ಬಾಲಿವುಡ್ ಸದಾ ಪುರುಷಪ್ರಧಾನ ಇಂಡಸ್ಟ್ರಿ ಎನಿಸಿದೆ, ಆದರೆ ಭಾರತೀಯ ಚಿತ್ರರಂಗವನ್ನು ಆಮೂಲಾಗ್ರವಾಗಿ ಪರಿಶೀಲಿಸಿದಾಗ, ಹಿಂದಿ ಒಳಗೊಂಡಂತೆ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ಆ ಕಾಲದಿಂದ ಈ ಕಾಲದವರೆಗೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ. ಇದಕ್ಕೆ ಮುಖ್ಯ ಕಾರಣ ಸ್ತ್ರೀ ಪ್ರಧಾನ ಚಿತ್ರಗಳನ್ನು ಎಲ್ಲರೂ ಇಷ್ಟಪಡುತ್ತಾರೆ.
ಕನ್ನಡದಲ್ಲಂತೂ ಕಾದಂಬರಿ ಆಧಾರಿತ ಚಿತ್ರಗಳು ಮುಖ್ಯವಾಗಿ ಸ್ತ್ರೀಪ್ರಧಾನವಾಗಿದ್ದು, ಪುಟ್ಟಣ್ಣ ನಾಯಕಿಯರನ್ನು ಗೆಲ್ಲಿಸುವ ನಿರ್ದೇಶಕರೆಂದೇ ಖ್ಯಾತಿ ಪಡೆದಿದ್ದರು.
ಹಾಗೆಯೇ `ಮದರ್ ಇಂಡಿಯಾ' ಚಿತ್ರದಿಂದ `ಮಾಮ್'ವರೆಗೂ, `ಚಾಂದಿನಿ'ಯಿಂದ `ಚಾಲ್ ಬಾಸ್,' `ಕ್ವೀನ್'ನಿಂದ `ಮಣಿಕರ್ಣಿಕಾ'ವರೆಗೂ ಬಹುತೇಕ ಎಲ್ಲಾ ಮಹಿಳಾ ಪ್ರಧಾನ ಚಿತ್ರಗಳನ್ನೂ ಪ್ರೇಕ್ಷಕರು ಗೆಲ್ಲಿಸಿ ಕೊಟ್ಟಿದ್ದಾರೆ. ಶ್ರೀದೇವಿ ತನ್ನ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಟಿಸಿದ ಇಂಗ್ಲಿಷ್ ವಿಂಗ್ಲಿಷ್ ಇರಲಿ, ವಿದ್ಯಾಳ ಡರ್ಟಿ ಪಿಕ್ಚರ್, ಬಾಕ್ಸ್ ಆಫೀಸಿನಲ್ಲಿ ಪ್ರಚಂಡ ಯಶಸ್ಸು ಗಳಿಸಿವೆ.
ಅದೇ ರೀತಿ ಕೊರೋನಾ ಕಾಲದಲ್ಲಿ ಎಲ್ಲಾ ಥಿಯೇಟರ್ ಗಳೂ ಮುಚ್ಚಲ್ಪಟ್ಟಿದ್ದಾಗ, OTT ಪ್ಲಾಟ್ ಫಾರ್ಮ್ ಮೇಲುಗೈ ಸಾಧಿಸಿ, ಮನೆ ಮಂದಿಯೆಲ್ಲಾ ಹಾಯಾಗಿ ಟಿವಿಯಲ್ಲಿ ಹೊಸ ಸಿನಿಮಾ ವೀಕ್ಷಿಸುವಂತಾಯಿತು. ಇಲ್ಲಿಯೂ ನೀವು ಸೂಕ್ಷ್ಮವಾಗಿ ಗಮನಿಸಿದರೆ ಸ್ತ್ರೀ ಪ್ರಧಾನ ಚಿತ್ರಗಳೇ ಮೇಲುಗೈ ಸಾಧಿಸಿವೆ. ಇದರಲ್ಲಿ ವಿಶೇಷ ಸಂಗತಿ ಎಂದರೆ, OTT ಯಲ್ಲಿ ಸ್ತ್ರೀ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನ ಉಂಟು.
ಇತ್ತೀಚೆಗಂತೂ ಮನರಂಜನೆಗೆ ಹೆಚ್ಚಿನ ಪ್ರಾಥಮಿಕತೆ ನೀಡಲೆಂದು, ಬಾಲಿವುಡ್ ಉತ್ತಮ ವಿಷಯಗಳನ್ನು ಕೈಬಿಟ್ಟು, ಕೇವಲ ಗ್ಲಾಮರ್, ಸೆಕ್ಸೀ, ಮಾರಾಮಾರಿಯ ಮಸಾಲಾ ಸೂತ್ರಗಳಿಗೇ ಅಂಟಿಕೊಂಡಿತ್ತು. ಆದರೆ ಲಾಕ್ ಡೌನ್ ಕೃಪೆಯಿಂದ ನೆಟ್ ಫ್ಲಿಕ್ಸ್, ಅಮೆಝಾನ್ ಪ್ರೈಂ, ಝೀ 5, ಇತ್ಯಾದಿ ಹೊಸ ಹೊಸ OTT ಪ್ಲಾಟ್ ಫಾರ್ಮ್ ಕಾರಣ, ಹೊಸ ಹೊಸ ವಿಷಯಗಳನ್ನು ಇನ್ನಷ್ಟು ಗಂಭೀರವಾಗಿ ಪ್ರಸ್ತುತಪಡಿಸಲಾಗತ್ತಿದೆ. ಈ ಕಾರಣದಿಂದಲೇ ಮಹಿಳಾಪ್ರಧಾನ ಚಿತ್ರಗಳನ್ನು ಲೇಖಕಿ, ನಿರ್ಮಾಪಕಿ, ನಿರ್ದೇಶಕಿಯರು ತಮ್ಮದೇ ಆದ ವಿಭಿನ್ನ ಶೈಲಿಯಿಂದ ಮುನ್ನುಗ್ಗುತ್ತಿದ್ದಾರೆ. ಈ ಕುರಿತಾಗಿ ಹೆಚ್ಚಿನ ವಿವರ ತಿಳಿಯೋಣವೇ?
ಕೊರೋನಾ ಕಾಲದಲ್ಲಿ OTT ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆದ ಮಹಿಳಾ ಪ್ರಧಾನ ಚಿತ್ರಗಳು ಮತ್ತು ಸೀರೀಸ್ :
ಕಳೆದ ವರ್ಷದಿಂದ ಲಾಕ್ ಡೌನ್, ಕೊರೋನಾ ಕಾರಣ OTT ಪ್ಲಾಟ್ ಫಾರ್ಮ್ ನಲ್ಲಿ ಪ್ರದರ್ಶಿತಗೊಂಡ ಎಷ್ಟೋ ಚಿತ್ರಗಳು ಮಹಿಳಾ ಪವರ್ ನ್ನು ಎತ್ತಿಹಿಡಿದದ್ದಲ್ಲದೆ, ಮಹಿಳಾ ಸಮಾಜಕ್ಕೆ ಒಂದು ಪಾಠ ಆಗಿತ್ತು. ನಿಮ್ಮ ಇಚ್ಛಾಶಕ್ತಿ ದೃಢವಾಗಿದ್ದು, ಏನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೆ, ಆಗ ಯಾವ ಅಡ್ಡಿ ಆತಂಕಗಳೂ ಹಿರಿದಲ್ಲ. ಹೆಣ್ಣು ದುರ್ಬಲಳೇ ಆಗಿದ್ದರೂ ಗೆದ್ದು ತೋರಿಸಬಹುದು ಎಂದು ಈ ಚಿತ್ರಗಳು ಸಾರುತ್ತವೆ. ಇಂಥದೇ ಒಂದು ಚಿತ್ರ `ಗುಂಜನ್ ಸಕ್ಸೇನಾ.'
ಇದೊಂದು ಬಯೋಪಿಕ್ ಚಿತ್ರ. ಗುಂಜನ್ ಸಕ್ಸೇನಾ ಎಂಬ ಅತಿ ಸಾಧಾರಣ ಹುಡುಗಿ, ಮುಂಬೈ ಮಹಾನಗರಿಗೆ ಬಂದು, ಹೇಗೋ ವಿದ್ಯಾಭ್ಯಾಸ ಕಲಿತು, ಮೊದಲ ಮಹಿಳಾ ಏರ್ ಪೋರ್ಸ್ ಪೈಲಟ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ. ಈಕೆ 1999ರ ಕಾರ್ಗಿಲ್ ಯುದ್ಧದಲ್ಲಿ ಯುದ್ಧ ವಿಮಾನದಲ್ಲಿ ಯಶಸ್ವೀ ಹಾರಾಟ ನಡೆಸಿದ ಮೊದಲಿಗಳಾಗುತ್ತಾಳೆ! ಈಕೆಯ ಪಾತ್ರ ನಿರ್ವಹಿಸಿದವಳು ಶ್ರೀದೇವಿಯ ಮಗಳು ಜಾಹ್ನವಿ ಕಪೂರ್, ತನ್ನ ಕೆರಿಯರ್ ನ 2ನೇ ಚಿತ್ರದಿಂದಲೇ ಅವಳು ಎಲ್ಲರ ಗಮನ ಸೆಳೆದಳು!