ಬ್ಯಾಟರ್ ಗಾಗಿ ಸಾಮಗ್ರಿ : 2 ಕಪ್ ಕಡಲೆಹಿಟ್ಟು, 1-2 ಚಮಚ ರೋಸ್ ಪಿಂಕ್ ಕಲರ್, ಕರಿಯಲು ರೀಫೈಂಡ್ ಎಣ್ಣೆ/ತುಪ್ಪ, 2 ಚಿಟಕಿ ಉಪ್ಪು.
ಸ್ಟ್ರಾಬೆರಿ ಕ್ರಶ್ ವಿತ್ ಶುಗರ್ ಸಿರಪ್ ನ ಸಾಮಗ್ರಿ : 2 ಕಪ್ ಸಕ್ಕರೆ, ಅಗತ್ಯಕ್ಕೆ ತಕ್ಕಷ್ಟು ಬಿಸಿ ನೀರು, 2 ಕಪ್ ಸ್ಟ್ರಾಬೆರಿ ಕ್ರಶ್.
ಶುಗರ್ ಸಿರಪ್ ವಿದೌಟ್ ಸ್ಟ್ರಾಬೆರಿ ಕ್ರಶ್ ನ ಸಾಮಗ್ರಿ : 2 ಕಪ್ ಸಕ್ಕರೆ, ತಕ್ಕಷ್ಟು ನೀರು, ಅರ್ಧ ಕಪ್ ಸ್ಟ್ರಾಬೆರಿ ಎಸೆನ್ಸ್, 8-10 ಹನಿ ಸ್ಟ್ರಾಬೆರಿ ಕಲರ್.
ಅಲಂಕರಿಸಲು ಸಾಮಗ್ರಿ : ತುಪ್ಪದಲ್ಲಿ ಹುರಿದ ಪಿಸ್ತಾ ಚೂರು, ಒಂದಿಷ್ಟು ಬೆಳ್ಳಿ ರೇಕು.
ಬ್ಯಾಟರ್ ಗಾಗಿ ವಿಧಾನ : ಒಂದು ಬೇಸನ್ನಿಗೆ ಕಡಲೆಹಿಟ್ಟು, ಇದಕ್ಕೆ ಕಲಸಲು ಬೇಕಾದಷ್ಟು ನೀರು, ಉಪ್ಪು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದಕ್ಕೆ ರೋಸ್ ಪಿಂಕ್ ಕಲರ್ ಬೆರೆಸಿ, ಇದರ ಸ್ಮೂತ್ ಬ್ಯಾಟರ್ ರೆಡಿ ಮಾಡಿ. ಇದನ್ನು ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ.
ಡೀಪ್ ಫ್ರೈ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ದಪ್ಪ ರಂಧ್ರಗಳುಳ್ಳ ಬೂಂದಿ ಜರಡಿ ನೆರವಿನಿಂದ, ಅದರ ಮೇಲೆ ನೆನೆದ ಹಿಟ್ಟು ಹರಡಿ, ಬೂಂದಿ ಕಾಳನ್ನು ಕರಿದು ತೆಗೆಯಿರಿ. ಹೀಗೆ ತಯರಾದ ಬೂಂದಿಯನ್ನು ಶುಗರ್ ಸಿರಪ್ ಗೆ ಹಾಕಿ ಚೆನ್ನಾಗಿ ನೆನೆಯಲು ಬಿಡಿ. 1-2 ಗಂಟೆಗಳ ನಂತರ ಇದನ್ನು ಮತ್ತೊಂದು ಸಿರಪ್ ಗೆ ರವಾನಿಸಿ.
ಶುಗರ್ ಸಿರಪ್ ಗಾಗಿ ವಿಧಾನ : ಒಂದು ಬಾಣಲೆಯಲ್ಲಿ ಸಕ್ಕರೆ, ತಕ್ಕಷ್ಟು ಬಿಸಿ ನೀರು ಬೆರೆಸಿ, ಮಂದ ಉರಿಯಲ್ಲಿ ಅದರಲ್ಲಿ ಸತತ ಕೈಯಾಡಿಸುತ್ತಿರಿ. ಸಕ್ಕರೆ ಚೆನ್ನಾಗಿ ವಿಲೀನವಾದಾಗ, ಸ್ಟ್ರಾಬೆರಿ ಕ್ರಶ್ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಚೆನ್ನಾಗಿ ಗಟ್ಟಿ ಆಗುವವರೆಗೂ ನಡುನಡುವೆ ತುಪ್ಪ ಬೆರೆಸುತ್ತಾ ಕೆದಕಬೇಕು. ನಂತರ ಕರಿದ ಬೂಂದಿಯನ್ನು ಇದಕ್ಕೆ ಬೆರೆಸಿಕೊಳ್ಳಿ.
ಲಡ್ಡು ವಿಧಾನ : ಬೂಂದಿಯನ್ನು ಸಿರಪ್ ನಿಂದ ತೆಗೆದು ಜಿಡ್ಡು ಸವರಿದ ಅಗಲ ತಟ್ಟೆಯಲ್ಲಿ ಹರಡಿಕೊಳ್ಳಿ. ಅದು 100% ಆರುವ ಮೊದಲೇ, ನಿಂಬೆ ಗಾತ್ರದ ಉಂಡೆಗಳಾಗಿಸಿ. ಚಿತ್ರದಲ್ಲಿರುವಂತೆ ಪಿಸ್ತಾ ಬೆಳ್ಳಿ ರೇಕಿನಿಂದ ಅಲಂಕರಿಸಿ, ಸವಿಯಲು ಕೊಡಿ.

ಬೆಲ್ಲದ ಕೊಬ್ಬರಿ ಮಿಠಾಯಿ
ಸಾಮಗ್ರಿ : 1 ದೊಡ್ಡ ತೆಂಗಿನಕಾಯಿಯ ತುರಿ, 1-1 ಕಪ್ ತುಪ್ಪ, ಪುಡಿ ಮಾಡಿದ ಬೆಲ್ಲ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು, (ಒಟ್ಟಾರೆ ಅರ್ಧ ಕಪ್), ಮಸೆದ ಖೋವಾ, ಬಿಸಿ ಹಾಲಲ್ಲಿ ನೆನೆಸಿದ ತುಸು ಕೇಸರಿ, ಏಲಕ್ಕಿ ಪುಡಿ.
ವಿಧಾನ : ಮೊದಲು ತುಸು ತುಪ್ಪದಲ್ಲಿ ಡ್ರೈ ಫ್ರೂಟ್ಸ್ ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಇನ್ನಷ್ಟು ತುಪ್ಪ ಹಾಕಿ, ಕಾಯಿ ತುರಿ ಹಾಕಿ, ಮಂದ ಉರಿಯಲ್ಲಿ ಘಮ್ಮೆನ್ನುವಂತೆ ಬಾಡಿಸಿ. ಇದನ್ನು ಕೆಳಗಿಳಿಸಿ. ಅದೇ ಬಾಣಲೆಗೆ ಬೆಲ್ಲ, ಅರ್ಧ ಕಪ್ ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ನಂತರ ಇದಕ್ಕೆ ಮಸೆದ ಖೋವಾ ಹಾಕಿ ಕೆದಕಬೇಕು. ನಂತರ ಇದಕ್ಕೆ ಕೇಸರಿ ಬೆರೆತ ಹಾಲು, ಏಲಕ್ಕಿ, ಕಾಯಿತುರಿ, ಡ್ರೈ ಫ್ರೂಟ್ಸ್ ಎಲ್ಲಾ ಸೇರಿಸಿ ಮಂದ ಉರಿಯಲ್ಲಿ ಹದನಾಗಿ ಬೆರೆತುಕೊಳ್ಳುವಂತೆ, ನಡುನಡುವೆ ತುಪ್ಪ ಬೆರೆಸುತ್ತಾ ಕೆದಕಬೇಕು. 5-6 ನಿಮಿಷಗಳಲ್ಲಿ ಇದು ಸಾಕಷ್ಟು ಗಟ್ಟಿಯಾಗುತ್ತದೆ. ಇದನ್ನು ಕೆಳಗಿಳಿಸಿ, ಚೆನ್ನಾಗಿ ತುಪ್ಪ ಹಚ್ಚಿದ ತಟ್ಟೆಯಲ್ಲಿ ಸಮನಾಗಿ ಹರಡಿರಿ. ಅಗತ್ಯವೆನಿಸಿದರೆ, ನಡುನಡುವೆ ಬೆಳ್ಳಿ ರೇಕು ಅಂಟಿಸಿ. ಸ್ವಲ್ಪ ಹೊತ್ತು ಬಿಟ್ಟು, ಬಿಸಿ ಇರುವಾಗಲೇ ನೀಟಾಗಿ ಮಿಠಾಯಿ ಕತ್ತರಿಸಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.

ಸೋರೆಕಾಯಿ ಹಲ್ವಾ
ಸಾಮಗ್ರಿ : ಸಿಪ್ಪೆ ಹೆರೆದು ನೀಟಾಗಿ ತುರಿದುಕೊಂಡ 1 ಎಳೆ ಸೋರೇಕಾಯಿ, 2 ಕಪ್ ಹಾಲು, ಅರ್ಧರ್ಧ ಕಪ್ ಸಕ್ಕರೆ, ತುಪ್ಪ, ತುಸು ಜೇನು, ಏಲಕ್ಕಿ ಪುಡಿ, ಬೇಕಿಂಗ್ ಸೋಡಾ, ಪಚ್ಚ ಕರ್ಪೂರ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಅಲಂಕರಿಸಲು ಗುಲಾಬಿ ದಳ, ಬೆಳ್ಳಿ ರೇಕು, ಪುದೀನಾ.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ. ಅದಕ್ಕೆ ಇನ್ನಷ್ಟು ತುಪ್ಪ ಸೇರಿಸಿ, ಸೋರೆ ತುರಿ ಹಾಕಿ ಮಂದ ಉರಿಯಲ್ಲಿ ಘಮ್ಮೆನ್ನುವಂತೆ ಬಾಡಿಸಿ. ಇದಕ್ಕೆ ಬೇಕಿಂಗ್ ಸೋಡ, ಕದಡಿದ ಬಿಸಿ ಹಾಲು ಬೆರೆಸಿ ಇನ್ನಷ್ಟು ಬೇಯಿಸಿ. ನಡುನಡುವೆ ತುಪ್ಪ ಬೆರೆಸುತ್ತಾ, ಕೆದಕಬೇಕು. ಸಕ್ಕರೆ ಹಾಕಿ ಕೈಯಾಡಿಸಿ. ನಂತರ ಜೇನು, ಏಲಕ್ಕಿ, ಡ್ರೈಫ್ರೂಟ್ಸ್ ಇತ್ಯಾದಿ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ, ತಳ ಸೀಯದಂತೆ ತುಪ್ಪ ಬೆರೆಸುತ್ತಾ ಕೆದಕಬೇಕು. 2-3 ನಿಮಿಷ ಬಿಟ್ಟು ಕೆಳಗಿಳಿಸಿ, ಸರ್ವಿಂಗ್ ಬೌಲ್ ಗೆ ಹಾಕಿಟ್ಟು, ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿಯಾಗಿ, ಇನ್ನಷ್ಟು ತುಪ್ಪ ಹಾಕಿ, ಅತಿಥಿಗಳಿಗೆ ಸವಿಯಲು ಕೊಡಿ.

ರೋಸ್ ಹಲ್ವಾ
ಸಾಮಗ್ರಿ : 2 ಕಪ್ ರೋಸ್ ಸಿರಪ್, 1 ಕಪ್ ಕಾರ್ನ್ ಸ್ಟಾರ್ಚ್ (ರೆಡಿಮೇಡ್ ಲಭ್ಯ), ಅರ್ಧರ್ಧ ಕಪ್ ತುಪ್ಪ, ಮಿಕ್ಸ್ಡ್ ಡ್ರೈ ಫ್ರೂಟ್ಸ್, 2 ಚಿಟಕಿ ಉಪ್ಪು, ಅಲಂಕರಿಸಲು ಗುಲಾಬಿ ದಳ, ಹೆಚ್ಚುವರಿ ಪಿಸ್ತಾಬಾದಾಮಿ ಚೂರು.
ವಿಧಾನ : ಒಂದು ದೊಡ್ಡ ಬಟ್ಟಲಿಗೆ ರೋಸ್ ಸಿರಪ್, ಚಿಟಕಿ ಉಪ್ಪು ಸೇರಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ, ತುಸು ಬಿಸಿ ನೀರು ಬೆರೆಸಿ ಚೆನ್ನಾಗಿ ಗೊಟಾಯಿಸಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಈ ಮಿಶ್ರಣ ಬೆರೆಸಿ, ಮಂದ ಉರಿಯಲ್ಲಿ ಸತತ ಕೈ ಆಡಿಸಬೇಕು, ನಡು ನಡುವೆ ತುಪ್ಪ ಬೆರೆಸುತ್ತಿರಿ. ಇದರಲ್ಲಿನ ತೇವಾಂಶ ಪೂರ್ತಿ ಹಿಂಗಿ ಹೋಗುವವರೆಗೂ ಇದನ್ನು ಮಂದ ಉರಿಯಲ್ಲಿ ಹೀಗೇ ತುಪ್ಪ ಬೆರೆಸುತ್ತಾ ಕೆದಕುತ್ತಿರಬೇಕು. ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ನಂತರ ತುಪ್ಪ ಸರಿದ ತಟ್ಟೆಗೆ ಈ ಮಿಶ್ರಣ ಹರಡಿರಿ. 1 ಗಂಟೆ ಕಾಲ ಸೆಟ್ ಆಗಲು ಬಿಡಿ. ನಂತರ ಇದನ್ನು ತುಂಡುಗಳಾಗಿಸಿ, ಚಿತ್ರದಲ್ಲಿರುವಂತೆ ನೀಟಾಗಿ ಅಲಂಕರಿಸಿ, ಹಬ್ಬಕ್ಕೆ ಬಂದವರಿಗೆ ಸವಿಯಲು ಕೊಡಿ.

ಬೂಂದಿ ಲಡ್ಡು
ಸಾಮಗ್ರಿ : 2 ಕಪ್ ಜರಡಿಯಾಡಿದ ಕಡಲೆಹಿಟ್ಟು, ಅರ್ಧ ಸಣ್ಣ ಚಮಚ ಯೆಲ್ಲೋ ಫುಡ್ ಕಲರ್ ಪೌಡರ್, ಕರಿಯಲು ರೀಫೈಂಡ್ ಎಣ್ಣೆ/ ತುಪ್ಪ, 500 ಗ್ರಾಂ ಸಕ್ಕರೆ, ಅರ್ಧ ಲೀ. ಬಿಸಿ ನೀರು, ತುಸು ಏಲಕ್ಕಿಪುಡಿ, ಕಾಳುಮೆಣಸು, ಲವಂಗ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಹಾಲಲ್ಲಿ ನೆನೆದ ಕೇಸರಿ, ನಿಂಬೆರಸ, ಅರ್ಧ ಕಪ್ ಕೆಸ್ಟರ್ ಶುಗರ್, ಅಲಂಕರಿಸಲು ಬೆಳ್ಳಿ ರೇಕು.
ವಿಧಾನ : ಒಂದು ಬೇಸನ್ನಿಗೆ ಕಡಲೆಹಿಟ್ಟು, ಫುಡ್ ಕಲರ್, ಸ್ವಲ್ಪ ಸ್ವಲ್ಪವೇ ಬಿಸಿ ನೀರು ಬೆರೆಸುತ್ತಾ ಗಟ್ಟಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಡಿ. ನಂತರ ಬಾಣಲೆಯಲ್ಲಿ ರೀಫೈಂಡ್ ಎಣ್ಣೆ ಅಥವಾ ತುಪ್ಪ ಕಾಯಿಸಿಕೊಂಡು, ಬೂಂದಿ ಜರಡಿಗೆ ಈ ಮಿಶ್ರಣ ಸೇರಿಸಿ, ನೇರ ಬಾಣಲೆಗೆ ಹಿಡಿದು, ಹದನಾಗಿ ಹೊಂಬಣ್ಣ ಬರುವಂತೆ ಬೂಂದಿ ತಯಾರಿಸಿ. ಇದನ್ನು ಒಂದೆಡೆ ತೆಗೆದಿರಿಸಿ ನಂತರ ಸಕ್ಕರೆ ಪಾಕಕ್ಕೆ ಹಾಕಬೇಕು. ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಸಮಪ್ರಮಾಣದಲ್ಲಿ ಸಕ್ಕರೆ, ಬಿಸಿ ನೀರು ಬೆರೆಸುತ್ತಾ, ಸಕ್ಕರೆ ವಿಲೀನವಾಗುವಂತೆ ಮಂದ ಉರಿಯಲ್ಲಿ ಕುದಿಸಬೇಕು. ನಂತರ ಇದಕ್ಕೆ ಏಲಕ್ಕಿ, ಕಾಳುಮೆಣಸು, ಲವಂಗ, ಕೇಸರಿ ಬೆರೆಸಿ, ನೀಟಾಗಿ ಒಂದೆಳೆ ಪಾಕ ರೆಡಿ ಆಗುವವರೆಗೂ ಮಂದ ಉರಿಯಲ್ಲಿ ಕುದಿಸಬೇಕು. ನಂತರ ಕೆಳಗಿಳಿಸಿ ಸಂಪೂರ್ಣ ಆರಲು ಬಿಡಿ. ಕರಿದ ಬೂಂದಿ ಕಾಳನ್ನು ಇದಕ್ಕೆ ಹಾಕಿ 3-4 ಗಂಟೆ ಕಾಲ ನೆನೆಸಬೇಕು. ಆಮೇಲೆ ಬೂಂದಿ ಕಾಳನ್ನು ಪಾಕದಿಂದ ತೆಗೆದು ತುಪ್ಪ ಸವರಿದ ತಟ್ಟೆಯಲ್ಲಿ ಹರಡಿರಿ. ಆರಿದ ನಂತರ ಇದನ್ನು ಮ್ಯಾಶ್ ಮಾಡಿ, ಕೆಸ್ಟರ್ ಶುಗರ್ ಬೆರೆಸಿ, ಲಡ್ಡು ಉಂಡೆ ಕಟ್ಟಿರಿ. ಚಿತ್ರದಲ್ಲಿರುವಂತೆ ಬೆಳ್ಳಿ ರೇಕಿನಿಂದ ಅಲಂಕರಿಸಿ ಸವಿಯಲು ಕೊಡಿ.

ಚಾಕಲೇಟ್ ಗುಳಿಯಪ್ಪ
ಸಾಮಗ್ರಿ : ಅರ್ಧ ಕಪ್ ಮೈದಾ, 10-12 ಡಾರ್ಕ್ ಚಾಕಲೇಟ್, ತುಸು ಹಾಲು, ತುಪ್ಪ, ಬೇಕಿಂಗ್ ಪೌಡರ್, ಕೋಕೋ ಪೌಡರ್, ಫ್ಲಾಕ್ಸ್ ಸೀಡ್ಸ್, ವೆನಿಲಾ ಎಸೆನ್ಸ್, 2 ಚಿಟಕಿ ಉಪ್ಪು.
ವಿಧಾನ : ಚಾಕಲೇಟ್ ಹೊರತುಪಡಿಸಿ ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕಿರಲಿ. ಪಡ್ಡು ತಯಾರಿಸುವ ಬಾಣಲೆಯನ್ನು ಒಲೆಯ ಮೇಲಿರಿಸಿ, ಎಲ್ಲಾ ಕುಳಿಗಳಿಗೂ ತುಪ್ಪ ಸವರಿಕೊಳ್ಳಿ. ಅದರಲ್ಲಿ ಅರ್ಧರ್ಧ ತುಂಬುವಷ್ಟು ಮಿಶ್ರಣ ಹಾಕಿಡಿ. ಅದರೊಳಗೆ ಹುದುಗುವಂತೆ ತುಂಡರಿಸಿದ ಚಾಕಲೇಟ್ ಕ್ಯೂಬ್ಸ್ ನ್ನು ಎಲ್ಲಕ್ಕೂ ಹರಡಿರಿ. ಮಿಶ್ರಣ ಅದನ್ನು ಕವರ್ ಮಾಡಲಿ. ಇದು ಅರೆ ಬೆಂದಾಗ ಪ್ರತಿಯೊಂದಕ್ಕೂ ಸುತ್ತಲೂ ತುಪ್ಪ ಹಾಕಿ, ಅದನ್ನು ತಿರುವಿ ಹಾಕಿ ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ. ಇದನ್ನು ಪುಟ್ಟ ತಟ್ಟೆಗಳಿಗೆ ಜೋಡಿಸಿ, ಚಿತ್ರದಲ್ಲಿರುವಂತೆ ಇದರ ಮೇಲೆ ಕರಗಿದ ಚಾಕಲೇಟ್ ನಿಂದ ಗಾರ್ನಿಶ್ ಮಾಡಿ, ಮಕ್ಕಳಿಗೆ ಸವಿಯಲು ಕೊಡಿ.

ರೈಸ್ ಕೇಸರಿಭಾತ್
ಸಾಮಗ್ರಿ : 1-1 ಕಪ್ ಬಾಸುಮತಿ ಅಕ್ಕಿ, ಹಾಲು, ಅರ್ಧರ್ಧ ಕಪ್ ಸಕ್ಕರೆ, ತುಪ್ಪ, ತುಂಡರಿಸಿದ ಡ್ರೈ ಫ್ರೂಟ್ಸ್, ಸಿಹಿ ಖೋವಾ, ತುರಿದ ಅನಾನಸ್, ತುಸು ಏಲಕ್ಕಿ, ಲವಂಗ, ಕಲ್ಲು ಸಕ್ಕರೆ, ಹಾಲಲ್ಲಿ ನೆನೆಸಿದ ಕೇಸರಿ.
ವಿಧಾನ : ಮೊದಲು ಚಿಕ್ಕ ಕುಕ್ಕರ್ ನಲ್ಲಿ ಅಕ್ಕಿಯನ್ನು ತುಪ್ಪದಲ್ಲಿ ಲಘುವಾಗಿ ಹುರಿದು, ಇದಕ್ಕೆ ಹಾಲು ಬೆರೆಸಿ ಉದುರುದುರಾದ ಅನ್ನ ತಯಾರಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ ಹುರಿದು ತೆಗೆಯಿರಿ. ಇನ್ನಷ್ಟು ತುಪ್ಪ ಬಿಸಿ ಮಾಡಿ ಏಲಕ್ಕಿ, ಲವಂಗ ಹಾಕಿ ಚಟಾಪಟಾಯಿಸಿ. ಅನಾನಸ್ ತುರಿ ಹಾಕಿ ಹದನಾಗಿ ಬಾಡಿಸಿ. ಆಮೇಲೆ ಇದಕ್ಕೆ ಮಸೆದ ಖೋವಾ ಹಾಕಿ ಕೈಯಾಡಿಸಿ. ನಂತರದ ಸಕ್ಕರೆ, ಉಳಿದ ಸಾಮಗ್ರಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅನ್ನ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಿರಿ. 5-6 ನಿಮಿಷ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾದ ಇದಕ್ಕೆ ತುಪ್ಪ ಹಾಕಿ ಸವಿಯಲು ಕೊಡಿ.





