ಮಕ್ಕಳ ಕೈಹಿಡಿದು ನಡೆಸುವ ಸ್ವಚ್ಛತಾ ದೀಪ: ‘ಸ್ವಚ್ಛಮೇವ ಜಯತೆ’ ವಿಮರ್ಶೆ
‘ಥಟ್ ಅಂತ ಹೇಳಿ’ ಖ್ಯಾತಿಯ ಜನಪ್ರಿಯ ಲೇಖಕ ಡಾ. ನಾ. ಸೋಮೇಶ್ವರ ಅವರ ಹೊಸ ಕೃತಿ ‘ಸ್ವಚ್ಛಮೇವ ಜಯತೆ’ ಓದುಗರ ಕೈ ಸೇರಿದ್ದು, ಎಲ್ಲೆಡೆ ಕುತೂಹಲ ಹಾಗೂ ಮೆಚ್ಚುಗೆಯ ಅಲೆ ಎಬ್ಬಿಸಿದೆ. ಪುಸ್ತಕದ ಮುಖಪುಟದಲ್ಲಿರುವ ನೀಲಿ ಬಣ್ಣದ ಆಕಾಶ ಹಾಗೂ ನಿರ್ಮಲ ನೀರಿನಲ್ಲಿ ವಿಹರಿಸುವ ಹಂಸಗಳ ಸುಂದರ ಚಿತ್ರವೇ ಸ್ವಚ್ಛತೆಯ ಮಹತ್ವವನ್ನು ಸುಂದರವಾಗಿ ಬಿಂಬಿಸುತ್ತದೆ.
ನಮ್ಮ ರಾಷ್ಟ್ರೀಯ ಲಾಂಛನದ ‘ಸತ್ಯಮೇವ ಜಯತೆ’ ಎಂಬ ಪರಿಚಿತ ನುಡಿಯನ್ನು ಸೋಮೇಶ್ವರ ಅವರು ಅತ್ಯಂತ ಚುಟುಕಾಗಿ, ಅರ್ಥಗರ್ಭಿತವಾಗಿ ‘ಸ್ವಚ್ಛಮೇವ ಜಯತೆ’ ಎಂದು ಬದಲಾಯಿಸಿರುವುದು ಅವರ ವಿಶಿಷ್ಟ ಬರವಣಿಗೆಯ ಶೈಲಿಗೆ ಹಿಡಿದ ಕನ್ನಡಿಯಾಗಿದೆ. ಇದು ಕೇವಲ ಶೀರ್ಷಿಕೆಯ ಚಮತ್ಕಾರವಲ್ಲ; ಸ್ವಚ್ಛತೆಯಿಂದ ಮಾತ್ರ ಆರೋಗ್ಯ ಮತ್ತು ಜಯ ಸಾಧ್ಯ ಎಂಬ ಬಲವಾದ ಸಂದೇಶವನ್ನು ಇದು ನೀಡುತ್ತದೆ. ಸತ್ಯವು ಹೇಗೆ ಬದುಕಿಗೆ ದಾರಿದೀಪವೋ, ಹಾಗೆಯೇ ಸ್ವಚ್ಛತೆಯು ಉತ್ತಮ ಆರೋಗ್ಯದ ಅಡಿಪಾಯ ಎಂಬ ಆಳವಾದ ಒಳನೋಟವನ್ನು ಈ ಶೀರ್ಷಿಕೆ ಕಲ್ಪಿಸಿಕೊಡುತ್ತದೆ.
ಈ ಕೃತಿಯ ಮತ್ತೊಂದು ಆಕರ್ಷಕ ಅಂಶವೆಂದರೆ, ಲೇಖಕರು ‘ಮನದ ಮಾತು’ ಪುಟದಲ್ಲಿ ವಿವರಿಸಿರುವ ಜೀವ ಜಗತ್ತಿನ ಸ್ವಚ್ಛತೆಯ ಪರಿಕಲ್ಪನೆ. ಇರುವೆ, ನೊಣ, ಜೇನುನೊಣ ಹಾಗೂ ಗೆದ್ದಲುಗಳಂತಹ ಸಾಮಾಜಿಕ ಕೀಟಗಳು ಸ್ನಾನ ಮಾಡದಿದ್ದರೂ, ಪರಸ್ಪರ ದೇಹ ಸ್ವಚ್ಛಗೊಳಿಸಿಕೊಳ್ಳುವ ‘ಗ್ರೂಮಿಂಗ್’ (Grooming) ವರ್ತನೆಯ ಮೂಲಕ ತಮ್ಮ ಗೂಡನ್ನು ರೋಗಮುಕ್ತವಾಗಿಡುತ್ತವೆ. ವಿಜ್ಞಾನಿಗಳು ‘ಸಾಮಾಜಿಕ ರೋಗ ರಕ್ಷಣಾ ವ್ಯವಸ್ಥೆ’ (ಸೋಶಿಯಲ್ ಇಮ್ಯೂನಿಟಿ) ಎನ್ನುವ ಈ ಸಮೂಹ ರಕ್ಷಣೆಯ ವಿಶೇಷತೆಯ ಮೂಲಕ ಪ್ರಕೃತಿಯಿಂದ ಮಾನವ ಕಲಿತ ಸ್ವಚ್ಛತೆಯ ಮಹತ್ವವನ್ನು ಇಲ್ಲಿ ಅತ್ಯಂತ ಸುಂದರವಾಗಿ ಬಿಚ್ಚಿಡಲಾಗಿದೆ.

15 ಅಧ್ಯಾಯಗಳನ್ನು ಹೊಂದಿರುವ ಈ ಕೃತಿಯನ್ನು ಡಾ. ನಾ. ಸೋಮೇಶ್ವರ ಅವರು ಬಹಳ ವಿಶಿಷ್ಟ ರೀತಿಯಲ್ಲಿ ನಿರೂಪಿಸಿದ್ದಾರೆ. ‘ದುಂಡಯ್ಯನ ಲಂಡನ್ ಯಾತ್ರೆ’ ಎಂಬ ಕುತೂಹಲಕಾರಿ ಪ್ರಹಸನದ ಮೂಲಕ ರೋಗಗಳು ಹುಟ್ಟಿಕೊಳ್ಳುವ ಮೂಲವನ್ನು ವಿವರಿಸಲಾಗಿದೆ. ಜತೆಗೆ ಬಾಯಿ, ಚರ್ಮ, ಕುಡಿಯುವ ನೀರು ಹಾಗೂ ಮುಟ್ಟಿನ ಸ್ವಚ್ಛತೆಯಂತಹ ಅತಿಮುಖ್ಯ ವಿಷಯಗಳನ್ನು ಸರಳವಾಗಿ ತಿಳಿಸುತ್ತಾ, ಎಲ್ಲ ಪಾಠಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಪುಸ್ತಕದ ಬಹುಮುಖ್ಯ ಆಕರ್ಷಣೆಯೆಂದರೆ, ಇದರ ಎಲ್ಲಾ ಅಧ್ಯಾಯಗಳು ಶಾಲಾ ತರಗತಿಯೊಂದರಲ್ಲಿ ಜಿ.ಬಿ. ಮಾಸ್ತರರು ಮಕ್ಕಳಿಗೆ ಪಾಠ ಮಾಡುವ ಸೊಗಸಾದ ಶೈಲಿಯಲ್ಲಿ ಮೂಡಿಬಂದಿರುವುದು. ತರಗತಿಯಲ್ಲಿ ಮಕ್ಕಳು ಕೇಳುವ ನಾನಾ ತರಹದ ಪ್ರಶ್ನೆಗಳಿಗೆ ಮಾಸ್ತರರು ಉತ್ತರಿಸಿ, ಅವರ ಗೊಂದಲಗಳನ್ನು ನಿವಾರಿಸುತ್ತಾ ಹಂತ ಹಂತವಾಗಿ ಸ್ವಚ್ಛತೆಯ ಅರಿವು ಮೂಡಿಸುವ ವಿಧಾನ ಮನಸೆಳೆಯುತ್ತದೆ.
ಕೊನೆಯದಾಗಿ ನನ್ನದೊಂದು ಕಳಕಳಿಯ ವಿನಂತಿ; ಪ್ರತಿ ಶಾಲೆಯ ಗ್ರಂಥಾಲಯದಲ್ಲಿ ಈ ಕೃತಿಗೆ ಸಾರ್ಥಕ ನೆಲೆ ಸಿಗಲಿ. ಶಿಕ್ಷಣ ಪ್ರೇಮಿಗಳು ತಮ್ಮ ಹುಟ್ಟೂರಿನ ಶಾಲೆಗೆ ಈ ಪುಸ್ತಕವನ್ನು ಜ್ಞಾನದ ಕಾಣಿಕೆಯಾಗಿ ನೀಡಿ, ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಹೆಗಲುಕೊಡಲಿ. ಆಯಾ ಶಾಲೆಗಳ ಗುರುಗಳು ಇದರ ಸ್ಫೂರ್ತಿದಾಯಕ ಪಾಠಗಳನ್ನು ಮುದ್ದು ಮಕ್ಕಳಿಗೆ ಪ್ರೀತಿಯಿಂದ ದಾಟಿಸುವುದರ ಮೂಲಕ, ‘ಸ್ವಚ್ಛ ಭಾರತ’ದ ಪರಿಕಲ್ಪನೆಯನ್ನು ನೈಜ ಬದುಕಿನಲ್ಲಿ ಅಕ್ಷರಶಃ ಸಾಕಾರಗೊಳಿಸಲಿ.
ಡಾ. ವೈ.ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು,
ಮುನವಳ್ಳಿ (ಸವದತ್ತಿ)





