ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ವಿಕಲ್ಪ
ನಿರ್ಮಾಣ:  ಇಂದಿರಾ ಶಿವಸ್ವಾಮಿ
ನಿರ್ದೇಶನ: ಪೃಥ್ವಿರಾಜ್ ಪಾಟೀಲ್
ತಾರಾಂಗಣ: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್, ಗಣಪತಿ ಹೆಗಡೆ ವಡ್ಡಿನಗದ್ದೆ ಮುಂತಾದವರು.
ರೇಟಿಂಗ್: 3/5

ಪೃಥ್ವಿ (ಪೃಥ್ವಿರಾಜ್ ಪಾಟೀಲ್)  ಬೆಂಗಳೂರಿನಲ್ಲಿರುವ ಒಂದು ಸಾಫ್ಟ್ವೇರ್ ಕಂಪನಿಯ ಸಿಇಓ. ಆದರೆ ಅವನಿಗೆ ತಾನು ಬಾಲ್ಯದಲ್ಲಿ ಕಂಡ ತನ್ನ ಊರು, ತಾಯಿ, ಯಕ್ಷಗಾನದ ರಾವಣ ಎಲ್ಲದರ ನೆನಪು ಮತ್ತು ಆ ನೆನಪಿನೊಂದಿಗೆ ಅವನಿಗೆ ಭಯ ಹಾಗೂ ಆತಂಕ ಆವರಿಸಿದೆ. ಇದರಿಂದ ಕಂಪನಿಯ ಕೆಲಸ ಮಾಡಲಾಗದೆ , ತನ್ನ ಗೆಳತಿ ಸಮುಧ್ಯತ (ನಾಗಶ್ರೀ ಹೆಬ್ಬಾರ್‌) ಜೊತೆಸಹ ಸಹಜವಾಗಿ ಇರಲಾಗದೆ ಒದ್ದಾಡುತ್ತಾನೆ. ಇದರೊಡನೆ ಫ್ಲ್ಯಾಶ್ ಬ್ಯಾಕ್ ಕಥೆಯೊಂದು ತೆರೆದುಕೊಳ್ಳುತ್ತದೆ. ಮುಂದೇನು…..? ನೀವು ಸಿನಿಮಾ ಮಂದಿರಗಳಲ್ಲಿ “ವಿಕಲ್ಪ” ಸಿನಿಮಾ ನೋಡಬೇಕು.
ಹಲವಾರು ಜನರು ಇಂದೂ ಅನುಭವಿಸುತ್ತಿರುವ ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ (ಪಿಟಿಎಸ್‌ಡಿ) ಎನ್ನುವ ಮಾನಸಿಕ ವ್ಯಾಧಿಯ ಪರಿಣಾಮಗಳು ಹೇಗಿರಲಿದೆ ಎನ್ನುವುದನ್ನು ನೈಜತೆಯೊಂದಿಗೆ ಹೇಳುವ ಪ್ರಯತ್ನವನ್ನು “ವಿಕಲ್ಪ” ಸಿನಿಮಾದಲ್ಲಿ ಮಾಡಲಾಗಿದೆ. ನಾಯಕ ನಟ ಹಾಗೂ ನಿರ್ದೇಶಕರಾದ ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಸಖತ್ ರಿಲೀಫ್ ನೀಡುತ್ತಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ. ಛಾಯಾಗ್ರಾಹಕ ಅಭಿರಾಮ್ ಗೌಡ , ಸಂಕಲನ ಸುರೇಶ್ ಆರ್ಮುಗಂ , ಚಿತ್ರಕಥೆ ಮಿಥುನ್ ತೀರ್ಥಳ್ಳಿ ಗಮನ ಸೆಳೆಯುತ್ತದೆ.  ಹಿರಿಯ ಯಕ್ಷಗಾನ ಕಲಾವಿದರು ಗೋಡೆ ನಾರಾಯಣ ಹೆಗಡೆ ಅವರ ಪಾತ್ರ  ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ.
ಹಾಸ್ಯ ಮತ್ತು ಹಾರರ್ ಅಂಶಗಳಿಗೆ ಒತ್ತು ನೀಡಲಾಗಿರುವ ಈ ಚಿತ್ರದಲ್ಲಿ  ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುವ ಕಥೆ ಇದೆ. ಕೇವಲ ಹಾರರ್ ಮಾತ್ರವಲ್ಲದೆ ತಾಯಿ ಸೆಂಟಿಮೆಂಟ್, ಲವ್ ಸ್ಟೋರಿ ಸಹ ಇಲ್ಲಿದೆ. ಹಾಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ವನ್ನು ಇಲ್ಲಿ ಮಾಡಲಾಗಿದೆ. ಯಕ್ಷಗಾನ, ದೈವ, ಜಾತ್ರೆ, ಜನಪದದ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ.
ದೆವ್ವ, ಭೂತಗಳಿದೆ ಎಂದು ನಂಬಿಸುವ ಚಿತ್ರಗಳ ನಡುವೆ “ವಿಕಲ್ಪ” ಒಂದು ಪ್ರಯತ್ನವಾಗಿ ಮೆಚ್ಚಬಹುದಾದ ಸಿನಿಮಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ