ಮಗುವಿನ ದೇಹದ ಮಸಾಜ್‌ನಿಂದ ಅದಕ್ಕೆ ಹಲವು ರೀತಿಯ ಲಾಭಗಳಿವೆ. ಒಂದೆಡೆ ಅದು ಮಗುವಿನ ಬೆಳವಣಿಗೆಗೆ ನೆರವಾದರೆ, ಇನ್ನೊಂದೆಡೆ ತಾಯಿ-ಮಗುವಿನ ಅನುಬಂಧ ಹೆಚ್ಚಿಸಲು ನೆರವಾಗುತ್ತದೆ.

ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಮಸಾಜ್‌ನಿಂದಾಗಿ ಮಗು ಸಹಜ ಸ್ಥಿತಿಗೆ ಬರುತ್ತದೆ. ಅದರ ಅಳು ಕಡಿಮೆ ಆಗುತ್ತದೆ, ಚೆನ್ನಾಗಿ ನಿದ್ದೆ ಮಾಡುತ್ತದೆ. ಅಷ್ಟೇ ಅಲ್ಲ, ಮಗುವಿಗೆ ಮಲಬದ್ಧತೆ ಹಾಗೂ ಹೊಟ್ಟೆನೋವಿನ ಸಮಸ್ಯೆಯೂ ಇರದು. ಅದು ಮಗುವಿನಲ್ಲಿ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಮಸಾಜ್‌ ಯಾವಾಗ ಶುರು ಮಾಡಬೇಕು?

ಮಗುವಿಗೆ ತಿಂಗಳಾದಾಗ ಮಸಾಜ್‌ ಶುರು ಮಾಡಬಹುದು. ಆಗ ಮಗುವಿನ ಹೊಕ್ಕುಳಬಳ್ಳಿ ಹೋಗಿಬಿಟ್ಟಿರುತ್ತದೆ. ನಾಭಿಯು ಒಣಗಿರುತ್ತದೆ. ಹುಟ್ಟಿದ ಸಂದರ್ಭದಲ್ಲಿದ್ದ ತ್ವಚೆಗೂ ಈಗಿನ ತ್ವಚೆಗೂ ಸಾಕಷ್ಟು ಹೋಲಿಕೆಯಿರುತ್ತವೆ. ಈಗ ಅದು ಸಾಕಷ್ಟು ಸಂವೇದನಾಶೀಲಗೊಂಡಿರುತ್ತದೆ. ಚರ್ಮದಲ್ಲಿ ಸಾಕಷ್ಟು ಬಿಗುವು ಬಂದಿರುತ್ತದೆ. ಈ ಹಂತದಲ್ಲಿ ಮಗು ಸ್ಪರ್ಶಕ್ಕೆ ಹೆಚ್ಚು ಒಳ್ಳೆಯ ಪ್ರತಿಕ್ರಿಯೆ ನೀಡುತ್ತದೆ.

ಬಾಡಿ ಮಸಾಜ್‌ನ ಲಾಭಗಳು

ಮಸಾಜ್‌ನಿಂದ ಹಲವು ನೈಸರ್ಗಿಕ ಲಾಭಗಳಿವೆ.

– ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಆಗುತ್ತದೆ.

– ಮಕ್ಕಳ ಸ್ನಾಯುಗಳಿಗೆ ವಿಶ್ರಾಂತಿ ದೊರಕುತ್ತದೆ.

– ಗಾಢ ನಿದ್ರೆಗೆ ಅನುಕೂಲ.

– ಮಗುವಿನ ನರಮಂಡಲ ಚೆನ್ನಾಗಿ ಬೆಳವಣಿಗೆಯಾಗುತ್ತದೆ.

– ಒಂದು ವೇಳೆ ಮಗು ದುರ್ಬಲವಾಗಿದ್ದರೆ ಅದರ ಜೀವನದ ಗುಣಮಟ್ಟ ಉತ್ತಮಗೊಳ್ಳುತ್ತದೆ.

– ರಕ್ತದ ಚಲನೆಯಲ್ಲಿ ಮತ್ತಷ್ಟು ಸುಧಾರಣೆಯಾಗುತ್ತದೆ.

ಮಸಾಜ್‌ ಮಾಡುವುದು ಹೇಗೆ?

ಮಸಾಜ್‌ ಮಾಡುವಾಗ ಕೋಣೆಯಲ್ಲಿ ಸಾಕಷ್ಟು ಉಷ್ಣತೆ ಇರಬೇಕು. ಮಗು ಶಾಂತ ಸ್ಥಿತಿಯಲ್ಲಿರಬೇಕು. ನೀವು ಕೂಡ ರಿಲ್ಯಾಕ್ಸ್ ಆಗಬೇಕು. ಮಕ್ಕಳ ಮಸಾಜ್‌ಗೆಂದೇ ಸಿದ್ಧಪಡಿಸಲಾದ ತೈಲವನ್ನು ಬಳಸಿ. ಯಾವುದೇ ಸುವಾಸನೆ ಇರದ ನೈಸರ್ಗಿಕ ತೈಲ ಉತ್ತಮ. ಮಗು ಮಲಗಿಕೊಂಡು ಎದ್ದ ಬಳಿಕ ಮಸಾಜ್‌ ಮಾಡಿದರೆ ಹೆಚ್ಚು ಉಪಯುಕ್ತ. 10 ರಿಂದ 30 ನಿಮಿಷಗಳ ಕಾಲ ಮಸಾಜ್‌ ಮಾಡುವುದು ಒಳ್ಳೆಯದು. ಕೇವಲ ಮಸಾಜ್‌ ಮಾಡಿದರೆ ಸಾಲದು, ನೀವು ಮಸಾಜ್‌ ಮಾಡುವ ವಿಧಾನ ಸಮರ್ಪಕವಾಗಿರಬೇಕು.

ಮಸಾಜ್‌ನ ವಿಧಾನಗಳನ್ನು ಅರಿಯಿರಿ

ಮೊದಲ ಹಂತ ಅನುಮತಿ ಪಡೆಯುವುದು : ಅನುಮತಿಯ ಅರ್ಥ ನಿಮ್ಮ ಮಗು ಯಾವಾಗ ಮಸಾಜ್‌ ಇಷ್ಟಪಡುವುದಿಲ್ಲವೋ, ಆಗ ಮಾಡಲು ಹೋಗಲೇಬೇಡಿ. ಅದಕ್ಕೆ ಯಾವಾಗ ಇಷ್ಟ ಆಗುತ್ತೋ ಆಗಲೇ ಮಸಾಜ್‌ ಮಾಡಿ. ಅಂಗೈಯಲ್ಲಿ ಒಂದಿಷ್ಟು ತೈಲ ಹಚ್ಚಿಕೊಂಡು ಮಗುವಿನ ಹೊಟ್ಟೆ ಹಾಗೂ ಕಿವಿಯ ಹಿಂಭಾಗದಲ್ಲಿ ಉಜ್ಜಿ. ಆ ಬಳಿಕ ಮಗುವಿನ ವರ್ತನೆ ಗಮನಿಸಿ. ಒಂದುವೇಳೆ ಅತ್ತರೆ, ಗಲಿಬಿಲಿಗೊಂಡರೆ ಇದು ಮಸಾಜ್‌ಗೆ ಸೂಕ್ತ ಸಮಯ ಅಲ್ಲ ಅಂತ ಭಾವಿಸಿ. ಒಂದು ವೇಳೆ ಈ ಸ್ಯಾಂಪಲ್ ಮಸಾಜ್‌ ಅದಕ್ಕೆ ಒಳ್ಳೆಯ ಅನುಭವ ಕೊಟ್ಟರೆ ನೀವು ಮಸಾಜ್‌ ಮುಂದುವರಿಸಬಹುದು. ಆರಂಭದಲ್ಲಿ ಮಸಾಜ್‌ ಅದಕ್ಕೆ ಅಸಹಜ ಎನಿಸಬಹುದು. ಕ್ರಮೇಣ ಅದಕ್ಕೆ ಮಜ ಅನಿಸಬಹುದು.

ಎರಡನೇ ಹಂತ ಕಾಲುಗಳ ಮಸಾಜ್‌ : ಮಗುವಿನ ಮಸಾಜ್‌ನ್ನು ಅದರ ಕಾಲುಗಳಿಂದ ಆರಂಭಿಸಿ. ಅಂಗೈಯಲ್ಲಿ ಎಣ್ಣೆ ಲೇಪಿಸಿಕೊಂಡು ಮಗುವಿನ ಪಾದಗಳಿಂದ ಮಸಾಜ್‌ ಆರಂಭಿಸಿ. ಬಳಿಕ ಅದರ ಬೆರಳುಗಳತ್ತ ಸಾಗಿ. ಗೋಲಾಕಾರದಲ್ಲಿ ಸುತ್ತುತ್ತ ಎರಡೂ ಪಾದಗಳ ಮಸಾಜ್‌ ಮಾಡಿ. ಮಸಾಜ್‌ ಮಾಡುವಾಗ ಅದರ ಕಾಲ್ಬೆರಳುಗಳನ್ನು ಜಗ್ಗಬೇಡಿ. ಈಗ ಒಂದು ಕಾಲನ್ನು ಮೇಲೆತ್ತಿ ಮುಂಗಾಲನ್ನು ಮಸಾಜ್‌ ಮಾಡಿ. ಒಂದು ವೇಳೆ ಮಗು ರಿಲ್ಯಾಕ್ಸ್ ಆಗಿದ್ದರೆ ಎರಡೂ ಕಾಲುಗಳ ಮಸಾಜ್‌ನ್ನು ಏಕಕಾಲಕ್ಕೆ ಮಾಡಿ.

ಮೂರನೇ ಹಂತ ಕಾಲುಗಳ ಬಳಿಕ ಕೈಗಳು ಹಾಗೂ ತೋಳುಗಳ ಮಸಾಜ್:  ಮಗುವಿನ ಕೈ ಹಿಡಿದು ಅಂಗೈಯನ್ನು ಗೋಲಾಕಾರದಲ್ಲಿ ಮಸಾಜ್‌ ಮಾಡಿ. ಬೆರಳುಗಳನ್ನು ಒಳಭಾಗದಿಂದ ಹೊರಭಾಗದತ್ತ ಮಸಾಜ್‌ ಮಾಡಿ. ಆ ಬಳಿಕ ಮುಂಗೈಯನ್ನು ಸವರಿ. ಇದಾದ ಬಳಿಕ ಭುಜಗಳ ಕೆಳಭಾಗ ಹಾಗೂ ಮೇಲ್ಭಾಗವನ್ನು ಮಸಾಜ್‌ ಮಾಡಿ.

ನಾಲ್ಕನೇ ಹಂತ ಎದೆ ಹಾಗೂ ಭುಜದ ಮಸಾಜ್‌: ಎದೆಯ ಎಡ ಹಾಗೂ ಬಲ ಭಾಗದತ್ತ ಕೈಗಳನ್ನು ಚಲಿಸುತ್ತಾ ಮಸಾಜ್‌ ಮಾಡಿ. ನೀವು ಕೈಗಳ ಹಿಂದಿನಿಂದ ಭುಜಗಳವರೆಗೆ ಕೂಡ ಮಸಾಜ್‌ ಮಾಡಬಹುದು.

ಎದೆಯ ಮೂಳೆಯಿಂದ ಹೊರಭಾಗದತ್ತ ಮಸಾಜ್‌ ಮಾಡಿ. ಹಾರ್ಟ್‌ ಶೇಪ್‌ನಲ್ಲಿ ಮಸಾಜ್‌ ಮಾಡಬೇಕು.

ಐದನೇ ಹಂತ ಹೊಟ್ಟೆಯ ಮಸಾಜ್‌ : ಎದೆಯ ಬಳಿಕ ಹೊಟ್ಟೆಯ ಮಸಾಜ್‌ನ ಸರದಿ. ಮಗುವಿನ ಈ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ಮಸಾಜ್‌ನ್ನು ಬಹಳ ಮೃದುವಾಗಿ ಮಾಡಬೇಕು. ಹೊಟ್ಟೆಯ ಮೇಲೆ ಗೋಲಾಕಾರದಲ್ಲಿ ಅತ್ಯಂತ ಮೃದುವಾಗಿ ಮಸಾಜ್‌ ಮಾಡಿ. ಗಡಿಯಾರದ ಮುಳ್ಳಿನ ರೀತಿ ನಿಮ್ಮ ಕೈಯನ್ನು ಹೊಕ್ಕುಳಿನ ಸುತ್ತ ತಿರುಗಿಸಿ. ಹೊಕ್ಕುಳ ಬಳ್ಳಿ ಆಗಷ್ಟೇ ಹೊರ ಹೋಗಿರುವುದರಿಂದ ಆ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ.

ಆರನೇ ಹಂತ ಮುಖ ಹಾಗೂ ತಲೆಯ ಮಸಾಜ್‌ : ಈ ಭಾಗದ ಮಸಾಜ್‌ ಸ್ವಲ್ಪ ಕಷ್ಟಕರ. ಏಕೆಂದರೆ ಮಕ್ಕಳು ಈ ಹಂತದಲ್ಲಿ ಬಹಳ ಅಲ್ಲಾಡುತ್ತಿರುತ್ತವೆ. ನಿಮ್ಮ ಕೈಬೆರಳನ್ನು ಮಗುವಿನ ಹಣೆಯ ಮಧ್ಯ ಭಾಗದಲ್ಲಿ ಇಡಿ ಹಾಗೂ ಹೊರಭಾಗದತ್ತ ಮಸಾಜ್‌ ಮಾಡಿ. ಅದೇ ರೀತಿ ಕೆನ್ನೆಯ ಮೇಲ್ಭಾಗ ಹಾಗೂ ಹೊರಭಾಗದತ್ತ ಕೈಬೆರಳುಗಳನ್ನು ಗೋಲಾಕಾರದಲ್ಲಿ ತಿರುಗಿಸುತ್ತ ಮಸಾಜ್‌ ಮಾಡಿ. ಇದನ್ನು ಹಲವು ಸಲ ಪುನರಾವರ್ತಿಸಿ.ಈಗ ತಲೆಯ ಸರದಿ. ಶ್ಯಾಂಪೂ ಮಾಡುವಾಗ ಬೆರಳಿನಿಂದ ಅತ್ತಿತ್ತ ತಿರುಗಿಸುವ ರೀತಿಯಲ್ಲಿ ಮಸಾಜ್‌ ಮಾಡಿ. ಬೆರಳಿನ ತುದಿಯಿಂದ ಹೆಚ್ಚು ಒತ್ತಡ ಕೊಡಬೇಡಿ. ಏಕೆಂದರೆ ಮಗುವಿನ ತಲೆ ಬಹಳ ಸೂಕ್ಷ್ಮವಾಗಿರುತ್ತದೆ.

ಏಳನೇ ಹಂತ ಬೆನ್ನಿನ ಮಸಾಜ್‌ : ಎಲ್ಲಕ್ಕೂ ಕೊನೆಯಲ್ಲಿ ಬೆನ್ನಿನ ಮಸಾಜ್‌ ಮಾಡಿ. ಮಗುವನ್ನು ಬೋರಾಗಿ ಮಲಗಿಸಿ. ಆ ಅವಧಿಯಲ್ಲಿ ಮಗುವಿನ ಕೈ ನಿಮ್ಮ ಕಡೆಯೇ ಇರಬೇಕು. ಬೆನ್ನಿನ ಮೇಲ್ಭಾಗದಲ್ಲಿ ಬೆರಳುಗಳನ್ನು ಇಡಿ. ಗಡಿಯಾರದ ಮುಳ್ಳಿನ ರೀತಿಯಲ್ಲಿ ತಿರುಗಿಸುತ್ತಾ ಕೆಳಭಾಗದ ತನಕ ಬನ್ನಿ. ಈ ಪ್ರಕ್ರಿಯೆಯನ್ನು 8-10 ಸಲ ಪುನರಾವರ್ತಿಸಿ.

ಭುಜದ ಮಸಾಜ್‌ ಮಾಡುವ ಸಮಯದಲ್ಲಿ ಕೈಯನ್ನು ಗೋಲಾಕಾರದಲ್ಲಿ ಮೃದುವಾಗಿ ತಿರುಗಿಸಿ. ಬೆನ್ನಿನ ಕೆಳಭಾಗದಲ್ಲಿ ಹಾಗೂ ಪೃಷ್ಠ ಭಾಗದಲ್ಲಿ ಕೂಡ ಮೃದುವಾಗಿ ಮಸಾಜ್‌ ಮಾಡಿ.

ಮಸಾಜ್‌ನ ಬಳಿಕ ಟಿಶ್ಯೂ ಪೇಪರ್‌ನಿಂದ ಹೆಚ್ಚುವರಿ ಎಣ್ಣೆಯನ್ನು ಒರೆಸಿ. ಮಸಾಜ್‌ಗೆ ಒಂದು ಸಮಯನ್ನು ನಿಶ್ಚಿತ ಮಾಡಿ. ಇದೇ ಮಗುವಿನ ದಿನಚರಿಯಾಗುತ್ತದೆ.

– ಡಾ. ಅಶ್ವಿನಿ

ಈ ಸ್ಥಿತಿಯಲ್ಲೂ ಕೂಡ ಮಸಾಜ್‌ ಅತ್ಯಂತ ಉಪಯುಕ್ತ

– ಮಲಬದ್ಧತೆ, ಗ್ಯಾಸ್‌, ಹೊಟ್ಟೆನೋವು.

– ಕೆಮ್ಮು ಹಾಗೂ ಎದೆಯಲ್ಲಿ ಹಿಡಿದುಕೊಂಡಂತಾಗುವುದು.

– ಬಿಕ್ಕಳಿಕೆ, ಚುಚ್ಚುಮದ್ದು ಹಾಕಿರುವಾಗ, ಹಲ್ಲು ಹುಟ್ಟುವಾಗ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ