂದ್ರ, ಭಕ್ತ ಕುಂಬಾರ, ಬಬ್ರುವಾಹನ ಮುಂತಾದ ಚಿತ್ರಗಳು ಇಂದಿಗೂ ಕನ್ನಡ ಚಿತ್ರರಂಗದ ಶ್ರೇಷ್ಠ ಕೃತಿಗಳೆಂದು ಪರಿಗಣಿಸಲ್ಪಡುತ್ತವೆ. ಕಲೆಯ ಮೇಲಿನ ಅಪಾರ ಪ್ರೀತಿ, ರಂಗಭೂಮಿಯ ಅನುಭವ, ಪೌರಾಣಿಕ ಕಥೆಗಳ ಆಳವಾದ ತಿಳುವಳಿಕೆ ಮತ್ತು ಪ್ರೇಕ್ಷಕರ ನಾಡಿಮಿಡಿತವನ್ನು ಅರಿಯುವ ಸಾಮರ್ಥ್ಯ. ಇವೆಲ್ಲವೂ ಸೇರಿ ಹುಣಸೂರು ಕೃಷ್ಣಮೂರ್ತಿ ಅವರನ್ನು ಕನ್ನಡ ಚಿತ್ರರಂಗದ ವಿಶಿಷ್ಟ ನಿರ್ದೇಶಕರನ್ನಾಗಿ ರೂಪಿಸಿದವು.
ಹುಣಸೂರಿನಿಂದ ಕನ್ನಡ ಚಿತ್ರರಂಗದ ಶಿಖರದವರೆಗೆ
ಹುಣಸೂರು ಕೃಷ್ಣಮೂರ್ತಿ ಅವರು 1914ರ ಫೆಬ್ರವರಿ 9ರಂದು ಅಂದಿನ ಮೈಸೂರು ಸಂಸ್ಥಾನದ ಹುಣಸೂರಿನಲ್ಲಿ ಜನಿಸಿದರು. ತಂದೆ ಎಂ. ರಾಜಾರಾವ್, ತಾಯಿ ಪದ್ಮಾವತಮ್ಮ. ತಂದೆ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೇ ಸಾಹಿತ್ಯ, ನಾಟಕ ಮತ್ತು ಅಭಿನಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕೃಷ್ಣಮೂರ್ತಿ ಅವರು ಮುಂದೆ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯಾಗಿ ಬೆಳೆದರು.
ಹುಣಸೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಅವರು, ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆ ಮತ್ತು ಬಸಯ್ಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಆದರೆ ಅವರ ಮನಸ್ಸು ಪಠ್ಯಪುಸ್ತಕಗಳಿಗಿಂತ ಹೆಚ್ಚಾಗಿ ರಂಗಭೂಮಿಯತ್ತ ಸೆಳೆಯಲ್ಪಟ್ಟಿತ್ತು. ಕೇವಲ ಹತ್ತು ವರ್ಷದ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ್ದರು ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಬೆಳೆದ ಈ ಆಸಕ್ತಿಯೇ ಅವರನ್ನು ಮುಂದೆ ನಾಟಕಕಾರನಾಗಿ, ಚಿತ್ರಕಥೆಗಾರನಾಗಿ ಮತ್ತು ನಿರ್ದೇಶಕನಾಗಿ ರೂಪಿಸಿತು.

ಬಾಂಬೆ ಟಾಕೀಸ್ನ ಅನುಭವ
ಹತ್ತನೇ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ಇವರು, ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮುಂಬೈಗೆ ತೆರಳಿ ಸಿಂಹಳ ಸುಂದರಿ ಎಂಬ ಮೂಕಿ ಚಿತ್ರದಲ್ಲಿ ನಟಿಸಿ, ಹಿಂದಿ ಚಿತ್ರರಂಗದ ಪ್ರಮುಖ ಸಂಸ್ಥೆಯಾಗಿದ್ದ ಬಾಂಬೆ ಟಾಕೀಸ್ನಲ್ಲಿಯೂ ಕೆಲಸ ಮಾಡಿದರು. ಅಲ್ಲಿನ ಚಲನಚಿತ್ರ ನಿರ್ಮಾಣದ ವಿಧಾನ, ತಾಂತ್ರಿಕ ಪ್ರಕ್ರಿಯೆ ಮತ್ತು ಕಥೆ ಹೇಳುವ ಶೈಲಿಯನ್ನು ಹತ್ತಿರದಿಂದ ಗಮನಿಸುವ ಅವಕಾಶ ಅವರಿಗೆ ದೊರೆಯಿತು. ರಂಗಭೂಮಿಯ ಅನುಭವದ ಜೊತೆಗೆ ಚಲನಚಿತ್ರ ನಿರ್ಮಾಣದ ಈ ಅರಿವು ಅವರಲ್ಲಿ ಒಬ್ಬ ಸಮರ್ಥ ಚಿತ್ರಕಥೆಗಾರ ಮತ್ತು ನಿರ್ದೇಶಕನನ್ನು ರೂಪಿಸಿತು.
ಜೀವನೋಪಾಯಕ್ಕಾಗಿ ವಾಚ್ ರಿಪೇರಿ, ಮನಸ್ಸಿನಲ್ಲಿ ರಂಗಭೂಮಿಯ ಒಲವು
ಮುಂಬೈನಿಂದ ಮರಳಿದ ಬಳಿಕ ಆರ್ಥಿಕ ಸಂಕಷ್ಟ ಎದುರಿಸಿದ ಕೃಷ್ಣಮೂರ್ತಿ ಅವರು ಜೀವನ ನಿರ್ವಹಣೆಗಾಗಿ ವಾಚ್ ರಿಪೇರಿ ಕೆಲಸವನ್ನು ಕಲಿತು, ಅಂಗಡಿಯೊಂದನ್ನು ನಡೆಸುತ್ತಿದ್ದರು. ಆದರೆ ಅವರ ಮನಸ್ಸು ಮಾತ್ರ ಸದಾ ಕಲೆ, ಸಾಹಿತ್ಯ ಮತ್ತು ರಂಗಭೂಮಿಯಲ್ಲಿಯೇ ನೆಲೆಸಿತ್ತು. ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವ ಮೂಲಕ ತಮ್ಮ ಸೃಜನಶೀಲತೆಯನ್ನು ಮುಂದುವರಿಸಿದರು.





