ಚಿತ್ರ: ಲಂಬೋದರ 2.0
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಅನಿಲ್ ಶೆಟ್ಟಿ
ತಾರಾಗಣ: ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್ ಮೊದಲಾದವರು
ರೇಟಿಂಗ್: 3/5***
- ರಾಘವೇಂದ್ರ ಅಡಿಗ ಎಚ್ಚೆನ್.
ಹ್ಯಾಕರ್ ಅವ್ಯಕ್ತ ಅಲಿಯಾಸ್ ಎವಿ (ಅನಿಲ್ ಶೆಟ್ಟಿ) ದೊಡ್ಡ ಮೊತ್ತವನ್ನು ಲಪಟಾಯಿಸಿ ಜನರನ್ನು ಕಾಡುವವನಲ್ಲ; ಬದಲಿಗೆ ಸಣ್ಣಪುಟ್ಟ ಮೊತ್ತವನ್ನು ಕಬಳಿಸಿ, ಅವರಿಗೆ ಎಚ್ಚರಿಕೆ ನೀಡುವವನು. ಆತನೊಂದಿಗೆ ಇರುವ ‘ಶ್ರೀಕೃಷ್ಣ’ ಇದೆಲ್ಲದಕ್ಕೂ ಸಾಥ್ ನೀಡುತ್ತಿರುತ್ತಾನೆ. ಅಂದಹಾಗೆ, ಈ ಶ್ರೀಕೃಷ್ಣ ಯಾರು ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿದರೆ ಚೆಂದ. ಇನ್ನು, ಸದಾ ಒಂಟಿಯಾಗಿ, ಯಾರ ಗೊಡವೆಯೂ ಬೇಡವೆಂದು ತನ್ನ ಪಾಡಿಗೆ ಇರುವ ಎವಿಗೆ 'ಹ್ಯಾಪಿನೆಸ್ ಬ್ಯಾಂಡ್' ಕಣ್ಣಿಗೆ ಬೀಳುತ್ತದೆ. ಈ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್ ಮೂಲಕ ಭಾರತವನ್ನು 'ಹ್ಯಾಪಿನೆಸ್ ಇಂಡೆಕ್ಸ್'ನಲ್ಲಿ ಮೊದಲ ಸ್ಥಾನಕ್ಕೆ ತರುವುದು ಈ ಬ್ಯಾಂಡ್ ಕಂಡುಹಿಡಿದಿರುವ ರಾಘವ್ ಕಶ್ಯಪ್ (ಕುನಾಲ್ ಕಪೂರ್) ಉದ್ದೇಶ. ಹಾಗಂತ ಎಲ್ಲರನ್ನೂ ರಾಘವ್ ನಂಬಿಸಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಎವಿ ಬಾಳಿಗೆ ‘ಸಮಯ’ (ಸಾಚಿ ಬಿಂದ್ರಾ) ಎಂಟ್ರಿ ಕೊಡುತ್ತಾಳೆ. ಎವಿ ಮತ್ತು ಸಮಯ ನಡುವೆ ಪ್ರೀತಿ ಮೂಡಬೇಕು ಎನ್ನುವಷ್ಟರಲ್ಲಿ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್‌ನಿಂದ ಎಲ್ಲವೂ ತಲೆಕೆಳಗಾಗಿ ಬಿಡುತ್ತದೆ. ಅಷ್ಟಕ್ಕೂ ಈ ಜೋಡಿಗೂ ಆ ಹ್ಯಾಪಿನೆಸ್ ಬ್ಯಾಂಡ್ ಟಾಸ್ಕ್‌ಗೂ ಏನು ಸಂಬಂಧ? ಈ ರಾಘವ್ ಕಶ್ಯಪ್ ಯಾರು? ಭಾರತ ನಿಜಕ್ಕೂ ಹ್ಯಾಪಿನೆಸ್ ಇಂಡೆಕ್ಸ್‌ನಲ್ಲಿ ಮೊದಲ ಸ್ಥಾನಕ್ಕೆ ಬರುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೀವು ಈ ವಾರ ತೆರೆಗೆ ಬಂದ "ಲಂಬೋದರ 2.0" ಚಿತ್ರ ವೀಕ್ಷಿಸಬೇಕು

ಇಂದಿನ ಕಾಲದಲ್ಲಿ ಜಗತ್ತು ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದುನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಒಂದುಕಡೆ ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆ ಎಂಬ ಖುಷಿಯಾದರೆ, ಮತ್ತೊಂದು ಕಡೆ ಇದೇ ತಂತ್ರಜ್ಞಾನ ಎಲ್ಲರನ್ನೂ ನುಂಗಿ ಬಿಡಬಹುದು ಎಂಬ ಆತಂಕ. ಇದೇ ಆತಂಕವನ್ನು ಇಟ್ಟುಕೊಂಡು ‘ಲಂಬೋದರ 2.O’ ಸಿನಿಮಾ ಸಿದ್ಧವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ ಜನರ ಮನಸ್ಸನ್ನು ನಿಯಂತ್ರಿಸುವ ಅಗೋಚರ ಶಕ್ತಿಯಾಗಿ ಬದಲಾಗಿದೆ. ಲೈಕ್ಸ್, ಕಾಮೆಂಟ್ಸ್ ಮತ್ತು ಶೇರ್‌ಗಳ ವ್ಯಾಮೋಹಕ್ಕೆ ಬಿದ್ದಿರುವ ಜನರು ತಮ್ಮ ಸ್ವಂತ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡು ಅಲ್ಗಾರಿದಮ್‌ಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಯಾವುದನ್ನು ನೋಡಬೇಕು. ಏನನ್ನು ನಂಬಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಸೋಶಿಯಲ್ ಮೀಡಿಯಾ ವೇದಿಕೆಗಳೇ ನಿರ್ಧರಿಸುತ್ತಿವೆ. ಇದರಿಂದಾಗಿ ವಾಸ್ತವ ಬದುಕಿಗಿಂತ ವರ್ಚುವಲ್ ಪ್ರಪಂಚವೇ ಮುಖ್ಯವೆನಿಸುವ ಪರಿಸ್ಥಿತಿ ಬಂದಿದೆ. ಇದನ್ನು ಸಿನಿಮಾದಲ್ಲಿ ಚೆನ್ನಾಗಿ ನಿರೂಪಿಸಲಾಗಿದೆ.
ಈ ಸಿನಿಮಾ ಮೂಲಕ ಸಿನಿಮಾದ ಮೇಕಿಂಗ್‌ನಲ್ಲಿ ಸಿಂಪಲ್ ಸುನಿ ತಮ್ಮ ವಿಭಿನ್ನ ಚಿಂತನೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಂತ್ರಜ್ಞಾನ ಮತ್ತು ಥ್ರಿಲ್ಲರ್ ಅಂಶಗಳ ಜೊತೆಗೆ ‘ಕಣ್ಣಲೊಮ್ಮೆ ಕಣ್ಣಿಟ್ಟು ನೋಡು…’ ಹಾಡು ಚಿತ್ರಮಂದಿರದಿಂದ ಹೊರಬಂದ ಮೇಲೂ ಪ್ರೇಕ್ಷಕರ ಮನಸ್ಸಿನಲ್ಲಿ ಗುನುಗುವಂತೆ ಮಾಡಿದೆ. ಹಿನ್ನೆಲೆ ಸಂಗೀತ ಹಾಗೂ ಕ್ಯಾಮೆರಾ ವರ್ಕ್ ಡಿಜಿಟಲ್ ಯುಗದ ಕರಾಳತೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಲ್ಲಿ ಯಶಸ್ವಿಯಾಗಿದೆ.
ಚಿತ್ರದ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ, ನೈಜ ಹ್ಯೂಮನಾಯ್ಡ್ ರೋಬೋಟ್ 'JIA' ಒಂದು ಪಾತ್ರವಾಗಿ ನಟಿಸಿರುವುದು. ಜೊತೆಗೆ ಹಾಗೂ ಎಐ ಅವತಾರದಲ್ಲಿ ಕೃಷ್ಣ ಗಮನ ಸೆಳೆಯುತ್ತಾನೆ.
ಅವ್ಯಕ್ತ ಅಲಿಯಾಸ್ ಎವಿ ಪಾತ್ರದಲ್ಲಿ ಅನಿಲ್ ಶೆಟ್ಟಿ ಅಭಿನಯಿಸಿದ್ದಾರೆ. ಅನಿಲ್ ಶೆಟ್ಟಿ ಅವರ ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ಆದರೆ, ನಟನೆಯಲ್ಲಿ ಕೊಂಚ ಮಾಗಬೇಕು. ನಾಯಕಿಯಾಗಿ ಸಾಚಿ ಬಿಂದ್ರಾ ಮುದ್ದಾಗಿ ಕಾಣ್ತಾರೆ. ವಂಚಕ ರಾಘವ್ ಕಶ್ಯಪ್ ಪಾತ್ರದಲ್ಲಿ ಕುನಾಲ್ ಕಪೂರ್ ನಟನೆ ಉತ್ತಮವಾಗಿ ಮೂಡಿಬಂದಿದೆ. ಇನ್ನೂ ಮೇಘನಾ ಗಾಂವ್ಕರ್ ಹೀಗೆ ಬಂದು ಹಾಗೆ ಹೋಗುತ್ತಾರೆ
ಒಟ್ಟಿನಲ್ಲಿ ಕನ್ನಡದ ಪಾಲಿಗೆ ಇದೊಂದು ಹೊಸ ಪ್ರಯೋಗ ಎಂದು ಹೇಳಬಹುದಾದ ಚಿತ್ರ ಆಗಿದ್ದು ಆನ್‌ಲೈನ್‌ನಿಂದ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ ಎಂಬುದನ್ನ ಅರಿಯಲು ‘ಲಂಬೋದರ 2.0’ ಚಿತ್ರವನ್ನ ನೋಡಬಹುದು





