ಮದುವೆ ಮುಂಜಿ, ನಾಮಕರಣ ಮುಂತಾದ ಶುಭ ಸಮಾರಂಭವಿರಲೀ ಅಥವಾ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಾಧಾರಣವಾಗಿ ಉಟವನ್ನು ಬಡಿಸಲು ಬಾಳೆ ಎಲೆಯನ್ನು ಬಳಸುವುದು ದಕ್ಷಿಣ ಭಾರತದಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ನೀರು ಹೆಚ್ಚಾಗಿರುವ ಕಡೆಯಲ್ಲಿ ಬಾಳೇಗಿಡ ಬೆಳೆಯುವ ಕಾರಣ, ನೀರಿಲ್ಲದ ಪ್ರದೇಶಗಳಲ್ಲಿ ಬಾಳೆಯ ಎಲೆಯ ಬದಲಾಗಿ ಬಳಸುವ ಎಲೆಯೇ. ಮುತ್ತುಗದ ಎಲೆ. ಕೇವಲ ಊಟದ ಎಲೆಗಷ್ಟೇ ಅಲ್ಲದೇ, ಪೂಜೆ ಪುನಸ್ಕಾರ ಮತ್ತು ಆಯುರ್ವೇದದಲ್ಲಿ ಹಲವು ಔಷಧಿಗಳಿಗೆ ಬಳಸುವ ಈ ಮರಕ್ಕೆ ಕನ್ನಡದಲ್ಲಿ ಮುತ್ತುಗ, ಸಂಸ್ಕೃತದಲ್ಲಿ ಪಾಲಾಶ ಮತ್ತು ತಮಿಳಿನಲ್ಲಿ ಮುರಕ ಎಲೆ, ತೆಲುಗಿನಲ್ಲಿ ಮೋದುಗ, ಮಲಯಾಳಂನಲ್ಲಿ ಮುರಿಕು ಎಂಬ ಹೆಸರಿದ್ದರೆ, ಸಸ್ಯಶಾಸ್ತ್ರದ ಪ್ರಕಾರ ಇದಕ್ಕೆ ಬ್ಯುಟಿಯಾ ಮಾನೊಸ್ಪರ್ಮ ಎನ್ನುತ್ತಾರೆ, ಮುತ್ತು
ಹಳ್ಳಿಯ ಕಡೆ ಹೆಂಗಸರು ಈ ಎಲೆಗಳನ್ನು ತಂದು ಅವುಗಳನ್ನು ಒಣಗಿಸಿ, ಮಧ್ಯದಲ್ಲಿ ದೊಡ್ಡದಾದ ಎಲೆಯನ್ನುಟ್ಟು ಅದರ ಸುತ್ತಲೂ 5-6 ಎಲೆಗಳನ್ನು ದುಂಡಾಗಿ ಹಂಚಿ ಕಡ್ಡಿಯಲ್ಲಿ ಒಪ್ಪವಾಗಿ ಬೆಸೆದು ಸುಂದರವಾಗಿ ಊಟದ ಎಲೆಗಳನ್ನು ತಯಾರಿಸಿ ಅಟ್ಟದ ಮೇಲೆ ಇಟ್ಟು ಅವಶ್ಯತೆ ಇದ್ದಾಗ ಬಳಸುತ್ತಿದ್ದರು. ಊಟವಾದ ನಂತರ ಉಂಡ ಎಲೆಗಳನ್ನು ತಿಪ್ಪೆಗೆ ಹಾಕಿದರೆ ಕೆಲವೇ ದಿನಗಳಲ್ಲಿ ಅದು ಕಳೆತು ಉತ್ತಮವಾದ ಗೊಬ್ಬರವೂ ಆಗುತ್ತಿತ್ತು.

ಇತ್ತೀಚೆಗೆ ವಾಟ್ಸಾಪ್ ನಲ್ಲಿ ಜರ್ಮನಿಯ ಕಂಪನಿಯು ಎಲೆಯಿಂದ ಮಾಡಿದ ಅತ್ಯಂತ ಪರಿಸರ ಸ್ನೇಹಿ ಊಟದ ತಟ್ಟೆಗಳನ್ನು ಕಂಡುಹಿಡಿದಿದ್ದೇವೆ ಎಂದು ಹೇಳಿಕೊಳ್ಳುವ ಚಿತ್ರವನ್ನು ನೋಡಿದಾಗ, ಸಹಸ್ರಾರು ವರ್ಷಗಳ ಹಿಂದಿನಿಂದಲೂ ನಮ್ಮ ಹಳ್ಳಿಗಳಲ್ಲಿ ಬಳಸುತ್ತಿದ್ದ ಈ ಎಲೆ ಆಧುನಿಕತೆ ಹೆಸರಿನಲ್ಲಿ ಸ್ಟೀಲ್, ಗಾಜು, ಪಿಂಗಾಣಿ ಮತ್ತು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸುವ ಮೂಲಕ ಮುತ್ತುಗದ ಎಲೆಯನ್ನು ಬಳಸುವುದುದನ್ನು ಸಂಪೂರ್ಣವಾಗಿ ತ್ಯಜಿಸಿದ್ದರ ಬಗ್ಗೆ ಬೇಸರ ಆಗಿದ್ದಂತು ಸುಳ್ಳಲ್ಲ.

ಮುತ್ತುಗದ ಎಲೆಯನ್ನು ಹಚ್ಚುವುದೇ ಗ್ರಾಮೀಣ ಭಾಗದ ಹೆಂಗಳೆಯರಿಗೆ ಉಪ ಕಸುಬಾಗಿದ್ದು, ಸಮಯ ಸಿಕ್ಕಾಗ ಮಕ್ಕಳೊಂದಿಗೆ ಹತ್ತಿರದ ಕಾಡಿಗೆ ಹೋಗಿ ಬಲಿತ ಎಲೆಗಳನ್ನು ಕತ್ತರಿಸಿಕೊಂಡು ತಂದು ಎಲೆಗಳ ತುದಿಯನ್ನು ಕತ್ತರಿಸಿ, ಅವುಗಳ ಆಕಾರ ಮತ್ತು ಗಾತ್ರದ ಅನುಗುಣವಾಗಿ ದಬ್ಬಳ ಪೋಣಿಸಿದ ಗೋಣೀದಾರದಲ್ಲಿ ಎಲೆಯ ಪಿಂಡಿಗಳನ್ನು ಮಾಡಿ ಅವುಗಳನ್ನು ಮನೆಯ ಹೆಂಚಿನ ಮೇಲೆ ಚೆನ್ನಾಗಿ ಒಣಗಿಸಿ ಮಾಳಿಗೆ ಇಲ್ಲವೇ ಅಟ್ಟದ ಮೇಲೆ ಎತ್ತಿಡುತ್ತಿದ್ದರು. ಎಲೆಯನ್ನು ಹಚ್ಚುವ ವೇಳೆ ಮಾಳಿಗೆಯಿಂದ ಇಳಿಸಿ ಅಗತ್ಯವಿದ್ದಷ್ಟು ಎಲೆಗಳನ್ನು ಕೆಲ ಕಾಲ ನೀರಲ್ಲಿ ನೆನೆಸಿ ಸೀಳಿದ ಹಂಚೀ ಕಡ್ಡಿಗಳ ಸಹಾಯದಿಂದ ಹಚ್ಚಿದ ನಂತರ ೫೦ ಇಲ್ಲವೇ ೧೦೦ ಎಲೆಗಳನ್ನು ಒಂದರ ಮೇಲೊಂದು ಜೋಡಿಸಿ ಅವುಗಳನ್ನು ಗೋಣಿದಾರ ಇಲ್ಲವೇ ತೆಂಗಿನ ಸೋಗೆಯಿಂದ ಪಿಂಡಿಗಳಂತೆ ಕಟ್ಟಿ ಅದರ ಮೇಲೆ ಬೀಸೋ ಕಲ್ಲು ಇಲ್ಲವೇ ಚಪ್ಪಟೆಯಾಕಾರದ ಭಾರವನ್ನು ಸುಮಾರು 24 ಗಂಟೆಗಳ ಕಾಲ ಹೇರಿಟ್ಟಲ್ಲಿ ಎಲ್ಲಾ ಎಲೆಗಳು ಇಸ್ತ್ರಿ ಮಾಡಿದಂತೆ ಸಪಾಟಾಗುತ್ತಿದ್ದರಿಂದಲೋ ಏನೋ, ಇವುಗಳಿಗೆ ಇಸ್ತ್ರಿ ಎಲೆ ಎಂದೂ ಗ್ರಾಮೀಣ ಭಾಗದಲ್ಲಿ ಕರೆಯುತ್ತಾರೆ. ಹೀಗೆ ಭಾರ ಹೇರದಿದ್ದ ಪಕ್ಷದಲ್ಲಿ ಎಲೆಗಳು ಸುಕ್ಕಾಗಿ ಇಲ್ಲವೇ ಅಂಚು ಮುದುರಿಕೊಂಡು ಬಳಸಲಾಗುವುದಿಲ್ಲ.





