- ರಾಘವೇಂದ್ರ ಅಡಿಗ ಎಚ್ಚೆನ್.
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಮತ್ತು ವೀವ್ಸ್ ಪಡೆಯುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಅಸಭ್ಯ ಗಿಮಿಕ್‌ಗಳನ್ನು ಮಾಡುತ್ತಿರುವುದರಿಂದ ಕನ್ನಡ ಚಿತ್ರರಂಗದ ನಟಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕಾರ್ಯಕ್ರಮಗಳನ್ನು ವರದಿ ಮಾಡಲು ಬಂದ ಕೆಲವರು ನಟಿಯರ ಫೋಟೋ ಮತ್ತು ವಿಡಿಯೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ಅವರ ದೇಹದ ಭಾಗಗಳ ಮೇಲೆ ಅನಗತ್ಯವಾಗಿ ಜೂಮ್ ಮಾಡಿ ಪ್ರಸಾರ ಮಾಡುತ್ತಿರುವುದರಿಂದ ತಮ್ಮ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಕಲಾವಿದರು ಆರೋಪಿಸಿದ್ದಾರೆ. ಈ ಬಗ್ಗೆ ನಟಿಯರಾದ ಸಪ್ತಮಿ ಗೌಡ, ಯುವ ರಾಜ್‌ಕುಮಾರ್ ಹಾಗೂ ರಮ್ಯಾ ದಿವ್ಯ ಸ್ಪಂದನಾ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳಾ ಕಲಾವಿದೆಯರಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಎದುರಾಗುತ್ತಿರುವ ಈ ಸಮಸ್ಯೆ ಗಂಭೀರವಾಗಿದ್ದು, ಇಂತಹ ವರ್ತನೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ನಾವು ನಮ್ಮ ಕಲೆಯನ್ನು ಪ್ರದರ್ಶಿಸಲು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಸಭ್ಯ ಕೋನಗಳಿಂದ ಚಿತ್ರೀಕರಿಸಿ ಪ್ರಸಾರ ಮಾಡುವ ಮೂಲಕ ನಮ್ಮ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಇದು ಅಸ್ವೀಕಾರಾರ್ಹ” ಎಂದು ನಟಿಯರು ಹೇಳಿದ್ದಾರೆ.
ಕಾರ್ಯಕ್ರಮ ವರದಿ ಮಾಡುವವರು ವೃತ್ತಿಪರತೆ, ಶಿಸ್ತು ಮತ್ತು ಮೂಲಭೂತ ಮಾನವ ಗೌರವವನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂತಹ ಘಟನೆಗಳನ್ನು ಎದುರಿಸಿದ ಎಲ್ಲಾ ಮಹಿಳೆಯರಿಗೂ ತಮ್ಮ ಬೆಂಬಲವಿದೆ ಎಂದು ಕಲಾವಿದರು ಹೇಳಿದ್ದು, ಗೌರವಕ್ಕಾಗಿ ತಮ್ಮ ಧ್ವನಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಈ ರೀತಿಯ ಸಮಸ್ಯೆಗಳು ಹಿಂದೆ ಬಾಲಿವುಡ್ ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದು, ಪಾಪರಾಜಿ ಸಂಸ್ಕೃತಿಯ ಕೆಲವು ಅತಿರೇಕಗಳ ವಿರುದ್ಧ ನಟಿಯರು ಪ್ರತಿಭಟನೆ ನಡೆಸಿದ್ದರು. ಈಗ ಇದೇ ರೀತಿಯ ಅಸಮಾಧಾನ ಕನ್ನಡ ಚಿತ್ರರಂಗದಲ್ಲೂ ವ್ಯಕ್ತವಾಗಿದೆ.





