ಸ್ವರ್ಣಪದಕ ವಿಜೇತ ವಿಜ್ಞಾನಿ, ಬಹುಭಾಷಾ ಲೇಖಕ, ವಿದ್ವಾಂಸ, ಸಂಘಟಕ ಮತ್ತು ಸಾಮಾಜಿಕ ಚಿಂತಕ

ಕೆಲವರು ತಮ್ಮ ವೈಯಕ್ತಿಕ ಸಾಧನೆಯಿಂದ ಗುರುತಿಸಿಕೊಳ್ಳುತ್ತಾರೆ. ಇನ್ನು ಕೆಲವರು ತಾವು ಬದುಕಿದ ಕಾಲಘಟ್ಟದಲ್ಲಿ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿ, ತಮ್ಮ ನಂತರವೂ ನೆನಪಿನಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡುತ್ತಾರೆ. ಅಂತಹ ಬಹುಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ನಾಡು ಕಂಡ ಶ್ರೇಷ್ಠ ವಿದ್ವಾಂಸರು, ಬಹುಭಾಷಾ ಲೇಖಕರು, ಚಿಂತಕರು, ಸಂಘಟಕರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಮತ್ತು ತಮ್ಮ ಇಡೀ ಜೀವನವನ್ನು ಸಮಾಜಸೇವೆ ಮತ್ತು ವ್ಯಕ್ತಿ ನಿರ್ಮಾಣದ ಕಾರ್ಯಕ್ಕೆ ಮುಡಿಪಾಗಿಟ್ಟಿದ್ದಂತಹ ಶ್ರೀ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ, ಎಲ್ಲರ ಪ್ರೀತಿಯ ಹೊ.ವೆ. ಶೇಷಾದ್ರಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಅವರ ಜನ್ಮಶತಾಬ್ಧಿ ವರ್ಷದಲ್ಲಿ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

sheshadri1

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಸಾಹಿತ್ಯ ಮತ್ತು ವೈಚಾರಿಕ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿ, ಭಾರತೀಯ ಸಂಸ್ಕೃತಿ, ಇತಿಹಾಸ, ಸಮಾಜ ಮತ್ತು ರಾಷ್ಟ್ರಜೀವನದ ಕುರಿತು ತಮ್ಮ ಚಿಂತನೆಗಳನ್ನು ಜನರಿಗೆ ತಲುಪಿಸಿದರು. ಅವರ ಜೀವನದ ಸರಳತೆ, ಅಧ್ಯಯನಶೀಲತೆ, ಸಂಘಟನಾ ಸಾಮರ್ಥ್ಯ ಮತ್ತು ಯುವಜನರಿಗೆ ಮಾರ್ಗದರ್ಶನ ನೀಡುವ ಗುಣ ಇಂದಿಗೂ ಅವರನ್ನು ಸ್ಮರಿಸುವಂತೆ ಮಾಡಿವೆ.

ಹೊಂಗಸಂದ್ರದಲ್ಲಿ ಜನನ, ಸೆಂಟ್ರಲ್ ಕಾಲೇಜಿನಲ್ಲಿ ಸ್ವರ್ಣಪದಕ

ಹೊ.ವೆ. ಶೇಷಾದ್ರಿಯವರು 1926ರ ಮೇ 26ರಂದು ಬೆಂಗಳೂರಿನ ಹೊಂಗಸಂದ್ರದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು. ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಅವರು 1946ರಲ್ಲಿ ಸೆಂಟ್ರಲ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಗಳಿಸಿದರು. ಈ ಪರೀಕ್ಷೆಯಲ್ಲಿ ಸ್ವರ್ಣಪದಕ ಪಡೆದದ್ದು ಅವರ ಶೈಕ್ಷಣಿಕ ಪ್ರತಿಭೆಗೆ ಸಾಕ್ಷಿಯಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಮತ್ತು ವೈಯಕ್ತಿಕ ಜೀವನವನ್ನು ರೂಪಿಸಿಕೊಳ್ಳುವ ಅವಕಾಶ ಅವರ ಮುಂದಿತ್ತು. ಆದರೆ ಸಮಾಜಕ್ಕಾಗಿ ಬದುಕಬೇಕು ಎಂಬ ಆಶಯದಿಂದ ಅವರು ತಮ್ಮ ಜೀವನದ ದಿಕ್ಕನ್ನೇ ಬದಲಿಸಿಕೊಂಡರು. 1946ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಗುರುತಿಸಿಕೊಂಡು, ಸಮಾಜಸೇವೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡರು.

ಸಂಘಟನಾ ಜೀವನದಲ್ಲಿ ಹಂತ ಹಂತವಾಗಿ ಬೆಳೆದ ಜವಾಬ್ದಾರಿ

ಸಂಘದ ಕಾರ್ಯಕರ್ತರಾಗಿ ಆರಂಭಿಸಿದ ಶೇಷಾದ್ರಿಯವರು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಮೊದಲಿಗೆ ಬೆಂಗಳೂರು ನಗರದ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸಿದರು. 1953ರಿಂದ 1956ರವರೆಗೆ ಮಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. 1960ರಲ್ಲಿ ಕರ್ನಾಟಕ ಪ್ರಾಂತ್ಯ ಪ್ರಚಾರಕರಾದರು.

1980ರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡ ದಕ್ಷಿಣ ಭಾರತದ ಕ್ಷೇತ್ರೀಯ ಪ್ರಚಾರಕರಾಗಿ ಜವಾಬ್ದಾರಿ ವಹಿಸಿಕೊಂಡರು. ಈ ನಾಲ್ಕು ರಾಜ್ಯಗಳಲ್ಲಿನ ಸಂಘಟನಾ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು, ಕಾರ್ಯಕರ್ತರನ್ನು ಬೆಳೆಸುವುದು ಮತ್ತು ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಸಾಧಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು.

1987ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಜವಾಬ್ದಾರಿ ವಹಿಸಿಕೊಂಡ ಅವರು 2000ರವರೆಗೆ ಈ ಹುದ್ದೆಯಲ್ಲಿ ಮುಂದುವರಿದರು. ಅಂದರೆ ಸುಮಾರು 13 ವರ್ಷಗಳ ಕಾಲ ಸಂಘದ ಪ್ರಮುಖ ಸಂಘಟನಾ ಜವಾಬ್ದಾರಿಯನ್ನು ನಿರ್ವಹಿಸಿದರು. ನಂತರ ಅಖಿಲ ಭಾರತೀಯ ಪ್ರಚಾರಕ ಪ್ರಮುಖ್ ಆಗಿಯೂ ಕಾರ್ಯನಿರ್ವಹಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆ

sheshadri2

ಸಂಘಟನಾ ಕಾರ್ಯವನ್ನು ಕೇವಲ ಸಭೆ, ಶಿಬಿರ ಮತ್ತು ಸದಸ್ಯತ್ವಕ್ಕೆ ಸೀಮಿತಗೊಳಿಸದೆ, ಸಮಾಜದ ಸಮಸ್ಯೆಗಳ ಪರಿಹಾರಕ್ಕೂ ಬಳಸಬೇಕು ಎಂಬ ದೃಷ್ಟಿಕೋನ ಶೇಷಾದ್ರಿಯವರದ್ದಾಗಿತ್ತು. ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ವಸ್ತುಗಳ ಬಳಕೆ, ಸಂಸ್ಕೃತದ ಪ್ರಚಾರ ಮತ್ತು ಸಮಾಜದಲ್ಲಿನ ವಿವಿಧ ಅನಿಷ್ಟಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.

ಸಾಮಾಜಿಕ ಸೇವೆಯ ಅಗತ್ಯವನ್ನು ಅರಿತು, ಕರ್ನಾಟಕದಲ್ಲಿ ಆರಂಭವಾದ ಸೇವಾ ಚಟುವಟಿಕೆಗಳನ್ನು ದೇಶವ್ಯಾಪಿಯಾಗಿ ವಿಸ್ತರಿಸುವ ಪ್ರಯತ್ನಗಳಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ದತ್ತಾತ್ರೇಯ ಹೊಸಬಾಳೆ ಅವರು ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಸ್ಮರಿಸಿದರು. ಸೇವೆ ಎಂಬುದು ಕೇವಲ ತುರ್ತು ನೆರವು ನೀಡುವುದಲ್ಲ; ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ನಿರಂತರ ಬದಲಾವಣೆ ತರಲು ಸಂಘಟಿತ ಪ್ರಯತ್ನ ನಡೆಸುವುದಾಗಿದೆ ಎಂಬ ಚಿಂತನೆ ಅವರ ಕಾರ್ಯದಲ್ಲಿ ಕಾಣುತ್ತಿತ್ತು.

ಅವರು ವರ್ಷಪೂರ್ತಿ ಪ್ರವಾಸ ಮಾಡುತ್ತಿದ್ದರು. ದೊಡ್ಡ ನಗರಗಳಷ್ಟೇ ಅಲ್ಲದೆ ಸಣ್ಣಪುಟ್ಟ ಗ್ರಾಮಗಳಿಗೂ ಭೇಟಿ ನೀಡಿ ಕಾರ್ಯಕರ್ತರು, ಸಮಾಜದ ಮುಖಂಡರು ಮತ್ತು ಸಾಮಾನ್ಯ ಜನರೊಂದಿಗೆ ಸಂಪರ್ಕದಲ್ಲಿರುತ್ತಿದ್ದರು. ಸಾವಿರಾರು ಕಾರ್ಯಕರ್ತರ ವೈಯಕ್ತಿಕ ಬದುಕಿನ ವಿವರಗಳನ್ನು ತಿಳಿದುಕೊಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ದತ್ತಾತ್ರೇಯ ಹೊಸಬಾಳೆ ಅವರ ಪ್ರಕಾರ, ಶೇಷಾದ್ರಿಯವರು ಕಾರ್ಯಕರ್ತರಿಗೆ 10,000ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರು. ಆ ಪತ್ರಗಳಲ್ಲಿ ಸಂಘಟನಾ ಮಾರ್ಗದರ್ಶನದ ಜೊತೆಗೆ ವೈಯಕ್ತಿಕ ಸಾಂತ್ವನ ಮತ್ತು ಪ್ರೋತ್ಸಾಹವೂ ಇರುತ್ತಿತ್ತು.

ನಾಲ್ಕು ಭಾಷೆಗಳಲ್ಲಿ 4,000ಕ್ಕೂ ಹೆಚ್ಚು ಪುಟಗಳ ಸಾಹಿತ್ಯ ಕೊಡುಗೆ

ಶೇಷಾದ್ರಿಯವರ ಮತ್ತೊಂದು ಪ್ರಮುಖ ಗುರುತು ಅವರ ಸಾಹಿತ್ಯ ಸೇವೆ. ಅವರು ಕೇವಲ ಸಂಘಟಕರಾಗಿರಲಿಲ್ಲ. ಆಳವಾದ ಅಧ್ಯಯನ, ವಿಶ್ಲೇಷಣೆ ಮತ್ತು ಸರಳ ನಿರೂಪಣಾ ಶೈಲಿಯನ್ನು ಹೊಂದಿದ್ದ ಲೇಖಕರೂ ಆಗಿದ್ದರು. ಭಾರತೀಯ ಇತಿಹಾಸ, ಸಂಸ್ಕೃತಿ, ಸಮಾಜ, ರಾಷ್ಟ್ರೀಯ ಚಿಂತನೆ ಮತ್ತು ಸಮಕಾಲೀನ ವಿಚಾರಗಳ ಕುರಿತು ಅವರು ನಿರಂತರವಾಗಿ ಬರೆಯುತ್ತಿದ್ದರು.

ಕನ್ನಡದ’ವಿಕ್ರಮ, ಉತ್ಥಾನ ಪತ್ರಿಕೆಗಳಲ್ಲಿಯೂ, ಇಂಗ್ಲಿಷಿನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಸೇರಿದಂತೆ ವಿವಿಧ ಭಾಷೆಗಳ ನಿಯತಕಾಲಿಕೆಗಳಲ್ಲಿಯೂ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಸಾಮಾನ್ಯ ವಿಷಯವೊಂದನ್ನು ಉದಾಹರಣೆಯಾಗಿ ತೆಗೆದುಕೊಂಡು, ಅದರ ಮೂಲಕ ವಿಶಾಲವಾದ ಸಾಮಾಜಿಕ ಅಥವಾ ತಾತ್ವಿಕ ವಿಚಾರವನ್ನು ಓದುಗರಿಗೆ ಮನದಟ್ಟಾಗಿಸುವುದು ಅವರ ಬರವಣಿಗೆಯ ವೈಶಿಷ್ಟ್ಯವಾಗಿತ್ತು.

ಕನ್ನಡದಲ್ಲಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ

sheshadri3

  • ಯುಗಾವತಾರ– ಛತ್ರಪತಿ ಶಿವಾಜಿಯವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಕೃತಿ.
  • ಅಮ್ಮಾ ಬಾಗಿಲು ತೆಗೆ– ಮನಮುಟ್ಟುವ ಪ್ರಬಂಧಗಳ ಸಂಕಲನ.
  • ಚಿಂತನಗಂಗಾ– ವೈಚಾರಿಕ ಲೇಖನಗಳ ಸಂಗ್ರಹ.
  • ದೇಶ ವಿಭಜನೆಯ ದುರಂತ ಕಥೆ– ಭಾರತದ ವಿಭಜನೆಯ ಸಂದರ್ಭಗಳು ಮತ್ತು ಪರಿಣಾಮಗಳ ಕುರಿತ ಬರಹ.
  • ಭುಗಿಲು– ತುರ್ತು ಪರಿಸ್ಥಿತಿಯ ಅವಧಿಯ ಹೋರಾಟ ಮತ್ತು ಘಟನೆಗಳನ್ನು ದಾಖಲಿಸುವ ಕೃತಿ.
  • ತೋರ್ಬೆರಳು– ಸಾಮಾಜಿಕ ವಿಷಯಗಳನ್ನೊಳಗೊಂಡ ಲಲಿತ ಪ್ರಬಂಧಗಳ ಸಂಕಲನ.

sheshadri4

ಇಂಗ್ಲಿಷಿನಲ್ಲಿ ‘Bunch of Thoughts’, ‘The Tragic Story of Partition’, ‘RSS – A Vision in Action’, ‘Universal Spirit of Hindu Nationalism’, ‘The Way’ ಮತ್ತು ‘Yoga – A Social Imperative’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿಯೂ ‘ಕೃತಿ ರೂಪ ಸಂಘ ದರ್ಶನ’, ‘ನಾನ್ಯ ಪಂಥ್’, ‘ಉಗವೇ ಸಂಘ ಪಹಾಟ್’ ಮುಂತಾದ ಕೃತಿಗಳು ಪ್ರಕಟವಾಗಿವೆ.

ತೋರ್ಬೆರಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 

ಶೇಷಾದ್ರಿಯವರು ಪ್ರಶಸ್ತಿ ಮತ್ತು ವೈಯಕ್ತಿಕ ಗೌರವಗಳಿಗಾಗಿ ಬರೆಯುತ್ತಿದ್ದವರಲ್ಲ. ಆದರೂ ಅವರ ಸಾಹಿತ್ಯದ ಗುಣಮಟ್ಟಕ್ಕೆ ದೊರೆತ ಮನ್ನಣೆಯಾಗಿ 1982ರಲ್ಲಿ ‘ತೋರ್ಬೆರಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಲಲಿತ ಪ್ರಬಂಧಗಳ ಮೂಲಕ ಸಮಾಜದ ವಿವಿಧ ಮುಖಗಳನ್ನು ಪರಿಚಯಿಸಿದ ಈ ಕೃತಿ ಅವರ ಸಾಹಿತ್ಯಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಅವರು ಲೇಖಕರಷ್ಟೇ ಅಲ್ಲದೆ ಉತ್ತಮ ವಾಗ್ಮಿಯೂ ಆಗಿದ್ದರು. ಅವರ ಉಪನ್ಯಾಸಗಳಲ್ಲಿ ಇತಿಹಾಸ, ಸಂಸ್ಕೃತಿ, ಸಾಮಾಜಿಕ ಸಮಸ್ಯೆಗಳು ಮತ್ತು ಸಮಕಾಲೀನ ವಿಚಾರಗಳ ವಿಶ್ಲೇಷಣೆ ಇರುತ್ತಿತ್ತು. 1984ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನ ಹಾಗೂ ಇಂಗ್ಲೆಂಡ್‌ನ ಬ್ರಾಡ್‌ಫೋರ್ಡ್‌ನಲ್ಲಿ ನಡೆದ ಹಿಂದೂ ಸಂಗಮದಲ್ಲಿಯೂ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ್ದರು.

ಯೋಗವನ್ನು ವೈಯಕ್ತಿಕ ಆರೋಗ್ಯದಿಂದ ಸಮಾಜದ ಹಿತದವರೆಗೆ ವಿಸ್ತರಿಸಿದ ಚಿಂತನೆ

sheshadri5

ಶೇಷಾದ್ರಿಯವರಿಗೆ ಯೋಗದ ಮೇಲೂ ವಿಶೇಷ ಆಸಕ್ತಿ ಇತ್ತು. ಯೋಗವನ್ನು ಕೇವಲ ದೈಹಿಕ ವ್ಯಾಯಾಮ ಅಥವಾ ಆರೋಗ್ಯ ಕಾಪಾಡಿಕೊಳ್ಳುವ ವಿಧಾನವಾಗಿ ಮಾತ್ರ ನೋಡದೆ, ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬದುಕನ್ನು ಸುಧಾರಿಸುವ ಜೀವನಪದ್ಧತಿಯೆಂದು ಪರಿಗಣಿಸಿದ್ದರು.

Yoga – A Social Imperative ಎಂಬ ಕೃತಿಯಲ್ಲಿ ಯೋಗದ ಸಾಮಾಜಿಕ ಮಹತ್ವವನ್ನು ವಿವರಿಸಿದ್ದಾರೆ. ಯೋಗದ ಮೂಲಕ ವ್ಯಕ್ತಿಯಲ್ಲಿ ಶಿಸ್ತು, ಸಮತೋಲನ, ಆತ್ಮನಿಯಂತ್ರಣ ಮತ್ತು ಸೇವಾ ಮನೋಭಾವ ಬೆಳೆಸಬಹುದು ಎಂಬ ವಿಚಾರವನ್ನು ಪ್ರತಿಪಾದಿಸಿದ್ದರು. ಎಸ್‌-ವ್ಯಾಸದ ಪ್ರಶಾಂತಿ ಕುಟೀರಂಗೆ ಭೇಟಿ ನೀಡುತ್ತಿದ್ದ ಅವರು ಅಲ್ಲಿ ಯೋಗ, ಭಗವದ್ಗೀತೆ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಜನರೊಂದಿಗೆ ಅನೌಪಚಾರಿಕವಾಗಿ ಚರ್ಚಿಸುತ್ತಿದ್ದರು ಎಂದು ದತ್ತಾತ್ರೇಯ ಹೊಸಬಾಳೆ ಸ್ಮರಿಸಿದರು.

ತಾಯಿಯ ಸೇವೆಯೇ ಸಮಾಜಸೇವೆಗೆ ಮಾದರಿ

ಶೇಷಾದ್ರಿಯವರ ಸಮಾಜಸೇವೆಯ ಕುರಿತ ಚಿಂತನೆಗಳಲ್ಲಿ ತಾಯಿಯ ನಿಸ್ವಾರ್ಥ ಸೇವೆಯ ಉದಾಹರಣೆ ಪ್ರಮುಖವಾಗಿತ್ತು. ತಾಯಿ ತನ್ನ ಮಗುವಿನ ಒಳಿತಿಗಾಗಿ ರಾತ್ರಿ ನಿದ್ದೆ ಬಿಟ್ಟು ದುಡಿಯುತ್ತಾಳೆ. ಅದಕ್ಕೆ ಪ್ರತಿಯಾಗಿ ಯಾವುದೇ ಬಹುಮಾನ ಅಥವಾ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಇದೇ ನಿಸ್ವಾರ್ಥ ಭಾವನೆಯನ್ನು ಸಮಾಜದ ಸೇವೆಗೆ ವಿಸ್ತರಿಸಿದರೆ ಸಮಾಜದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂದು ಅವರು ಹೇಳುತ್ತಿದ್ದರಂತೆ.

2026ರ ನವೆಂಬರ್ 13ರಂದು ಬೆಂಗಳೂರಿನ ಎಸ್‌-ವ್ಯಾಸದ ಪ್ರಶಾಂತಿ ಕುಟೀರಂನಲ್ಲಿ ನಡೆದ ಅವರ ಜನ್ಮಶತಾಬ್ದಿ ಸ್ಮರಣಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ವಿಶೇಷವಾಗಿ ನೆನಪಿಸಿಕೊಂಡರು. ಶೇಷಾದ್ರಿಯವರ ಸರಳತೆ, ವಿನಯ, ಸಂಘಟನಾ ಸಾಮರ್ಥ್ಯ ಮತ್ತು ರಾಷ್ಟ್ರನಿರ್ಮಾಣಕ್ಕಾಗಿ ಸಮರ್ಪಿಸಿಕೊಂಡ ಬದುಕನ್ನು ಸ್ಮರಿಸಿದ ಅವರು, ದೇಶವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಲು ಸಮರ್ಥ, ಶಿಸ್ತಿನ ಮತ್ತು ಸಮರ್ಪಿತ ನಾಗರಿಕರ ಅಗತ್ಯವಿದೆ ಎಂಬುದನ್ನು ಶೇಷಾದ್ರಿಯವರು ಅರಿತಿದ್ದರು ಎಂದು ಹೇಳಿದರು.

ವ್ಯಕ್ತಿಗಳನ್ನು ರೂಪಿಸುವುದರ ಮೂಲಕ ರಾಷ್ಟ್ರವನ್ನು ಕಟ್ಟುವ ಕಾರ್ಯಕ್ಕೆ ಅವರು ತಮ್ಮ ಜೀವನವನ್ನು ಅರ್ಪಿಸಿದ್ದರು. ತಾವು ಹಿಂದೆ ನಿಂತು ಇತರರನ್ನು ಮುಂದೆ ತರುವುದು, ಕಾರ್ಯಕರ್ತರನ್ನು ಸಂಘಟಿಸುವುದು ಮತ್ತು ಅವರನ್ನು ಸಮಾಜಸೇವೆಗೆ ಸಿದ್ಧಗೊಳಿಸುವುದು ಅವರ ಜೀವನದ ಪ್ರಮುಖ ಸಾಧನೆಯಾಗಿತ್ತು ಎಂದು ಪ್ರಧಾನಿ ಬಣ್ಣಿಸಿದರು.

ಎಸ್‌-ವ್ಯಾಸದ ಸ್ವರ್ಣಮಹೋತ್ಸವ ಮತ್ತು ಜನ್ಮಶತಾಬ್ದಿ ಸ್ಮರಣೆ

sheshadri5

ಶೇಷಾದ್ರಿಯವರ ಜನ್ಮಶತಾಬ್ದಿ ವರ್ಷ 2026ರಲ್ಲಿ ಆಚರಿಸಲಾಯಿತು. ಬೆಂಗಳೂರಿನ ಎಸ್‌-ವ್ಯಾಸ ವಿಶ್ವವಿದ್ಯಾಲಯದ ಪ್ರಶಾಂತಿ ಕುಟೀರಂನಲ್ಲಿ 2026ರ ನವೆಂಬರ್ 13ರಂದು ನಡೆದ ಕಾರ್ಯಕ್ರಮವು ಎರಡು ಮಹತ್ವದ ಸಂದರ್ಭಗಳನ್ನು ಒಟ್ಟುಗೂಡಿಸಿತ್ತು. ಒಂದು, ಹೊ.ವೆ. ಶೇಷಾದ್ರಿಯವರ ಜನ್ಮಶತಾಬ್ದಿ. ಮತ್ತೊಂದು, ಪ್ರಶಾಂತಿ ಕುಟೀರಂನ 50 ವರ್ಷಗಳ ಸೇವಾ ಪಯಣದ ಸ್ವರ್ಣಮಹೋತ್ಸವ.

ಪ್ರಶಾಂತಿ ಕುಟೀರಂ 1975ರಲ್ಲಿ ಸ್ಥಾಪನೆಯಾಗಿದ್ದು, ಆಧುನಿಕ ವಿಜ್ಞಾನ ಮತ್ತು ಭಾರತದ ಆಧ್ಯಾತ್ಮಿಕ ಜ್ಞಾನಪರಂಪರೆಯನ್ನು ಸಮನ್ವಯಗೊಳಿಸುವ ಉದ್ದೇಶ ಹೊಂದಿದೆ. ಎಸ್‌-ವ್ಯಾಸ ಸಂಸ್ಥೆಗೆ 2002ರಲ್ಲಿ ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದೆ. 2026ರ ನವೆಂಬರ್ 13ರಿಂದ 23ರವರೆಗೆ ವಿಕಸಿತ ಭಾರತ 2047ರತ್ತ ಎಂಬ ಆಶಯದೊಂದಿಗೆ ಸ್ವರ್ಣಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕರ್ನಾಟಕದ ರಾಜ್ಯಪಾಲೆ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದಕ್ಷಿಣ ಕೊರಿಯಾದ ಮಿರ್ಯಾಂಗ್ ನಗರದ ಮೇಯರ್ ಆನ್ ಬ್ಯಿಂಗ್ ಗೂ, ಎಸ್‌-ವ್ಯಾಸ ಸೊಸೈಟಿಯ ಅಧ್ಯಕ್ಷ ಡಾ. ಎಚ್.ಆರ್. ನಾಗೇಂದ್ರ, ಉಪಾಧ್ಯಕ್ಷ ಸತೀಶ್ ಗುಪ್ತಾ ಮತ್ತು ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಆರ್. ದಯಾನಂದ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೇಷಾದ್ರಿಯವರ ಜೀವನ ಮತ್ತು ಚಿಂತನೆಗಳನ್ನು ಸ್ಮರಿಸುವುದರ ಜೊತೆಗೆ ಅವರ ಆರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಅವರ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಡಾ. ನಾಗೇಂದ್ರ ಮತ್ತು ಡಾ. ನಾಗರತ್ನ ಅವರ ಪ್ರಯತ್ನಗಳನ್ನೂ ಪ್ರಧಾನಿ ಶ್ಲಾಘಿಸಿದರು. ಶೇಷಾದ್ರಿಯವರ ಜನ್ಮಶತಾಬ್ದಿಯ ನೆನಪಿಗಾಗಿ 1,000 ಕೃತಕ ಅಂಗಗಳನ್ನು ಉಚಿತವಾಗಿ ವಿತರಿಸುವ ಯೋಜನೆಯನ್ನು ಎಸ್‌-ವ್ಯಾಸದ ಪ್ರತಿನಿಧಿಗಳು ಘೋಷಿಸಿದ್ದರು.

ಸರಳತೆ, ವಿನಯ ಮತ್ತು ನಿರಂತರ ಮಾರ್ಗದರ್ಶನ

 

ಅಪಾರ ಜ್ಞಾನ, ಎಂ.ಎಸ್ಸಿ. ಸ್ವರ್ಣಪದಕ, ಸಾಹಿತ್ಯ ಸಾಧನೆ ಮತ್ತು ಸಂಘಟನೆಯ ಉನ್ನತ ಜವಾಬ್ದಾರಿಗಳನ್ನು ಹೊಂದಿದ್ದರೂ ಶೇಷಾದ್ರಿಯವರ ವೈಯಕ್ತಿಕ ಜೀವನ ಸರಳವಾಗಿತ್ತು. ದೊಡ್ಡ ಹುದ್ದೆಯಲ್ಲಿದ್ದಾಗಲೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುವಷ್ಟು ಸರಳ ಸ್ವಭಾವ ಅವರಲ್ಲಿತ್ತು ಎಂದು ದತ್ತಾತ್ರೇಯ ಹೊಸಬಾಳೆ ಸ್ಮರಿಸಿದ್ದಾರೆ.

ಅವರ ವ್ಯಕ್ತಿತ್ವದಲ್ಲಿ ವಿದ್ವತ್ತು ಮತ್ತು ವಿನಯ ಎರಡೂ ಸಮಾನವಾಗಿ ಕಾಣುತ್ತಿದ್ದವು. ಸಾವಿರಾರು ಕಾರ್ಯಕರ್ತರೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದ ಅವರು, ಅವರ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸಿ ಮಾರ್ಗದರ್ಶನ ನೀಡುತ್ತಿದ್ದರು. ಸಮಾಜಸೇವೆ, ಯೋಗ, ಅಧ್ಯಯನ ಮತ್ತು ಶಿಸ್ತಿನ ಬದುಕನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅನೇಕರು ಇಂದಿಗೂ ಅವರ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುತ್ತಾರೆ.

ಹೊ.ವೆ. ಶೇಷಾದ್ರಿಯವರ ವ್ಯಕ್ತಿತ್ವದ ಮತ್ತೊಂದು ಮುಖ. ಗಂಭೀರ ಚಿಂತನೆಯ ಹಿಂದೆ ಅಡಗಿದ್ದ ಹಾಸ್ಯಪ್ರಜ್ಞೆ ಮತ್ತು ಕಾರ್ಯಕರ್ತರ ಬಗೆಗಿನ ಅಪಾರ ಪ್ರೀತಿ

ಹೊ.ವೆ. ಶೇಷಾದ್ರಿಯವರು ಬದುಕಿದ್ದಷ್ಟು ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶಿಕ್ಷಾ ವರ್ಗಗಳಲ್ಲಿ ಅವರ ಬೌದ್ಧಿಕ್‌ಗೆ ವಿಶೇಷ ಮಹತ್ವವಿರುತ್ತಿತ್ತು. ಅವರ ವಿಚಾರಪೂರ್ಣ ಭಾಷಣಗಳನ್ನು ಕೇಳಲು ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದರು. ಸಂಘದ ವೈಚಾರಿಕತೆ, ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರಜೀವನದ ಕುರಿತು ಆಳವಾದ ಅಧ್ಯಯನ ಹೊಂದಿದ್ದ ಅವರು, ತಮ್ಮ ಮಾತುಗಳ ಮೂಲಕ ಕಾರ್ಯಕರ್ತರಿಗೆ ಹೊಸ ಚಿಂತನೆಯ ದಿಕ್ಕನ್ನು ನೀಡುತ್ತಿದ್ದರು.

ಎಂಭತ್ತರ ದಶಕದಲ್ಲಿ ಹತ್ತನೇ ತರಗತಿಯನ್ನು ಮುಗಿಸಿದ್ದ ನನಗೆ ಚೆನ್ನೇಹಳ್ಳಿಯಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಮೊದಲ ಬಾರಿಗೆ ಅವರ ಬೌದ್ಧಿಕ್ ಕೇಳುವ ಅವಕಾಶ ದೊರೆತಿತ್ತು. ಅವರನ್ನು ನೇರವಾಗಿ ನೋಡುವ ಮತ್ತು ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಅಪಾರ ಸಂತೋಷವಾಗಿತ್ತು. ಆದರೆ ಬೌದ್ಧಿಕ್ ಕೇಳಲು ಕುಳಿತಾಗ ಅವರು ಮಂಡಿಸುತ್ತಿದ್ದ ಗಹನ ವಿಚಾರಗಳು ನನಗೆ ಅರ್ಥವಾಗದೆ ಕಬ್ಬಿಣದ ಕಡಲೆಯಂತಾಗಿದ್ದವು!

ಅವರ ಮಾತುಗಳು ನನಗೊಬ್ಬನಿಗೇ ಅರ್ಥವಾಗುತ್ತಿಲ್ಲವೇ ಅಥವಾ ಇತರರಿಗೂ ಇದೇ ಅನುಭವವಾಗುತ್ತಿದೆಯೇ ಎಂಬ ಕುತೂಹಲ ನನ್ನನ್ನು ಕಾಡಿತು. ನಂತರ ಆತ್ಮೀಯರಾಗಿದ್ದ, ಹಿಂದೆ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯರೊಬ್ಬರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಆಗ ಅವರು ಕೂಡ ತಮ್ಮ ಆರಂಭದ ದಿನಗಳಲ್ಲಿ ಶೇಷಾದ್ರಿಯವರ ಬೌದ್ಧಿಕ್ ಕೇಳುವಾಗ ಇದೇ ಅನುಭವವಾಗುತ್ತಿತ್ತು ಎಂದು ತಿಳಿಸಿದರು. ಆ ವಯಸ್ಸಿನಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳ ಆಳ ಮತ್ತು ವಿಸ್ತಾರವನ್ನು ಗ್ರಹಿಸುವಷ್ಟು ನಮ್ಮ ಬೌದ್ಧಿಕ ಪ್ರಬುದ್ಧತೆ ಬೆಳೆದಿರಲಿಲ್ಲ ಎಂಬುದು ಈಗ ನನಗೆ ಅರ್ಥವಾಗುತ್ತದೆ.

ಶೇಷಾದ್ರಿಯವರ ವಿಚಾರಗಳ ಆಳವನ್ನು ಅರಿಯಲು ಕೇವಲ ಭಾಷಣ ಕೇಳಿದರೆ ಸಾಲದು; ಅಧ್ಯಯನ, ಅನುಭವ ಮತ್ತು ಚಿಂತನೆಯೂ ಅಗತ್ಯವಾಗಿತ್ತು. ಅವರ ಬೌದ್ಧಿಕ್‌ಗಳ ವಿಶೇಷತೆಯೇ ಅಂತಹದ್ದು. ಒಮ್ಮೆ ಕೇಳಿದಾಗ ಎಲ್ಲವೂ ಅರ್ಥವಾಗದಿದ್ದರೂ, ನಂತರದ ದಿನಗಳಲ್ಲಿ ಆಲೋಚಿಸಿದಾಗ ಅದರಲ್ಲಿನ ವಿಚಾರಗಳ ಮಹತ್ವ ಮನದಟ್ಟಾಗುತ್ತಿತ್ತು.

ರಾಜಕೀಯ ವಿಚಾರ ಭಿನ್ನವಾದರೂ ಬದಲಾಗದ ಆತ್ಮೀಯತೆ

ಕನ್ನಡದ ಸುಪ್ರಸಿದ್ಧ ಲೇಖಕ, ಅಂಕಣಕಾರ ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿರುವ ಶ್ರೀ ಮಂಜುನಾಥ್ ಅಜ್ಜಂಪುರ ಅವರು ಬಾಲ್ಯದಲ್ಲಿ ಸಂಘದ ಸ್ವಯಂಸೇವಕರಾಗಿದ್ದರು. ನಂತರದ ದಿನಗಳಲ್ಲಿ ಕಮ್ಯೂನಿಸ್ಟ್ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿ ಎಡಪಂಥೀಯ ಚಿಂತನೆಯತ್ತ ಒಲವು ಬೆಳೆಸಿಕೊಂಡಿದ್ದರು.

ಬ್ಯಾಂಕ್ ಉದ್ಯೋಗದಲ್ಲಿದ್ದು ಹಲವು ವರ್ಷಗಳು ಕಳೆದ ನಂತರ ಯಾವುದೋ ಸಂದರ್ಭದಲ್ಲಿ ಬಾಲ್ಯದಲ್ಲಿ ಪರಿಚಯವಾಗಿದ್ದ ಸಂಘದ ಹಿರಿಯ ಪ್ರಚಾರಕರಾದ ಹೊ.ವೆ. ಶೇಷಾದ್ರಿಯವರನ್ನು ಮತ್ತೊಮ್ಮೆ ಭೇಟಿಯಾಗಬೇಕೆಂಬ ಆಸೆ ಮಂಜುನಾಥ್ ಅವರಿಗೆ ಉಂಟಾಯಿತು. ಅದಕ್ಕಾಗಿ ಶೇಷಾದ್ರಿಯವರಿಗೆ ದೂರವಾಣಿ ಕರೆ ಮಾಡಿ, “ನಾನು ನಿಮ್ಮನ್ನು ಭೇಟಿಯಾಗಬಹುದೇ? ಎಂದು ಕೇಳಿದರು.

ಮಂಜುನಾಥ್ ಅವರು ಈಗ ಎಡಪಂಥೀಯ ವಿಚಾರಧಾರೆಯವರಾಗಿದ್ದಾರೆ ಎಂಬ ಸಂಗತಿ ಶೇಷಾದ್ರಿಯವರಿಗೆ ತಿಳಿದಿದ್ದರೂ, ಅವರ ಪ್ರತಿಕ್ರಿಯೆಯಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಬಾಲ್ಯದಲ್ಲಿ ಹೇಗೆ ಆತ್ಮೀಯವಾಗಿ ಮಾತನಾಡಿಸುತ್ತಿದ್ದರೋ, ಅದೇ ಪ್ರೀತಿಯಿಂದ ಅರೇ, ನೀನು ನಮ್ಮ ಹುಡುಗ! ಯಾವಾಗ ಬೇಕಾದರೂ ಭೇಟಿಯಾಗಬಹುದು. ನಾಳೆ ರಾತ್ರಿ ಊಟಕ್ಕೇ ಕಾರ್ಯಾಲಯಕ್ಕೆ ಬಂದುಬಿಡು. ಬಹಳ ವರ್ಷಗಳ ನಂತರ ಒಟ್ಟಿಗೆ ಕುಳಿತು ಊಟ ಮಾಡೋಣ ಎಂದು ಆಹ್ವಾನಿಸಿದರಂತೆ.

ಈ ಮಾತುಗಳನ್ನು ಕೇಳಿದ ಮಂಜುನಾಥ್ ಅವರಿಗೆ ಅಚ್ಚರಿಯ ಜೊತೆಗೆ ಅಪಾರ ಸಂತೋಷವೂ ಆಗಿತ್ತು. ತಮ್ಮ ವಿಚಾರಧಾರೆ ಬದಲಾಗಿದ್ದರೂ ಬಾಲ್ಯದ ಆತ್ಮೀಯತೆಯನ್ನು ಶೇಷಾದ್ರಿಯವರು ಮರೆಯಲಿಲ್ಲ ಎಂಬುದು ಅವರಿಗೆ ವಿಶೇಷ ಅನುಭವವಾಗಿತ್ತು.

ಈ ಒಂದು ಪ್ರಸಂಗವೇ ಶೇಷಾದ್ರಿಯವರ ವ್ಯಕ್ತಿತ್ವದ ವಿಶಾಲತೆಯನ್ನು ಪರಿಚಯಿಸುತ್ತದೆ. ವ್ಯಕ್ತಿಯೊಂದಿಗೆ ಹೊಂದಿರುವ ಸಂಬಂಧವನ್ನು ಕೇವಲ ಆತನ ಇಂದಿನ ರಾಜಕೀಯ ಅಥವಾ ಸೈದ್ಧಾಂತಿಕ ನಿಲುವುಗಳ ಆಧಾರದಲ್ಲಿ ಅಳೆಯಬಾರದು ಎಂಬುದನ್ನು ಅವರು ತಮ್ಮ ನಡೆ-ನುಡಿಗಳ ಮೂಲಕ ತೋರಿಸಿಕೊಟ್ಟಿದ್ದರು. ಕಾರ್ಯಕರ್ತರನ್ನು ಬೆಳೆಸುವುದು ಎಂದರೆ ಅವರನ್ನು ಸದಾ ತಮ್ಮ ಸುತ್ತಲೂ ಇಟ್ಟುಕೊಳ್ಳುವುದಲ್ಲ. ಅವರೊಂದಿಗೆ ಆತ್ಮೀಯ ಸಂಬಂಧ ಉಳಿಸಿಕೊಂಡು, ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿಯಿಂದ ಮಾತನಾಡಿಸುವುದೂ ಹೌದು. ಈ ಕಲೆ ಶೇಷಾದ್ರಿಯವರಿಗೆ ಚೆನ್ನಾಗಿ ಕರಗತವಾಗಿತ್ತು.

ಸಾಮಾನ್ಯವಾಗಿ ಶೇಷಾದ್ರಿಯವರನ್ನು ನೆನಪಿಸಿಕೊಂಡಾಗ ಗಂಭೀರ ಚಿಂತಕರು, ಆಳವಾದ ವಿದ್ವಾಂಸರು ಮತ್ತು ಶಿಸ್ತಿನ ಸಂಘಟಕರು ಎಂಬ ಚಿತ್ರಣವೇ ಮನಸ್ಸಿಗೆ ಬರುತ್ತದೆ. ಆದರೆ ಅವರ ವ್ಯಕ್ತಿತ್ವದಲ್ಲಿ ಉತ್ತಮ ಹಾಸ್ಯಪ್ರಜ್ಞೆಯೂ ಇತ್ತು ಎಂಬುದಕ್ಕೆ ಮತ್ತೊಂದು ಸ್ವಾರಸ್ಯಕರ ಪ್ರಸಂಗ ಸಾಕ್ಷಿಯಾಗಿದೆ.

ಸಿಂಹವೂ ಭೋಜನ ಮಂತ್ರ ಹೇಳಿದಾಗ!

ಒಮ್ಮೆ ಸಂಘದ ಬೈಠಕ್‌ನಲ್ಲಿ ಯುವ ಸ್ವಯಂಸೇವಕನೊಬ್ಬ ಶೇಷಾದ್ರಿಯವರನ್ನು ಒಂದು ಪ್ರಶ್ನೆ ಕೇಳಿದನಂತೆ. ಜೀ, ಶಾಖೆಯಲ್ಲಿ ಪ್ರಾರ್ಥನೆ ಮಾಡುವಾಗ ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ ಎಂಬ ಸಾಲು ಬರುತ್ತದೆ. ಅಂದರೆ ನಮ್ಮ ರಾಷ್ಟ್ರವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯಬೇಕು ಎಂದರ್ಥ. ಒಂದು ವೇಳೆ ನಮ್ಮ ದೇಶ ನಿಜವಾಗಿಯೂ ಪರಮ ವೈಭವವನ್ನು ತಲುಪಿದರೆ, ಆಗ ಪರಿಸ್ಥಿತಿ ಹೇಗಿರುತ್ತದೆ? ಎಂದು ಪ್ರಶ್ನಿಸಿದ.

ಇಂತಹ ಪ್ರಶ್ನೆಗೆ ಸಾಮಾನ್ಯವಾಗಿ ಯಾರಾದರೂ ಗಂಭೀರವಾದ ವೈಚಾರಿಕ ಉತ್ತರ ನೀಡಬಹುದಿತ್ತು. ಆದರೆ ಶೇಷಾದ್ರಿಯವರು ತಮ್ಮಲ್ಲಿದ್ದ ಹಾಸ್ಯಪ್ರಜ್ಞೆಯನ್ನು ಬಳಸಿಕೊಂಡು, ನೋಡಪ್ಪಾ, ನಿನ್ನ ಪ್ರಶ್ನೆಗೆ ಒಂದು ಕಥೆಯ ಮೂಲಕ ಉತ್ತರ ನೀಡುತ್ತೇನೆ ಎಂದು ಹೇಳತೊಡಗಿದರು.

ನಮ್ಮ ದೇಶ ಪರಮ ವೈಭವದ ಸ್ಥಿತಿಯನ್ನು ತಲುಪಿದ ಕಾಲದಲ್ಲಿ ನಿನ್ನಂತಹ ಒಬ್ಬ ಸ್ವಯಂಸೇವಕ ಕಾಡಿನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದನಂತೆ. ಇದ್ದಕ್ಕಿದ್ದಂತೆ ಅವನ ಮುಂದೆ ಒಂದು ಸಿಂಹ ಪ್ರತ್ಯಕ್ಷವಾಯಿತು. ಸಿಂಹವನ್ನು ನೋಡಿದ ತಕ್ಷಣ ಅಯ್ಯೋ ದೇವರೇ, ಇವತ್ತು ನನ್ನ ಪ್ರಾಣ ಹೋಯಿತು! ಎಂದುಕೊಂಡು ಭಯದಿಂದ ಕಣ್ಣು ಮುಚ್ಚಿಕೊಂಡನಂತೆ. ಕೆಲವು ಕ್ಷಣಗಳು ಕಳೆದರೂ ಅವನಿಗೆ ಏನೂ ಆಗಲಿಲ್ಲ. ಆಶ್ಚರ್ಯದಿಂದ ಕಣ್ಣು ತೆರೆದು ನೋಡಿದಾಗ, ಸಿಂಹ ಅವನ ಎದುರಲ್ಲೇ ನಿಂತಿತ್ತು. ಅದರ ಬಾಯಿ ಚಲಿಸುತ್ತಿರುವುದನ್ನು ಕಂಡು ಏನೋ ಹೇಳುತ್ತಿದೆ ಎಂದು ಅವನಿಗೆ ಅನಿಸಿತು.

ಆಗ ಆ ಸಿಂಹ ಏನು ಹೇಳುತ್ತಿರಬಹುದು ಗೊತ್ತೇ? ಎಂದು ಶೇಷಾದ್ರಿಯವರು ಆ ಯುವಕನನ್ನು ಕೇಳಿದರು. ಆತ ಇಲ್ಲ ಜೀ, ಗೊತ್ತಿಲ್ಲ ಎಂದ. ಆಗ ಶೇಷಾದ್ರಿಯವರು ನಗುತ್ತಾ, ಆ ಸಿಂಹವೂ ನಮ್ಮ ಸಂಘದ ಸ್ವಯಂಸೇವಕರಂತೆ ಊಟ ಮಾಡುವ ಮೊದಲು ಭೋಜನ ಮಂತ್ರ ಹೇಳುತ್ತಿತ್ತು! ಎಂದರಂತೆ.

ಇದನ್ನು ಕೇಳಿದ ತಕ್ಷಣ ಸಭಾಂಗಣದಲ್ಲಿದ್ದವರೆಲ್ಲರೂ ಜೋರಾಗಿ ನಕ್ಕರಂತೆ. ಗಂಭೀರವಾದ ವೈಚಾರಿಕ ಚರ್ಚೆಯ ನಡುವೆ ಇಂತಹ ಹಾಸ್ಯದ ಮೂಲಕ ಎಲ್ಲರನ್ನೂ ನಗಿಸುವ ಅವರ ಸಾಮರ್ಥ್ಯ ನಿಜಕ್ಕೂ ವಿಶೇಷವಾಗಿತ್ತು.

ಈ ಪ್ರಸಂಗದಲ್ಲಿ ಹಾಸ್ಯವಷ್ಟೇ ಅಲ್ಲ, ಶೇಷಾದ್ರಿಯವರ ಮಾತುಗಳನ್ನು ಸರಳ ಉದಾಹರಣೆಗಳ ಮೂಲಕ ಜನರಿಗೆ ತಲುಪಿಸುವ ಕೌಶಲವೂ ಕಾಣುತ್ತದೆ. ಕಠಿಣ ವಿಚಾರಗಳನ್ನು ಕೆಲವೊಮ್ಮೆ ಒಂದು ಸಣ್ಣ ಕಥೆ ಅಥವಾ ಹಾಸ್ಯದ ಮೂಲಕವೂ ಪರಿಣಾಮಕಾರಿಯಾಗಿ ವಿವರಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಗಂಭೀರತೆಯ ಹಿಂದೆ ಇದ್ದ ಆತ್ಮೀಯ ವ್ಯಕ್ತಿತ್ವ

ಹೊ.ವೆ. ಶೇಷಾದ್ರಿಯವರನ್ನು ಕೇವಲ ಸಂಘಟನೆಯ ಉನ್ನತ ಜವಾಬ್ದಾರಿ ನಿರ್ವಹಿಸಿದ ವ್ಯಕ್ತಿಯಾಗಿ ಅಥವಾ ಸಾವಿರಾರು ಪುಟಗಳ ಸಾಹಿತ್ಯ ರಚಿಸಿದ ವಿದ್ವಾಂಸರಾಗಿ ಮಾತ್ರ ನೋಡಲು ಸಾಧ್ಯವಿಲ್ಲ. ಅವರ ನಿಜವಾದ ವ್ಯಕ್ತಿತ್ವವನ್ನು ಅರಿಯಬೇಕಾದರೆ ಕಾರ್ಯಕರ್ತರೊಂದಿಗೆ ಅವರು ಹೊಂದಿದ್ದ ಆತ್ಮೀಯತೆ, ಭಿನ್ನಾಭಿಪ್ರಾಯಗಳನ್ನು ಸಹಿಸುವ ಮನೋಭಾವ, ಯುವಕರನ್ನು ಪ್ರೋತ್ಸಾಹಿಸುವ ಗುಣ ಮತ್ತು ಸಂದರ್ಭಕ್ಕೆ ತಕ್ಕಂತೆ ಹಾಸ್ಯದಿಂದ ವಾತಾವರಣವನ್ನು ಹಗುರಗೊಳಿಸುವ ಸಾಮರ್ಥ್ಯವನ್ನೂ ಗಮನಿಸಬೇಕು.

ಒಂದೆಡೆ ಅತ್ಯಂತ ಗಹನವಾದ ವಿಚಾರಗಳನ್ನು ಮಂಡಿಸುವ ವಿದ್ವಾಂಸ; ಮತ್ತೊಂದೆಡೆ ಬಾಲ್ಯದ ಪರಿಚಯವನ್ನು ಮರೆಯದೆ ವರ್ಷಗಳ ನಂತರವೂ ಆತ್ಮೀಯವಾಗಿ ಊಟಕ್ಕೆ ಆಹ್ವಾನಿಸುವ ಹಿರಿಯ. ಇನ್ನೊಂದೆಡೆ ಸಿಂಹಕ್ಕೂ ಭೋಜನ ಮಂತ್ರ ಕಲಿಸುವಷ್ಟು ಹಾಸ್ಯಪ್ರಜ್ಞೆ ಹೊಂದಿದ್ದ ವ್ಯಕ್ತಿ! ಇಂತಹ ವಿಭಿನ್ನ ಗುಣಗಳ ಸಂಗಮವೇ ಹೊ.ವೆ. ಶೇಷಾದ್ರಿಯವರ ವ್ಯಕ್ತಿತ್ವವನ್ನು ವಿಶಿಷ್ಟವಾಗಿಸಿತ್ತು. ಅವರಿಂದ ನೇರವಾಗಿ ಕಲಿತವರಿಗೆ ಮಾತ್ರವಲ್ಲದೆ, ಅವರ ಬರಹಗಳನ್ನು ಓದಿದವರಿಗೆ ಮತ್ತು ಅವರ ಬದುಕಿನ ಪ್ರಸಂಗಗಳನ್ನು ಕೇಳಿದವರಿಗೂ ಅವರು ಇಂದಿಗೂ ಪ್ರೇರಣೆಯ ಸೆಲೆಯಾಗಿದ್ದಾರೆ. ಒಬ್ಬ ನಿಜವಾದ ಸಂಘಟಕನ ಮಹತ್ವ ಆತನ ಹುದ್ದೆಯಲ್ಲಿರುವುದಿಲ್ಲ; ತನ್ನೊಂದಿಗೆ ಕೆಲಸ ಮಾಡಿದವರ ಹೃದಯದಲ್ಲಿ ಎಷ್ಟು ಕಾಲ ಆತ್ಮೀಯವಾಗಿ ಉಳಿಯುತ್ತಾನೆ ಎಂಬುದರಲ್ಲಿರುತ್ತದೆ. ಹೊ.ವೆ. ಶೇಷಾದ್ರಿಯವರು ಅಂತಹ ಅಪರೂಪದ ವ್ಯಕ್ತಿತ್ವದವರಾಗಿದ್ದರು.

2005ರಲ್ಲಿ ಅಸ್ತಂಗತವಾದ ಜ್ಞಾನಜ್ಯೋತಿ

ಸುಮಾರು ಆರು ದಶಕಗಳ ಕಾಲ ಸಂಘಟನಾ, ಸಾಹಿತ್ಯಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಹೊ.ವೆ. ಶೇಷಾದ್ರಿಯವರು 2005ರ ಆಗಸ್ಟ್ 14ರಂದು ನಿಧನರಾದರು. ಅವರಿಗೆ ಆಗ 79 ವರ್ಷ ವಯಸ್ಸಾಗಿತ್ತು. ಆದರೆ ಅವರ ಬರಹಗಳು, ಉಪನ್ಯಾಸಗಳು, ಸಂಘಟನಾ ಕಾರ್ಯ ಮತ್ತು ಸಮಾಜಸೇವೆಯ ಚಿಂತನೆಗಳು ಇಂದಿಗೂ ಓದುಗರಿಗೂ ಕಾರ್ಯಕರ್ತರಿಗೂ ಅಧ್ಯಯನದ ವಿಷಯಗಳಾಗಿವೆ. ವಿಜ್ಞಾನದಲ್ಲಿ ಸ್ವರ್ಣಪದಕ ಗಳಿಸಿದ ಯುವಕನೊಬ್ಬ ವೈಯಕ್ತಿಕ ವೃತ್ತಿಜೀವನಕ್ಕಿಂತ ಸಮಾಜಸೇವೆಯನ್ನು ಆಯ್ಕೆ ಮಾಡಿಕೊಂಡು, ನಾಲ್ಕು ಭಾಷೆಗಳಲ್ಲಿ ಸಾಹಿತ್ಯ ರಚಿಸಿ, ಸಾವಿರಾರು ಜನರೊಂದಿಗೆ ನೇರ ಸಂಪರ್ಕ ಹೊಂದಿ, ಸಂಘಟನೆಯ ರಾಷ್ಟ್ರೀಯ ಜವಾಬ್ದಾರಿಯನ್ನು ನಿರ್ವಹಿಸಿದ ಜೀವನಪಯಣ ಅಪರೂಪದ್ದು.

ವ್ಯಕ್ತಿ ನಿರ್ಮಾಣವೇ ರಾಷ್ಟ್ರ ನಿರ್ಮಾಣದ ಅಡಿಪಾಯ ಎಂಬ ನಂಬಿಕೆಯಿಂದ ಬದುಕಿದ ಹೊ.ವೆ. ಶೇಷಾದ್ರಿಯವರ ಜೀವನ ನಮಗೆ ನೀಡುವ ಮುಖ್ಯ ಸಂದೇಶವೆಂದರೆ, ಜ್ಞಾನವು ಕೇವಲ ವೈಯಕ್ತಿಕ ಏಳಿಗೆಗೆ ಸೀಮಿತವಾಗಬಾರದು; ಅದು ಸಮಾಜದ ಒಳಿತಿಗೂ ಬಳಕೆಯಾಗಬೇಕು. ಪ್ರಶಸ್ತಿ ಮತ್ತು ಅಧಿಕಾರಕ್ಕಿಂತ ಸೇವೆ, ಪ್ರಚಾರಕ್ಕಿಂತ ಕಾರ್ಯ, ಮಾತಿಗಿಂತ ನಡೆ ಮುಖ್ಯ ಎಂಬ ಆದರ್ಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವರ ನೆನಪು ಜನ್ಮಶತಾಬ್ದಿಯ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತುತವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ