– ರಾಘವೇಂದ್ರ ಅಡಿಗ ಎಚ್ಚೆನ್.
2020 ಹಾಗೂ 2021ನೇ ಸಾಲಿನ ಪ್ರತಿಷ್ಠಿತ ಡಾ. ರಾಜ್ಕುಮಾರ್ ಪ್ರಶಸ್ತಿ, ಜೊತೆಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
2020ನೇ ಸಾಲಿನ ಡಾ. ರಾಜ್ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಜಯಮಾಲಾ ಅವರಿಗೆ ಘೋಷಿಸಲಾಗಿದೆ. ಅದೇ ವರ್ಷ, ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ ಅವರಿಗೆ 2020ನೇ ಸಾಲಿನ ಡಾ. ವಿಷ್ಣುವರ್ಧನ್ ಪ್ರಶಸ್ತಿ ನೀಡಲಾಗಿದೆ.
ಇನ್ನು 2021ನೇ ಸಾಲಿನ ಡಾ. ರಾಜ್ಕುಮಾರ್ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ ಘೋಷಿಸಲಾಗಿದೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಶಿವರುದ್ರಯ್ಯ ಭಾಜನರಾಗಿದ್ದು, ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಹಿರಿಯ ನಟ ಎಂ.ಕೆ. ಸುಂದರ್ ರಾಜ್ ಅವರಿಗೆ ನೀಡಲಾಗಿದೆ.
‘ಡಾ. ರಾಜ್ಕುಮಾರ್ ಪ್ರಶಸ್ತಿ’ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. 1993ರಿಂದ ಈ ಪ್ರಶಸ್ತಿಯನ್ನು ಜೀವಮಾನ ಸಾಧನೆಗಾಗಿ ನೀಡಲಾಗುತ್ತಿದ್ದು, ಮೊದಲ ಪ್ರಶಸ್ತಿ ವಿಜೇತ ಕೆ.ಎಸ್. ಅಶ್ವತ್ಥ್ ಆಗಿದ್ದಾರೆ. 2019ರಲ್ಲಿ ನಟಿ ಉಮಾಶ್ರೀ ಈ ಗೌರವಕ್ಕೆ ಪಾತ್ರರಾಗಿದ್ದರು.
ಈಗ ಪ್ರಶಸ್ತಿ ಪಡೆದಿರುವ ಜಯಮಾಲಾ ಅವರು 1974ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ‘ಭೂತಯ್ಯನ ಮಗ ಅಯ್ಯು’, ‘ಗಿರಿ ಕನ್ಯೆ’, ‘ಪ್ರೇಮದ ಕಾಣಿಕೆ’, ‘ಶಂಕರ್ ಗುರು’, ‘ದಾರಿ ತಪ್ಪಿದ ಮಗ’, ‘ತಾಯಿ ಸಾಹೇಬ’ ಸೇರಿದಂತೆ ಅನೇಕ ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
2021ರ ಪ್ರಶಸ್ತಿ ವಿಜೇತ ಸಾ.ರಾ. ಗೋವಿಂದು ಅವರು ನಿರ್ಮಾಪಕರಾಗಿ ಮಾತ್ರವಲ್ಲದೆ, ಕನ್ನಡ ಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ





