ಕಥೆ – ಆಶ್ರಿತಾ ಕಿರಣ್
ಗೃಹಿಣಿಯ ಕೆಲಸ ಎಂದೂ ಮುಗಿಯುವಂಥದ್ದಲ್ಲ. ಇಷ್ಟೆಲ್ಲಾ ಕಷ್ಟದ ಪರಿಪಾಟಲನ್ನು ಅವಳು ಯಾರಿಗಾಗಿ ಮಾಡುತ್ತಾಳೆ? ತನ್ನ ಸಂಸಾರದ ಜವಾಬ್ದಾರಿ ಹೊತ್ತವಳಿಗೆ ಇತರರ ಮಾತಿಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿದೆಯೇ….?
ರಾತ್ರಿಯ ಊಟದ ನಂತರ ಮಿಕ್ಕಿರುವ ಅಡುಗೆ ಕೆಡದಂತೆ ಅದನ್ನು ಒಲೆಯ ಮೇಲಿಟ್ಟು ಕುದಿಸಿ, ಕುದಿಸಲು ಬಾರದೆ ಇರುವುದನ್ನು ಅಡುಗೆಮನೆಯ ಒಂದು ಮೂಲೆಯನ್ನು ಅಲಂಕರಿಸಿದ ತಂಗಳ ಪೆಟ್ಟಿಗೆಯಲ್ಲಿಟ್ಟು, ಅಡುಗೆಮನೆಯಲ್ಲಿ ಅಕ್ಷಯ ಪಾತ್ರೆಯಂತಿರುವ ಸಿಂಕ್ ನಲ್ಲಿ ಇರುವ ಪಾತ್ರೆಗಳನ್ನು ತೊಳೆದು, ಅಡುಗೆಮನೆಯ ದಂಡೆಯನ್ನು ಶುಚಿಗೊಳಿಸಿ ಹಸಿ ಕಸ, ಒಣ ಕಸವನ್ನು ಬೇರೆ ಮಾಡಿ ಅದನ್ನು ಮುಂಜಾನೆ ಬರುವ ಕಸ ಒಯ್ಯುವ ಲಾರಿಗೆ ಹಾಕಲು ಸಿದ್ಧ ಮಾಡಿ, ಮನೆಯ ಹಿಂದಿನ ಬಾಗಿಲನ್ನು ಭದ್ರಪಡಿಸಿ, ಕೈಯಲ್ಲಿ ಒಂದು ಲೋಟ ಬಿಸಿ ನೀರನ್ನು ಹಿಡಿದು ಕುಳಿತಳು.
ಗೋಡೆಯ ಮೇಲಿದ್ದ ಗಡಿಯಾರ ನೋಡಿದಳು. ಸಮಯ ಹನ್ನೊಂದು ದಾಟಿದ್ದನ್ನು ನೋಡಿ ಕಣ್ಣುಮುಚ್ಚಿ ದೀರ್ಘ ಉಸಿರನ್ನು ಎಳೆದುಕೊಂಡು ಹೊರದಬ್ಬಿದಳು. ಮುಂಜಾನೆಯಿಂದ ತನಗಾಗಿ ಏನನ್ನೂ ಮಾಡಿಕೊಳ್ಳದೆ ತನ್ನ ಗಂಡ, ಮಕ್ಕಳು, ಮನೆಗಾಗಿ ದುಡಿದಳು ದಣಿದಿದ್ದಳು. ಆ ದಣಿವಿನಲ್ಲೂ ಒಂದು ರೀತಿಯ ತೃಪ್ತಿಯನ್ನು ಕಾಣುತ್ತಿದ್ದವಳ ಮನಸ್ಸು ಅಂದು ಕೊಂಚ ನೊಂದಿತ್ತು.
ಮನೆಗೆ ಬಂದ ಸಂಬಂಧಿಕರು, “ನೀನು ತುಂಬಾ ಲಕ್ಕಿ ಕಣೇ. ಆರಾಮವಾಗಿ ಮನೆಯಲ್ಲಿ ಬೇಕಾಗಿದ್ದನ್ನು ಮಾಡಿಕೊಂಡು ನಿನಗೆ ಯಾವಾಗ ಬೇಕೋ ಆಗ ಮನೆಯ ಕೆಲಸ ಮುಗಿಸಿ ಕೂರಬಹುದು. ನಮಗೆ ಆಫೀಸ್ ಕೆಲಸಕ್ಕೆ ಹೋಗುವುದರೊಳಗೆ ಎಲ್ಲಾ ಮುಗಿಸಬೇಕು. ಹೊರಗೂ ಕೆಲಸ ಒಳಗೂ ಕೆಲಸ. ನಿನ್ನಷ್ಟು ಸಮಯ ನಮಗೆ ಸಿಕ್ಕಲ್ಲ. ನಮಗೆ ಬೇಕಾದ ಹಾಗೆ ಅಡುಗೆ ತಿಂಡಿ ಮಾಡಿಕೊಳ್ಳುವ ಸಮಯ ನಮಗೆ ಇರಲ್ಲ,” ಎನ್ನುತ್ತಾ ಕೈ ಕೈ ಹೊಡೆದುಕೊಂಡು ನಕ್ಕವರ ಮುಖಗಳು ನೆನಪಾದವು.
ಅವಳ ಮನದಲ್ಲಿ ಒಂದು ಪ್ರಶ್ನೆ ಮೂಡಿತು. ಕಳೆದ ಹತ್ತು ವರ್ಷಗಳಿಂದ ನಾನು ನನ್ನ ಸಂಸಾರಕ್ಕಾಗಿ, ಸಂಸಾರದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ನನ್ನ ನೆಚ್ಚಿನ ವೃತ್ತಿಯನ್ನು ಬಿಟ್ಟು ಸಂಪೂರ್ಣವಾಗಿ ಮನೆಯನ್ನು ನಿಭಾಯಿಸಲು ಮುಂದಾಗಿರುವೆ. ಇಷ್ಟು ವರ್ಷಗಳಲ್ಲಿ ಒಂದು ದಿನ ನನಗೆ ಇಷ್ಟ ಎಂದು ಯಾವುದನ್ನು ಮಾಡಿದ್ದೇನೆ ಎನ್ನುವುದು ಅವಳನ್ನು ಬಹಳವಾಗಿ ಕಾಡಿತು.
“ಅಮ್ಮ ಕೋಸುಗಡ್ಡೆ ಪಲ್ಯ ಮಾಡು,” ಎಂದು ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತಿನ್ನುತ್ತಿದ್ದವಳಿಗೆ ಇಂದು ಕೋಸುಗಡ್ಡೆ ಪಲ್ಯದ ರುಚಿಯೇ ಮರೆತುಹೋಗಿದೆ. ಗಂಡನಿಗೆ ಅದನ್ನು ತಿಂದರೆ ಗ್ಯಾಸ್ಟ್ರಿಕ್ ಜಾಸ್ತಿಯಾಗುತ್ತದೆ ಎಂದು ಕೋಸು ತರುವುದನ್ನು ನಿಲ್ಲಿಸಿರುವುದು ನೆನಪಾಯಿತು. ಖಾರದ ಅಡುಗೆಯನ್ನು ಚಪ್ಪರಿಸಿ ತಿನ್ನುತ್ತಿದ್ದವಳು ಮಕ್ಕಳಿಗೆ ಖಾರವಾಗಬಾರದು ಎನ್ನುವ ದೃಷ್ಟಿಯಿಂದ ಅಡುಗೆಗೆ ಖಾರ ಕಡಿಮೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿರುವುದನ್ನು ನೆನೆದಳು.
ಸಿಹಿ ಖಾದ್ಯಗಳನ್ನು ಮಾಡಿದರೆ ಮನೆಯಲ್ಲಿ ಅತ್ತೆ ಮಾವನಿಗೆ ತಿನ್ನುವ ಆಸೆ ಆಗಬಹುದು, ತಿಂದರೆ ಶುಗರ್ ಜಾಸ್ತಿ ಆಗಬಹುದು ಎಂದು ಸಿಹಿ ಖ್ಯಾದಗಳನ್ನು ಆದಷ್ಟು ಕಡಿಮೆ ಮಾಡುವುದನ್ನು ನೆನೆದಳು. ಮುಂಜಾನೆ ತಡವಾಗಿ ಏಳುತ್ತಿದ್ದವಳು ಬೇಗ ಏಳುವುದನ್ನು, ತಡರಾತ್ರಿ ಮಲಗುವುದನ್ನು, ತನಗೆ ಬೇಕಾದ ಹಾಗೆ ಮಾಡಿಸಿ ತಿನ್ನುವುದನ್ನು ಸಂಪೂರ್ಣವಾಗಿ ಮರೆತಿದ್ದನ್ನು ನೆನೆದು ಭಾವುಕಳಾದಳು. ತನ್ನ ಬಾಲ್ಯದ ದಿನಗಳನ್ನು ನೆನೆದಳು.
ಅಮ್ಮನ ಪ್ರೀತಿಯ ಅಪ್ಪನ ಮುದ್ದಿನ ಮಗಳಾಗಿದ್ದವಳಿಗೆ ಓದಿನಲ್ಲಿ ತುಂಬಾ ಆಸಕ್ತಿ ಇತ್ತು. ಅಪ್ಪ ಕಷ್ಟಪಟ್ಟು ದುಡಿಯುವುದನ್ನು ತಪ್ಪಿಸಲು ತಾನು ಓದಿ ಕೆಲಸಕ್ಕೆ ಸೇರಬೇಕೆಂದು ಯೋಚಿಸಿ ಆಸಕ್ತಿಯಿಂದ ಓದಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಪದವಿಯನ್ನು ಪಡೆಯಲು ಹಳ್ಳಿ ಬಿಟ್ಟು ಪಟ್ಟಣ ಸೇರಿ ಹೊಂದಿಕೊಳ್ಳಲು ಪರದಾಡಿ ಹೇಗೋ ಓದು ಮುಗಿಸಿ, ಒಳ್ಳೆಯ ಅಂಕಗಳನ್ನು ಗಳಿಸಿ ಒಳ್ಳೆಯ ಉದ್ಯೋಗ ಪಡೆಯಲು ಪರದಾಡಿದ ದಿನಗಳನ್ನು ನೆನೆಯುತ್ತಿದ್ದವಳ ಕಂಗಳು ತುಂಬಿತು. ಯಾರ ಅಪ್ಪಣೆಯನ್ನು ಕೇಳದೆ ಕಣ್ಣೀರು ಕೆನ್ನೆಯ ಮೇಲೆ ಜಾರಿತು.
ಕೆಲಸಕ್ಕಾಗಿ ಅಲೆದಾಡಿ ಒಳ್ಳೆಯ ಕಂಪನಿಗೆ ಸೇರಿ ಒಂದು ವರ್ಷ ಕಳೆದಾಗ ಇನ್ನೊಂದಿಷ್ಟು ವರ್ಷ ಕೆಲಸ ಮಾಡಿ ಕೈ ತುಂಬಾ ದುಡಿಯಬೇಕು ಎನ್ನುವಷ್ಟರಲ್ಲಿ ಮದುವೆಯ ಮಾತುಕತೆ ಮನೆಯಲ್ಲಿ ಆರಂಭವಾಗಿರುವುದನ್ನು ಗಮನಿಸಿ ತಡೆಯುವ ಪ್ರಯತ್ನ ಮಾಡಿ ಸೋತಳು. ಮನೆಯವರ ಮಾತಿಗೆ ಬೆಲೆ ಕೊಟ್ಟು ಮದುವೆಯಾದಳು. ಎಲ್ಲರ ದೃಷ್ಟಿಯಲ್ಲಿ ಆರಾಮವಾಗಿ ತಿಂದುಂಡು ಮನೆಯಲ್ಲಿ ಕಾಲಹರಣ ಮಾಡುತ್ತಿರುವಂತೆ ಕಾಣಿಸಿತೇ ಹೊರತು ಮನದ ಆಸೆ ಕಾಣದೇ ಹೋಯಿತಲ್ಲ ಎಂದು ದುಃಖಿಸಿದಳು.
ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಕ್ಷಣದಿಂದ ಎಲ್ಲರ ಇಷ್ಟ ಕಷ್ಟಗಳನ್ನು ಅರಿತು ಹಗಲು ರಾತ್ರಿ ದುಡಿದು ಏನು ಲಭಿಸಿತು ಎಂದು ಯೋಚಿಸಿದಳು….!
ಎಲ್ಲರ ಇಚ್ಛೆಗಳನ್ನು ಈಡೇರಿಸಲು ಕಾಮಧೇನುವಾದೆ. ಆದರೆ ನನಗೆ ಸಿಕ್ಕಿದ್ದೇನು….? ಆರಾಮವಾಗಿ ಇದ್ದಿ ಎನ್ನುವ ಬಿರುದೇ….? ನನ್ನ ತ್ಯಾಗಕ್ಕೆ ಬೆಲೆ ಇಲ್ಲವೇ ಎಂದು ಯೋಚಿಸುತ್ತಿದ್ದಳು ನನ್ನನ್ನು ಬದಲಾಗಲು ಹೇಳಿದವರು ಯಾರು? ಈ ಆಯ್ಕೆ ನನ್ನದೇ ಅಲ್ಲವೇ? ನನ್ನವರಿಗಾಗಿ ನಾನೇ ಈ ನಿರ್ಧಾರ ತೆಗೆದುಕೊಂಡೆನಲ್ಲವೇ….? ನನ್ನ ನಿರ್ಧಾರದ ಬಗ್ಗೆ ನಾನೇ ಪಶ್ಚಾತ್ತಾಪಪಟ್ಟರೆ ಬೇರೆಯವರು ಗೌರವ ಕೊಡಲು ಸಾಧ್ಯವೇ? ಹೇಳುವವರು ಹೇಗಿದ್ದರೂ ಹೇಳುತ್ತಾರೆ. ನನ್ನ ನಿಲುವಿಗೆ ನಾನೇಕೆ ದುಃಖಿಸಲಿ…? ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. ಬದಲಾಗಿ ನಾನು ನನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದೇನೆ.
ಮನೆ ಕೆಲಸದಂತಹ ನಿರಂತರ ಕೆಲಸವನ್ನು, ಯಾವ ಅಪೇಕ್ಷೆ ಇಲ್ಲದೆ ಮಾಡುತ್ತಿರುವ ನನಗೆ ನನ್ನ ಕುಟಂಬದ ಮನಶ್ಶಾಂತಿ ಕಾಪಾಡುವ ದೊಡ್ಡ ಹೊಣೆ ಇದೆ. ನಾನು ನಗುತ್ತಿದ್ದರೆ ಈ ಮನೆ, ಇಲ್ಲಿನ ಮನಗಳು ನೆಮ್ಮದಿಯಾಗಿ ಸಂತೋಷದಿಂದ ಇರುತ್ತಾರೆ. ನನ್ನ ಒತ್ತಡ ಇಡೀ ಸಂಸಾರದ ನೆಮ್ಮದಿಯನ್ನು ಕಿತ್ತುಕೊಳ್ಳಬಹುದು. ನನ್ನ ಸಂಸಾರದ ಸಂತೋಷದ ಕೀಲಿಕೈ ನನ್ನ ಕೈಯಲ್ಲಿದೆ ಎಂದ ಮೇಲೆ ನಾನೇಕೆ ಕೊರಗಲಿ ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುವ ವೇಳೆಗೆ ಅವಳ ಭುಜವನ್ನು ಯಾರೋ ಮುಟ್ಟಿದ ಅನುಭವವಾಗಿ ಕಣ್ಣು ತೆರೆದಳು.
“ಯಾಕೆ…. ಹೀಗೆ ಕೂತಿದ್ದಿ…. ಆರಾಮ ಇಲ್ವಾ….?” ಎಂದು ಕಾಳಜಿಯಿಂದ ಹಣೆಯನ್ನು ಮುಟ್ಟಿ ನೋಡಿದ ಪತಿಯ ಸ್ಪರ್ಶ ಅವಳ ಆಲೋಚನೆಗಳನ್ನು ದೂರ ತಳ್ಳಿತು.
“ಲೇಟ್ ಆಗಿದೆ ಹೋಗಿ ಮಲಗು. ಬೆಳಗ್ಗೆಯಿಂದ ಕೆಲಸ ಮಾಡಿ ತುಂಬಾ ಸುಸ್ತಾಗಿದ್ದಿ…. ಬೆಳಗ್ಗೆ ಬೇಗ ಏಳ್ತಿ…. ನಿದ್ದೆ ಸಾಕಾಗಲಿಲ್ಲ ಅಂದ್ರೆ ಆರೋಗ್ಯ ಕೆಡುತ್ತೆ…..” ಎಂದು ಮುಗುಳ್ನಗೆ ಬೀರಿದ ಪತಿಯನ್ನು ನೋಡುತ್ತಾ ನಾನು ಮಾಡುವ ಕೆಲಸಗಳ ಬೆಲೆ ನನ್ನವರಿಗೆ ತಿಳಿದಿದೆಯಲ್ಲಾ ಅಷ್ಟು ಸಾಕು. ಎಷ್ಟೋ ಹೆಣ್ಣುಮಕ್ಕಳಿಗೆ ಈ ಭಾಗ್ಯ ಸಹ ಇರುವುದಿಲ್ಲ ಎನ್ನುವುದನ್ನು ನೆನೆಯುತ್ತಾ ಎದ್ದು ಒಳನಡೆದಳು.
ಹಾಸಿಗೆ ಮೇಲೆ ಮಲಗಿದಳು ಬೆಳಗ್ಗೆ ಏನು ತಿಂಡಿ ಮಾಡುವುದು…? ಮಕ್ಕಳ ಬಾಕ್ಸ್ ಗೆ ಏನು ಕೊಡುವುದು ಎಂದು ಯೋಚಿಸುತ್ತಾ ನಿದ್ರೆಗೆ ಜಾರಿದಳು. ಅವಳ ದಿನಚರಿಯಲ್ಲಿ ಅವಳಿಗೆಂದು ಸಮಯ ಮೀಸಲಿಡಲು ಮರೆತವಳಿಗೆ ಕೇಳಿದ ಮಾತುಗಳನ್ನು ಮರೆಯುವುದು ಕೊಂಚ ಕಷ್ಟವೇ…. ಆದರೆ ಮರೆಯಲು ಪ್ರಯತ್ನಿಸಿ ಸಂಬಳ ನಿರೀಕ್ಷಿಸದೆ ತನ್ನ ಮನೆಯವರಿಗಾಗಿ ದುಡಿಯುತ್ತಾಳೆ, ತನ್ನವರಿಗಾಗಿ ಬದುಕುತ್ತಾಳೆ!





