ಸಾಧಾರಣ ಮಧ್ಯಮ ವರ್ಗದಲ್ಲಿ ಹುಟ್ಟಿದ ಅಪಾರ ಪ್ರತಿಭಾವಂತೆ ಮಂಜುಳಾವತಿ, ತಮ್ಮ ಸ್ವಂತ ಪರಿಶ್ರಮದಿಂದ ಯಾವ ರೀತಿ ಆಟೋಟಗಳಲ್ಲಿ ಅದ್ವಿತೀಯ ಸಾಧನೆ ಮಾಡಿ, ಮಲೆನಾಡಿನಿಂದ ಮಲೇಶಿಯಾವರೆಗೂ ಹೇಗೆ ತಲುಪಿದರು ಎಂದು ವಿವರವಾಗಿ ತಿಳಿಯೋಣವೇ.....?
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದು ಒಂದು ದೊಡ್ಡ ಸವಾಗಿದೆ. ಕಾರಣ..... ಬದಲಾಗುತ್ತಿರುವ ತಂತ್ರಜ್ಞಾನ, ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು, ಎಲ್ಲೋ ಒಂದು ಕಡೆ ನಮ್ಮ ಮಕ್ಕಳಲ್ಲಿ ಸೋಮಾರಿತನ, ನಿರ್ಲಕ್ಷ್ಯತನ, ಮೊಡುತನ, ಸ್ವಂತಿಕೆ ಇಲ್ಲದಿರುವಂತೆ ಮಾಡಿದೆ. ಎಲ್ಲದಕ್ಕೂ ತಂತ್ರಜ್ಞಾನದ ಮೊರೆಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಹಿಂದೆ ಮಕ್ಕಳು ಅಜ್ಜಿ ತಾತಂದಿರೊಂದಿಗೆ ಬೆಟ್ಟ, ಗುಡ್ಡ, ಗದ್ದೆ, ಹೊಲ, ತೋಟ, ಹಳ್ಳಕೊಳ್ಳ, ಮಣ್ಣಲ್ಲೇ ಕುಣಿದು ಕುಪ್ಪಳಿಸುತ್ತಿದ್ದರು. ಹಾಗೆಯೇ ಗೆಡ್ಡೆಗೆಣಸು, ಹಣ್ಣುಹಂಪಲು, ಸೊಪ್ಪುಸದೆ ಇತ್ಯಾದಿಗಳನ್ನು ತಿಂದುಂಡು ಆಟೋಟಗಳಲ್ಲಿಯೂ ಇತರೆ ಚಟುವಟಿಕೆಗಳಲ್ಲಿಯೂ ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಇವೆಲ್ಲವನ್ನು ಹೇಳುತ್ತಿರುವುದಕ್ಕೆ ಕಾರಣವೇನೆಂದರೆ.... 30 ವರ್ಷ ಆದರೆ ನಮ್ಮ ಕೈಲಿ ಏನೂ ಆಗಲ್ಲ ಎಂದು ಕೈಚೆಲ್ಲಿ ಅಸಹಾಯಕರಾಗಿ ಕೂರುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ.
ಅಂತಹದ್ದರಲ್ಲಿ ಕೊಡಗಿನ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಒಂದು ಪುಟ್ಟ ಹುಡುಗಿ. ಇಂದು ಆಕೆಗೆ 50 ವರ್ಷ. ಇವರು ಹಿರಿಯರ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಕಂಚಿನ ಪದಕವನ್ನು ಪಡೆದು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರು ಬೇರಾರೂ ಅಲ್ಲ, ಸಕಲೇಶಪುರ ತಾಲ್ಲೂಕಿವ ಜಾನೆಕೆರೆ ಗ್ರಾಮದ ದುಶ್ಯಂತ್ ಕುಮಾರ್ ಪತ್ನಿ ಮಂಜುಳಾವತಿ.

ಬಾಲ್ಯ, ಶಿಕ್ಷಣ, ಕ್ರೀಡಾ ಜೀವನ
ಮಂಜುಳಾವತಿ ತಮ್ಮ ಬಾಲ್ಯ, ಶಿಕ್ಷಣ, ಕ್ರೀಡಾ ಜೀವನದ ಯಶಸ್ಸಿನ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈಕೆ ಚಿಕ್ಕಂದಿನಿಂದಲೇ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಅಭಿರುಚಿ ಹೊಂದಿದ್ದರು.
ಇವರು ಮೂಲತಃ ಕೊಡಗಿನವರು. 1966ರಲ್ಲಿ ಕೊಡಗು ಜಿಲ್ಲೆ ಶನಿವಾರಸಂತೆಯಲ್ಲಿ ಜನಿಸಿದವರು. ತಂದೆ ಎ.ಬಿ. ವೆಂಕಟೇಗೌಡ, ತಾಯಿ ಪುಟ್ಟಮ್ಮರವರ ನಾಲ್ಕನೇ ಮಗಳು.
ಇವರ ಪ್ರಾಥಮಿಕ ಶಿಕ್ಷಣ ಅರೆದಾಳು ಶಾಲೆ, ಶನಿವಾರಸಂತೆ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 57ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಈ ಅವಧಿಯಲ್ಲಿ ಇವರಿಗೆ ಖೋಖೋ ಮತ್ತು ಥ್ರೋಬಾಲ್ ನಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಹಲವು ವಿಭಾಗಗಳಲ್ಲಿ ಭಾಗವಹಿಸಿ/ಸ್ಪರ್ಧಿಸಿ ಬಹುಮಾನಗಳನ್ನು ಪಡೆದುಕೊಂಡರು.
ಆಟದೊಂದಿಗೆ ಪಾಠ
ಪ್ರೌಢಶಾಲೆಯಲ್ಲಿಯೂ ಓದಿನ ಜೊತೆಗೆ ಖೋಖೋ, ಥ್ರೋಬಾಲ್ ಜೊತೆಗೆ ಮಹಿಳಾ ಹಾಕಿ, ಜಾವೆಲಿನ್ ಥ್ರೋ, ಬಾಸ್ಕೆಟ್ ಬಾಲ್ ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಆ ಅವಧಿಯಲ್ಲಿ ವಿರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ, ಮೈಸೂರು, ಮಂಗಳೂರು, ಬೆಂಗಳೂರು, ಬಳ್ಳಾರಿ ಮೊದಲಾದ ಕಡೆ ರಾಜ್ಯ ಮಟ್ಟದಲ್ಲಿ ಹಾಗೂ ಮೀರತ್ ನಲ್ಲಿ ಅಂತಾರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ.
ಪಿಯುಸಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೂ ಜಾವೆಲಿನ್ ಥ್ರೋ, ಹಾಕಿ ಹಾಗೂ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ವಿದ್ಯಾಭ್ಯಾಸದ ಅವಧಿಯಲ್ಲಿ ನೂರಾರು ಬಹುಮಾನಗಳನ್ನು ಪಡೆದಿರುವುದರ ಜೊತೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪರವರಿಂದ `ಅತ್ಯುತ್ತಮ ಆಟಗಾರ್ತಿ' ಪ್ರಶಸ್ತಿ ಸಹ ಪಡೆದಿದ್ದಾರೆ.





