- ರಾಘವೇಂದ್ರ ಅಡಿಗ ಎಚ್ಚೆನ್.
ಪಿಸ್ತೂಲ್' - ಹೀಗೊಂದು ಹೆಸರಿನಲ್ಲಿ ಕನ್ನಡದ ಸಿನಿಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಬೀಕ್ ಮೊಗವೀರ್, ಈ ಬಾರಿ 'ಪಿಸ್ತೂಲ್' ಎಂಬ ಈ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಲು ತಯಾರಿ ಮಾಡಿಕೊಂಡಿದ್ದಾರೆ.
‘ಆತ್ಮ ಸಿನಿಮಾಸ್' ಬ್ಯಾನರಿನಲ್ಲಿ ಪ್ರಬೀಕ್ ಮೊಗವೀರ್ ಕಥೆ, ಚಿತ್ರಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೇದ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ 'ಪಿಸ್ತೂಲ್' ಸಿನಿಮಾದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ 'ಪಿಸ್ತೂಲ್' ಚಿತ್ರದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ 'ಪಿಸ್ತೂಲ್' ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆಯಷ್ಟೇ ಅದರ ಕಥಾವಸ್ತುವೂ ವಿಭಿನ್ನವಾಗಿದೆ ಎಂದು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಪ್ರಬಿಕ್ ಮೊಗವೀರ್ ತಿಳಿಸಿದ್ದಾರೆ.
ಈ ಹಿಂದೆ ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಪ್ರಬಿಕ್ ಮೊಗವೀರ್, ಈ ಚಿತ್ರದಲ್ಲಿ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದ ಅವರು, "ಇದು ಒಂದು ಗನ್ ಮತ್ತು ಆರು ಬುಲೆಟ್‌ಗಳ ಸುತ್ತ ಹೆಣೆಯಲಾದ ಸಸ್ಪೆನ್ಸ್ ಥ್ರಿಲ್ಲರ್" ಎಂದು ಕುತೂಹಲ ಮೂಡಿಸಿದ್ದಾರೆ.

ಪ್ರಬಿಕ್ ಮೊಗವೀರ್ ಈ ಹಿಂದೆ ನಿರ್ದೇಶಿಸಿ ನಿರ್ಮಿಸಿದ್ದ 'ಗಡಿಯಾರ' ಚಿತ್ರ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಬಳಿಕ ನಿರ್ಮಾಣದ ಜೊತೆಗೆ ನಟನೆಯತ್ತ ಹೆಚ್ಚು ಗಮನ ಹರಿಸಿದ ಅವರು 'ತನಿಖೆ', 'ಶಾಂತಿಯನ್ನು ಕಳೆದುಕೊಳ್ಳಬೇಡಿ', 'ನಾಯಿ ಇದೆ ಎಚ್ಚರಿಕೆ!!', 'ಅಸುರನ ಕೈಯಲ್ಲಿ ಪಾರಿಜಾತ' ಹಾಗೂ 'ರಾವೆನ್' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಚಿತ್ರದ ವಿಭಿನ್ನ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಚಿತ್ರದ ಕಥೆ ಮತ್ತು ಚಿತ್ರಕಥೆಯ ಮೇಲಿನ ಅಪಾರ ವಿಶ್ವಾಸದೊಂದಿಗೆ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ. ಅನುಭವಿ ಕಲಾವಿದರೊಂದಿಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದ್ದು, ಉತ್ತಮ ತಾಂತ್ರಿಕ ವರ್ಗ ಚಿತ್ರದ ಮತ್ತೊಂದು ವಿಶೇಷವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪಿಸ್ತೂಲ್' – One Gun. Six Bullets. ಒಂದು ವಿಭಿನ್ನ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್.
ಇನ್ನು ನಟ, ನಿರ್ಮಾಪಕ, ನಿರ್ದೇಶಕ ಪ್ರಬೀಕ್ ಮೊಗವೀರ್ 'ಪಿಸ್ತೂಲ್' ಸಿನಿಮಾ ಹಿಂದಿನ ಸಾರಥಿ. 'ಪಿಸ್ತೂಲ್' ಸಿನಿಮಾಕ್ಕೆ ಕಥೆ ಚಿತ್ರಕಥೆ ಬರೆದಿರುವ ಪ್ರಬೀಕ್ ಮೊಗವೀರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 'ಸ್ಕೂಲ್ ರಾಮಾಯಣ', 'ರಾವೆನ್' ಚಿತ್ರ ನಿರ್ದೇಶನ ಮಾಡಿರುವ ವೇದ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು 'ಪಿಸ್ತೂಲ್' ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಅಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಈ ಚಿತ್ರದಲ್ಲಿ ಹೀರೋ - ಹೀರೋಯಿನ್ ಅಂಥ ಯಾವುದೇ ಪಾತ್ರಗಳಿಲ್ಲ. ಇದರಲ್ಲಿ ಕಥೆಯೇ ಪ್ರಧಾನ ಎನ್ನುವುದು ಚಿತ್ರತಂಡ ಮಾತು. ಒಂದು 'ಪಿಸ್ತೂಲ್'ನಲ್ಲಿ ಆರು ಬುಲೆಟ್‌ಗಳಿರುವಂತೆ, 'ಪಿಸ್ತೂಲ್' ಕಥೆಯಲ್ಲಿ ಆರು ಪಾತ್ರಗಳಿರುತ್ತವೆ. ನಟ ಕಂ ನಿರ್ಮಾಪಕ ಪ್ರಬೀಕ್ ಮೊಗವೀರ್ 'ಪಿಸ್ತೂಲ್' ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದಂತೆ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಪಾತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟರೊಬ್ಬರನ್ನು ಅತಿಥಿ ಕಲಾವಿದರನ್ನಾಗಿ ಕರೆತರುವ ಯೋಚನೆಯೂ ಚಿತ್ರತಂಡಕ್ಕಿದೆ.





