ಜೈನ ಧರ್ಮದ ಪರಮ ಪವಿತ್ರ ಹಾಗೂ ಅಧ್ಯಾತ್ಮಿಕ ಮಹತ್ವದ ಹಬ್ಬವಾದ ದಶಲಕ್ಷಣ ಪರ್ವ (ಪರ್ಯೂಷಣ ಮಹಾಪರ್ವ) ಸೆಪ್ಟೆಂಬರ್ 15ರಿಂದ ಆರಂಭವಾಗುತ್ತಿದೆ. ಆತ್ಮಶುದ್ಧಿ, ತಪಸ್ಸು ಮತ್ತು ಕ್ಷಮೆಯಾಚನೆಗೆ ಮೀಸಲಾಗಿರುವ ಈ ಹತ್ತು ದಿನಗಳು ಜೈನ ಸಮುದಾಯದವರ ಪಾಲಿಗೆ ಅತ್ಯಂತ ನಿತ್ಯನೂತನ ಮತ್ತು ಸ್ಮರಣೀಯ ಆಚರಣೆಯಾಗಿದೆ.
ದಶಲಕ್ಷಣ ಪರ್ವ : 1. ಉತ್ತಮ ಕ್ಷಮಾ
ಕ್ಷಮೆ: ಜೀವನದ ಸುಂದರ ದಾರಿ
“ಕ್ಷಮೆಯೇ ದೊಡ್ಡ ತಪಸ್ಸು.” ಭಾರತೀಯ ಸಂಸ್ಕೃತಿಯಲ್ಲಿ ಕ್ಷಮೆಗೆ ಅತ್ಯುನ್ನತ ಸ್ಥಾನವಿದೆ. ‘ಉತ್ತಮ ಕ್ಷಮಾ’ ಎಂದರೆ ಕೇವಲ ಕ್ಷಮಿಸುವುದು ಎಂದಷ್ಟೇ ಅಲ್ಲ, ಮನಸ್ಸಿನಲ್ಲಿ ಯಾವುದೇ ಕೋಪ ಅಥವಾ ದ್ವೇಷ ವಿಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಸ್ವೀಕರಿಸುವುದು.
ಕ್ಷಮಾಗುಣದ ಮಹತ್ವ
ಕೋಪವೇ ನಮ್ಮ ಶತ್ರು: ಕೋಪವು ನಮ್ಮ ಆಂತರಿಕ ಶಾಂತಿಯನ್ನು ಕೆಡಿಸುತ್ತದೆ. ಇದರಿಂದ ನಷ್ಟವಾಗುವುದು ನಮಗೇ ಹೊರತು ಎದುರಾಳಿಗಲ್ಲ.
ಮನಸ್ಸಿಗೆ ನೆಮ್ಮದಿ: ಕೋಪ ಬಿಟ್ಟು ಕ್ಷಮೆಯನ್ನು ಅಳವಡಿಸಿ ಕೊಂಡರೆ ಮನಸ್ಸು ಹಗುರವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು.
ಗಟ್ಟಿಯಾದ ಸಂಬಂಧಗಳು: ತಪ್ಪುಗಳು ಯಾರಿಂದಲೂ ಆಗಬಹುದು. ಕ್ಷಮಿಸುವ ಗುಣವಿದ್ದರೆ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುತ್ತವೆ.
ಕ್ಷಮಾಗುಣವನ್ನು ರೂಢಿಸಿಕೊಳ್ಳುವುದು ಹೇಗೆ?
ಆತ್ಮಾವಲೋಕನ: ಮತ್ತೊಬ್ಬರ ತಪ್ಪುಗಳನ್ನು ಹುಡುಕುವ ಬದಲು, ಮೊದಲು ನಮ್ಮ ತಪ್ಪುಗಳನ್ನು ಅರಿಯುವ ವಿನಮ್ರತೆ ಇರಲಿ.
ಸಹಾನುಭೂತಿ: ಎದುರಿನವರು ಆ ಪರಿಸ್ಥಿತಿಯಲ್ಲಿ ಯಾಕೆ ಹಾಗೆ ವರ್ತಿಸಿದರು ಎಂದು ಅವರ ದೃಷ್ಟಿಯಿಂದ ಅರ್ಥಮಾಡಿಕೊಳ್ಳಿ.
ಧ್ಯಾನ ಮತ್ತು ಯೋಗ: ಮನಸ್ಸನ್ನು ಶಾಂತವಾಗಿಡಲು ಧ್ಯಾನ ಹಾಗೂ ಪ್ರಾಣಾಯಾಮ ಬಹಳ ಸಹಕಾರಿ.
“ಬಲಶಾಲಿಗಳು ಮಾತ್ರ ಕ್ಷಮೆಯನ್ನು
ಆಯುಧವನ್ನಾಗಿ ಬಳಸಬಲ್ಲರು.”
“ಕ್ಷಮೆಯು ದೌರ್ಬಲ್ಯವಲ್ಲ, ಅದು ನಮ್ಮ ನೈತಿಕ ಬಲ ಮತ್ತು ಧೈರ್ಯದ ಸಂಕೇತ. ಕೋಪವನ್ನು ಗೆದ್ದು, ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದೇ ಜೀವನದ ನಿಜವಾದ ಸಾರ್ಥಕತೆ.”
ಪ್ರಸ್ತುತಿ: ಅಶೋಕ ಚಿಕ್ಕಪರಪ್ಪಾ,
ಪತ್ರಕರ್ತ, ಅನುವಾದಕ





