ಸಾಮಗ್ರಿ : 1 ಕಪ್ ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಕಸೂರಿಮೇಥಿ, ಜೀರಿಗೆ ಪುಡಿ, ಓಮ, ಕರಿಯಲು ಎಣ್ಣೆ, ತುಪ್ಪ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಸೇರಿಸಿ, ತುಸು ಉಗುರು ಬೆಚ್ಚನೆಯ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ, ಮೇಲೊಂದು ತೆಳು ಒದ್ದೆ ಬಟ್ಟೆ ಹೊದಿಸಿಡಿ. ನಂತರ ಮತ್ತೆ ತುಪ್ಪ ಬೆರೆಸಿ ನಾದಿಕೊಂಡು, ಉಂಡೆಗಳಾಗಿಸಿ, ಚಪಾತಿ ತರಹ ಲಟ್ಟಿಸಿ ನಂತರ ಚಾಕು ನೆರವಿನಿಂದ ಚಿತ್ರದಲ್ಲಿರುವಂತೆ ಉದ್ದನೆಯ ಸ್ಟ್ರಿಪ್ಸ್ ಕತ್ತರಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಹೊರ ತೆಗೆದು ಆರಿದ ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಬೇಕೆನಿಸಿದಾಗ ಬಿಸಿ ಬಿಸಿ ಕಾಫಿಟೀ ಜೊತೆ ಸವಿಯಿರಿ.

ಸ್ವಾದಿಷ್ಟ ಕಾಜೂ
ಸಾಮಗ್ರಿ : 2 ಕಪ್ ಇಡಿಯಾದ ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು, ಬ್ಲ್ಯಾಕ್ ಸಾಲ್ಟ್, ಮೆಣಸು, ಕರಿಯಲು ಎಣ್ಣೆ/ತುಪ್ಪ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಯಾ ತುಪ್ಪ ಬಳಸಿ ಗೋಡಂಬಿಗಳನ್ನು ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಇದರ ಮೇಲೆ ಇತರ ಎಲ್ಲಾ ಮಸಾಲೆ ಉದುರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಏರ್ ಟೈಟ್ ಡಬ್ಬಕ್ಕೆ ತುಂಬಿಸಿಡಿ. ಬೇಕಾದಾಗ ಸಿಹಿ ತಿನಿಸಿನ ಜೊತೆ ಇದನ್ನು ಸವಿಯಲು ಕೊಡಿ.
ಖಾರದ ಗರಿಗರಿ ಅವಲಕ್ಕಿ
ಸಾಮಗ್ರಿ : 1 ಕಪ್ ಪೇಪರ್ ಅವಲಕ್ಕಿ, ಅರ್ಧರ್ಧ ಕಪ್ ಕಡಲೆಬೀಜ, ಹುರಿಗಡಲೆ, ಗೋಡಂಬಿ, ಕೊಬ್ಬರಿ ತುಂಡು, ಕರಿಯಲು ಎಣ್ಣೆ, ಒಗ್ಗರಣೆಗೆ ಕರಿಬೇವು, ತುಂಡರಿಸಿದ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಅರಿಶಿನ, ಉಪ್ಪು, ಸಕ್ಕರೆ.
ವಿಧಾನ : ಮೊದಲು ಕಾದ ಎಣ್ಣೆಯಲ್ಲಿ ಅವಲಕ್ಕಿ ಹಾಕಿ ಕರಿದು ತೆಗೆಯಿರಿ. ಇದರಲ್ಲಿ ಕಡಲೆಬೀಜ, ಹುರಿಗಡಲೆ, ಕೊಬ್ಬರಿ ತುಂಡು (ಒಟ್ಟಾಗಿ) ಕರಿದು ತೆಗೆಯಿರಿ. ಸ್ವಲ್ಪ ಎಣ್ಣೆ ಉಳಿಸಿಕೊಂಡು ಉಳಿದ ಪದಾರ್ಥ ಹಾಕಿ ಒಗ್ಗರಣೆ ಕೊಡಿ. ಇವನ್ನೆಲ್ಲ ಕರಿದ ಅವಲಕ್ಕಿಗೆ ಚೆನ್ನಾಗಿ ಬೆರೆಸಿ, ಉಪ್ಪು ಖಾರ ಬೆರೆತುಕೊಳ್ಳುವಂತೆ ಮಾಡಿ, ಏರ್ ಟೈಟ್ ಕಂಟೇನರ್ ಗೆ ತುಂಬಿಸಿಡಿ. ಸಂಜೆಯ ಕಾಫಿಟೀ ಜೊತೆ ಇದು ಸೊಗಸಾಗಿರುತ್ತದೆ.

ಕಸ್ಟರ್ಡ್ ಕಪ್
ಸಾಮಗ್ರಿ : 4 ಸ್ಲೈಸ್ ಬ್ರೆಡ್, ಅರ್ಧ ಕಪ್ ಮಾವಿನ ಹಣ್ಣಿನ ಪೇಸ್ಟ್, 4-5 ಚಮಚ ಮ್ಯಾಂಗೊ ಕಸ್ಚರ್ಡ್ ಪೌಡರ್, 5-6 ಚಮಚ ಸಕ್ಕರೆ, 2 ಕಪ್‌ಫುಲ್ ಕ್ರೀಂಯುಕ್ತ ಗಟ್ಟಿ ಹಾಲು, 2 ಚಮಚ ಕ್ರೀಂ, ಒಂದಿಷ್ಟು ಬೆಣ್ಣೆ, ಅಲಂಕರಿಸಲು ಪುದೀನಾ ಎಲೆ, ವಿಪ್ಪಿಂಗ್ ಕ್ರೀಂ.
ವಿಧಾನ : ಒದ್ದೆ ಕೈಯಿಂದ ಒತ್ತುತ್ತಾ ಬ್ರೆಡ್ ತುಂಡುಗಳನ್ನು ಗೋಲಾಕಾರವಾಗಿ ಸುತ್ತಿಕೊಳ್ಳಿ ಇದನ್ನು ಕಪ್ ಕೇಕ್ ಮೋಲ್ಡ್ಸ್ ಗೆ ಹಾಕಿ ಒತ್ತಿ, ಅದರಂತೆ ಆಕಾರ ಬರಿಸಿ. ನಂತರ ಇವನ್ನು ಓವನ್ನಿನಲ್ಲಿ ಲೈಟ್ ಬ್ರೌನ್ ಆಗುವಂತೆ ಬೇಕ್ ಮಾಡಿ. ಹಾಲಿಗೆ ಸಕ್ಕರೆ ಬೆರೆಸಿ ಕುದಿಸುತ್ತಾ, ಅರ್ಧದಷ್ಟಾಗುವಂತೆ ಹಿಂಗಿಸಿ. ಕಸ್ಟರ್ಡ್ ಪೌಡರ್ ನ್ನು ಕಾದಾರಿದ ಹಾಲಿಗೆ ಹಾಕಿ ಗೊಟಾಯಿಸಿ ಪೇಸ್ಟ್ ಮಾಡಿ. ಉಳಿದ ಸಕ್ಕರೆಯನ್ನು ಉಳಿದ ಹಾಲಿಗೆ ಬೆರೆಸಿ ಕುದಿಸಿರಿ. ನಂತರ ಕಸ್ಟರ್ಡ್ ಪೇಸ್ಟ್ ನ್ನು ಇದಕ್ಕೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. 2 ನಿಮಿಷ ಬಿಟ್ಟು, ಕೆಳಗಿಲಿಸಿ ಆರಲು ಬಿಡಿ. ನಂತರ ಫ್ರಿಜ್ ನಲ್ಲಿರಿಸಿ ಕೂಲ್ ಮಾಡಿ. ಕೂಲ್ ಕಸ್ಟರ್ಡ್ ಗೆ ಕ್ರೀಂ ಬೆರೆಸಿ. ಚೆನ್ನಾಗಿ ಬೀಟ್ ಮಾಡಿ. ನಂತರ ಈ ಮಿಶ್ರಣವನ್ನು ಪೈಪಿಂಗ್ ಬ್ಯಾಗಿಗೆ ತುಂಬಿಸಿ, ಒತ್ತುತ್ತಾ ಬ್ರೆಡ್ ಕಪ್ಸ್ ಗೆ ತುಂಬಿಸಿ. ಇದರ ಮೇಲೆ ಮ್ಯಾಂಗೊ ಪೇಸ್ಟ್, ಅದರ ಮೇಲೆ ವಿಪ್ಪಿಂಗ್ ಕ್ರೀಂ ಬರಲಿ. ಕೊನೆಯಲ್ಲಿ ಪುದೀನಾ ಇರಿಸಿ, ಸರ್ವ್ ಮಾಡಿ!





