ಕಥೆ - ಭೋಜರಾಜ ಸೊಪ್ಪಿಮಠ
ಅಪ್ಪನ ಕಠಿಣ ಪರಿಶ್ರಮದ ಮಧ್ಯೆ ಹೇಗೋ ನಾನು ವಿದ್ಯಾವಂತನಾಗಿ ಬೆಳೆದೆ. ನವನಾಗರಿಕತೆ ನಡುವೆ ಸಂಸ್ಕಾರ ಮರೆತಂತಾಯಿತು. ಮುಂದೆ ಅಪ್ಪನ ಅಗತ್ಯಗಳಿಗೆ ನನ್ನಿಂದ ಸ್ಪಂದಿಸಲು ಸಾಧ್ಯವಾಯಿತೇ......?
ಸಮಯ ಬೆಳಗ್ಗೆ ಒಂಬತ್ತು ಗಂಟೆಯ ಸಮೀಪ ಆಗುತ್ತಿತ್ತು. ಅವಸರವಾಗಿ ಆಫೀಸಿಗೆ ಹೋಗಲೆಂದು ತಯಾರಾಗುತ್ತಿದ್ದೆ. ಅಷ್ಟರಲ್ಲಾಗಲೇ ಮೊಬೈಲ್ ರಿಂಗಣಿಸಿತು. ಅವಸರದ ಸಮಯದಲ್ಲಿ ಇದೊಂದು ಕಡಿಮೆಯಾಗಿತ್ತು ಎಂದುಕೊಳ್ಳುತ್ತಲೇ ಹೋಗಿ ಮೊಬೈಲ್ ಎತ್ತಿಕೊಂಡೆ. ನೋಡಿದರೆ ಅಣ್ಣ ಫೋನ್ ಮಾಡಿದ್ದ. ಈ ಸಮಯದಲ್ಲಿ ಬೇರೆ ಯಾರೋ ಫೋನ್ ಮಾಡಿದ್ದರೆ, ಆಫೀಸಿಗೆ ಹೋದ ಮೇಲೆ ನಿಧಾನವಾಗಿ ಮಾತನಾಡುತ್ತಿದ್ದೆ. ಆದರೆ ಫೋನ್ ಕರೆ ಬಂದಿದ್ದು ಅಣ್ಣನಿಂದ. ಹಾಗಾಗಿ ಕರೆ ಸ್ವೀಕರಿಸಿ, ``ಹಲೋ....'' ಎಂದೆ. ಅತ್ತ ಕಡೆಯಿಂದ ಅಣ್ಣ ಅಳುತ್ತಲೇ ಮಾತನಾಡಿದ, ``ಶ್ರೀಕಾಂತ್..... ಅಪ್ಪ.... ಅಪ್ಪ.... ತೀರಿ ಹೋದ್ರು,'' ಎಂದು ಅಳುತ್ತಲೇ ಹೇಳಿದ.
``ಯಾವಾಗ.....?'' ನಾನು ಪ್ರಶ್ನಿಸಿದೆ. ಹಾಗೆ ಪ್ರಶ್ನಿಸುವಾಗ ನನ್ನ ಮಾತಿನಲ್ಲಿ ಉದ್ವೇಗವಾಗಲಿ, ನೋವಾಗಲಿ, ಅಳುವಾಗಲಿ, ಆತಂಕವಾಗಲಿ ಹೀಗೆ ಯಾವುದೂ ಇರಲಿಲ್ಲ.
``ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ. ನಿನ್ನೆಯಿಂದಲೇ ಆತನ ಸ್ಥಿತಿ ಬದಲಾಗಿತ್ತು. ಒಂದಿಷ್ಟು ಎಳನೀರು ಕೂಡ ಕುಡಿಯಲಿಲ್ಲ. ಮನೆಯಲ್ಲಿಯೇ ಸೈನ್ ಹಚ್ಚು ಏರ್ಪಾಡು ಮಾಡಿಸಿದ್ದೆ, ಡಾಕ್ಟರ್ ಅಗತ್ಯವಿಲ್ಲವೆಂದರು. ಈಗ ಸ್ವಲ್ಪ ಹೊತ್ತಿನ ಮುಂಚೆ.....'' ಅಣ್ಣನಿಗೆ ಮುಂದೆ ಮಾತನಾಡಲು ಆಗಲಿಲ್ಲ.
``ಸರಿ ನಾನೀಗಲೇ ಬರ್ತಿದ್ದೇನೆ,'' ಎಂದಷ್ಟೇ ಹೇಳಿದೆ.
``ಆಯ್ತು ಬಾ, ನೀನು ಬಂದ ಮೇಲೇನೇ ಅಂತ್ಯಕ್ರಿಯೆ ಯಾವಾಗಾ ಏನು ಎಂದು ಎಲ್ಲಾ ವಿಚಾರ ಮಾಡೋಣ,'' ಎಂದ ಅಣ್ಣ.
``ಆಯ್ತು.....'' ಎಂದು ಹೇಳಿದವನೇ ಆಫೀಸ್ ಗೆ ರಜೆ ಹೇಳಿ, ಹೆಂಡತಿಗೂ ವಿಷಯ ತಿಳಿಸಿ ಊರಿನತ್ತ ಹೋಗಲು ಒಂದು ಕಾರಿಗೆ ವ್ಯವಸ್ಥೆ ಮಾಡಿದೆ. ಕಾರಿನಲ್ಲಿ ಹೋಗುವಾಗಲೇ ದಾರಿಗುಂಟ ಯಾರ್ಯಾರು ಸಂಬಂಧಿಕರಿಗೆ ತಿಳಿಸಬೇಕೋ ಅವರಿಗೆಲ್ಲ ತಿಳಿಸತೊಡಗಿದೆ.
ಅಮ್ಮ ಅಪ್ಪರಿಗೆ ನಾನು, ಅಣ್ಣ ಇಬ್ಬರು ಗಂಡು ಮಕ್ಕಳು, ಜೊತೆಗೆ ಇಬ್ಬರು ಹೆಣ್ಣುಮಕ್ಕಳು. ಅಕ್ಕತಂಗಿಯರಿಬ್ಬರೂ ಗಂಡನ ಮನೆಯಲ್ಲಿ ಚೆನ್ನಾಗಿಯೇ ಇದ್ದರು. ನಮ್ಮದು ಆರ್ಥಿಕವಾಗಿ ಅಷ್ಟೊಂದು ಸುಸ್ಥಿತಿಯಲ್ಲಿ ಇಲ್ಲದ ಮಧ್ಯಮ ವರ್ಗದ ಜೀವನ. ಅಪ್ಪನ ದುಡಿಮೆ ಒಂದರಲ್ಲಿಯೇ ನಾಲ್ಕು ಜನ ಮಕ್ಕಳ ಜೀವನ ನಡೆಯುತ್ತಿದ್ದುದರಿಂದ ಹೆಚ್ಚಿನ ಆಡಂಬರವೇನೂ ನಮ್ಮಲ್ಲಿ ಇರಲಿಲ್ಲ.
ಏಕೆಂದರೆ ದುಡಿದದ್ದು ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು. ಅಣ್ಣ ಎಲ್ಲರಿಗಿಂತ ಹಿರಿಯನಾಗಿದ್ದರಿಂದ ಊರಲ್ಲಿನ ಪ್ರಾಥಮಿಕ ಶಾಲೆ ಮತ್ತು ಪಕ್ಕದೂರಿನಲ್ಲಿನ ಪ್ರೌಡಶಾಲೆ ಶಿಕ್ಷಣ ಮುಗಿಸಿ ಅಪ್ಪನ ಜೊತೆಯಲ್ಲಿ ಕೃಷಿ ಚಟುವಟಿಕೆಗೆ ಸಹಾಯಕನಾಗಿ ನಿಂತ. ಹೆಣ್ಣುಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ಮುಗಿಸುತ್ತಲೇ ಅಮ್ಮ ಹೊಲದ ಮತ್ತು ಮನೆಯ ಎಲ್ಲಾ ಕೆಲಸಗಳನ್ನು ಕಲಿಸತೊಡಗಿದಳು. ಒಳ್ಳೆಯ ಸಂಬಂಧ ಕಂಡ ಕೂಡಲೇ ಮದುವೆ ಕೂಡ ಮಾಡಿಬಿಟ್ಟರು.
ನಾನು ಕಿರಿಯ ಮಗನೆಂಬ ಮಮಕಾರವೇ, ಮುಂದುವರಿದು ಓದುತ್ತಿರುವ ಈ ಜಗದ ಬದಲಾವಣೆಯನ್ನು ಅಪ್ಪ ಅರ್ಥ ಮಾಡಿಕೊಂಡನೋ ಅಥವಾ ಮುಂದೆ ನಾನಿನ್ನೂ ಓದಬೇಕು ಎಂದು ಹಠ ಮಾಡಿದ ನನ್ನ ಮಾತಿಗೆ ಕಟ್ಟುಬಿದ್ದನೋ ಒಟ್ಟಿನಲ್ಲಿ ನನ್ನನ್ನು ಮುಂದೆ ಓದಲು ಕಾಲೇಜಿಗೆ ಕಳಿಸಿದ. ಆ ಸಮಯದಲ್ಲಿ ನನಗೂ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಚೆನ್ನಾಗಿ ಓದಿದೆ. ಡಿಗ್ರಿ ಮುಗಿಯಿತು. ಸರ್ಕಾರದಿಂದ ನಡೆಸುವ ಪರೀಕ್ಷೆ ಬರೆದೆ. ಕಂದಾಯ ಇಲಾಖೆಯಲ್ಲಿ ಮ್ಯಾನೇಜರ್ ಹುದ್ದೆ ಸಿಕ್ಕಿತು. ಮನೆಗೆ ಬಂದು ಹೇಳಿದಾಗ ಅಪ್ಪನ ಕಂಗಳಲ್ಲಿ ಹೊಳಪು ಮೂಡಿತು.





