ತೇಜಸ್ವಿನಿ ಶರ್ಮ
ಒಂದೊಳ್ಳೆ ಬ್ರೇಕ್ ನ ನಿರೀಕ್ಷೆಯಲ್ಲಿ ಕನ್ನಡದ ಭರವಸೆಯ ನಟಿ ತೇಜಸ್ವಿನಿ ಶರ್ಮ ತಮ್ಮ ಕುರಿತು ಹೇಳಿರುವುದೇನು...?
ನಟಿ ತೇಜಸ್ವಿನಿ ಶರ್ಮ ತಮ್ಮ ಸೌಂದರ್ಯ, ಪ್ರತಿಭೆ ಎರಡರಿಂದಲೂ ಗಮನ ಸೆಳೆದರು. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮ ನಟಿಸಿದ್ದು ಒಂದೊಳ್ಳೆ ಬ್ರೇಕ್ ನ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗುವ ಪ್ರಯತ್ನದಲ್ಲಿರುವ ತೇಜಸ್ವಿನಿ ಶರ್ಮ ಮೂಲತಃ ಕೊಡಗಿನವರು. ಲಿಖಿತ್ ಶೆಟ್ಟಿ ಅಭಿನಯದ `ಫುಲ್ ಮೀಲ್ಸ್' ಸಿನಿಮಾದಲ್ಲಿ ತೇಜಸ್ವಿನಿ ಶರ್ಮ ನಾಯಕಿಯಾಗಿದ್ದರು. ಇದಕ್ಕೆ ಮುನ್ನ ಪ್ರಮೋದ್ ಜೊತೆ `ಇಂಗ್ಲಿಷ್ ಮಂಜ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಮಾಡರ್ನ್, ಸಾಂಪ್ರದಾಯಿಕ ಎರಡೂ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಈ ನಟಿ ತಮ್ಮ ಸೋಶಿಯಲ್ ಮೀಡಿಯಾದಿಂದಲೂ ಸಾಕಷ್ಟು ಜನಪ್ರಿಯರಾಗಿದ್ದಾರೆ. `ಫುಲ್ ಮೀಲ್ಸ್' ಸಿನಿಮಾದಲ್ಲಿನ ಇವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಇಂತಹ ನಟಿ ತಮ್ಮ ಅನುಭವದ ಜೊತೆಗೆ ಮುಂದಿನ ಭವಿಷ್ಯದ ಕನಸಿನ ಕುರಿತಂತೆ `ಗೃಹಶೋಭಾ' ಜೊತೆಗೆ ಮಾತನಾಡಿದ್ದು ಅವರ ಮಾತುಕಥೆ ಸಾರಾಂಶ ಇಲ್ಲಿದೆ.
ಬಾಲ್ಯ ವಿದ್ಯಾಭ್ಯಾಸ
ತೇಜಸ್ವಿನಿ ಶರ್ಮ ತಮ್ಮ ಬಾಲ್ಯ ಹಾಗೂ ವಿದ್ಯಾಭ್ಯಾಸದ ಬಗೆಗೆ ಮಾತನಾಡುತ್ತಾ, ``ನಾನು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿ, ನನ್ನ ತಾಯಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕುಟುಂಬದವರು. ನಾನು ಕೊಡಗಿನ ಸೇಂಟ್ ಜೋಸೆಫ್ ಸ್ಕೂಲ್ ನಲ್ಲಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾಭ್ಯಾಸ ನಡೆಸಿದೆ. ಓದುವುದು ಎಂದರೆ ನನಗೆ ಬಹಳ ಇಷ್ಟವಿತ್ತು. ನಾನು ಹತ್ತನೇ ತರಗತಿ ಹಾಗೂ ಪಿಯುಸಿಗಳಲ್ಲಿ ಟಾಪರ್ ಆಗಿದ್ದೆ. ಆ ನಂತರ ನಾನು ಎಂಜಿನಿಯರಿಂಗ್ ಮಾಡಿದೆ.
``ಬಾಲ್ಯದಲ್ಲಿ ಕೆಲವು ವರ್ಷ ನೃತ್ಯಾಭ್ಯಾಸ ಸಹ ನಡೆಸಿದ್ದು, ಮಂಗಳೂರಿನ ಒಂದು ಸಂಸ್ಥೆಯಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದೆ. ಬಳಿಕ ನಾನೇ ನೋಡಿ ನೋಡಿ ನೃತ್ಯಭ್ಯಾಸ ಮಾಡಿದೆ. ಎಂಜಿನಿಯರಿಂಗ್ ಮಾಡುವ ಸಮಯದಲ್ಲಿ ನಾನು ಬ್ಯಾಕ್ ಸ್ಟೇಜ್ ಕೆಲಸಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿದ್ದೆ. ಜೊತೆಗೆ ಸ್ಟೀಲರ್ಸ್ ಎಂಬ ಡ್ಯಾನ್ಸ್ ಟೀಂ ಒಂದನ್ನು ಕಟ್ಟಿಕೊಂಡು ನೃತ್ಯ ಪ್ರದರ್ಶನ ಹಾಗೂ ಸಣ್ಣ ಸಣ್ಣ ಕಿರು ನಾಟಕ ಪ್ರದರ್ಶನ ಕೊಡುತ್ತಲಿದ್ದೆ,'' ಎಂದರು.

ವರ್ಲ್ಡ್ ಸೂಪರ್ ಮಾಡೆಲ್
ಇದಾದ ನಂತರ ಎರಡು ವರ್ಷ ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ತೇಜಸ್ವಿನಿ ಬಳಿಕ ಅಲ್ಲಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ನಂತರ ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷ್ಯಾ-2017ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
ಚಿತ್ರರಂಗಕ್ಕೆ ಬರುವ ಕುರಿತು
ತಾವು ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಪ್ರಾರಂಭಿಸಿದುದರ ಕುರಿತು ಹೇಳಿದ ನಟಿ, ``ಬಾಲ್ಯದಲ್ಲಿ ನನಗೆ ನಾನು ಚಿತ್ರರಂಗಕ್ಕೆ ಬರುವ ಕುರಿತು ಯಾವ ಕನಸೂ ಇರಲಿಲ್ಲ. ನನ್ನ ತಂದೆ ಒಬ್ಬ ರಂಗಭೂಮಿ ಕಲಾವಿದರಾಗಿದ್ದರು ಎನ್ನುವುದು ಬಿಟ್ಟರೆ, ನಾನು ಚಿತ್ರಗಳಲ್ಲಿ ಅಭಿನಯಿಸುವ ಕಲ್ಪನೆ ಇರಲಿಲ್ಲ. ``ನನಗೆ ಪೊಲೀಸ್ ಅಧಿಕಾರಿ ಆಗಬೇಕೆಂದು ಆಸೆ ಇತ್ತು. ಇದೊಂದು ಡೆಸ್ಟಿನಿ ಎನ್ನಬಹುದು. ಒಮ್ಮೆ ಕ್ಯಾಮೆರಾ ಮುಂದೆ ಬಂದಾಗ ನನಗೆ ಇದು ನನ್ನ ಕ್ಷೇತ್ರ ಎನ್ನುವ ಸ್ಪಷ್ಟತೆ ಸಿಕ್ಕಿತು. ಹಾಗಾಗಿ ಇಲ್ಲಿಯೇ ಮುಂದುವರಿದಿದ್ದೇನೆ.





