ಯೋಗರಾಜ್ ಭಟ್ ಅವರು ಮುಂಗಾರು ಮಳೆ ಸಿನಿಮಾದಿಂದ ಹಿಡಿದು ಗಾಳಿಪಟ 2 ತನಕ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ವಿಹಾನ್, ಸತೀಶ್ ನೀನಾಸಮ್ ಮುಂತಾದ ನಾಯಕ ನಟರಿಗೆ ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಬ್ರೇಕ್ ನೀಡಿದ್ದಾರೆ. ಹಾಗೆ ನೋಡುವುದಾದರೆ ಪೂಜಾ ಗಾಂಧಿ ಬಿಟ್ಟರೆ ಯಾವುದೇ ನಾಯಕಿಯನ್ನು ತಮ್ಮ ಚಿತ್ರದಲ್ಲಿ ಲಾಂಚ್ ಮಾಡಿಲ್ಲ.ಭಟ್ರು ನಿರ್ದೇಶನದ ಆರಂಭದ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಕುಮಾರಸ್ವಾಮಿ,ರಮ್ಯಾ, ಐಂದ್ರಿತಾ ರೇ,ಡೈಸಿ ಬೋಪಣ್ಣ ರಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಬಂದ ಚಿತ್ರಗಳಲ್ಲಿ ನಟಿಸಿರುವ ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ವರೆಗೆ ನಟಿಸಿದ ಎಲ್ಲಾ ನಾಯಕಿಯರು ಬೇರೆ ನಿರ್ದೇಶಕರಿಂದ ಪರಿಚಯಿಸಲ್ಪಟ್ಟವರು.
ಇದಕ್ಕೆ ವ್ಯತೀರಿಕ್ತವಾಗಿ ಯೋಗರಾಜ್ ಭಟ್ ಅವರ ಮುಂದಿನ ಚಿತ್ರಗಳಲ್ಲಿ ಇಬ್ಬರು ಹೊಸ ನಾಯಕಿಯರಿಗೆ ಅವಕಾಶ ನೀಡಿದ್ದಾರೆ. ನಿಮಗೀಗಾಗಲಿ ತಿಳಿದಿರುವಂತೆ ಮುಂಗಾರು ಮಳೆ ಚಿತ್ರದ ನಿರ್ಮಾಪಕರಾದ ಇ.
ಕೃಷ್ಣಪ್ಪ ಅವರಿಗಾಗಿ 'ಮನದ ಕಡಲು ' ಎಂಬ ಪ್ರೇಮ ಕಥನವನ್ನು ಹೆಣೆಯುವಲ್ಲಿ ಭಟ್ರು ನಿರತರಾಗಿದ್ದಾರೆ.ಈ ಚಿತ್ರದ ನಾಯಕ ಸುಮುಖ. ಎಸ್. ಗೆ ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕಾನೂನು ಪದವಿಧರೆಯಾಗಿರುವ ಅಂಜಲಿ ಅನೀಶ್, ಹದಿ ಹರೆಯದಲ್ಲೇ ಕಿರು ಚಿತ್ರ ನಿರ್ದೇಶನ ಮಾಡಿ ಸೈ ಅನಿಸಿಕೊಂಡಿದ್ದರು. ಯೋಗರಾಜ್ ಭಟ್,ರವಿ ಶಾಮನೂರು ಕೂಡಿ ನಿರ್ಮಿಸಿದ 'ಪದವಿ ಪೂರ್ವ ' ಚಿತ್ರಕ್ಕೆ ಸಹ ನಿರ್ದೇಶನ ಮಾಡಲು ಬಂದ ಅಂಜಲಿಗೆ ನಾಯಕಿಯಾಗುವ ಅವಕಾಶ ಮಾಡಿ ಕೊಟ್ಟಿದ್ದ ಯೋಗರಾಜ್ ಭಟ್ರು ಮತ್ತೆ ತಮ್ಮದೇ ನಿರ್ದೇಶನದ 'ಮನದ ಕಡಲು' ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ . ಇತ್ತೀಚೆಗೆ ಬಿಡುಗಡೆಯಾದ 'ತುರ್ರಾ' ಹಾಡು ನೋಡಿದ ಜನ ಭಟ್ರ ಆಯ್ಕೆ ಸರಿಯಾಗಿದೆ ಅಂತ ಹೊಗಳಿದ್ದಾರೆ. ಈ ಮಧ್ಯೆ ಖ್ಯಾತ ನಿರ್ದೇಶಕ ಎಂ. ಡಿ. ಶ್ರೀಧರ್ ನಿರ್ದೇಶನದ' ಜಂಬೂ ಸವಾರಿ ' ಚಿತ್ರದಲ್ಲಿ ಕೂಡ ಅಂಜಲಿ ನಟಿಸಿದ್ದಾಳೆ ಈ ಸಿನಿಮಾಗಳು ಬಿಡುಗಡೆಯಾದ ಮೇಲೆ ಅಂಜಲಿ ನಟಿಯಾಗಿ ಅಥವಾ ನಿರ್ದೇಶಕಿಯಾಗಿ ಮುಂದುವರಿಯುತ್ತಾರ ಕಾದು ನೋಡಬೇಕು.
ರಮ್ಯಾ ಮತ್ತು ರಕ್ಷಿತಾ ನಟಿಸಿದ ' ತನನಂ ತನನಂ' ಚಿತ್ರದಲ್ಲಿ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರಶಿಕಾ ಶೆಟ್ಟಿ,ಒಂದಷ್ಟು ಸೀರಿಯಲ್ಗಳಲ್ಲಿ ಅಭಿನಯಿಸಿದ ನಂತರ ಈಗ ' ಮನದ ಕಡಲು ' ಚಿತ್ರದ ಮೂಲಕ ಇನ್ನೊಬ್ಬ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾಳೆ.ಈಗಾಗಲೇ ರಶಿಕಾ ಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಇನ್ನೊಂದು ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವ ರಶಿಕ 2025 ನನ್ನ ವರ್ಷ ಅಂತ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾಳೆ. ಮನದ ಕಡಲು ಚಿತ್ರದ ಮೂಲಕ ಭರವಸೆ ಮೂಡಿಸಿರುವ ಈ ಇಬ್ಬರು ನಾಯಕಿಯರು ಕನ್ನಡ ಚಿತ್ರರಂಗದಲ್ಲೆ ಉಳಿದು ಇನ್ನಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿ ಎಂದು ನಮ್ಮ ಹಾರೈಕೆ.