ನಮ್ಮ  ದೇಹದ ಜೀವಕೋಶಗಳು ಜೀವಂತವಾಗಿರಲು ಅವುಗಳಿಗೆ ಆಮ್ಲಜನಕದ ಅವಶ್ಯಕತೆ ಉಂಟಾಗುತ್ತದೆ. ಅಷ್ಟೇ ಅಲ್ಲ, ದೇಹದ ಬೇರೆ ಬೇರೆ ಕಡೆ ಕೆಂಪು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್‌ನ್ನು ತಲುಪಿಸಲಾಗುತ್ತದೆ. ಒಂದುವೇಳೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದರೆ ಕೆಂಪು ರಕ್ತ ಕಣಗಳು ಹಾಗೂ ಹಿಮೊಗ್ಲೋಬಿನ್‌ ನಿರ್ಮಾಣ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದಾಗಿ ಜೀವಕೋಶಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗುವುದಿಲ್ಲ. ಅದು ಕಾರ್ಬೊಹೈಡ್ರೇಟ್‌ ಮತ್ತು ಕೊಬ್ಬನ್ನು ದಹಿಸಿ ಶಕ್ತಿಯನ್ನು ಉತ್ಪಾದಿಸಲು ಅತ್ಯವಶ್ಯಕ. ಇದು ದೇಹ ಮತ್ತು ಮೆದುಳಿನ ಕಾರ್ಯಶಕ್ತಿಗೆ ಅತ್ಯವಶ್ಯಕ.

ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣವನ್ನು ಕಾಯ್ದುಕೊಂಡು ಹೋಗುವುದು ಅತ್ಯವಶ್ಯ. ಮಹಿಳೆಯರು ಮತ್ತು ಮಕ್ಕಳಲ್ಲಿ ಇದರ ನಿಖರ ಪ್ರಮಾಣವನ್ನು ನಿರ್ಧರಿಸುವುದು ಅತ್ಯವಶ್ಯ.

ದೇಹದಲ್ಲಿ ಕಬ್ಬಿಣಾಂಶದ ಸರಿಯಾದ ಪ್ರಮಾಣದ ಮಹತ್ವ, ಅದರ ಕೊರತೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳು ಮತ್ತು ಅದರ ಕೊರತೆ ನೀಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಕಬ್ಬಿಣಾಂಶದ ಮಹತ್ವ

ನಾವು ಆರೋಗ್ಯದಿಂದಿರಲು ಮ್ಯಾಕ್ರೋ ನ್ಯೂಟ್ರಿಯೆಂಟ್ಸ್ (ಕಾರ್ಬೊಹೈಡ್ರೇಟ್‌, ಪ್ರೋಟೀನ್‌ ಮತ್ತು ಕೊಬ್ಬು) ಮತ್ತು ಮೈಕ್ರೋ ನ್ಯೂಟ್ರಿಯೆಂಟ್ಸ್ (ಮಿನರಲ್ಸ್ ಮತ್ತು ವಿಟಮಿನ್ಸ್) ಈ ಎರಡೂ ಬೇಕೇಬೇಕು. ಕಬ್ಬಿಣಾಂಶ ನಮ್ಮ ದೇಹಕ್ಕೆ ಬೇಕಾದ ಅತ್ಯಗತ್ಯ ಮಿನರಲ್ ಆಗಿದೆ.

ಇವುಗಳಿಂದ ದೇಹದ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಹಿಮೋಗ್ಲೋಬಿನ್‌ನ ನಿರ್ಮಾಣವಾಗುತ್ತದೆ. ಅದು ದೇಹದ ಬೇರೆಬೇರೆ ಅಂಗಗಳು ಮತ್ತು ಊತಕಗಳಲ್ಲಿ ಆಮ್ಲಜನಕ ತಲುಪಿಸುವ ಕೆಲಸ ಮಾಡುತ್ತದೆ. ಜೀವಕೋಶಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ತಲುಪದೇ ಇದ್ದರೆ ಅವು ದಣಿದುಬಿಡುತ್ತವೆ.

ದೇಹದಲ್ಲಿ ಹಿಮೋಗ್ಲೋಬಿನ್‌ನ ನಿರ್ಮಾಣದಲ್ಲಿ ವ್ಯತ್ಯಯ ಉಂಟಾದರೆ, ರಕ್ತಹೀನತೆ ಆಗುತ್ತದೆ. ಒಂದಿಷ್ಟು ಕೆಲಸ ಮಾಡಿದರೂ ದಣಿವು ಉಂಟಾಗುತ್ತದೆ. ಮೆಟ್ಟಿಲು ಹತ್ತುವಾಗ ಏದುಸಿರು ಬಿಡುತ್ತೇವೆ. ಹೃದಯ ಬಡಿತ ಏರುಪೇರಾಗುತ್ತದೆ. ತಲೆನೋವು, ಗಮನ ಕೇಂದ್ರೀಕರಿಸಲು ಆಗದೇ ಇರುವುದು, ಮಾಂಸಖಂಡಗಳಲ್ಲಿ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಆರೋಗ್ಯಕರ ಕೂದಲು, ತ್ವಚೆ ಮತ್ತು ಉಗುರುಗಳಿಗೂ ಕಬ್ಬಿಣಾಂಶ ಬೇಕೇಬೇಕು. ಒಂದು ವೇಳೆ ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದರೆ ಅಕಾಲಿಕ ಹೆರಿಗೆಯಾಗುವ ಸಂಭವಿರುತ್ತದೆ. ಹುಟ್ಟುವ ಮಗುವಿನ ತೂಕ ಸಾಮಾನ್ಯಕ್ಕಿಂತ ಚಿಕ್ಕದಾಗಿರುತ್ತದೆ.

ಪ್ರಮಾಣ ಎಷ್ಟು?

ನಿಮಗೆ ಕಬ್ಬಿಣಾಂಶದ ಪ್ರಮಾಣ ಎಷ್ಟು ಬೇಕು ಎನ್ನುವುದು ವಯಸ್ಸು, ಲಿಂಗ ಹಾಗೂ ಆರೋಗ್ಯವನ್ನು ಅವಲಂಬಿಸಿರುತ್ತದೆ. ಶಿಶುಗಳಿಗೆ ಹಾಗೂ ಮಕ್ಕಳಿಗೆ ಅದರ ಅವಶ್ಯಕತೆ ಹೆಚ್ಚು. ಏಕೆಂದರೆ ಅವರ ದೇಹ ಬೆಳವಣಿಗೆ ಹಂತದಲ್ಲಿರುತ್ತದೆ. ಇದರ ಮತ್ತೊಂದು ಕಾರಣವೆಂದರೆ ಅವರ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುತ್ತದೆ. ಹೀಗಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ.

4-8 ವರ್ಷದ ಮಕ್ಕಳಿಗೆ ಪ್ರತಿದಿನ 10 ಮಿಲಿಗ್ರಾಂ, 9-13 ವರ್ಷದ ಮಕ್ಕಳಿಗೆ ಪ್ರತಿದಿನ 8 ಮಿಲಿಗ್ರಾಂ, 14 ರಿಂದ 50 ವರ್ಷದ ಬಾಲಕಿಯರು ಹಾಗೂ ಮಹಿಳೆಯರಿಗೆ ಪ್ರತಿದಿನ 18 ಮಿಲಿಗ್ರಾಂ, 14-50 ವರ್ಷದ ಪುರುಷರಿಗೆ 8 ಮಿಲಿಗ್ರಾಂ ಹಾಗೂ 50ಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತಿದಿನ 7 ಮಿಲಿಗ್ರಾಂ ಕಬ್ಬಿಣಾಂಶದ ಅಗತ್ಯ ಇರುತ್ತದೆ.

ಗರ್ಭಿಣಿಯರಿಗೆ ಹೆಚ್ಚುವರಿ ಕಬ್ಬಿಣಾಂಶದ ಅಗತ್ಯ ಇರುತ್ತದೆ. ಮಹಿಳೆಯರು ತಮ್ಮ ಆಹಾರದಲ್ಲಿ 10-20 ಮಿಲಿಗ್ರಾಂ ಪ್ರತಿದಿನದ ಲೆಕ್ಕಾಚಾರಕ್ಕೆ ಅನುಗುಣವಾಗಿ ತೆಗೆದುಕೊಳ್ಳಬೇಕು.

ಕಬ್ಬಿಣಾಂಶದ ಮೂಲ

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನಾವು ನಮ್ಮ ಆಹಾರದಲ್ಲಿ ವಿಶೇಷ ಗಮನ ಕೊಡುವ ಅವಶ್ಯಕತೆ ಇರುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಕಬ್ಬಿಣಾಂಶದ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಯತ್ನಿಸಿ.

ಕಬ್ಬಿಣಾಂಶವುಳ್ಳ ಸೊಪ್ಪು ತರಕಾರಿಗಳು : ಹಸಿರು ಸೊಪ್ಪುಗಳಾದ ಪಾಲಕ್‌, ಮೆಂತ್ಯ, ಚಕ್ಕೋತಾ, ನುಗ್ಗೆಸೊಪ್ಪು ಅಥವಾ ಯಾವುದೇ ಸೊಪ್ಪು ಕಬ್ಬಿಣಾಂಶದ ಸಮೃದ್ಧ ಮೂಲಗಳಾಗಿವೆ. ಇದರ ಹೊರತಾಗಿ ಬೀನ್ಸ್, ಹುಣಿಸೆ, ಬಟಾಣಿ, ಗೋರಿಕಾಯಿ, ಟೊಮೇಟೊ, ಅಣಬೆ, ಬೀಟ್‌ರೂಟ್‌ ಮುಂತಾದವುಗಳನ್ನು ಸೇವಿಸಿ ಕಬ್ಬಿಣಾಂಶದ ಕೊರತೆ ನೀಗಿಸಿಕೊಳ್ಳಬಹುದು.

ಕಬ್ಬಿಣಾಂಶವಿರುವ ಹಣ್ಣು ಡ್ರೈಫ್ರೂಟ್ಸ್ : ನಿಮ್ಮ ದೈನಂದಿನ ಆಹಾರದಲ್ಲಿ ಆಯಾ ಋತುಮಾನದ ಹಣ್ಣುಗಳನ್ನು ಸೇರಿಸಿಕೊಳ್ಳಿ. ಕಲ್ಲಂಗಡಿ, ದ್ರಾಕ್ಷಿ, ಬಾಳೆಹಣ್ಣು, ಬಾದಾಮಿ, ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಮುಂತಾದವುಗಳಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ.

ಇತರೆ ಪದಾರ್ಥಗಳು : ಹಣ್ಣು ಹಾಗೂ ತರಕಾರಿಗಳ ಹೊರತಾಗಿ ಮತ್ತೆ ಕೆಲವು ಪದಾರ್ಥಗಳಿದ್ದು, ಅವುಗಳನ್ನು ಸೇವಿಸುವುದರ ಮೂಲಕ ಕಬ್ಬಿಣಾಂಶದ ಕೊರತೆ ನೀಗಿಸಿಕೊಳ್ಳಬಹುದು. ರೆಡ್‌ಮೀಟ್‌, ಚಿಕನ್‌, ಸೋಯಾಬೀನ್‌, ಕಾಬೂಲ್‌ಕಡಲೆ, ಮೊಟ್ಟೆ, ಬ್ರೆಡ್‌, ಶೇಂಗಾಕಾಳು, ಟೂನಾ ಫಿಶ್‌, ಬೆಲ್ಲ ಇವೆಲ್ಲದರಲ್ಲಿ ಕಬ್ಬಿಣಾಂಶದ ಸಂಗ್ರಹ ಹೇರಳವಾಗಿದೆ.

ಯಾವ ಮೂಲಗಳು ಸೂಕ್ತ?

ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ನೀವು ಸೇವಿಸುವ ಆಹಾರ ಹೇಗಿರಬೇಕೆಂದರೆ, ದೇಹ ಅದರಿಂದ ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗಿರಬೇಕು. ಮೇಲ್ಕಂಡ ಆಹಾರ ಪದಾರ್ಥಗಳಲ್ಲಿ ಹಣ್ಣು ನಿಮ್ಮ ಭಾಗದಲ್ಲಿ ಬೆಳೆಯುವಂತಿರಬೇಕು ಹಾಗೂ ಅವು ಆಯಾ ಋತುಮಾನದ್ದೇ ಆಗಿರಬೇಕು.

ಕೊರತೆಯ ದುಷ್ಪರಿಣಾಮಗಳು

ಭಾರತದಲ್ಲಿ ಪ್ರಮುಖವಾಗಿ ಮಹಿಳೆಯರು ಹಾಗೂ ಮಕ್ಕಳು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ನಿರಂತರವಾಗಿ ಹಾಗೆಯೇ ಮುಂದುವರಿದರೆ, ಕೇವಲ ದಣಿವಿನ ಅನುಭೂತಿಯಷ್ಟೇ ಆಗುವುದಿಲ್ಲ, ನೀವು ಹಲವು ಗಂಭೀರ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ಕೆಲವು ರೋಗಗಳ ಬಗ್ಗೆ ಅರಿತುಕೊಳ್ಳಿ.

ರಕ್ತಹೀನತೆ : ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾಗುವುದರಿಂದ ರಕ್ತಹೀನತೆ (ಅನೀಮಿಯಾ)ಯ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕಾರಣ ಋತುಸ್ರಾವದ ಸಂದರ್ಭದಲ್ಲಿ ಅತಿ ರಕ್ತಸ್ರಾವ, ಗರ್ಭಾವಸ್ಥೆ, ದೇಹ ಕಬ್ಬಿಣಾಂಶವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುವಿಕೆ ಮತ್ತು ಕಿಶೋರಾವಸ್ಥೆಯಲ್ಲಿ ಮಕ್ಕಳ ತೀವ್ರ ಬೆಳವಣಿಗೆ. ಇದು ಉಂಟಾಗುವ ಕಾರಣವನ್ನು ಕಂಡುಹಿಡಿದು ಅಥವಾ ಕಬ್ಬಿಣಾಂಶಯುಕ್ತ ಆಹಾರ ಸೇವನೆ ಅಥವಾ ಕಬ್ಬಿಣಾಂಶವುಳ್ಳ ಸಪ್ಲಿಮೆಂಟ್ಸ್ ನ್ನು ಸೇವಿಸಿ ಕೊರತೆಯನ್ನು ನೀಗಿಸಿಕೊಳ್ಳಬಹುದು.

ಹೃದಯ ಬಡಿತ ಏರುಪೇರಾಗುವುದು : ಕಬ್ಬಿಣಾಂಶದ ಕೊರತೆಯಿದ್ದಾಗ ಆಮ್ಲಜನಕ ಪೂರೈಕೆಗಾಗಿ ಹೃದಯ ಅಧಿಕ ರಕ್ತ ಪಂಪ್ ಮಾಡಬೇಕಾಗಿ ಬರುತ್ತದೆ. ಹೀಗಾಗಿ ಅದರ ಬಡಿತ ಏರುಪೇರಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೃದಯದ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಒತ್ತಡ ಬೀರುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಕಬ್ಬಿಣಾಂಶದ ಕೊರತೆ ಭಾರಿ ಪ್ರಮಾಣದಲ್ಲಿ ಇದ್ದರೆ ಹೃದಯದ ಗಾತ್ರ ಹೆಚ್ಚಾಗಬಹುದು ಹಾಗೂ ಹೃದಾಯಾಘಾತ ಆಗಬಹುದು.

ಗರ್ಭಾವಸ್ಥೆಯ ಸಮಸ್ಯೆಗಳು

ಗರ್ಭಾವಸ್ಥೆಯಲ್ಲಿ ಯಾವ ಮಹಿಳೆಗೆ ಕಬ್ಬಿಣಾಂಶ ಅತ್ಯಂತ ಕಡಿಮೆ ಇರುತ್ತದೋ ಅಂತಹ ಮಹಿಳೆಗೆ ಹುಟ್ಟುವ ಮಗುವಿನ ಬೆಳವಣಿಗೆಯ ಮೇಲೂ ಅದು ದುಷ್ಪರಿಣಾಮ ಬೀರುತ್ತದೆ. ಇದು ಆಕೆಯ ಅಕಾಲಿಕ ಹೆರಿಗೆಗೂ ಕಾರಣವಾಗಬಹುದು.

ಅಂದಹಾಗೆ ವೈದ್ಯರು ಆಕೆಗೆ ಐರನ್‌ಸಪ್ಲಿಮೆಂಟ್ಸ್ ನಿಯಮಿತವಾಗಿ ಸೇವಿಸಲು ಸಲಹೆ ನೀಡುತ್ತಾರೆ. ಆದರೆ ಮಹಿಳೆಯರು ಆಹಾರದ ಮೂಲಕ ದೇಹಕ್ಕೆ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು.

ಮಗುವಿನ ಬೆಳಣಿಗೆಗೆ ಅಡ್ಡಿ

ನವಜಾತ ಶಿಶುಗಳಲ್ಲಿ ಹಾಗೂ ಬೆಳವಣಿಗೆ ಹೊಂದುತ್ತಿರುವ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿರಂತರ ಕಬ್ಬಿಣಾಂಶದ ಕೊರತೆಯಿದ್ದರೆ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅವರ ಕಲಿಯುವ ಹಾಗೂ ವ್ಯವಾಹಾರಿಕ ಸಾಮರ್ಥ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.

ಇದರ ಹೊರತಾಗಿ ಕಬ್ಬಿಣಾಂಶದ ಕೊರತೆಯಿಂದ ಹಿಮೋಗ್ಲೋಬಿನ್‌ಪ್ರಮಾಣ ತಗ್ಗುತ್ತದೆ. ಈ ಕಾರಣದಿಂದ ಮಕ್ಕಳ ರೋಗ ನಿರೋಧಕ ಸಾಮರ್ಥ್ಯ ಕುಸಿಯುತ್ತದೆ ಹಾಗೂ ಅವರು ಸೋಂಕಿಗೆ ತುತ್ತಾಗುತ್ತಾರೆ.

ಮಕ್ಕಳಲ್ಲಿ ಒಂದು ವೇಳೆ ಕಬ್ಬಿಣಾಂಶದ ಕೊರತೆಯ ಲಕ್ಷಣಗಳು ಕಂಡುಬಂದರೆ ಅವರನ್ನು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಿ ಮತ್ತು ಅವರಿಗಾಗಿ ವಿಶೇಷ ಡಯೆಟ್‌ ಪ್ಲಾನ್‌ ಶುರುಮಾಡಿ.

ಕಬ್ಬಿಣಾಂಶದ ಕೊರತೆ

ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ ಹೆಚ್ಚು. ಅದರಲ್ಲೂ ವಿಶೇಷವಾಗಿ ಧೂಮಪಾನದ ಅಭ್ಯಾಸ ಇರುವವರಲ್ಲಿ ಮತ್ತು ಋತುಸ್ರಾವದ ಸಂದರ್ಭದಲ್ಲಿ ಅತಿಯಾಗಿ ರಕ್ತಸ್ರಾವ ಆಗುವವರಲ್ಲಿ. ಸಸ್ಯಾಹಾರಿ ಮಹಿಳೆಯರಲ್ಲೂ ಕೂಡ ಕಬ್ಬಿಣಾಂಶದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಕಾರಣದಿಂದ ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ.

ಕ್ಯಾನ್ಸರ್‌ ಕಾರಣದಿಂದ ಚಿಕ್ಕ ಕರುಳಿನಲ್ಲಿ ಬಿರುಕು ಉಂಟಾಗುವುದರಿಂದ ಹಾಗೂ ಹೊಟ್ಟೆಯಲ್ಲಿ ಅಲ್ಸರ್‌ ಉಂಟಾಗುವುದರಿಂದಲೂ ಕಬ್ಬಿಣಾಂಶದ ಕೊರತೆ ಉಂಟಾಗುತ್ತವೆ. ಇದರ ಹೊರತಾಗಿ ಮೂಲವ್ಯಾಧಿ ಮತ್ತು ಹರ್ನಿಯಾ ತೊಂದರೆ ಇರುವವರಲ್ಲೂ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ.

ಹೀರುವಿಕೆಗೆ ಬೇಕು ವಿಟಮಿನ್‌ `ಸಿ

ವಿಟಮಿನ್‌ `ಸಿ’ಯ ಸೇವನೆ ಕಬ್ಬಿಣಾಂಶದ ಹೀರುವಿಕೆಗೆ ಸಹಾಯ ಮಾಡುತ್ತದೆ. ಆಹಾರ ಸೇವನೆಗಿಂತಲೂ ಮುಂಚೆ ನಿಂಬೆರಸ ಅಥವಾ ಯಾವುದಾದರೂ ಹುಳಿಹಣ್ಣಿನ ರಸ ಸೇವಿಸಿ. ಇದರಿಂದ ಹೊಟ್ಟೆ ಹೆಚ್ಚು ಅಸಿಡಿಕ್‌ಆಗುತ್ತದೆ. ಅದು ಕಬ್ಬಿಣಾಂಶದ ಹೀರುವಿಕೆಗೆ ಸಹಾಯ ಮಾಡುತ್ತದೆ.

ಐರನ್‌ ಸಪ್ಲಿಮೆಂಟ್‌ನ್ನು ಯಾವುದಾದರೂ ವಿಟಮಿನ್‌ `ಸಿ’ಯುಕ್ತ ಪದಾರ್ಥದ ಜೊತೆಗೆ ಸೇವಿಸುವುದು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ. ಅಂದಹಾಗೆ ಕೆಫಿನ್‌ ಕಬ್ಬಿಣಾಂಶವನ್ನು ಹೀರಿಕೊಳ್ಳುವಲ್ಲಿ ನಿಧಾನ ಮಾಡುತ್ತದೆ. ಹೀಗಾಗಿ ಆಹಾರ ಸೇವನೆಯ 1 ಗಂಟೆ ಮುಂಚೆ ಮತ್ತು ಆಹಾರ ಸೇವನೆಯ 1 ಗಂಟೆ ಬಳಿಕ ಚಹಾ ಅಥವಾ ಕಾಫಿ ಸೇವನೆ ಮಾಡಬೇಡಿ.

ಸಪ್ಲಿಮೆಂಟ್ಗಳ ಮಹತ್ವ

ಒಂದು ವೇಳೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಅತಿಯಾದರೆ, ಐರನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳಬಹುದು. ಆದರೆ ಅವನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.

ಐರನ್‌ ಸಪ್ಲಿಮೆಂಟ್‌ಗಳನ್ನು ಸೇವಿಸುವುದರಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಉದಾಹರಣೆಗೆ ಹೊಟ್ಟೆ ಕೆಡುವುದು, ವಾಂತಿಯಾಗುವುದು, ಇತ್ಯಾದಿ. ನೀವು ಐರನ್‌ ಸಪ್ಲಿಮೆಂಟ್‌ಗಳನ್ನು ಸೇವಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ನಾರಿನಂಶದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ