ಈಗ ನನ್ನ ವಯಸ್ಸು ಯಾವ ಹಂತಕ್ಕೆ ಬಂದಿದೆ ಎಂದರೆ, ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ಒಂದು ಸಾಹಸದ ಆಟವಾಗಿದೆ!
ಸಕ್ಕರೆ ತಿಂದರೆ ರಕ್ತದಲ್ಲಿ ಸಕ್ಕರೆ ಹೆಚ್ಚಾಗುತ್ತದೆ. ಉಪ್ಪು ತಿಂದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಔಷಧಿಗಳ ಬೆಲೆ ನೋಡಿದರೆ ಎರಡೂ ಹೆಚ್ಚಾಗುತ್ತವೆ!
ನೀರು ಕುಡಿದರೆ ಐದು ನಿಮಿಷಕ್ಕೊಮ್ಮೆ ಬಾತ್ರೂಮ್ಗೆ ಓಡಬೇಕು. ನೀರು ಕುಡಿಯದಿದ್ದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈಗಂತೂ ಬಾತ್ರೂಮ್ನಲ್ಲೇ ಟಿ.ವಿ. ಇಟ್ಟುಕೊಂಡು ಅದನ್ನೇ ನನ್ನ ಹಾಲ್ ಮಾಡಿಕೊಂಡರೆ ಹೇಗೆ ಎಂಬ ಯೋಚನೆ ಬರುತ್ತಿದೆ!
ಊಟ ಮಾಡಿದರೆ ತೂಕ ಹೆಚ್ಚಾಗುತ್ತದೆ. ಊಟ ಮಾಡದಿದ್ದರೆ ನಿಶ್ಶಕ್ತಿ ಬರುತ್ತದೆ. ಬರೀ ಸಲಾಡ್ ತಿಂದರೆ ಮನಸ್ಸಿಗೆ ಬೇಸರವಾಗುತ್ತದೆ. ಮನಸ್ಸಿಗೆ ಬೇಸರವಾದರೆ ಮತ್ತೆ ತಿನ್ನಲು ಶುರು!

ವೈದ್ಯರು ಹೇಳಿದರು, "ನಿಮ್ಮ ದೇಹ ಏನು ಹೇಳುತ್ತದೆಯೋ ಅದನ್ನು ಕೇಳಿ" ಎಂದು. ನಾನು ಕೇಳಿದೆ... ಆದರೆ ದೇಹದ ದೂರುಗಳೇ ಮುಗಿಯುವುದಿಲ್ಲ! ನಮ್ಮ ಸೊಸೈಟಿಯ ವಾರ್ಷಿಕ ಸಭೆಯಂತೆಯೇ ಇದೆ. ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ದೂರು ಇದ್ದೇ ಇರುತ್ತದೆ!
ವ್ಯಾಯಾಮ ಮಾಡಿದರೆ ಮರುದಿನ ಕುಳಿತುಕೊಳ್ಳಲು ಯಾರಾದರೂ ಸಹಾಯ ಮಾಡಬೇಕು. ವ್ಯಾಯಾಮ ಮಾಡದಿದ್ದರೆ ಎದ್ದು ನಿಲ್ಲಲು ಸಹಾಯ ಬೇಕು! ಹಾಗಾಗಿ ಜಿಮ್ ಫೀಸ್ ಕಟ್ಟುವುದೇ ಯಾವ ರೀತಿಯ ಕಷ್ಟ ಅನುಭವಿಸಬೇಕು ಎಂದು ನಿರ್ಧರಿಸುವುದಕ್ಕಾಗಿ!
ಜಾಸ್ತಿ ನಿದ್ದೆ ಮಾಡಿದರೆ ಬೆನ್ನು ನೋವು. ಕಡಿಮೆ ನಿದ್ದೆ ಮಾಡಿದರೆ ಜಾಂಬಿಯಂತೆ ಕಾಣುತ್ತೇವೆ. ಮಲಗುವಾಗ ತಪ್ಪು ಭಂಗಿಯಲ್ಲಿ ಮಲಗಿದರೆ ಮುಂದಿನ ಮೂರು ದಿನ ಕುತ್ತಿಗೆ ಎಡಕ್ಕೇ ತಿರುಗಿಕೊಂಡಿರುತ್ತದೆ!
ಇನ್ನೊಂದು ಹೊಸ ವಿಷಯ ಗೊತ್ತಾಗಿದೆ... ನಿದ್ದೆಯಲ್ಲೂ ಗಾಯವಾಗಬಹುದು! ಹಿಂದೆ ಗಾಯವಾಗಬೇಕಾದರೆ ಸೈಕಲ್ನಿಂದ ಬೀಳಬೇಕಿತ್ತು. ಈಗ ತಪ್ಪಾದ ದಿಂಬು ಆಯ್ಕೆ ಮಾಡಿದರೂ ಸಾಕು!
ಕಾಫಿ ಕುಡಿದರೆ ನಿದ್ದೆ ಬರುವುದಿಲ್ಲ. ಕಾಫಿ ಕುಡಿಯದಿದ್ದರೆ ಕೆಲಸವೇ ಆಗುವುದಿಲ್ಲ. ನನ್ನ ದೇಹ ಈಗ ಹಳೆಯ ಕಾರಿನಂತಾಗಿದೆ. ಸ್ಟಾರ್ಟ್ ಆಗಲು ತುಂಬಾ ಸಮಯ ಬೇಕು. ಸ್ಟಾರ್ಟ್ ಆದ ಮೇಲೆ ಯಾವ ಶಬ್ದ ಬರುತ್ತಿದೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ!

ಈಗ ಬೆಳಗ್ಗೆ ನಾನು ಎದ್ದೇಳುವುದಿಲ್ಲ... ಬದಲಿಗೆ ಪುನರ್ಜನ್ಮ ಪಡೆಯುತ್ತೇನೆ!
ಮೊದಲು ಕಣ್ಣು ತೆರೆಯುತ್ತೇನೆ. ನಂತರ ದೇಹದ ಯಾವ ಯಾವ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಪರೀಕ್ಷಿಸುತ್ತೇನೆ. ಆಮೇಲೆ ಹಾಸಿಗೆಯ ಅಂಚಿನಲ್ಲಿ ಕುಳಿತು ಮೊಣಕಾಲುಗಳಿಗೆ ಎಚ್ಚರವಾಗುವವರೆಗೆ ಕಾಯುತ್ತೇನೆ!
ನನ್ನ ಜ್ಞಾಪಕಶಕ್ತಿಯಂತೂ ಅದ್ಭುತವಾಗಿದೆ! ಆದರೆ ಅದನ್ನು ಎಲ್ಲಿ ಇಟ್ಟಿದ್ದೇನೆ ಎಂಬುದೇ ನೆನಪಾಗುವುದಿಲ್ಲ!
ಮೊನ್ನೆ ಒಂದು ಕೋಣೆಗೆ ಹೋದೆ. ಏಕೆ ಬಂದೆ ಎಂಬುದೇ ಮರೆತುಹೋಯಿತು. ನೆನಪಿಸಿಕೊಳ್ಳಲು ಹಿಂದಕ್ಕೆ ಹೋದೆ. ಆಗ ಎಲ್ಲಿಂದ ಬಂದಿದ್ದೆ ಎಂಬುದೂ ಮರೆತುಹೋಯಿತು! ಕೊನೆಗೆ, ಬಂದಿದ್ದೇನೋ ಬಂದಿದ್ದೇನೆ, ಬಾತ್ರೂಮ್ಗೆ ಹೋಗಿ ಬರುತ್ತೇನೆ ಎಂದುಕೊಂಡೆ!
ಆದರೆ ಜೀವನವನ್ನು ಸ್ವಲ್ಪ ಹಾಸ್ಯಮಯವಾಗಿ ನೋಡುವುದನ್ನು ಕಲಿಯಲೇಬೇಕು. ಒಂಟಿಯಾಗಿರುವುದು, ಯಾರೊಂದಿಗೂ ಮಾತನಾಡದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹಾಗಾಗಿ ಒಂದು ದಿನ ಕಾಫಿ ಕುಡಿಯುತ್ತಾ ಮೈಕ್ರೋವೇವ್ ಮತ್ತು ಟೋಸ್ಟರ್ ಜೊತೆ ಹರಟೆ ಹೊಡೆದೆ. ಇಬ್ಬರೂ ನನ್ನ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದರು. ಟೋಸ್ಟರ್ ಅಂತೂ ಎಷ್ಟು ಭಾವುಕವಾಯಿತೆಂದರೆ ಬ್ರೆಡ್ ತುಂಡುಗಳನ್ನೇ ಹೊರಕ್ಕೆ ಹಾರಿಸಿಬಿಟ್ಟಿತು!





