ಜಾಗೀರ್ದಾರ್*
ಹೊಂದಿಸಿ ಬರೆಯಿರಿ ಸಿನಿಮಾ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ ಅವರ ಹೊಸ ಪ್ರಯತ್ನ ತೀರ್ಥರೂಪ ತಂದೆಯವರಿಗೆ. ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನನದೇ ಜಗದಲಿ ಎಂಬ ಹಾಡಿಗೆ ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣ ಪದಗಳನ್ನು ಪೊಣಿಸಿದ್ದಾರೆ. ಭಾವನಾತ್ಮಕವಾಗಿ ಸಾಗುವ ಗೀತೆ ನೋಡುಗರನ್ನು ಕಾಡುತ್ತದೆ. ಸುಂದರ ದೃಶ್ಯಗಳ ಜೊತೆಯಲ್ಲಿ ಕಾಡುವ ಸಾಹಿತ್ಯ ಹಾಗೂ ಜೋ ಕೋಸ್ಟ ಸಂಗೀತವಿರುವ ನನದೇ ಜಗದಲಿ ಸಾಂಗ್ ಗೆ ಕಪಿಲ್ ಕಪಿಲನ್ ಧ್ವನಿಯಾಗಿದ್ದಾರೆ. ತೀರ್ಥರೂಪ ತಂದೆಯವರಿಗೆ ಎಂಬ ಶೀರ್ಷಿಕೆ ಇದ್ದರೂ ಕೂಡ ಇಲ್ಲಿ ಅಮ್ಮ ಮಗನ ಬಾಂಧವ್ಯ ಅನಾವರಣಗೊಳಿಸುವ ಮೂಲಕ ನಿರ್ದೇಶಕರು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ.
ತೆಲುಗಿನ ಕಿರುತೆರೆಯಲ್ಲಿ ಹೆಸರು ಮಾಡಿರುವ ಕನ್ನಡದ ಹುಡುಗ ನಿಹಾರ್ ಮುಕೇಶ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಸಾಥ್ ಕೊಡುತ್ತಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗದ ಜೊತೆ ಹೊಸ ಪ್ರತಿಭೆಗಳಿಗೆ ಜಗನ್ನಾಥ್ ಅವರು ಅವಕಾಶ ನೀಡಿದ್ದಾರೆ.
‘ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಅವರು ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ.