ಕಥೆ – ಸವಿತಾ ಮುದ್ಗಲ್

ಸರಸುವಿನ ಮುಂದಾಲೋಚನೆ ಇಲ್ಲದ ಹುಚ್ಚು ಕೆಲಸದಿಂದಾಗಿ, ಸ್ವಯಂಕೃತ ಅಪರಾಧದಂತೆ ತಾಯ್ತನ ಕಳೆದುಕೊಂಡಳು. ಮರುಮದುವೆಯಾಗಲು ಅವಳ ಗಂಡ ಸಿದ್ಧನಿರಲಿಲ್ಲ. ಈ ಸಂದರ್ಭದಲ್ಲಿ ಸರಸುವಿನ ಗೆಳತಿ ಚೈತ್ರಾ ಅವಳಿಗೆ ನೆರವಾಗಿದ್ದು ಹೇಗೆ…..?

ದಿನಾಲೂ ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಮಾತು, ಎಲ್ಲಿ ಕುಳಿತರೂ ಅದೇ ಗುನುಗು ಮಾತುಗಳು, ಸರಸು ಕಿವಿಯಲ್ಲಿ ಸುಳಿದಾಗ ಅಯ್ಯೋ ಎನ್ನದೆ ಇದೆಲ್ಲ ನನ್ನ ವಿಧಿಯಾಟಿ ಅಥವಾ ನಾನೇ ಮಾಡಿಕೊಂಡ ಗ್ರಹಚಾರವೋ ತಿಳಿತಿಲ್ಲ ಅಂತ ಒಮ್ಮೊಮ್ಮೆ ಬೇಸರ ವ್ಯಕ್ತಪಡಿಸಿದರೆ, ಗಳಿಗೆಯಲ್ಲೇ ಹುಮ್ಮಸ್ಸಿನಿಂದ ಎದ್ದು ತನ್ನ ನಿತ್ಯ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಳು.

ಒಂದು ವಾರ ರಜೆ ಹಾಕಿ ಮನೆಯಲ್ಲೇ ಇದ್ದಳು. ಮರುದಿನ ಕೆಲಸದ ನಿಮಿತ್ತ ಬೇಗನೆ ಎದ್ದು ಆಫೀಸ್‌ ಗೆ ಹೊರಡಲು ಸಿದ್ಧಳಾದಳು. ಸಾವಿತ್ರಮ್ಮ ಬಂದು ಆಕೆಯ ವ್ಯಾನಿಟಿ ಬ್ಯಾಗ್‌ ಕಿತ್ತುಕೊಂಡು, “ನೀನು ಇಲ್ಲೇ ಇರು, ಆಫೀಸ್‌ ಗೆ ಹೋಗೋದು ಬೇಡ, ಇಂದೇ ಎಲ್ಲ ಕ್ಲಿಯರ್‌ ಆಗಿ ಬಿಡ್ಲಿ ಸರಸು….”

“ಯಾಕತ್ತೆ…. ಏನಾಯ್ತು ಒಮ್ಮೊಮ್ಮೆ ಯಾಕೆ ಈ ತರಹ ಮಾತಾಡ್ತೀರಿ….”

“ಅದೇ ರಾಗ…. ಅದೇ ಹಾಡು ಅಲ್ವೇ ನಿನ್ನ ಬದುಕು…..?” ಎಂದು ಸರಸೂಗೆ ಅವಳತ್ತೆ ಹೇಳಿದಾಗ ಸರಸು ಕಣ್ಣು ತುಂಬಾ ನೀರು ತುಂಬಿಕೊಂಡು, “ಸರಿ ಹಾಗೆ ಮಾಡು,” ಎಂದು ಅಲ್ಲೇ ಇದ್ದ ಕುರ್ಚಿ ಮೇಲೆ ಕೂತಳು.

ಸರಸು ಯೋಚನೆ ಮಾಡ್ತಾ, `ನಾನು ಮದುವೆ ಆಗದೆ ಇದ್ರೆ ಬದುಕು ಚೆನ್ನಾಗಿ ಇರ್ತಿತ್ತೋ ಏನೋ…. ದಿನ ಈ ಅತ್ತೆ ಕಿರಿ ಕಿರಿ….. ಪ್ರತಿಯೊಂದು ಮಾತಿಗೂ ಸ್ಪಂದನೆ ನೀಡದೆ, ನನ್ನನ್ನು ಒಂದು ಆ್ಯಂಟಿಕ್‌ ಪೀಸ್‌ ತರ ನೋಡ್ತಾರೆ. ಏಷ್ಟು ಓದಿದರೂ ಏನು ಪ್ರಯೋಜನ, ಇರೋ ಒಬ್ಬಳೇ ಮಗಳು ಅಂತ ನಮ್ಮಪ್ಪ ಪ್ರೀತಿಯಿಂದ ರಾಣಿ ತರಾನೇ ಅಷ್ಟೇ ಯಾಕೆ ನಾನೇ ಪುಟ್ಟ ರಾಜಕುಮಾರಿ ಎನ್ನುವಂತೆ ಖುಷಿಯಾಗಿ ಸಾಕಿದರು. ನಂತರ ನನ್ನ ಆಸೆಯಂತೆ ಕೆಲಸ ಕೂಡ ಸಿಕ್ಕಿತ್ತು. ಅವಶ್ಯಕತೆ ಇರದಿದ್ದರೂ ಓದಿಗೆ ತಕ್ಕಂತೆ ಡ್ಯೂಟಿ ಮಾಡಿ ಆರಾಮವಾಗಿ ಸಿಂಗಲ್ ಲೈಫ್‌ ಲೀಡ್‌ ಮಾಡಬಹುದಿತ್ತು.

`ಛೇ…. ಇವತ್ತು ಯಾಕೋ ನಾನು ಪೂರ್ತಿ ನನ್ನ ಬಾಲ್ಯವನ್ನು ನೆನಪಿಸಿಕೊಂಡು ಮಂಕಾಗಿ ಹೋದೆ. ಸೆಲ್ಫ್ ಮೋಟಿವೇಶನ್‌ ಇದ್ರೆ ಗಟ್ಟಿಯಾಗಿ ಬದುಕು ಸಾಗಿಸಲು ಸಾಧ್ಯ, ಎಂದು ಅಲ್ಲೇ ಇದ್ದ ಒಂದು ಗ್ಲಾಸ್‌ ನೀರು ತಗೊಂಡು ಗಟಗಟ ಕುಡಿದು ಕುಳಿತು, ಪೇಪರ್‌ ಓದುವಂತೆ ಕೈಗೆ ತಗ್ಲೊಂಡು.

ಅಷ್ಟು ಹೊತ್ತಿಗೆ ಅದೇ ವಾರ್ಡಿನ ಅಂಗನವಾಡಿ ಟೀಚರ್‌ ಮದುವೆ ಕಾರ್ಡ್‌ ಕೊಡಲು ಬಂದಳು. ಸರಸು ಎದ್ದು ಅಡುಗೆಮನೆಗೆ ಹೋಗಿ ಟೀ ಮಾಡಿಕೊಂಡು ಬಂದಳು.

ಸರಸು ಟೀ ತಂದು ಪಂಕಜಾಳಿಗೆ ಕೊಟ್ಟು, “ಮದುವೆ,” ಎಂದು ಕೇಳಿದಳು.

“ಅಕ್ಕಾ…. ಇದೇ ವಾರದಲ್ಲಿ ಶುಕ್ರವಾರ ತಾಳಿಗೆ ತಪ್ಪದೆ ನೀನು ಬರಲೇಬೇಕು. ಮನೆಯಲ್ಲೇ ತಾಳಿ ಇರೋದು. ಚೌಲ್ಟರಿ ಸಿಗದೇ ಇರೋ ಕಾರಣಕ್ಕೆ ಬೀಗರು ಮನೆಯಲ್ಲಿ ಇರಲಿ ಎಂದು ಹೇಳಿದ ಮೇಲೆ ಮಾಡ್ತಾ ಇರೋದಕ್ಕಾ….” ಎಂದು ಹೇಳಿದಳು.

“ಹೌದಾ ಪಂಕಜಾ…. ನಿನ್ನ ತಮ್ಮನ ಮದುವೆ ಆಗುವ ಮೊದಲೇ ನಿನ್ನ ಮದುವೆ ಏಕೆ ಮಾಡ್ತಾ ಇದಾರೆ…..? ಕೊಡೆ ಕೊನಿ ಎಂದು ಇಬ್ಬರನ್ನು ಒಟ್ಟಿಗೆ ಸೇರಿಸಿ ಮಾಡಬಹುದಿತ್ತಲ್ವಾ….?”

“ಇಲ್ಲ ಅಕ್ಕಾ…. ನಮ್ಮ ಕಡೆಗೆ ಒಂದೇ ಸುರಿಗಿಲಿ ಅಕ್ಕ ಮತ್ತು ತಮ್ಮನಿಗೆ ಮದುವೆ ಮಾಡುವ ಸಂಪ್ರದಾಯ ಇಲ್ಲ. ಅದು ಕೂಡ ಬೇರೆ ಬೇರೆಯಾಗಿ ಮಾಡ್ಬೇಕು. ಹೀಗಾಗಿ ಮುಂದಿನ ವರ್ಷದಲ್ಲಿ ಅವನ ಮದುವೆಯನ್ನು ಇಟ್ಟುಕೊಳ್ಳಲಾಗಿದೆ,” ಎಂದಳು.

“ಹೌದಾ ಪಂಕಜಾ…. ನಿಮ್ಮ ಸಂಪ್ರದಾಯ ಗೊತ್ತಿರಲಿಲ್ಲ. ಹೌದು ನಿನ್ನ ತಮ್ಮನಿಗೆ ನೋಡಿದ ಹುಡುಗಿ ಊರು ಯಾವುದು….?”

“ಇಲ್ಲೇ ಪಕ್ಕದಲ್ಲಿರುವ ಜೋಳದ ರಾಶಿ ಅಕ್ಕಾ…..”

parivarten-1

“ಅವಳು ಏನಾದರೂ ಓದಿದ್ದಾಳಾ ಅಥವಾ ಮನೆ ಕೆಲಸ ಮಾಡಿಕೊಂಡಿರುತಾಳಾ….?”

“ಎಸ್‌ಎಸ್‌ಎಲ್ಸಿ ಆಗಿದೆ ಅಂತೆ…. ರಾಟಿ ಹೊಲಿಯೋದು ಕಲಿತುಕೊಂಡು ಈಗ ಮನೆಯಲ್ಲಿ ಬ್ಲೌಸ್‌, ಮಕ್ಕಳ ಡ್ರೆಸ್‌ ಎಲ್ಲಾ ಹೊಲೀತಾಳಂತೆ. ನಾನು ಕೂಡ ಒಮ್ಮೆಯೂ ನೋಡಿಲ್ಲ. ಮನೆಯಲ್ಲಿ ಅಪ್ಪ ಎಲ್ಲರೂ ನೋಡ್ಕೊಂಡು ಬಂದಿದ್ದಾರೆ. ಫೋಟೋದಲ್ಲಿ ಮಾತ್ರ ನೋಡಿದ್ದು, ಚೆನ್ನಾಗಿದ್ದಾಳೆ. ನಾನು ಹೋದ ಮೇಲೆ ನನ್ನ ತಮ್ಮನನ್ನು, ಅಪ್ಪ ಅಮ್ಮನನ್ನು ಸರಿಯಾಗಿ ನೋಡಿಕೊಂಡು ಹೋದ್ರೆ ಸಾಕು. ನಮಗೆ ಯಾವುದರ ಆಸೆಯೂ ಇಲ್ಲ,” ಎಂದು ಪಂಕಜಾ ಸರಸು ಬಳಿ ಹೇಳಿಕೊಂಡಳು.

ಅಷ್ಟೊತ್ತಿಗೆ ಸರಸುಳ ಅತ್ತೆ ಬಂದು, “ಸಾಕು ನಿಮ್ಮಿಬ್ಬರ ಮಾತು. ನಿನಗೆ ಮದುವೆ ಕಾರ್ಡ್‌ ಕೊಡುವುದಿದೆಯಲ್ಲ ಮೊದಲು ಅದನ್ನು ಕೊಡು ಹೋಗು…. ಇವಳ ಜೊತೆಗೆ ಏನು ಮಾತು…..?” ಎಂದಾಗ ಪಂಕಜಾ ಅಲ್ಲಿಂದ ಹೊರಟು ಹೋದಳು.

“ಏ ನಿಂಗೆ ಏನು ಮಾನ ಮರ್ಯಾದೆ ಇಲ್ವಾ…..? ಕಂಡೋರ ಮನೆ ವಿಷಯ ನಿಂಗೆ ಯಾಕೆ…? ನಿನ್ನ ಬಾಳಿನ ಬಗ್ಗೆ ಮೊದಲು ಯೋಚನೆ ಮಾಡು, ಆಮೇಲೆ ಲೋಕದ ವಿಚಾರ ತಿಳ್ಕೊಂಡು ಉದ್ಧಾರ ಆಗುವಂತೆ,” ಎಂದು ಬಲು ಬಿರುಸಾಗಿ ಹೇಳುತ್ತಾ, “ಮೊದಲು ನೀನು ರೆಡಿ ಆಗು….. ಬೇಡ ಬೇಡ ಈಗಲೇ ರೆಡಿ ಆಗಿದ್ದೀಯಲ್ಲವಾ….. ಮತ್ತ್ಯಾಕೆ ಅದೇ ಸಾಕು…. ಆಟೋಕೆ ಹೇಳಿದ್ದೀನಿ. ಬಾ…. ಮೊದಲು ಮಕ್ಕಳ ಆಸ್ಪತ್ರೆಗೆ ಹೋಗಿ ಬರೋಣ…. ಇವತ್ತು ಫಾರಿನ್‌ ಡಾಕ್ಟರ್‌ ಬರ್ತಾರೆ ಅಂತ ಪಕ್ಕದ ಮನೆ ಗುಂಡಮ್ಮ ನನಗೆ ಹೇಳಿದ್ಲು. ಈಗಲೇ ಹೋಗೋಣ….” ಎಂದು ಅವಸರಿಸಿದಳು.

“ಅಲ್ಲಾ ಅತ್ತೆ…. ಫಾರಿನ್‌ ಡಾಕ್ಟರ್‌ ಅಂದ್ರೆ ಅವರು ನಮ್ಮನ್ನು ಹಾಗೇ ನೋಡಲ್ಲ. ನಾವು ಅವರ ಹತ್ರ ಅಪಾಯಿಂಟ್‌ ಮೆಂಟ್ ತಗೋಬೇಕು. ನಂತರ ಅವರು ಕೊಟ್ಟ ದಿನಾಂಕದಂದು ಹೋದರೆ ಮಾತ್ರ ನಮ್ಮನ್ನು ನೋಡುತ್ತಾರೆ…. ಇಲ್ಲಾಂದ್ರೆ ಒಳಗೆ ಹೋಗಲೂ ಅನುಮತಿ ಕೊಡೋಲ್ಲ….” ಎಂದು ಸರಸು ಹೇಳಿದಳು.

“ಹೌದಾ…. ಇಲ್ಲ ಇಲ್ಲ…. ಹಾಗೇನಿಲ್ಲ…. ನಮ್ಮ ಸಂಬಂಧಿಕರ ಪರಿಚಯದವರೊಬ್ಬರು ಆಲ್ ರೆಡಿ ಫೋನ್‌ ಮಾಡಿ ತಿಳಿಸಿದ್ದಾರೆ. ಅವರೇನು ನಮಗೆ ಗೊತ್ತಿಲ್ಲ ಅಂತ ತಿಳಿಬೇಡ ಅವರು ನಮ್ಮ ದೂರದ ಸಂಬಂಧಿಕರು ಆಗ್ಬೇಕು ಗೊತ್ತಾ…. ನಮ್ಮ  ಗ್ರಹಚಾರಕ್ಕೆ ನಿನ್ನಂಥ ಮೂದೇವಿಯನ್ನು ಮದುವೆ ಮಾಡಿಕೊಂಡು ಬಂದ್ವಿ. ಇಲ್ಲಾಂದ್ರೆ ದೊಡ್ಡ ದೊಡ್ಡ ಸಂಬಂಧಗಳು ನಮಗೆ ಸಿಕ್ತಾ ಇದ್ವು,” ಎಂದು ವಟವಟ ಬೈಯೋದು ಶುರುವಾಗಿತ್ತು. ಅಷ್ಟರಲ್ಲಿ ಹೊರಗಡೆ ಆಟೋ ಬಂದ ಶಬ್ದ ಕೇಳಿತು.

ಅತ್ತೆಯ ಕೊಂಕು ನುಡಿಗಳು ಸರುಸೂಗೆ ಹೊಸತೇನಲ್ಲ. ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ಹಿರಿಯರ ಸ್ವಭಾವಕ್ಕೆ ಏನು ಮಾಡುವುದು ಎಂದು ಸರಸು ಮೌನವಾಗಿ ಇರುತ್ತಿದ್ದಳು. ಅವಳು ತನ್ನ ಗೆಳತಿ ಚೈತ್ರಾಳಿಗೆ ಫೋನ್‌ ಮಾಡಿ, “ನಾವೀಗ ಆಸ್ಪತ್ರೆಗೆ ಹೋಗ್ತಾ ಇದೀವಿ. ನೀನು ಕೂಡ ಬಂದ್ಬಿಡು,” ಎಂದು ತಿಳಿಸಿ, ಅತ್ತೆಯ ಜೊತೆ ಆಟೋದಲ್ಲಿ ಕುಳಿತಳು.

ಸರಸೂಳಿಗೆ ಯೋಚನೆ, `ಒಂದು ವೇಳೆ ನನಗೆ ಮಕ್ಕಳು ಆಗೋದಿಲ್ಲವೆಂದು ಡಾಕ್ಟರ್‌ ಖಡಾಖಂಡಿತವಾಗಿ ಹೇಳಿಬಿಟ್ರೆ ಹೇಗೆ….. ನನ್ನ ಮುಂದಿನ ಬದುಕು ಹೇಗೆ….? ಒಂದು ವೇಳೆ ಅದು ಸುಳ್ಳಾಗಿ ಮಡಿಲಿಲ್ಲ ಕಂದನನ್ನು ಕಂಡರೆ….’ ಆ ಕುತೂಹಲ ಕೆರಳಿ ಅವಳ ಎದೆಬಡಿತ ತನ್ನಷ್ಟಕ್ಕೆ ತಾನೇ ಹೆಚ್ಚಾಯಿತು.

ಕಲ್ಪನೆ ಮನಸ್ಸಿಗೆ ಅದೆಷ್ಟು ಆನಂದ ನೀಡುತ್ತದೆ? ವರ್ಣನೆ ಮಾಡದ ರೀತಿಯಲ್ಲಿ ಅವಳು ಮಗುವಿನ ಬಗ್ಗೆ ಆಸೆ ಹೊತ್ತು ದಿನ ಸಂಸಾರದ ಜಂಜಾಟದಲ್ಲಿ ಜೀವನ ಸಾಗಿಸುತ್ತಿದ್ದಳು.

ಸರಸು ತನ್ನ ಗೆಳತಿ ಚೈತ್ರಾಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಚೈತ್ರಾ ಅಲ್ಲಿಗೆ ಬಂದಳು ಗೆಳತಿಯನ್ನು ತಬ್ಬಿಕೊಂಡು, ನಗುತ್ತಾ, “ಸರೂ…. ಬಹಳ ಹೊತ್ತಾಯ್ತಾ….?” ಎಂದು ಕೇಳಿದಳು.

“ಇಲ್ಲ ಕಣೇ ಈಗಷ್ಟೇ ಬಂದ್ವಿ….” ಎಂದಳು.

ಅಲ್ಲೇ ಪಕ್ಕದಲ್ಲಿದ್ದ ಸಾವಿತ್ರಮ್ಮನನ್ನು ನೋಡಿದ ಚೈತ್ರಾ, “ನಮಸ್ಕಾರ ಅಮ್ಮಾ…. ಹೇಗಿದ್ದೀರಿ….?” ಎಂದು ಕೇಳಿದಳು.

“ನಂಗೇನಮ್ಮ….. ಊರು ಹೋಗು ಅನ್ನುತ್ತೆ….. ” ಎನ್ನುತ್ತಿದ್ದ ಅವರನ್ನು ಅರ್ಧಕ್ಕೆ ತಡೆದು, “ಅಯ್ಯೋ ಅಮ್ಮಾ…. ಮುಂದಕ್ಕೆ ಹೇಳ್ಬೇಡಿ ಬಿಡಿ…” ಎಂದಳು.

“ಸರೂ ನಿನ್ನ ರಿಪೋರ್ಟ್‌ ಕೊಡು ಹಳೇದು ತಗೊಂಡು ಹೋಗುವೆ,” ಎಂದು ಚೈತ್ರಾ ಕೇಳಿದಳು.

“ಬೇಡ ಬೇಡ…. ನಾನು ಕೂಡ ಒಟ್ಟಿಗೆ ಬರುವೆ… ಇಲ್ಲಿ ಇವೆಲ್ಲ ಕೊಡುವುದು ಬೇಡ. ಏಕೆಂದರೆ ಈ ಡಾಕ್ಟರ್‌ ಫಾರಿನ್‌ ನಿಂದ ಬಂದಿರೋದು ಅಲ್ವಾ…. ಇವೆಲ್ಲ ಸಣ್ಣಪುಟ್ಟ ದಾಖಲೆ ಯಾಕೆ….?” ಎಂದಳು ಸರಸು.

“ಲೇ ಹುಚ್ಚಿ…. ರಿಪೋರ್ಟ್‌ ಹಳೇದು ಹೊಸದು ಅಂತ ಇರಲ್ಲ…. ಅದ್ರಲ್ಲಿ ಇರೋದು ಬೇರೆ ಏನಾದ್ರೂ ಆಗುತ್ತದೇನೆ,” ಎಂದು ನಕ್ಕಳು.

ಆದರೆ ಸರಸೂಗೆ ಮನದಲ್ಲಿ ಬೇರೇನೆ ವಿಚಾರ ಓಡುತ್ತಾ ಇತ್ತು, `ಇದನ್ನು ಕೊಡುವ ಅಗತ್ಯ ಏಕೆ…. ಮೊದಲಿನ ರಿಪೋರ್ಟ್ ನೋಡಿ ಅವರೂ ಕೂಡಾ ಸಲೀಸಾಗಿ ನನ್ನ ಬಗ್ಗೆ ಇದೇ ತರಹ ರಿಪೋರ್ಟ್‌ ಕೊಟ್ರೆ ಹೇಗೆ ಅ್ವಾ….?’

“ಇಲ್ಲ ಕಣೇ, ಹಾಗಲ್ಲ ಇಷ್ಟು ದಿನ ನೀನು ತೆಗೆದುಕೊಂಡ ಟ್ಯಾಬ್ಲೆಟ್‌, ಔಷಧಿ, ಮಾತ್ರೆ ಎಲ್ಲವನ್ನೂ ನೋಡುತ್ತಾರೆ. ಇವೆಲ್ಲ ನೀನು ತಗೊಂಡ್ರು ಪ್ರಾಬ್ಲಮ್ ಬದಲಾವಣೆ ಆಗಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ನಿನಗೆ ಯಾವುದು ಸೂಕ್ತ ಎನ್ನುವುದು ಅವರಿಗೆ ತಿಳಿಯುತ್ತೆ ಸರಿನಾ…” ಎಂದು ಚೈತ್ರಾ ಹೇಳಿದಳು.

“ಹೌದು ನೀನು ಹೇಳೋದು ನಿಜ ಚೈತ್ರಾ…..” ಎಂದ ಸರಸು, “ಅತ್ತೆ, ನಾವಿಬ್ಬರೂ ಸೇರಿ ಡಾಕ್ಟರ್‌ ಬಳಿ ಹೋಗ್ತೀವಿ,” ಎಂದಳು.

“ನಾನೂ ಬರುವೆ….” ಎಂದರು ಸಾವಿತ್ರಮ್ಮ.

ಡಾಕ್ಟರ್‌ ಕ್ಯಾಬಿನ್‌ ಒಳಗೆ ಹೋಗಲು ಪರ್ಮಿಷನ್‌ ಕೇಳಲು ಅಲ್ಲೇ ಡೋರ್‌ ಬಳಿ ನಿಂತಿದ್ದ ಹುಡುಗಿ ಬಳಿ ಮೆಡಿಕಲ್ ರಿಪೋರ್ಟ್ ಕೊಟ್ಟಳು. ಸ್ವಲ್ಪ ಸಮಯದಲ್ಲಿ ಸರಸೂಗೆ ಒಳ ಬರಲು ಕರೆ ಬಂದಿತು. `ಡಾಕ್ಟರ್‌ ತನ್ನ ರಿಪೋರ್ಟ್‌ ನೋಡಿ, ಅವರು ಏನು ಹೇಳ್ತಾರೋ….? ನನಗೆ ಈ ಮೆಡಿಕಲ್ ಚೆಕಪ್‌ ಸಾಕಾಗಿದೆ…. ಈ ಪುಣ್ಯಾತ್ಮ ಡಾಕ್ಟರನ್ನು ನೋಡಿದ ಮೇಲಾದ್ರೂ ನನಗೆ ಕುಡಿಯೊಡೆದರೆ ಬಾಳು ಸುಂದರವಾಗುತ್ತದೆ,’ ಎಂದು ಮನದಲ್ಲೇ ಎಂದುಕೊಳ್ಳುತ್ತಾ ಅವರ ಮುಂದೆ ಕುಳಿತಳು.

“ಸರಸೂ, ಮದುವೆ ಆಗಿ ಎಷ್ಟು ವರ್ಷ ಆಗಿದೆ…?” ಡಾಕ್ಟರ್‌ ಕೇಳಿದರು.

“ಎರಡು ವರ್ಷ….?” ಸಾವಿತ್ರಮ್ಮ ಮಧ್ಯೆ ಬಂದು, “ಡಾಕ್ಟ್ರೇ…. ಈ ವರ್ಷ ತುಂಬೋದ್ರಾಗೆ ಮಡಿಲು ತುಂಬಿದ್ರೆ ಈ ಜೀವ ಖುಷಿ ಆಗುತ್ತೆ. ಅದು ನನ್ನ ಆಸೆ. ನಿಮ್ಮ ಅದೃಷ್ಟದಿಂದ ನನ್ನ ಮನೆಯ ವಂಶೋದ್ಧಾರಕ ಬಂದ್ರ ಅಷ್ಟೇ ಸಾಕು,” ಎಂದರು.

“ಅಮ್ಮಾ…. ಸ್ವಲ್ಪ ಹೊತ್ತು ನೀವು ಹೊರಗಿರಿ. ನಿಮ್ಮ ಜೊತೆಗೆ ಆಮೇಲೆ ಮಾತಾಡ್ತೀನಿ,” ಎಂದು ಡಾಕ್ಟರ್‌ ಹೇಳಿದಾಗ ಸಾವಿತ್ರಮ್ಮ ಮೆಲ್ಲನೆ ಹೊರಗೆ ಬಂದರು. ಜೊತೆಗೆ ಚೈತ್ರಾ ಕೂಡ ಹೊರಗೆ ಬಂದಳು.

ಡಾಕ್ಟರ್‌ ಎಲ್ಲಾ ತಪಾಸಣೆ ಮುಗಿಸಿ ನಂತರ, “ನಿಮಗೆ ಮಕ್ಕಳು ಬೇಡವೆಂದು ಮೊದಲು ಏನಾದ್ರೂ ಟ್ಯಾಬ್ಲೆಟ್‌ ತೊಗೊಳ್ತಾ ಇದ್ರಾ….? ಇದರಿಂದ ನಿಮಗೆ ಸಮಸ್ಯೆಯಾಗಿದೆ. ಗರ್ಭಕೋಶದಲ್ಲಿ ತೊಂದರೆ ಉಂಟಾಗಿ ನಿಮಗೆ ಮುಂದೆ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ,” ಎಂದರು.

ಸರಸೂಳ ಗಂಟಲು ಒಣಗಿ ಅಳಲು ಪ್ರಾರಂಭಿಸಿದಳು. ಅವಳು ಮಾಡಿಕೊಂಡ ಸ್ವಯಂಕೃತ ಅಪರಾಧ ತನ್ನ ಬದುಕನ್ನು ನಾಶ ಮಾಡುವುದರ ಜೊತೆಗೆ ತಾಯ್ತನದ ಬಂಧವನ್ನು ಕಳೆದುಕೊಂಡು ಬಂಜೆ ಎನ್ನುವ ಮಟ್ಟಿಗೆ ಅವಳ ಬದುಕು ಬದಲಾಗಿತ್ತು.

ಸರಸೂಗೆ ತಾನು ಮಾಡಿದ ದುಡುಕಿನ ನಿರ್ಧಾರ ತನ್ನ ಜೀವನದಲ್ಲಿ ಮತ್ತೆ ಸರಿ ಮಾಡಲು ಆಗುವುದಿಲ್ಲ ಎಂದು ಗೊತ್ತಾದಾಗ ಅವಳಿಗೆ ಸಮುದ್ರದ ಅಲೆಗಳು ಒಮ್ಮೆಲೇ ಸೇರಿ ಅಪ್ಪಳಿಸಿದಂತೆ ಭಾಸವಾಗಿತ್ತು. ವಯಸ್ಸಿಗೆ ತಕ್ಕ ಹಾಗೆ ಜೊತೆಗೆ ದೇವರ ನಿರ್ಧಾರದಂತೆ ಮಕ್ಕಳಾಗಿದ್ದರೆ ಇಂದು ಅವಳ ಬಾಳಿಗೆ ಭದ್ರತೆ ಸಿಗುತ್ತಿತ್ತು, ಯಾರದೋ ಜೀವದಲ್ಲಿ ನಡೆದ ಘಟನೆ ನೆನಪಿಸಿಕೊಂಡು, ಅದು ತನಗಾದರೆ ಹೇಗೆಂದು, ಬೇಡದ ನಿರ್ಧಾರವನ್ನು ತಾನೊಬ್ಬಳೇ ತೆಗೆದುಕೊಂಡ ಸರಸು ಇಂತಹ ದುಸ್ಥಿತಿಗೆ ಕಾಲಿಟ್ಟಿದ್ದಳು.

ಈ ವಿಷಯ ಸಾವಿತ್ರಮ್ಮನಿಗೆ ತಿಳಿಯುತ್ತಲೇ ಎಲ್ಲಿಲ್ಲದ ಕೋಪ ನೆತ್ತಿಗೇರಿ, “ನನಗೆ ಮೊದಲೇ ಗೊತ್ತಿತ್ತು. ಇಂತಹ ಏನಾದರೂ ಒಂದು ಅನಾಹುತ ಮಾಡಿಕೊಂಡಿರುತ್ತಾಳೆ ಅಂತ ನನ್ನ ಮನಸ್ಸು ಪದೇ ಪದೇ ಹೇಳ್ತಾ ಇತ್ತು. ಆದ್ರೂ ಮನಸ್ಸಿಗೆ ಸಮಾಧಾನ ಇರಲಿಲ್ಲ. ಏನಾದರೂ ಒಂದು ಪಿಳ್ಳೆ ಹುಟ್ಟಿದರೆ ನನ್ನ ಜೀವನ ಸಾರ್ಥಕ ಆಗುತ್ತೆ ಅಂತ ಕಾಯುತ್ತಾ ಇದ್ದೆ, ಆ ದೇವರು ಎಲ್ಲವನ್ನೂ ಸುಳ್ಳು ಮಾಡ್ಬಿಟ್ಟ…..” ಎಂದು ಸೊಸೆಯನ್ನು ಬೈಯುತ್ತಾ ಕಣ್ಣೀರು ಹಾಕತೊಡಗಿದರು. ಅದೇ ಸಮಯಕ್ಕೆ ಸಾವಿತ್ರಮ್ಮನ ಮಗ ರಾಕೇಶ್‌ ಹಾಸ್ಪಿಟಲ್ ಗೆ ಬಂದ. ಡಾಕ್ಟರ್‌, “ನಿಮ್ಮೆಲ್ಲರೊಂದಿಗೆ ಒಂದು ವಿಷಯದ ಬಗ್ಗೆ ಮಾತನಾಡುವುದಿದೆ. ಸ್ವಲ್ಪ ಸಮಯದ ನಂತರ ನಿಮ್ಮ ಬಳಿಗೆ ಬರುತ್ತೇನೆ. ಈಗ ಒಂದು ಆಪರೇಷನ್‌ ಇದೆ. ಸ್ವಲ್ಪ ಹೊತ್ತು  ಕಾಯಿರಿ,” ಎಂದು ಹೇಳಿ ಆಪರೇಶನ್ ಥಿಯೇಟರ್‌ ಕಡೆ ಹೊರಟರು.

ರಾಕೇಶ್‌ ಹೆಂಡತಿ ಬಳಿ ಬಂದು, “ಸರೂ…. ಏಕೆ ಇಂಥ ಕೆಲಸ ಮಾಡಿಕೊಂಡೆ….? ನನಗಾದರೂ ಮೊದಲೇ ತಿಳಿಸಿದ್ದರೆ ಏನಾಗುತ್ತಿತ್ತು…..? ಇದು ನಿನ್ನೊಬ್ಬಳಿಗೆ ಸಂಬಂಧಿಸಿದ್ದಲ್ಲ, ಇದು ನನಗೂ ಕೂಡ ಅನ್ವಯಿಸುತ್ತದೆ ಎಂಬುದು ನಿನಗೆ ತಿಳಿಯಲಿಲ್ಲವೇ…..?” ಎಂದು ಸ್ವಲ್ಪ ಗಡುಸು ಧ್ವನಿಯಲ್ಲಿ ಮಾತನಾಡಿದ.

ಸರಸೂ ತಾನು ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕೆಂದರೂ ಅದಕ್ಕೆ ಅವಕಾಶವಿಲ್ಲದಂತಾಗಿ ಏನೂ ಮಾತನಾಡದೆ ಮೌನವಾಗಿ ನಿಂತಿದ್ದಳು.

ಅಲ್ಲೇ ನಿಂತಿದ್ದ ಚೈತ್ರಾ ಕೂಡ ಗೆಳತಿ ಬಳಿ ಬಂದು, “ಸರೂ…. ನೀನು ಹೀಗೆ ಮಾಡುವೆ ಎಂದು ನಾನು ಕೂಡ ತಿಳಿದುಕೊಂಡಿರಲಿಲ್ಲ. ಏಕೆ ಇಂತಹ  ಕೆಲಸಕ್ಕೆ ಕೈ ಹಾಕಿದೆ? ಮಗು ಬೇಡ ಎಂದ್ದಿರೆ, ನೀವು ಪ್ಲಾನ್‌ ಮಾಡಿಕೊಳ್ಳಲು ಅವಕಾಶವಿತ್ತು. ನೋಡು ನೀನು ಮಾಡಿದ ಸ್ವಯಂಕೃತ ಅಪರಾಧದಿಂದ ನಿನಗೆ ಮಕ್ಕಳಿಲ್ಲದಂತೆ ಮಾಡಿಕೊಂಡೆ. ಛೇ…. ಇದೇನಿದು, ” ಎಂದು ಗೆಳತಿಯನ್ನು ಗದರಿದಳು.

ಒಂದು ಗಂಟೆ ನಂತರ ಡಾಕ್ಟರ್‌ ತಮ್ಮ ಆಪರೇಶನ್‌ ಮುಗಿಸಿ ಎಲ್ಲರನ್ನೂ ಕ್ಯಾಬಿನ್‌ ಗೆ ಕರೆದು, “ನಿಮ್ಮ ಮೂವರಿಗೂ ಒಂದು ವಿಷಯ ಹೇಳಬೇಕು. ನೀವು ಮೂರು ಜನ ಮಾತ್ರ ಇಲ್ಲಿರಿ. ಚೈತ್ರಾಳನ್ನು ಹೊರಗಡೆ ಕಳುಹಿಸಿ,” ಎಂದರು.

ಅದಕ್ಕೆ ಸಾವಿತ್ರಮ್ಮ, “ಇಲ್ಲ ಡಾಕ್ಟರ್‌, ಇವಳು ನಮ್ಮ ಮನೆಯವರಂತೆಯೇ ಏನಿದ್ದರೂ ಇವಳೂ ಸಹ ಇರಲಿ,” ಎಂದಾಗ ಡಾಕ್ಟರ್‌ ಸರಿಯೆಂದು ಹೇಳಿದರು.

“ರಾಕೇಶ್‌ ಈಗ ನೀವೇ ನಿರ್ಧಾರ ಮಾಡಬೇಕು. ಏಕೆಂದರೆ ಸರಸೂಗೆ ಇನ್ನು ಮುಂದೆ ಯಾವುದೇ ಟ್ರೀಟ್‌ ಮೆಂಟ್‌ ಕೊಟ್ಟರೂ ಮಕ್ಕಳಾಗುವುದು ಕನಸಿನ ಮಾತು. ಜೊತೆಗೆ ಗರ್ಭಕೋಶದಲ್ಲಿ ಸಮಸ್ಯೆ ಇರುವುದರಿಂದ ನೀವು ಯಾರ ಬಳಿ ತೋರಿಸಿದರೂ ಇದಕ್ಕೆ ಪರಿಹಾರ ಸಿಗುವುದಿಲ್ಲ. ಅದಕ್ಕಾಗಿ ನಾನು ಹೇಳಿದಂತೆ ಐವಿಎಫ್‌ ಬಗ್ಗೆ ನಿಮಗೆ ತಿಳಿದಿರಬಹುದು. ನಿಮಗಿರೋದು ಈಗ ಇದೊಂದೇ ದಾರಿ,” ಎಂದು ಡಾಕ್ಟರ್‌ ಹೇಳಿದಾಗ ಎಲ್ಲರೂ ಒಂದು ಕ್ಷಣ ಮೌನವಾದರು.

ಆಗ ಸಾವಿತ್ರಮ್ಮ, “ಐವಿಎಫ್‌ ಎಂದರೇನು….?” ಎಂದು ಕೇಳಿದರು.

ಡಾಕ್ಟರ್‌ ಸೂಕ್ಷ್ಮವಾಗಿ, “ಇದೊಂದು ಟೆಸ್ಟ್ ಟ್ಯೂಬ್‌ ಬೇಬಿ ಅಂತರೆ. ಇಂಜೆಕ್ಷನ್‌ ಮುಖಾಂತರ ಮಕ್ಕಳಾಗುವಂತೆ ಮಾಡುವುದು,” ಎಂದು ಹೇಳಿದರು.

“ಹಾಗಾದರೆ ಇಂಜೆಕ್ಷನ್‌ ಮುಖಾಂತರ ಮಕ್ಕಳು ಹುಟ್ಟುವಂತೆ ಮಾಡುವ ಅವಕಾಶ ಇದ್ದರೆ ಸರಸೂಗೆ ಇಂಜೆಕ್ಷನ್‌ ಮಾಡಿ, ದಾರಿ ತೋರಿಸಿ,” ಎಂದರು ಸಾವಿತ್ರಮ್ಮ.

ಅವರ ಮಾತು ಕೇಳಿದ ಡಾಕ್ಟರ್‌, “ಇಲ್ಲಮ್ಮಾ…. ನಾನು ನಿಮಗೆ ಮೊದಲೇ ಹೇಳಿದಂತೆ ಸರಸೂಗೆ ಯಾವುದರ ಮುಖಾಂತರ  ಮಕ್ಕಳಾಗುವುದಿಲ್ಲ. ಏನಿದ್ದರೂ ನಿಮ್ಮ ಮಗನಿಗೆ ಇನ್ನೊಂದು ಮದುವೆ ಮಾಡಬೇಕು, ಇಲ್ಲದಿದ್ದರೆ ಬಾಡಿಗೆ ತಾಯಿಯನ್ನು ಪಡೆದುಕೊಂಡರೆ ನಿಮಗೆ ಮಗು ಆಗುವುದು ಖಚಿತ. ಇದು ಐವಿಎಫ್‌ ಮುಖಾಂತರ ಸಾಧ್ಯವಾಗುತ್ತದೆ. ನಿಮ್ಮನ್ನು ನನ್ನ ಸಂಬಂಧಿಕರೆಂದು ನೆನೆಸಿ ನಿಮ್ಮ ಬಳಿ ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿದ್ದೆ,” ಎಂದರು.

ಆಗ ರಾಕೇಶನಿಗೆ ಕ್ಷಣಕಾಲ ಮನಸ್ಸಿಗೆ ತುಂಬಾ ನೋವಾಯಿತು. ತನ್ನ ಹೆಂಡತಿಯ ಈ ಅವ್ಯವಸ್ಥೆಗೆ ಸರಿಯಾದ ಮಾರ್ಗ ಯಾವುದೆಂದು ತಿಳಿಯದೆ ಮನಸ್ಸಿನಲ್ಲೇ ಬೇಜಾರು ಮಾಡಿಕೊಂಡ. ನಂತರ ತನ್ನ ತಾಯಿ ಬಳಿ ಬಂದು, “ಅಮ್ಮಾ…. ನೀನೇ ಇದಕ್ಕೆ ಏನಾದರೂ ಒಂದು ಹೇಳಬೇಕು. ನನಗೆ ಯಾವುದೇ ನಿರ್ಧಾರ ಮಾಡಲಾಗುತ್ತಿಲ್ಲ,” ಎಂದ.

ಆಗ ಸಾವಿತ್ರಮ್ಮ, “ಇನ್ನೇನಪ್ಪಾ ಮಾಡೋದು…..? ಡಾಕ್ಟರ್‌ ಹೇಳಿದಂತೆ ನಿನಗೆ ಇನ್ನೊಂದು ಮದುವೆ ಮಾಡೋದೇ ಉತ್ತಮ. ಇಂಜೆಕ್ಷನ್‌, ಐವಿಎಫ್‌ ಹಾಳು ಮೂಳು ಅಂತ ಏನೇನೋ ಹೇಳ್ತಾರೆ. ಇವೆಲ್ಲ ನನಗೆ ಇಷ್ಟವಾಗುವುದಿಲ್ಲ,” ಎಂದರು.

ಇವರ ಮಾತನ್ನೆಲ್ಲಾ ಕೇಳಿದ ಸರಸು, “ಹೌದು ಅತ್ತೆ ನೀವು ಹೇಳಿದಂತೆ ಇವರಿಗೆ ಇನ್ನೊಂದು ಮಾಡುವುದೇ ಉತ್ತಮ. ನನಗೂ ಅದೇ ಸರಿ ಎನಿಸುತ್ತದೆ,” ಎಂದು ಅವರಿಬ್ಬರ ಬಳಿ ಹೇಳಿದಳು.

ರಾಕೇಶ್‌ ದಿಗ್ಭ್ರಾಂತನಾಗಿ, “ಏನು ಹೇಳ್ತಾ ಇದ್ಯಾ ಸರಸೂ….? ನಿನ್ನ ಬದುಕಿನ ಬಗ್ಗೆ ನಿನಗೆ ಸ್ವಲ್ಪ ಚಿಂತೆ ಇಲ್ಲವೇ….? ಏಕೆ ಹೀಗೆ ಮಾತಾಡುತ್ತಿರುವೆ? ಎರಡನೇ ಮದುವೆ ಎಂದರೆ ಏನು ಆಟ ಆಡೋದು ಅಂದ್ಕೊಂಡ್ಯಾ….?” ಎಂದ.

“ಸರಿ…. ನೀವು ಏನಾದ್ರೂ ಒಂದು ಸರಿಯಾದ ನಿರ್ಧಾರ ತೆಗೆದುಕೊಂಡು ಮುಂದಿನ ತಿಂಗಳು ಬನ್ನಿ,” ಎನ್ನುತ್ತಾ ಡಾಕ್ಟರ್ ಅಲ್ಲಿಂದ ಹೊರಟರು.

ಚೈತ್ರಾ ಇವರೆಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಏನನ್ನೂ ಹೇಳದೆ, ಪ್ರತಿಕ್ರಿಯಿಸದೆ ಸುಮ್ಮನೆ ಕಲ್ಲಿನಂತೆ ನಿಂತಿದ್ದಳು. ಎಲ್ಲರೂ ಮೌನವಾಗಿ ಆಸ್ಪತ್ರೆಯಿಂದ ಮನೆಗೆ ಬಂದರು.

ನಂತರ ಸರಸು ತನ್ನ ತವರಿಗೆ ಫೋನಾಯಿಸಿ, ನಡೆದ ಎಲ್ಲಾ ವಿಷಯವನ್ನು ಕೂಲಂಕಷವಾಗಿ ತಿಳಿಸಿದಳು. ಅವರೆಲ್ಲರಿಗೂ ತುಂಬಾ ನೋವಾಯಿತು. ಮಗಳ ಬಾಳು ಹೀಗೆ ಆಗಲು ದೇವರೇ ಕಾರಣ ಎಂದು ಹೆತ್ತವರು ದೇವರ ಮೇಲೆ ತಪ್ಪು ಹೊರೆಸಿದರು. ಆದರೆ ಸರಸೂ ಇಲ್ಲ ಇದಕ್ಕೆಲ್ಲಾ ತಾನೇ ಕಾರಣವಲ್ಲದೆ ಬೇರೆ ಯಾರೂ ಕಾರಣರಾಗಲು ಸಾಧ್ಯವಿಲ್ಲ ಎಂದಳು.

“ನಾನು ಈ ಹೆರಿಗೆ ಬಗ್ಗೆ ಹಲವು ಕಥೆ ಕೇಳಿದ್ದೆ, ಕೆಲವು ಸಿನಿಮಾ ಕೂಡ ನೋಡಿದ್ದೆ. ಅದರಲ್ಲಿ ಹೆರಿಗೆ ಸಮಯದಲ್ಲಿ ಆಗುವ ನೋವು ಮತ್ತು  ಆ ನೋವು ತಾಳದೆ, ಏನಾದರೂ ಸಮಸ್ಯೆಯಾಗಿ ಒಮ್ಮೊಮ್ಮೆ ಕೊನೆಯುಸಿರಿಳೆದವರನ್ನು ನೋಡಿ, ಕೇಳಿ, ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಒಳಗೊಳಗೇ ಕೊರಗಿಹೋಗಿದ್ದೆ.

“ಮದುವೆ ಅಂದ್ರೇನೇ ಭಯ ಕಾಡ್ತಾ ಇತ್ತು. ಇನ್ನೂ ಈ ಹೆರಿಗೆ ನೋವು ಹೇಗೋ ಏನೋ ಎಂದು ಭಯದಿಂದ ಇದ್ಯಾವುದೂ ಬೇಡ ಎಂದು ಇಂತಹ ನಿರ್ಧಾರ ಮಾಡಿಕೊಂಡೆ,” ಎಂದು ತಾಯಿತಂದೆಯರ ಬಳಿ ಅಳುತ್ತಾ ಹೇಳಿದಳು.

ಸರಸು ತಂದೆ ಕೂಡ ಅವಳ ಬಳಿ ಮಾತನಾಡಿ, “ಅಳಬೇಡ ಸರಸೂ…. ನೀನು ಏನೂ ಚಿಂತೆ ಮಾಡಬೇಡ. ಏನೂ ಆಗೊಲ್ಲ…..  ಆಗೋದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಇರೋಣ. ನೀನು ಚಿಂತಿಸಬೇಡ. ಮುಂದೆ ಬದುಕಲ್ಲಿ ಹೇಗೆ ಬರುತ್ತದೋ ಹಾಗೆಯೇ ನಿರ್ಧಾರ ತೆಗೆದುಕೊಳ್ಳೋಣ. ನೀನು ಧೈರ್ಯವಾಗಿರು. ನಾಳೆ ನಾನೂ, ನಿಮ್ಮಮ್ಮ ಅಲ್ಲಿಗೆ ಬರ್ತೀವಿ. ಎಲ್ಲರೂ ಕೂಡಿ ಮಾತನಾಡೋಣ. ನೀನು ಚಿಂತೆ ಮಾಡಬೇಡ,” ಎಂದು ಮಗಳಿಗೆ ಸಮಾಧಾನ ಹೇಳಿದರು.

ರಾತ್ರಿಯಿಡೀ ನಿದ್ದೆ ಬಾರದೆ ಸರಸು ಚಿಂತೆಯಲ್ಲಿ ತೇಲಿಹೋದಳು. ಸರಿಯಾದ ನಿರ್ಧಾರ ಮಾಡುವುದು ಅವಳಿಗೆ ಬಿಸಿ ತುಪ್ಪದ ಹಾಗಿದ್ದರಿಂದ ಅವಳ ಮನಸ್ಸು ವಿಲವಿಲನೆ ಒದ್ದಾಡುತ್ತಿತ್ತು. ಸಮಸ್ಯೆಗೆ ಕೊನೆ ಏನೆಂದು ತಿಳಿಯದೆ, ಅವಳ ಯೋಚನೆಗಳು ಕೊರೆಯತೊಡಗಿದವು. ರಾತ್ರಿಯೆಲ್ಲಾ ನಿದ್ದೆಗೆಟ್ಟು ಯೋಚಿಸಿ, `ಗಂಡನ ಬಾಳಿನಿಂದ ಬಿಡುಗಡೆಯೊಂದೇ ಮಾರ್ಗ,’ ಎಂದು ತೀರ್ಮಾನಿಸಿ ಸುಮ್ಮನಾದಳು.

ಇತ್ತ ತಾಯಿ, ಮಗನ ಯೋಚನೆಯೂ ಅಷ್ಟೇ ಗಂಭೀರವಾಗಿತ್ತು. “ಸರಸೂ ಏನೋ ಒಂದು ತಪ್ಪು ಮಾಡಿದ್ದಾಳೆ, ಅದು ಅವಳ ಪ್ರಮಾದವಾದ್ರೂ…. ಅವಳು ಕೂಡ ನಮ್ಮ ಕುಟುಂಬದಾಕಿ. ಜೊತೆಗೆ ಅವಳ ಭವಿಷ್ಯ ಅತಂತ್ರವಾಗಬಾರದು….” ಎನ್ನುವುದು ಸರಸೂ ಗಂಡನ ಯೋಚನೆಯಾಗಿತ್ತು.

“ಮಗಾ ನೀನು ಹೇಳಿದ್ದು ಸರಿನೇ ಆದರೂ….. ಹಾಗಂತ ನಮಗೆ ವಂಶೋದ್ಧಾರಕ ಬೇಡ್ವಾ ರಾಕೇಶ್‌….? ಇವತ್ತು ಸರಸು ತವರಿನಿಂದ ಜನ ಕೂಡ ಬರಬಹುದು. ನಾನು ಹೇಳಿದ್ದನ್ನು ನೆನಪಿಟ್ಟುಕೊಂಡು ನೀನೊಂದು ಸರಿಯಾದ ನಿರ್ಧಾರಕ್ಕೆ ಬಾ. ಇಲ್ಲವೆಂದರೆ ನಿನ್ನ ಪರವಾಗಿ ನಾನೇ ಎಲ್ಲವನ್ನೂ ಮಾತಾಡ್ತೀನಿ ಆಯ್ತಾ….?” ಎಂದು ಸಾವಿತ್ರಮ್ಮ ಹೇಳಿದಾಗ, ಮಗ ಸರಿ ಎಂದ.

ಮರುದಿನ ಗಂಟೆ ಹತ್ತಾದರೂ ಸರಸು ಸ್ನಾನ, ಪೂಜೆ, ಅಡುಗೆ ಮಾಡದೆ ಮಂಕಾಗಿ ಬೆಡ್‌ ರೂಮಿನಿಂದ ಹೊರಗೆ ಬರಲಿಲ್ಲ. ಮನೆಗೆಲಸದಾಕೆ ಪಾತ್ರೆ ತೊಳೆದು, ಬಟ್ಟೆ ಒಗೆದು ಎಲ್ಲಾ ಕೆಲಸ ಮುಗಿಸಿದರೂ, ಸರಸು ರೂಮಿನಿಂದ ಹೊರ ಬರದೇ ಇರುವುದನ್ನು ಗಮನಿಸಿ, ಅವಳ ಬಳಿ ಬಂದು, “ಏನಕ್ಕಾ ಆರಾಮವಿಲ್ವಾ….?” ಎಂದು ಕೇಳಿದಳು.

`ಒಂದು ವೇಳೆ ಇವಳಿಗೆ ತನ್ನ ವಿಚಾರ ಹೇಳಿದ್ರೆ ಮುಗೀತು…. ಊರು ತುಂಬಾ ಕ್ಷಣಾರ್ಧದಲ್ಲಿ ಪುಕಾರು ಮಾಡುತ್ತಾಳೆ. ಇವಳಿಗೆ ಏನೂ ಹೇಳದೆ ಇರೋದೇ ಉತ್ತಮ,’ ಎಂದುಕೊಂಡು, “ಇಲ್ಲ ಹಸೀನಾ…. ನನಗೆ ಜ್ವರ ಬಂದಿದೆ. ಮೈಕೈ ನೋವು ಅಷ್ಟೇ… ಅದಕ್ಕೆ ಎದ್ದು ಕೆಲಸ ಮಾಡೋಕೆ ಆಗ್ತಾ ಇಲ್ಲ,” ಎಂದಳು.

ಅದಕ್ಕೆ ಹಸೀನಾ, “ಸರಿ ಅಕ್ಕಾ, ನನ್ನ ಕೆಲಸ ಮಾಡಿದೀನಿ…. ನನ್ನ ಈ ತಿಂಗಳ ಅಮೌಂಟ್‌ ಕೊಟ್ಟುಬಿಡಿ. ನಾನು ಊರಿಗೆ ಹೋಗಬೇಕಿದೆ. ಏನಾದ್ರೂ ಬಟ್ಟೆ, ತಿನಿಸು, ಸಾಮಾನು ತಗೊಂಡು ಹೋಗಬೇಕು. ಜೊತೆಗೆ ನನ್ನ ಮಾವನ ಸಂಬಂಧಿಕರ ಮನೆ ಓಪನಿಂಗ್‌ ಇರೋದ್ರಿಂದ ನಂಗೆ ಒಂದು ವಾರ ರಜೆ ಬೇಕು, ನಾಳೆಯಿಂದ ಕೆಲಸಕ್ಕೆ ಬರಲ್ಲ,” ಎಂದು ಸರಸು ಬಳಿ ಹೇಗಿ ಹಣಕ್ಕಾಗಿ ಅಲ್ಲೇ ನಿಂತಳು.

ಅಷ್ಟರಲ್ಲಿ ಅಲ್ಲಿಗೆ ಬಂದು ಚೈತ್ರಾ, ಇವರಿಬ್ಬರನ್ನೂ ಮಾತನಾಡಿಸುತ್ತಾ, ಸರಸೂ ಪಕ್ಕ ಕುಳಿತು. ಅವಳ ಕೈಹಿಡಿದು, “ಈಗ ಹೇಗಿದಿಯಾ….?” ಎಂದು ಕೇಳಿದಳು.

“ದಡ ಸೇರದ ಹಡಗು ಸಾಗರದ ಮಧ್ಯೆ ಸಿಲುಕಿ ಒದ್ದಾಡುವ ಹಾಗೆ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ನನಗೆ ಇನ್ನೆಲ್ಲಿಯ ನೆಮ್ಮದಿ ಚೈತ್ರಾ,” ಎಂದು ಕಣ್ಣೀರು ಬಿಟ್ಟಳು.

ಅಲ್ಲೇ ಇದ್ದ ಹಸೀನಾ, “ಯಾಕಕ್ಕಾ ಈ ರೀತಿಯೆಲ್ಲಾ ಮಾತಾಡ್ತಾ ಇದೀಯಾ….?” ಎಂದು ಕೇಳಿದಳು.

ಆಗ ಸರಸೂ ತನ್ನ ವ್ಯಾನಿಟಿ ಬ್ಯಾಗ್‌ ತೆಗೆದು ಅದರಲ್ಲಿದ್ದ ಎರಡು ಸಾವಿರ ರೂಪಾಯಿ ತೆಗೆದು ಹಸೀನಾ ಕೈಗಿಟ್ಟು, “ನೀನಿನ್ನು ಹೊರಡು. ನಿನ್ನ ಕೆಲಸ ಮಾಡಿ ಮುಗಿದಿದೆ ಅಲ್ವಾ….? ನನ್ನ ಮನೆ ವಿಷಯ ನಿಂಗೇಕೆ…..?” ಎಂದು ತುಸು ಏರು ಧ್ವನಿಯಲ್ಲಿ ಹೇಳಿದಾಗ, ಮರುಮಾತಾಡದೆ ಹಸೀನಾ ಹಣ ತೆಗೆದುಕೊಂಡು ಅಲ್ಲಿಂದ ಹೊರಟಳು.

“ಹಾಗೆ ಹೋಗುವಾಗ ರಜೆ ಬೇಕು, ನಾಳೆಯಿಂದ ಕೆಲಸಕ್ಕೆ ಬರಲ್ಲ ಎಂದು ಅತ್ತೆಗೆ ಹೇಳಿ ಹೋಗು. ದುಡ್ಡು ತೆಗೆದುಕೊಂಡಿರುವೆ ಎಂದೂ ಹೇಳು,” ಎಂದಳು ಸರಸು.

“ಸರಿ ಅಕ್ಕಾ….. ಮುಂದಿನ ವಾರ ಬರುವೆ, ನಮಸ್ಕಾರ ಅಕ್ಕಾ…..” ಎನ್ನುತ್ತಾ ರೂಮಿನಿಂದ ಹೊರಟುಹೋದಳು.

ಚೈತ್ರಾಳಿಗೆ, `ಸರಸೂ ಮುಂದೆ ಏನು ಮಾತನಾಡಬೇಕು…? ಈಕೆಯ ಮನಸ್ಸಿಗೆ ನಾನು ಏನಾದರ್ರೂ ಹೇಳಿದರೆ ಇವಳು ಒಪ್ಪಿಕೊಳ್ಳುವಳೇ… ಅಥವಾ ಇವಳ ಮುಂದಿನ ನಡೆ ಹೇಗೆ….?’ ಎಂದು ಯೋಚಿಸುತ್ತಾ ಅವಳನ್ನೇ ನೋಡುತ್ತಿದ್ದಳು.

ಮನಸ್ಸಿಗೆ ಸಮಾಧಾನವಾಗದೆ ಚೈತ್ರಾ, “ಸರಸೂ ಸ್ವಲ್ಪ ಟೀನಾದ್ರೂ ಕುಡಿ, ಇಲ್ಲ ಸ್ನಾನ ಮಾಡಿ ಬಾ, ನಾನೇ ಉಪ್ಪಿಟ್ಟು ಮಾಡಿರುವೆ. ಅಲ್ಲಿ ಅಮ್ಮ ಮತ್ತು ರಾಕೇಶ್‌ ಕೂಡ ಏನೂ ತಿಂದಿಲ್ಲ….” ಎಂದಳು.

ತಕ್ಷಣ ಸರಸೂ ಚೈತ್ರಾಳ ಕೈಯನ್ನು ಹಿಡಿದುಕೊಂಡು, “ನಿನ್ನ ಬಳಿ ಒಂದು ಪ್ರಶ್ನೆ ಕೇಳ್ತೀನಿ. ಸ್ವಲ್ಪ ಕೂಡ ಸುಳ್ಳು ಹೇಳದೆ ನಿಜ ಹೇಳ್ತೀಯಾ…..?”

“ಸರೀ ಕಣೇ…. ಕೇಳು ನಾನೆಂದಾದರೂ ಸುಳ್ಳು ಹೇಳಿದ್ದು ಉಂಟಾ….?” ಎಂದಳು.

“ಇದರಲ್ಲಿ ನನ್ನ ನಿರ್ಧಾರ ಇದೆ…. ಭವಿಷ್ಯವಿದೆ….”

“ಆಯ್ತು ಕೇಳು….” ಎಂದಳಾದರೂ, `ಇವಳೇನು ಕೇಳಬಹುದು…’ ಎನ್ನುವ ಕುತೂಹಲ ಚೈತ್ರಾಳಿಗಿತ್ತು.

“ಚೈತ್ರಾ…. ನೀನೇ ನನ್ನ ರಾಕೇಶ್‌ ನನ್ನು ಮದುವೆ ಆಗಬೇಕು ಕಣೇ…” ಎಂದಳು.

ಚೈತ್ರಾ ಥಟ್ಟನೆ ಎದ್ದು ನಿಂತು, “ಏ…. ನಿನಗೆ ಏನಾಗಿದೆ…..? ಯಾಕೆ ಹೀಗೆಲ್ಲಾ ಮಾತಾಡ್ತಿದೀಯಾ….? ಹೀಗೆ ಕೇಳಲು ನಿನಗೆ ಮನಸ್ಸಾದ್ರೂ ಹೇಗೆ ಬಂತು…? ನಾನು ನಿನ್ನ ಆಪ್ತ ಗೆಳತಿ. ನಿನ್ನ ಪ್ರತಿಯೊಂದು ನೋವು ನಲಿವಿನಲ್ಲಿ ನಾನಿದ್ದೇನೆ. ಆದರೆ ನಿನ್ನ ಬಾಳಿಗೆ ನಾನು ಮುಳುವಾಗಲಾರೆ….. ಇನ್ನು ಮದುವೆ ವಿಚಾರ ಕೂಡ ಅಷ್ಟೇ…. ನಿಮ್ಮ ಫ್ಯಾಮಿಲಿಯವರೆಲ್ಲರ ಮುಂದೆ ಕುಳಿತು ಮಾತನಾಡಿ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು, ಐವಿಎಫ್‌ ಮೂಲಕ ಮಗು ಪಡೆಯೋದು ಅಥವಾ ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಿ. ನೀನೊಬ್ಬಳೆ ಇಲ್ಲಿ ಕುಳಿತು ಈ ರೀತಿ ಹೇಳೋದು ಎಷ್ಟು ಸರಿ….?” ಎಂದಳು.

“ಹಾಗಾದ್ರೆ ಚೈತ್ರಾ ನಿನಗೆ ಒಪ್ಪಿಗೆ ಇದೆ ಅಂತ ಆಯ್ತಲ್ವಾ….?” ಎಂದು ಕೇಳಿದಳು.

“ಅರೇ….. ನಾನೆಲ್ಲಿ ಹಾಗೇ ಹೇಳ್ದೆ….? ಇವೆಲ್ಲಾ ಮಾತು  ಬೇಡ. ಮೊದಲು ಏಳು ಇಲ್ಲಿಂದ. ಎಲ್ಲರೂ ಬರುವ ಸಮಯವಾಯಿತು,” ಎಂದು ಎಬ್ಬಿಸಿದಳು.

ಅಷ್ಟರಲ್ಲಿ ಬಾಗಿಲ ಬಳಿ ಯಾರೋ ಬಂದಂತೆ ಶಬ್ದ ಕೇಳಿಸಿತು.

“ಅದು ಬೇರೆ ಯಾರೂ ಅಲ್ಲ ನಮ್ಮ ಅಪ್ಪ ಅಮ್ಮ ಬಂದಿದ್ದಾರೆ…..” ಎನ್ನುತ್ತಾ ಸರಸು ಎದ್ದಳು.

ಚೈತ್ರಾ ಹೊರಗೆ ಹೋಗಿ ನೋಡಿದಾಗ, ಸರಸೂಳ ತಾಯಿ ತಂದೆಯರ ಜೊತೆ ಆರೇಳು ಜನ ಬಂದು ನಿಂತಿದ್ದರು.

“ಬನ್ನಿ ಅಂಕಲ್, ಅಮ್ಮಾ ಬನ್ನಿ…. ” ಎಂದು ಚೈತ್ರಾ ಅವರಿಬ್ಬರನ್ನೂ ಮನೆಯೊಳಗೆ ಕರೆದಳು.

ಎಲ್ಲರೂ ಒಳಗೆ ಬಂದು ಹಾಲ್ ‌ನಲ್ಲಿ ಕುಳಿತರು. ಸಾವಿತ್ರಮ್ಮ, ರಾಕೇಶ್‌ ಮತ್ತು ಅವನ ದೊಡ್ಡಪ್ಪ, ಸರಸೂ ಎಲ್ಲರೂ ಅಲ್ಲಿಗೆ ಬಂದು ಸೇರಿದರು.

ಸರಸೂ ತಾಯಿಯ ಕಡೆಯವರೊಬ್ಬರು, “ಈ ಹುಡುಗಿ ಯಾರು…?” ಎಂದು ಚೈತ್ರಾಳ ಬಗ್ಗೆ ಪ್ರಶ್ನೆ ಮಾಡಿದರು.

ಚೈತ್ರಾ ಒಬ್ಬ ಅನಾಥೆ. ಇದೇ ಊರಿನ ಅನಾಥ ಆಶ್ರಮದಲ್ಲಿ ಬೆಳೆದವಳು. ದೊಡ್ಡವಳಾದ ಮೇಲೆ ಓದು ಮುಗಿದು, ನಂತರ ಅದೇ ಊರಿನ ಸರ್ಕಾರಿ ಆಸ್ಪತ್ರೆಯಲ್ಲಿ ಓಪಿಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅಲ್ಲಿನ ಡಾಕ್ಟರ್‌ ಅವಳಿಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿ, ಕೆಲಸಕ್ಕೆ ಸೇರಿಸಿ ಉದ್ಯೋಗ ಅವಕಾಶ ನೀಡಿದ್ದರು.

ಚೈತ್ರಾ ನೋಡಲು ಬಹಳ ಸುಂದರವಾಗಿದ್ದಳು. ವಿದ್ಯೆ ಕೂಡ ಜೊತೆಯಾಗಿಯೇ ಇವಳಿಗೆ ಒಲಿದು ಬಂದಿತ್ತು. ದೃರಾದೃಷ್ಟವೆಂದರೆ ತಾಯಿ ತಂದೆಯ ಪ್ರೀತಿ ಕಾಣದವಳು.

ಒಮ್ಮೆ ಸಾವಿತ್ರಮ್ಮನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ಹೋಗಿದ್ದಾಗ ಇವಳ ಪರಿಚಯವಾಗಿದ್ದು. ಕ್ರಮೇಣ ಇವಳು ಆಕೆಗೆ ಆಪ್ತಳಾದಳು. ಸಾವಿತ್ರಮ್ಮನಿಗೆ ಹೆಣ್ಣುಮಕ್ಕಳು ಇಲ್ಲದ ಕಾರಣ ಚೈತ್ರಾಳನ್ನು ಕಂಡರೆ ಅದೇನೋ ಪ್ರೀತಿ, ವಾತ್ಸಲ್ಯ, ವಿಶ್ವಾಸ. ಒಮ್ಮೆ ಆಕೆ ಆಸ್ಪತ್ರೆಗೆ ಹೋಗಿದ್ದಾಗ ಅಲ್ಲಿ ಕಟ್ಟಬೇಕಾದ ದುಡ್ಡು ಮರೆತು ಬಂದಿದ್ದ ಕಾರಣ, ಚೈತ್ರಾಳೇ ದುಡ್ಡು ಕಟ್ಟಿ, ಆಟೋಗೂ ಅವಳೇ ದುಡ್ಡು ಕೊಟ್ಟು ಮನೆಗೆ ಕಳಿಸಿದ್ದು ಸಾವಿತ್ರಮ್ಮನವರಿಗೆ ಮರೆಯಲಾರದ ಘಟನೆ. ಇತ್ತ ಚೈತ್ರಾಳಿಗೂ ಸಾವಿತ್ರಮ್ಮನವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಸಾವಿತ್ರಮ್ಮ ತನಗೆ ಒಬ್ಬನೇ ಮಗ ಇದ್ದುದರಿಂದ ಚೈತ್ರಾಳಂಥ ಹುಡುಗಿಯನ್ನು ಹುಡುಕಿದರೂ ಸಿಗಲ್ಲ ಎಂದು ಯೋಚಿಸಿರುತ್ತಾರೆ.

ಚೈತ್ರಾಳ ಬಳಿ ಈ ವಿಷಯನ್ನು ಪ್ರಸ್ತಾಪಿಸಿದಾಗ, ಚೈತ್ರಾ ಅದಕ್ಕೆ ಸಮ್ಮತಿ ಕೊಟ್ಟಿರಲಿಲ್ಲ.

“ಅಮ್ಮಾ…. ನಾನು ನಿಮ್ಮನ್ನು ತಾಯಿಯಂತೆ ನೋಡುತ್ತೇನೆ. ನನಗೆ ನಿಮ್ಮ ಮಗನನ್ನು ಮದುವೆ ಮಾಡಿಕೊಳ್ಳುವ ಆಸೆ ನನಗಿಲ್ಲ. ನಾನು ಒಂಟಿಯಾಗಿರುವುದೇ ಇಷ್ಟ. ದಯವಿಟ್ಟು ಕ್ಷಮಿಸಿ,” ಎಂದು ಕೇಳಿದ್ದಳು.

ರಾಕೇಶ್‌ ಸರಸೂಳನ್ನು ಮದುವೆಯಾದ ನಂತರ ಇವರಿಬ್ಬರೂ ಆತ್ಮೀಯ ಗೆಳತಿಯರಾದರು. ಈ ಹುಡುಗಿ ತುಂಬಾ ಒಳ್ಳೆಯವಳು ಎಂದು  ಸರಸು ತಾಯಿ ತಮ್ಮ ಸಂಬಂಧಿಕರ ಬಳಿ ಚೈತ್ರಾಳ ವಿಷಯ ತಿಳಿಸಿದರು.

ಚೈತ್ರಾ ಬಂದವರಿಗೆಲ್ಲಾ  ಟೀ ಮಾಡಿಕೊಟ್ಟಳು. ನಂತರ ಎಲ್ಲರೂ ಕುಳಿತು ಮಾತಿನಲ್ಲಿ ತೊಡಗಿದರು.

“ನೋಡಿ ಬೀಗರೇ, ಸರಸು ನಮಗೆ ಗೊತ್ತಿಲ್ಲದೆ ಇಂತಹ ಅಚಾತುರ್ಯ ಮಾಡಿಕೊಂಡಿದ್ದಾಳೆ. ನಮಗೆ ಬಹಳ ನೋವಾಗಿದೆ, ಇದು ಮರ್ಯಾದೆ ವಿಷಯ. ಮನೆ ಸೊಸೆ ಈ ರೀತಿಯಲ್ಲಿ ಮಾಡಿಕೊಂಡಿದ್ದಾಳೆ ಅಂದ್ರೆ ನಾವು ಹೇಗೆ ಉತ್ತರ ಕೊಡಬೇಡ….? ಇದು ಎಷ್ಟು ಸರಿ ಅನ್ನೋದು ನೀವೇ ಹೇಳಿ, ನಿರ್ಧಾರ ಮಾಡಬೇಕು,” ಎಂದು ಸಾವಿತ್ರಮ್ಮ ಬೇಸರ ವ್ಯಕ್ತಪಡಿಸಿದರು.

“ಹೌದು ಸಾವಿತ್ರಮ್ಮ….. ನಮ್ಮ ಮಗಳಿಂದ ಇಂತಹ ಅಚಾತುರ್ಯ ನಡೆದಿದ್ದರಿಂದ ನಮಗೆ ಹೇಳುವುದಕ್ಕೆ ನಮ್ಮಲ್ಲಿ ಮಾತುಗಳೇ ಇಲ್ಲ. ಸರಸೂಳಿಂದ ಆದ ತಪ್ಪಿನ ಘಟನೆಗೆ ನಮಗೆ ವಿಷಾದವಿದೆ. ರಾಕೇಶ್‌, ನೀನೇ ಒಂದು ನಿರ್ಧಾರ ಹೇಳಿಬಿಡುವುದು ಉತ್ತಮ. ಅದಕ್ಕೆ ನಾವೆಲ್ಲ ಒಪ್ಪಿಗೆ ಕೊಡುತ್ತೇವೆ,” ಎಂದರು.

“ನೋಡಿ ಬೀಗರೇ, ಸರಸು ಜೀವನ ಹಾಳು ಮಾಡುವ ಉದ್ದೇಶ ನಮಗಿಲ್ಲ. ಒಂದು ಮಗು ಬೇಕಿತ್ತು ಅಷ್ಟೇ. ಅದು ಹೆಣ್ಣಾದರೂ ಇರಲಿ, ಗಂಡಾದರೂ ಇರಲಿ. ನಮ್ಮ ಮಗನಿಗೆ ಮರು ಮದುವೆ ಮಾಡುವುದಕ್ಕೆ ನಮಗೂ ಆಸಕ್ತಿ ಇಲ್ಲ. ಅವಳ ಜವಾಬ್ದಾರಿ ಕೂಡ ನಮ್ಮದೇ. ಅವಳನ್ನು ನಾವೆಂದು ಸೊಸೆಯಂತೆ ನಡೆಸಿಲ್ಲ. ಮಗಳಂತೆ ನೋಡಿಕೊಂಡಿದ್ದೇವೆ. ಆದರೆ ನಮಗೆ ನಮ್ಮ ವಂಶ ಉದ್ಧಾರ ಆಗೋದಷ್ಟೆ ಬೇಕಿತ್ತು.

“ನಮಗೀಗ ರಾಕೇಶನಿಗೆ ಇನ್ನೊಂದು ಮದುವೆ ಮಾಡಿದ್ರೆ ಸರಿ ಅನಿಸ್ತಿಲ್ಲ. ರಾಕೇಶನಿಗೆ ಮದುವೆ ಆಗುವ ಆಸೆ ಕೂಡ ಇಲ್ಲ. ಮದುವೆಯಾಗದಿದ್ರೆ ಮಗುವನ್ನ ದತ್ತು ಪಡೆಯಲೂ ಕೂಡ ಇಷ್ಟ ಆಗಲ್ಲ. ಯಾವ ರೀತಿಯ ಪರಿಹರಿಸಬೇಕೆಂದು ನಿರ್ಧಾರ ಮಾಡುವುದು ನಮಗೆ ನುಂಗಲಾರದ ತುತ್ತಾಗಿದೆ,” ಎಂದು ಸಾವಿತ್ರಮ್ಮ ಹೇಳುತ್ತಿದ್ದಂತೆ ಸರಸೂ ಅಳಲು ಶುರು ಮಾಡಿದಳು.

ಸರಸೂಳ ಚಿಕ್ಕ ಮಾವ ಮುಂದೆ ಬಂದು, “ನೋಡು ಸರಸೂ, ನೀನೇ ಒಂದು ನಿರ್ಧಾರ ಹೇಳಿಬಿಡು. ನಿನ್ನ ನಿರ್ಧಾರಕ್ಕೆ ನಾವೆಲ್ಲಾ ಅದಕ್ಕೆ ಸಮ್ಮತಿಸುತ್ತೇವೆ. ನೀನು ಈ ಮನೆ ಸೊಸೆ ಎಂದು ಹೇಳುವುದಕ್ಕಿಂತ ಮನೆ ಮಗಳಿದ್ದ ಹಾಗೆ ಇದೀಯಾ…. ನಿನ್ನ ನಿರ್ಧಾರವೇ ನಮ್ಮ ನಿರ್ಧಾರ,” ಎಂದರು.

ಸರಸೂ ನಿಧಾನವಾಗಿ, “ರಾಕೇಶ್‌ ಗೆ ಮದುವೆ ಮಾಡಿಬಿಡಿ. ಚೈತ್ರಾ ನನ್ನ ಆಪ್ತ ಗೆಳತಿ. ಅವಳು ಎಲ್ಲರಿಗೂ ಹೇಗೆ ಅಂತ ಗೊತ್ತು. ಇವಳಿಗೂ ರಾಕೇಶ್‌ ಗೂ ಮದುವೆ ಮಾಡಿ ಇಬ್ಬರೂ ಇಲ್ಲೇ ಇದ್ದಾರೆ,” ಎಂದಳು.

ಅದಕ್ಕೆ ಚೈತ್ರಾ, “ಸರಸೂ ನನಗೆ ಇಷ್ಟ ಇಲ್ಲ. ನನ್ನನ್ನು ಒತ್ತಾಯ ಮಾಡಬೇಡ. ನಿಮ್ಮ ಬಾಳಿಗೆ ನಾನು ಮುಳುವಾಗಿರಲಾರೆ,” ಎಂದಳು.

“ಚೈತ್ರಾ ಹೇಳಿದ್ದು ಸರಿ. ನನಗೆ ಆ ರೀತಿ ಯಾವ ಆಸೆ ಇಲ್ಲ. ಜೊತೆಗೆ ಮಕ್ಕಳು ಇಲ್ಲದಿದ್ರೂ ಪರವಾಗಿಲ್ಲ ನಾನೂ ಸರಸೂ ಒಟ್ಟಿಗೆ ಇರುತ್ತೇವೆ. ಬೇಕಾದರೆ ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣ,” ಎಂದ.

ಆಗ ಚೈತ್ರಾ ಮುಂದೆ ಬಂದು, “ನಾನು ಒಂದು ಮಾತು ಹೇಳುವೆ, ಡಾಕ್ಟರ್‌ ಹೇಳಿದಂತೆ ಬಾಡಿಗೆ ತಾಯಿಯಾಗಿ ನಿಮಗೊಂದು ಮಗುವಿನ ಕೊರತೆ ನೀಗಿಸಲು ನನಗೆ ಜೀವನದಲ್ಲಿ ಸಿಕ್ಕಿರುವುದು ಇದೊಂದು ಭಾಗ್ಯ. ಈ ಮನೆ ಋಣ ಬಹಳವಿದೆ,” ಎಂದಳು.

ಸಾವಿತ್ರಮ್ಮ ಚೈತ್ರಾಳ ಬಳಿ ಬಂದು, “ನಿಜವಾಗ್ಲೂ ಈ ಮಾತನ್ನು ನೀನು ಹೇಳುತ್ತಿರುವೆಯಾ….?” ಎಂದು ಭಾವುಕರಾಗಿ ನುಡಿದು, ಸರಸೂಳ ಮುಖ ನೋಡುತ್ತಾ, “ನೋಡು ಚೈತ್ರಾ, ಇವರಿಗೆ ಒಂದು ಮಗುವಿನ ಬೇಡಿಕೆ ಈಡೇರಿಸಿದರೆ ನಾವೆಲ್ಲರೂ ನಿನಗೆ ಋಣಿಯಾಗಿರುತ್ತೇಿ,” ಎಂದರು.

ಸರಸೂಳ ತವರು ಮನೆಯವರು, “ಚೈತ್ರಾ, ನೀನಾಗೇ ಈ ಮಾತು ಹೇಳೋದು ಕೇಳಿ ನಮಗೆ ಧೈರ್ಯ ಬಂದಿದೆ. ಎಲ್ಲಿ ನಮ್ಮ ಮಗಳ ಬಾಳು ಬೀದಿ ಪಾಲಾಗುವುದೋ ಎಂದು ಮಾತನಾಡದೆ ಮೌನವಾಗಿದ್ದೆ ನಮ್ಮ ಉಸಿರು ನಿಂತುಹೋದ ಹಾಗೆ ಆಗಿತ್ತು,” ಎಂದು ಭಾವುಕವಾಗಿ ಹೇಳಿದರು.

ಎಲ್ಲರ ಒಪ್ಪಿಗೆ ಪಡೆದು, ಅದೇ ದಿನವೇ ಎಲ್ಲರೂ ಒಂದು ಒಪ್ಪಿಗೆ ಪತ್ರವನ್ನು ತಮ್ಮಲ್ಲಿ ಬರೆಸಿಕೊಂಡು ನಿರ್ಧಾರ ಮಾಡಿದಂತೆ ಆಸ್ಪತ್ರೆಗೆ ಹೋಗಿ ವಿಷಯ ತಿಳಿಸಿದರು. ಆಸ್ಪತ್ರೆ ನಿಯಮಗಳ ಪ್ರಕಾರ ಎಲ್ಲಾ ದಾಖಲೆ ಪೂರೈಸಿ ಚೈತ್ರಾ ಮಗುವಿನ ತಾಯಿಯಾಗಲು ಒಪ್ಪಿಗೆ ನೀಡಿ, ಒಂದು ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ನಂತರ ಮಗುವನ್ನು ಸರಸೂ ಹಾಗೂ ರಾಕೇಶ್‌ ರಿಗೆ ಕಾನೂನು ನಿಯಮದಂತೆ ಒಪ್ಪಿಸಿದ ನಂತರ ತನ್ನ ಆಶ್ರಮ ಸೇರಿಕೊಂಡಳು.

ಚೈತ್ರಾಳ ನೆನಪಿನಲ್ಲಿ ಮಗುವನ್ನು ಬೆಳೆಸುತ್ತಾ ಎಲ್ಲರ ಬಾಳಲ್ಲಿ ಆನಂದ ಮರುಕಳಿಸಿ ಜೀವನ ಮುಂದುವರಿಯತೊಡಗಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ