- ರಾಘವೇಂದ್ರ ಅಡಿಗ ಎಚ್ಚೆನ್.
ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಅತ್ಯದ್ಭುತ ಯಶಸ್ಸು ಕಾಣುವ ಮೂಲಕ ಬಾಕ್ಸ್ ಆಫೀಸ್ನಲ್ಲಿಯೂ ಧೂಳೆಬ್ಬಿಸಿರುವ ಸಿನಿಮಾಗಳ ಲಿಸ್ಟ್ನಲ್ಲಿ 'ಸು ಫ್ರಮ್ ಸೋ' ಚಿತ್ರವಿದೆ. ಹೀಗೆ ಮನರಂಜನೆಯಿಂದ ಅಭಿಮಾನಿಗಳನ್ನು ಸೆಳೆದಿರುವ ಯಶಸ್ವಿ ಚಿತ್ರವು ಗೋವಾದಲ್ಲಿ ಜರುಗುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲೂ ಸದ್ದು ಮಾಡಿದೆ.
ಕೂಲಿ, ವಾರ್ 2 ಅಂತಹ ಬಿಗ್ ಬಜೆಟ್, ಸ್ಟಾರ್ ಸಿನಿಮಾಗಳ ನಡುವೆ ತೆರೆಕಂಡ ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಗೋವಾದಲ್ಲಿ ಜರುಗುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಗೊಂಡಿದೆ. ವರದಿಗಳ ಪ್ರಕಾರ ಚಿತ್ರ ಇಂದು, ಈಗಾಗಲೇ ಪ್ರದರ್ಶನಗೊಂಡಿದೆ.
ಸಾಮಾಜಿಕ ತಾಣಗಳಲ್ಲಿ ಚಿತ್ರತಂಡ 'ನಮ್ಮ ಮೂಲದಿಂದ ರಾಷ್ಟ್ರಮಟ್ಟದ ವೇದಿಕೆವರೆಗೆ. ಸು ಫ್ರಮ್ ಸೋ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ತಲುಪಿದೆ. ಇಡೀ ತಂಡಕ್ಕೆ ಹೆಮ್ಮೆಯ ಕ್ಷಣ'' ಎಂದು ಬರೆದುಕೊಂಡಿದೆ.
ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, ''ನಿಮ್ಮ ಸ್ಕ್ರಿಪ್ಟ್ ರೈಟಿಂಗ್ ಬಲೆ ತೆಲಿಪಾಲೆಯಲ್ಲಿ ನನಗೆ ಇಷ್ಟವಾಗಿತ್ತು, ತುಳುನಾಡಿನ ಕಥೆ, ಜಗತ್ತಿನಾದ್ಯಂತ ಪಸರಿಸಿದ್ದು ನಮಗೆ ತುಂಬಾ ಹೆಮ್ಮೆ, ಖುಷಿಯ ವಿಚಾರ'' ಎಂದು ತಿಳಿಸಿದ್ದಾರೆ. ಹೀಗೆ ನೆಟ್ಟಿಗರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ನವೆಂಬರ್ 20ರಂದು ಶುರುವಾಗಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ 56ನೇ ಆವೃತ್ತಿ 28ರವರೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಇನ್ನು, ಭಾರತೀಯ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ಹಿರಿಯ ನಟ ರಜನಿಕಾಂತ್ ಅವರನ್ನೂ ಸನ್ಮಾನಿಸಲು ಸಿದ್ಧತೆ ನಡೆದಿದೆ.




