- ರಾಘವೇಂದ್ರ ಅಡಿಗ ಎಚ್ಚೆನ್.
ಇತ್ತೀಚೆಗಷ್ಟೇ ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಮೂಡಿಬಂದಂತಹ ‘ಲ್ಯಾಂಡ್ ಲಾರ್ಡ್’ ಚಿತ್ರವು ಈಗಾಗಲೇ ಜನರ ಮನಸ್ಸನ್ನು ಯಶಸ್ವಿಯಾಗಿ ಗೆಲ್ಲುತ್ತಿದೆ. ಕಥೆ, ನಟನೆ ಎಲ್ಲವನ್ನು ಸಿನಿ ಪ್ರಿಯರು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡವು ಇಂದು ಮಧ್ಯಾಹ್ನ 1:45ಕ್ಕೆ ಜಾತವನ್ನು ಏರ್ಪಡಿಸಿತು.
ಈ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆಗೆ ನಟ ದುನಿಯಾ ವಿಜಯ್ ಅವರು ಪಾಲ್ಗೊಂಡಿದ್ದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು.ಈ ಸಂಧರ್ಭದಲ್ಲಿ ಸಲಗ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ಭೀಮ ಪುತ್ರಿ ಎಂದು ಹೆಸರಿಟ್ಟು ನಾಮಕರಣ ಮಾಡಿದರು.

ಜೊತೆಗೆ ಆ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 25,000 ಹಾಗೂ ಸಲಗ ವಿಜಯ ಅವರು 75,000 ಒಳಗೊಂಡಂತೆ ಒಟ್ಟು ಒಂದು ಲಕ್ಷ ದೇಣಿಗೆಯನ್ನು ನೀಡುತ್ತಿರುವ ವಿಚಾರವನ್ನು ಘೋಷಿಸಿದರು.
ಇದಾದ ಬಳಿಕ ಮಾತನಾಡಿರುವ ದುನಿಯಾ ವಿಜಯ್ ಅವರು ಅಂಬೇಡ್ಕರ್ ರವರು ಸಂವಿಧಾನ ಬರೆದಿರೋದು ಎಲ್ಲರಿಗೂ ಯಾವುದೇ ಪ್ರತ್ಯೇಕ ಜಾತಿಗಲ್ಲ. ಪ್ರತಿಯೊಬ್ಬರಿಗೂ ಈ ಸಂವಿಧಾನ ಬೇಕು. ಈ ಹೋರಾಟ ಯಾರದೋ ಮೇಲಿನ ದ್ವೇಷ ಕಲ್ಲ ಅಥವಾ ಕಿಚ್ಚಿಗಲ್ಲ ಇದು ನನ್ನ ಸಂವಿಧಾನಕ್ಕಾಗಿ ಎಂದು ಹೇಳಿದರು. ಜೊತೆಗೆ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಬೆಂಗಳೂರ ವಿಶ್ವವಿದ್ಯಾಲಯ, ಮಾಧ್ಯಮ ಮಿತ್ರರಿಗೂ ಧನ್ಯವಾದವನ್ನು ಕೋರಿದರು.
ಸ್ಯಾಂಡಲ್‌ವುಲ್ ನಟ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಸಿನಿಮಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಖಂಡಿತವಾಗಿಯೂ ನೋಡುತ್ತೇನೆ ಎಂದು ಹೇಳುವ ಮೂಲಕ, ಸಿನಿಮಾದ ಸಾಮಾಜಿಕ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ.

ದುನಿಯಾ ವಿಜಯ್ ಹಾಗೂ ‘ಲ್ಯಾಂಡ್ ಲಾರ್ಡ್’ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಸೇರಿದಂತೆ ಸಿನಿಮಾ ತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರ ವೀಕ್ಷಣೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ. ಈ ವೇಳೆ ಚಿತ್ರದ ಕಥಾವಸ್ತು, ಅದರ ಸಾಮಾಜಿಕ ಹಿನ್ನೆಲೆ ಮತ್ತು ಶೋಷಣೆಗೆ ಒಳಗಾದ ಜನರ ಹೋರಾಟದ ಕುರಿತು ವಿವರಿಸಿದರು. ತಂಡದ ಮಾತುಗಳನ್ನು ಆಲಿಸಿದ ಸಿಎಂ, “ಈ ಸಿನಿಮಾ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕ. ನಾನು ನೋಡೇ ನೋಡ್ತೀನಿ” ಎಂದು ಭರವಸೆ ನೀಡಿದರು.
“ಶೋಷಣೆಗೊಳಗಾದವರ ಹೋರಾಟದ ಕಥೆಯನ್ನು ಜನರು ನೋಡಲೇಬೇಕು. ಇಂತಹ ಸಿನಿಮಾಗಳು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಂತೆ ಕಾರ್ಯನಿರ್ವಹಿಸುತ್ತವೆ” ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್ ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ್ದು, ಈ ಭೇಟಿ ಚಿತ್ರಕ್ಕೆ ಹೆಚ್ಚಿನ ಮಹತ್ವವನ್ನು ತಂದಿದೆ. ಈ ಸಂದರ್ಭದಲ್ಲಿ ದುನಿಯಾ ವಿಜಯ್, “ಸಿಎಂ ಅವರಂತಹ ಹಿರಿಯ ನಾಯಕರು ಸಾಮಾಜಿಕ ವಿಷಯಗಳನ್ನು ಒಳಗೊಂಡ ಚಿತ್ರಗಳಿಗೆ ಬೆಂಬಲ ನೀಡಿದರೆ ಅದು ನಮಗೆ ದೊಡ್ಡ ಶಕ್ತಿ. ‘ಲ್ಯಾಂಡ್ ಲಾರ್ಡ್’ ಸಿನಿಮಾ ಸಮಾಜಕ್ಕೆ ಒಂದಷ್ಟು ಸಂದೇಶ ನೀಡುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.





