ಹೆಚ್ಚುತ್ತಿರುವ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು ಡಯೆಟ್ ಪ್ಲಾನ್‌ನಲ್ಲಿ ಅಷ್ಟಿಷ್ಟು ಬದಲಾಣೆ ಮಾಡಿಕೊಳ್ಳುವುದರ ಜೊತೆ ಜೊತೆಗೆ ಈ ಸಂಗತಿಗಳ ಬಗೆಗೂ ಗಮನ ಹರಿಸಬೇಕು !
ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ ನಡೆಸಿದ ಒಂದು ಸಮೀಕ್ಷೆ ಪ್ರಕಾರ, ಭಾರತದಲ್ಲಿ ಪ್ರತಿ 4 ಮಹಿಳೆಯರಲ್ಲಿ 3 ಮಹಿಳೆಯರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.`ಮಲ್ಟಿಟಾಸ್ಕಿಂಗ್ ಸೀರಿಯಸ್‌ಲಿ ಅಫೆಕ್ಟಿಂಗ್ ಕಾರ್ಪೋರೇಟ್ ವುಮನ್ ಹೆಲ್ತ್' ಎಂಬ ಹೆಸರಿನ ಸರ್ವೆಯಿಂದ ತಿಳಿದು ಬಂದ ಸಂಗತಿಯೆಂದರೆ, ಶೇ.78ರಷ್ಟು ಉದ್ಯೋಗಸ್ಥ ಮಹಿಳೆಯರು ದೈಹಿಕವಾಗಿ ಆರೋಗ್ಯದಿಂದಿಲ್ಲ. ಅಧ್ಯಯನದ ಪ್ರಕಾರ, ಅನಿಯಮಿತ ದಿನಚರಿ ಹಾಗೂ ಕೆಟ್ಟ ಜೀವನಶೈಲಿಯ ಕಾರಣದಿಂದ ಶೇ.42ರಷ್ಟು ಮಹಿಳೆಯರು ಖಿನ್ನತೆ, ಬೆನ್ನುನೋವು, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಅತಿ ರಕ್ತದೊತ್ತಡಕ್ಕೆ ಸಿಲುಕಿದ್ದಾರೆ. ಶೇ.22 ರಷ್ಟು ಮಹಿಳೆಯರು ಭೀಕರ ರೋಗಗಳಿಂದ ಬಳಲುತ್ತಿದ್ದಾರೆ.
ಹೆಸರಾಂತ ಆಸ್ಪತ್ರೆಯೊಂದರ ಕನ್ಸಲ್ಟೆಂಟ್ ನ್ಯೂಟ್ರಿಷನಿಸ್ಟ್ ಡಾ. ಮಂಜರಿ ಹೀಗೆ ಹೇಳುತ್ತಾರೆ, ನಗರ ಪ್ರದೇಶದ ಮಹಿಳೆಯರು 3 ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲನೆಯದು, ಅವರು ಉದ್ಯೋಗಸ್ಥೆಯಾಗಿರುವುದರಿಂದ ಅವರ ಬಳಿ ಸಮಯದ ಕೊರತೆ ಇದೆ. ಹೀಗಾಗಿ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲು ಆಗುತ್ತಿಲ್ಲ. ಎರಡನೆಯದು ಇಂದಿನ ಮಹಿಳೆಯರಿಗೆ ಅತಿಯಾದ ಸೌಂದರ್ಯ ಪ್ರಜ್ಞೆ ಇದೆ.
ತ್ವಚೆಯ ಮೇಲೆ ಕಂದು ಬಣ್ಣ ಉಂಟಾಗಬಾರದು ಎನ್ನುವುದು ಅವರ ಕಾಳಜಿಯಾಗಿದೆ. ಈ ಕಾರಣದಿಂದಾಗಿ ಅವರು ಬಿಸಿಲಲ್ಲಿ ಓಡಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಅವರ ದೇಹದಲ್ಲಿ ವಿಟಮಿನ್ `ಡಿ' ಕೊರತೆ ಇದೆ. ಮೂರನೇ ಸಮಸ್ಯೆ ಎಂದರೆ, ಇಂದಿನ ಮಹಿಳೆಯರು ಎಜುಕೇಟೆಡ್. ಹೀಗಾಗಿ ಅವರು ತಮಗೆ ಸರಿ ಎನಿಸಿದ್ದನ್ನು ಮಾತ್ರವೇ ನಂಬುತ್ತಾರೆ. ಉದ್ಯೋಗಸ್ಥೆಯಾಗಿರುವುದು ಹಾಗೂ ಎಜುಕೇಟೆಡ್ ಆಗಿರುವುದು ತಪ್ಪು ಎಂದು ಹೇಳುವುದು ಸರಿಯಲ್ಲ. ಆದರೆ ಕೆಲಸ ಕಾರ್ಯಗಳ ಜೊತೆ ಜೊತೆಗೆ ಆರೋಗ್ಯದ ಬಗೆಗೆ ಗಮನಹರಿಸುವುದು ಅತ್ಯವಶ್ಯಕ. ತಮ್ಮ ಎಜುಕೇಶನ್‌ನ್ನು ಸಮರ್ಪಕವಾಗಿ ಬಳಸುವುದು ಕೂಡ ಅಷ್ಟೇ ಅತ್ಯವಶ್ಯಕ.
ಅಂದಹಾಗೆ, ಇಂದಿನ ಆಧುನಿಕ ಮಹಿಳೆಯರು ಇಂಟರ್‌ನೆಟ್‌ನಲ್ಲಿ ಒಳ್ಳೆಯ ಆರೋಗ್ಯಕ್ಕೆ ಏನನ್ನು ತಿನ್ನಬೇಕು, ಏನನ್ನು ಕುಡಿಯಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆಯೇ ಡಯೆಟ್ ಪ್ಲಾನ್ ಮಾಡುತ್ತಾರೆ. ಆದರೆ ಇದು ತಪ್ಪು ಪದ್ಧತಿ. ಇಂಟರ್‌ನೆಟ್‌ನಲ್ಲಿ ಒಂದೇ ವಿಚಾರಕ್ಕೆ ಸಂಬಂಧಪಟ್ಟಂತೆ ಅನೇಕರು ತಮ್ಮ ವಿಭಿನ್ನ ಅಭಿಪ್ರಾಯ ಮಂಡಿಸಿರುತ್ತಾರೆ. ಅದು ನಿಮಗೆ ಸೂಕ್ತವಾಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಿಮ್ಮ ದೇಹದ ಪ್ರಕಾರಕ್ಕೆ ಸರಿಹೋಗಬಹುದು ಎಂದು ಊಹಿಸುವುದು ಕಷ್ಟ. ಅದು ನಿಮ್ಮ ಮೇಲೆ ತದ್ವಿರುದ್ಧ ಪರಿಣಾಮ ಬೀರಿದರೂ ಆಶ್ಚರ್ಯಪಡಬೇಕಿಲ್ಲ. ಹೀಗಾಗಿ ಕಾಲಕಾಲಕ್ಕೆ ಕನ್ಸಲ್ಟಂಟ್‌ರಿಂದ ನಿಮ್ಮ ಡಯೆಟ್ ಪ್ಲಾನ್ ಮಾಡಿಸಿಕೊಳ್ಳಿ.
ದುರ್ಬಲಗೊಳ್ಳುವ ಆರೋಗ್ಯ
ಇಂದಿನ ದಿನಗಳಲ್ಲಿ ಮಹಿಳೆಯರು ಏಕಕಾಲಕ್ಕೆ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅವರು ಉದ್ಯೋಗಸ್ಥೆ ಅಥವಾ ಗೃಹಿಣಿಯೇ ಆಗಿರಬಹುದು, ಅವರ ಜವಾಬ್ದಾರಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿವೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ, ಈಗ ಮಹಿಳೆಯರು ಹೆಚ್ಚೆಚ್ಚು ಮಾಹಿತಿ ಹೊಂದುತ್ತಿರುವುದು ಮತ್ತು ಆಧುನಿಕ ಸಲಕರಣೆಗಳನ್ನು ಉಪಯೋಗಿಸಲು ತಿಳಿದಿರುವುದು. ಆದರೆ ಒಂದೆಡೆ ಇದು ಅವರ ಕೆಲಸವನ್ನು ಸುಲಭಗೊಳಿಸುತ್ತಿದೆ. ಇನ್ನೊಂದೆಡೆ ಅದು ಅವರ ಜವಾಬ್ದಾರಿಗಳನ್ನೂ ಹೆಚ್ಚಿಸುತ್ತದೆ. ಉದಾಹರಣೆಗಾಗಿ ದ್ವಿಚಕ್ರವಾಹನ ಹಾಗೂ ಕಾರುಗಳನ್ನು ಓಡಿಸಲು ಗೊತ್ತಿರುವ ಗೃಹಿಣಿಯರು ಮಕ್ಕಳನ್ನು ಶಾಲೆಗೆ ಬಿಡುವುದು ಹಾಗೂ ಕರೆದುಕೊಂಡು ಬರುವ ಜವಾಬ್ದಾರಿ ಹೊರಬೇಕಾಗುತ್ತದೆ. ಅದೇ ರೀತಿ ಉದ್ಯೋಗಸ್ಥ ಮಹಿಳೆಯರು ಆಫೀಸಿನ ಜವಾಬ್ದಾರಿಯ ಜೊತೆ ಜೊತೆಗೆ ಮನೆಯ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗುತ್ತದೆ.