ಯಶ್ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಆದ ಟಾಕ್ಸಿಕ್ ಟೀಸರ್ ವಿಶೇಷ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕನ್ನಡದ ಸಿನಿಮಾ ಆದರೂ, ಇಡೀ ಟೀಸರ್ನಲ್ಲಿ ಒಂದೇ ಒಂದು ಕನ್ನಡ ಸಂಭಾಷಣೆ ಇಲ್ಲ. ಸಿನಿಮಾ ಸ್ಟೈಲ್ ಇರೋದು ಹಾಲಿವುಡ್ ಸ್ಟೈಲಿನಲ್ಲಿ. ಮೇಕಿಂಗ್ ಅಷ್ಟೇ ಅಲ್ಲ, ಚಿತ್ರದ ಪ್ರಣಯ ದೃಶ್ಯಗಳೂ ಹಾಲಿವುಡ್ ಶೈಲಿಯಲ್ಲೇ ಇವೆ. ಟೀಸರ್ ರಿಲೀಸ್ ಆಗುವವರೆಗೂ ಯಶ್ ನೋಡುವುದಕ್ಕೆ ಕಾತುರ ಪಡುತ್ತಿದ್ದವರು ಈಗ ಟೀಸರ್ನಲ್ಲಿ ಬರುವ ಕಾರಿನಲ್ಲಿದ್ದ ಚೆಲುವೆಯ ಹುಡುಕಾಟದಲ್ಲಿದ್ದಾರೆ.
ಟೀಸರ್‌ನಲ್ಲಿರೋ ಹಸಿಬಿಸಿ ದೃಶ್ಯಗಳೇ ಹಾಗಿವೆ. ಯಶ್ ಇದೂವರೆಗೆ ಸ್ಕ್ರೀನ್ ಮೇಲೆ ನಟಿಯೊಬ್ಬರಿಗೆ ಕಿಸ್ ಕೂಡಾ ಮಾಡಿಲ್ಲ. ಅಪ್ಪಟ ಫ್ಯಾಮಿಲಿ ಮ್ಯಾನ್. ಆದರೆ ಇಲ್ಲಿ ಗಡಿದಾಟಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಪಕ್ಕಾ ಹಾಲಿವುಡ್ ಸ್ಟೈಲ್. ಇದು ಅತಿಯಾಯ್ತು, ಇದು ಕನ್ನಡದ ಟೇಸ್ಟ್ ಅಲ್ಲ, ಸಂಸಾರ ಸಮೇತ ನೋಡೋಕೆ ಆಗಲ್ಲ, ಕಾರ್ ದೃಶ್ಯ ಶಾಕ್ ಕೊಡ್ತು ಎಂದು ಕಮೆಂಟ್ ಹಾಕುತ್ತಿರುವವರ ಮಧ್ಯೆ, ಆ ಸೀನ್‌ನಲ್ಲಿದ್ದ ಬ್ಯೂಟಿ ಯಾರು ಎಂಬ ಹುಡುಕಾಟವೂ ನಡೆಯುತ್ತಿದೆ.
ʻರಾಯʼನ ಪಾತ್ರದಲ್ಲಿ ನಟಿಸಿರುವ ಯಶ್ ರೊಮ್ಯಾನ್ಸ್ ಮಾಡಿರುವುದು ಚಿತ್ರದಲ್ಲಿದ್ದ ಕಿಯಾರಾ ಅಡ್ವಾಣಿ, ನಯನತಾರ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹ್ಯುಮಾ ಕುರೇಶಿ ಸೇರಿದಂತೆ ಯಾರ ಜೊತೆಯಲ್ಲೂ ಅಲ್ಲ. ರೊಮ್ಯಾನ್ಸ್ ಮಾಡಿರುವುದು ನಟೇಲಿ ಬರ್ನ್ ಎಂಬ ನಟಿಯ ಜೊತೆ.
ಈ ನಟೇಲಿ ಬರ್ನ್, ಉಕ್ರೇನ್ ಮೂಲದ ನಟಿ. ಹಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟೇಲಿ ಬರ್ನ್ ಸಿನಿಮಾಗಳಿಗೆ ಕಥೆ ಬರೆಯುತ್ತಾರೆ. ಬರಹಗಾರ್ತಿ ಅಷ್ಟೇ ಅಲ್ಲ ನಿರ್ಮಾಪಕಿಯೂ ಹೌದು. ಇಂಗ್ಲಿಷ್‌ನಲ್ಲಿ ಕೆಲವು ಸಿನಿಮಾ, ಶಾರ್ಟ್ ಫಿಲಂಗಳನ್ನು ನಿರ್ಮಿಸಿದ್ದಾರೆ. ಹೆವೆನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ನಟೇಲಿ ಬರ್ನ್ ʻಬಾರ್ನ್ ಟು ಬರ್ನ್ʼ ಎಂಬ ಸಂಸ್ಥೆಯ ಸಿಇಓ ಕೂಡಾ. ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್ ಅಕಾಡೆಮಿಯ ಸದಸ್ಯೆ. ನಟಿಯಾಗಿ ʻದಿ ಎಕ್ಸ್‌ಪೆಂಡೆಬಲ್ಸ್ 3, ಮೆಕ್ಯಾನಿಕ್ ರಿಸರಕ್ಷನ್, ಫಾರ್ಸೆಸ್ಟ್ರೆಸ್, ಕಾಫಿ ಡೇಟ್, ಇನ್ ದಿ ನೇಮ್ ಆಫ್ ಕಿಂಗ್, ಮಮುಲಾ, ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇವರು ನಿರ್ಮಾಣ ಮಾಡಿರುವ ಚಿತ್ರಗಳೆಂದರೆ ಆಕ್ಸೆಲರೇಷನ್, ಫೋರ್ಟೀಸ್, ದಿ ಪಿಜ್ಜಾ ಟ್ರಿಪ್, ಲವ್ ಹರ್ಟ್, ದಿ ಎನ್‌ಫೋರ್ಸರ್, ಡೆವಿಲ್ಸ್ ಹೋಪ್, ಡೌನ್ ಹಿಲ್.. ಹೀಗೆ ಹಲವು ಚಿತ್ರಗಳಿವೆ.
ವಿಶೇಷ ಎಂದರೆ ನಟ ಯಶ್ ರೊಮ್ಯಾಂಟಿಕ್ ಸೀನ್ ಮಾಡುವಾಗ ಭಯವಾಗುತ್ತದೆ ಎಂದು ಹೇಳುತ್ತಿದ್ದವರು. ಈಗ ನೋಡಿದರೆ ಟಾಕ್ಸಿಕ್ ಸಿನಿಮಾದಲ್ಲಿ ಖುಲ್ಲಂಖುಲ್ಲಾ ನಟಿಸಿದ್ದಾರೆ.





