ಸರಸ್ವತಿ ಜಾಗೀರ್ದಾರ್
*ಕೆ.ವಿ.ಸತ್ಯಪ್ರಕಾಶ್, ಕೆ.ಎಸ್ ಸೂರಜ್ ಗೌಡ ನಿರ್ಮಾಣದ ಹಾಗೂ ಜಡೇಶ ಕೆ ಹಂಪಿ ನಿರ್ದೇಶನದ ಈ ಚಿತ್ರಕ್ಕೆ ನೆಲಮಂಗಲದ ಬಳಿ ಬಿರುಸಿನ ಚಿತ್ರೀಕರಣ*.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ "ಸಾರಥಿ" ಚಿತ್ರವನ್ನು ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಅವರು ಹನ್ನೆರಡು ವರ್ಷಗಳ ನಂತರ "ಸಾರಥಿ ಫಿಲಂಸ್" ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡಿದ್ದಾರೆ. "ಜಂಟಲ್ ಮ್ಯಾನ್", "ಗುರುಶಿಷ್ಯರು" ಚಿತ್ರಗಳ ನಿರ್ದೇಶಕ, "ಕಾಟೇರ" ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ವಿಜಯ್ ಕುಮಾರ್(ದುನಿಯಾ ವಿಜಯ್) ನಾಯಕರಾಗಿ ನಟಿಸುತ್ತಿರುವ ಚಿತ್ರ "ಲ್ಯಾಂಡ್ ಲಾರ್ಡ್". ಪ್ರಸ್ತುತ ಈ ಚಿತ್ರದ ಚಿತ್ರೀಕರಣ ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾಯಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜಿಸಿತ್ತು. ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡದ ಸದಸ್ಯರು, " ಲ್ಯಾಂಡ್ ಲಾರ್ಡ್" ಚಿತ್ರದ ಕುರಿತು ಮಾತನಾಡಿದರು.
ಇದೊಂದು ಗ್ರಾಮೀಣ ಸೊಗಡಿನ ಕಥೆ. 1980 ರ ಕಾಲಘಟ್ಟದಲ್ಲಿ ನಡೆಯುವ ಕಥೆಯೂ ಹೌದು. ನಮ್ಮ ಚಿತ್ರಕ್ಕೆ "ಲ್ಯಾಂಡ್ ಲಾರ್ಡ್" ಅಂತ ಹೆಸರಿಡಲಾಗಿದ್ದು, ''ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ" ಎಂಬ ಅಡಿಬರಹವಿದೆ. "ಸಾರಥಿ" ಅಂತಹ ಸೂಪರ್ ಹಿಟ್ ಚಿತ್ರದ ನಿರ್ಮಾಪಕರಾದ ಕೆ.ವಿ.ಸತ್ಯಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಪುತ್ರ ಸೂರಜ್ ಗೌಡ ಅವರು ತಂದೆಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇನ್ನೂ, ಈ ಕಥೆಗೆ ವಿಜಯ್ ಅವರೆ ಸೂಕ್ತ ನಾಯಕ. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಜಯ್ ಅವರ ಪುತ್ರಿ ರಿತನ್ಯ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ ಎಂದು ನಿರ್ದೇಶಕ ಜಡೇಶ್ ಕೆ ಹಂಪಿ ತಿಳಿಸಿದರು.
ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮಾತನಾಡಿದ ನಾಯಕ ವಿಜಯ್ ಕುಮಾರ್, ಜಡೇಶ್ ಒಂದೊಳ್ಳೆ ಗ್ರಾಮೀಣಾ ಸೊಗಡಿನ ಕಥೆ ಮಾಡಿಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಹೆಚ್ಚು ಇರಲಿಲ್ಲ. ಬುಡ್ಡಿ ದೀಪಗಳೆ ಹೆಚ್ಚು. ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಅಲ್ಲಿ ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಈ ಚಿತ್ರದಲ್ಲಿ ನಾನು ಬಡವರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೇನೆ. ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ ಚಿತ್ರತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದರು.