ನಮ್ಮ ಮೆಟ್ರೋದ ನಾಲ್ಕನೇ ಮಾರ್ಗ ಪಿಂಕ್ ಲೈನ್ ನನ್ನುಶುಕ್ರವಾರ ನಗರದ ಎಸ್ ಜಿ ಪಾಳ್ಯ ( ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ಬಾವುಟ ತೋರುವ ಮೂಲಕ ಉದ್ಘಾಟಿಸಿದರು.

ಬಳಿಕ ನರೇಂದ್ರ ಮೋದಿ ಅವರು ಮೆಟ್ರೋದಲ್ಲಿ ಸಂಚಾರ ನಡೆಸಿದರು. ರಾಜ್ಯಪಾಲರಾದ ಡಾ. ಸುಧಾ ಯಾದವ್, ಸಿಎಂ ಡಿಕೆ ಶಿವಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಖಾತೆ ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಪ್ರಯಾಣ ಮಾಡಿದರು.

ಬೆಂಗಳೂರಿನ ಎಸ್‌ಜಿ ಪಾಳ್ಯ ಮೆಟ್ರೋ ನಿಲ್ದಾಣದ ಬಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಸ್ವಾಗತಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಸಾವಿರಾರು ಅಭಿಮಾನಿಗಳು ಮತ್ತು ಸಾರ್ವಜನಿಕರತ್ತ ಪ್ರಧಾನಿ ಮೋದಿ ಕೈಬೀಸಿದರು. ಈ ಸಂದರ್ಭ ನೆರೆದಿದ್ದ ಜನರಿಂದ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೃಷ್ಣ ಬೈರೇಗೌಡ ಅವರು ನಿಲ್ದಾಣದಲ್ಲಿರುವ ಪಿಂಕ್ ಲೈನ್‌ನ ಮಾದರಿ ನಕ್ಷೆಯ ಮೂಲಕ ಪ್ರಧಾನಮಂತ್ರಿಯವರಿಗೆ ಮಾರ್ಗ ಮತ್ತು ಸಂಪರ್ಕ ವ್ಯವಸ್ಥೆಯ ವಿವರಗಳನ್ನು ತಿಳಿಸಿದರು.

ಮೆಟ್ರೋದಲ್ಲಿ ಸಂಚಾರ: ಉದ್ಘಾಟನೆ ನಂತರ ನರೇಂದ್ರ ಮೋದಿ ಅವರು ಮೆಟ್ರೋದಲ್ಲಿ ಸಂಚರಿಸಿದರು. ಈ ಸಂದರ್ಭ ಸಿಎಂ ಡಿಕೆ ಶಿವಕುಮಾರ್ ಜೊತೆಗೆ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ನಿಲ್ದಾಣದಲ್ಲಿರುವ ಪಿಂಕ್ ಲೈನ್‌ನ ಮಾದರಿ ನಕ್ಷೆಯ ಮೂಲಕ ಪ್ರಧಾನಮಂತ್ರಿಯವರಿಗೆ ಮಾರ್ಗ ಮತ್ತು ಸಂಪರ್ಕ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಮಾದರಿಯ ಅನುಷ್ಠಾನದಿಂದ ಆಗುವ ಅನುಕೂಲಗಳು ಹಾಗೂ ಸಂಚಾರ ದಟ್ಟಣೆ ನಿವಾರಣೆ ಬಗ್ಗೆಯೂ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ವಿವರಿಸಿದರು.

ಬಳಿಕ ಐಐಎಂಬಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ವಿಗ್ರಹವನ್ನು ಪ್ರಧಾನಿ ಮೋದಿ ಅವರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

ಧನ್ಯವಾದ ಸಲ್ಲಿಸಿದ ತೇಜಸ್ವಿ ಸೂರ್ಯ: ಸ್ವಾಗತ ಭಾಷಣ ಮಾಡಿದ ಸಂಸದ ತೇಜಸ್ವಿ ಸೂರ್ಯ, “ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದರೆ ನಮಗೆ ಹಬ್ಬದಂತೆ. ಬೆಂಗಳೂರಿಗೆ ಬಂದಾಗ ಇಲ್ಲಿಗೆ ಏನಾದರೂ ಕೊಡುಗೆಯನ್ನು ಪ್ರಧಾನಿ ಮೋದಿ ನೀಡುತ್ತಾ ಬಂದಿದ್ದಾರೆ.  ನಿಮ್ಮ ನೇತೃತ್ವದಲ್ಲಿ ನಮ್ಮ ಮೆಟ್ರೋ ಇದೀಗ 103 ಕಿ.ಮೀ ನೆಟ್ವರ್ಕ್ ತಲುಪಿದೆ” ಎಂದರು.

ಮುಂದಿನ ವರ್ಷ ಏರ್ ಪೋರ್ಟ್ ಲೈನ್ ಹಾಗೂ ಬೆಂಗಳೂರು ಸಬ್ ಅರ್ಬನ್ ರೈಲು ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸಬೇಕು ಎಂದು ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದರು.

ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರು ನಗರ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆಗೆ ಸೂಕ್ತ ನಗರವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಸಹಕಾರವೂ ರಾಜ್ಯಕ್ಕೆ ಅಗತ್ಯವಿದೆ. ನಮ್ಮ ಮೆಟ್ರೋ ಯೋಜನೆ ಟ್ರಾಫಿಕ್ ಸಮಸ್ಯೆಗೂ ಒಂದು ಪರಿಹಾರವಾಗಿದೆ ಎಂದು ತಿಳಿಸಿದರು.

ವಿಶ್ವಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರುಗಳನ್ನು ಹಾಗೂ ಎಂಜಿನಿಯರ್​ಗಳನ್ನು ಕರ್ನಾಟಕ ನೀಡುತ್ತಿದೆ. ಜಿಎಸ್​ಟಿ ಸಂಗ್ರಹದಲ್ಲೂ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮ್ಮದು ಪ್ರಯತ್ನ ಅಷ್ಟೇ ಫಲ ಸಿಗುವುದರು ದೇವರಿಂದ. ಬಂಡವಾಳ ಹೂಡಿಕೆಗೆ ಕರ್ನಾಟಕ ಸೂಕ್ತವಾದ ರಾಜ್ಯವಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್​ ಸಮಸ್ಯೆ ನಿವಾರಣೆಗೆ ಮೆಟ್ರೋ ಅನುಕೂಲ ಎಂದು ಶಿವಕುಮಾರ್ ತಿಳಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ