ಈ ಹೊಸ ವರ್ಷದಲ್ಲಿ ನಿಮ್ಮ ಮುಖ್ಯ ಸಂಕಲ್ಪ ಆರೋಗ್ಯ ಸುಧಾರಣೆ ಆಗಿದ್ದರೆ, ಸಿರಿಧಾನ್ಯ ನಿಮ್ಮ ಪ್ರಮುಖ ಆಹಾರ ಆಗಲಿದೆ. ಅದರ ಲಾಭಗಳ ಕುರಿತು ವಿವರವಾಗಿ ತಿಳಿಯೋಣವೇ....?
ಹೊಸ ವರ್ಷ ಬಂದೊಡನೆ ಯಾವುದಾದರೂ ಒಂದು ಹೊಸ ಸಂಕಲ್ಪ ಕೈಗೊಳ್ಳುವುದು ರೂಢಿ. ಈ ವರ್ಷ ಉತ್ತಮ ಆರೋಗ್ಯ ಹೊಂದೋಣ ಎಂಬುದೇ ನಿಮ್ಮ ಮಹತ್ವಪೂರ್ಣ ಸಂಕಲ್ಪ ಆಗಿದ್ದರೆ, ನೀವು ಎಂಥ ಆಹಾರ ಸೇವಿಸುತ್ತಿದ್ದೀರಿ ಎಂಬುದರ ಕಡೆ ಗಮನ ಕೊಡಬೇಕಾಗುತ್ತದೆ. ಹೀಗಾಗಿ ನೀವು ಸಹ ಹೆಲ್ದಿ ಆಪ್ಶನ್ ಗಾಗಿ ಹುಡುಕಾಡುತ್ತಿದ್ದರೆ, `ಸಿರಿಧಾನ್ಯ' ಉತ್ತಮ ಆಯ್ಕೆಯಾಗಲಿದೆ. ಮಿಲೆಟ್ಸ್ ಅಥವಾ ಸಿರಿಧಾನ್ಯಗಳು ಒಂದು ಬಗೆಯ ದೊಡ್ಡ ಗಾತ್ರದ ಧಾನ್ಯಗಳಾಗಿವೆ. ಇವು ಹೆಚ್ಚುಕಡಿಮೆ ಗೋಧಿ, ಅಕ್ಕಿ ಗಾತ್ರಕ್ಕೆ ಸಮನವಾಗಿರುತ್ತವೆ. ಆದರೆ ಇವುಗಳಲ್ಲಿ ಅಧಿಕ ಪೌಷ್ಟಿಕಾಂಶಗಳಿದ್ದು ಆರೋಗ್ಯಕರ ಎನಿಸುತ್ತವೆ. ಸಿರಿಧಾನ್ಯಗಳಲ್ಲಿ ಹಲವು ಬಗೆ ಇವೆ. ರಾಗಿ, ಜೋಳ, ನವಣೆ, ಸಜ್ಜೆ, ಸಾಮೆ, ಅರ್ಕ, ಊದಲು, ಕೊರಲೆ, ಬರಗು ಇತ್ಯಾದಿ.
ಮಿಲೆಟ್ಸ್ ನ ಉತ್ತಮಿಕೆ ಎಂದರೆ ಇದನ್ನು ಸೇವಿಸುವುದರಿಂದ ಎಂದೂ ಬೋರ್ ಆಗುವುದಿಲ್ಲ. ಇದು ಹಲವು ರೂಪಗಳಲ್ಲಿ ಲಭ್ಯ. ಇದನ್ನು ಸುಲಭವಾಗಿ ಅಡುಗೆಯಲ್ಲಿ ಬಳಸಿಕೊಳ್ಳಬಹುದು. ಎಲ್ಲಾ ಬಗೆಯ ಮಿಲೆಟ್ಸ್ ಬೇರೆ ಬೇರೆ ಉತ್ತಮ ಪೌಷ್ಟಿಕಾಂಶಗಳಿಂದ ತುಂಬಿ ತುಳುಕುತ್ತವೆ.
ಇವೆಲ್ಲ ನಮ್ಮ ಆರೋಗ್ಯಕ್ಕೆ ಖಂಡಿತಾ ಹೆಚ್ಚು ಪೂರಕ, ಪೌಷ್ಟಿಕಾಂಶಗಳ ವಿಷಯದಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಇವು `ಸೂಪರ್ ಗ್ರೇನ್ಸ್' ರೂಪದಲ್ಲಿ ಹೆಚ್ಚು ಜನಪ್ರಿಯ. ನಿಮ್ಮ ಆಹಾರದಲ್ಲಿ ಪ್ರತಿದಿನ ಈ ಸಿರಿಧಾನ್ಯ ಬೆರೆಸಿಕೊಂಡು, 100% ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಸಿರಿಧಾನ್ಯಗಳಲ್ಲಿ ಹಲವು ಬಗೆ
ಜೋಳ : ಇದು ಮೆಕ್ಕೆಜೋಳ, ಬಿಳಿ ಜೋಳ ಎರಡೂ ರೂಪಗಳಲ್ಲಿ ಲಭ್ಯ. ಇದರಿಂದ ಹಿಟ್ಟು ಮಾಡಿ ರೊಟ್ಟಿ ತಟ್ಟುವುದು, ಉತ್ತರ ಕರ್ನಾಟಕದವರ ಉಸಿರಾಗಿದೆ. ಈ ಸಿರಿಧಾನ್ಯವನ್ನು ನಿಮ್ಮದಾಗಿಸಿಕೊಂಡು ಹೆಚ್ಚಿನ ಆರೋಗ್ಯ ಹೊಂದಿರಿ. ಇದು ಭಾರತದಾದ್ಯಂತ ಸುಲಭ ಲಭ್ಯ. ಇದನ್ನು ಬಿಸಿಯಾದ ಮೃದು ರೊಟ್ಟಿ, ಖಡಕ್ ರೊಟ್ಟಿ, ದೋಸೆ, ಮುದ್ದೆ ರೂಪಗಳಲ್ಲಿ ಸೇವಿಸಬಹುದು. ಇದು ಫೈಬರ್, ಪ್ರೋಟೀನ್ ಅಂಶಗಳಿಗೆ ಉತ್ತಮ ಸ್ರೋತವಾಗಿದೆ. ಇದು 100% ಗ್ಲೂಟೆನ್ ಫ್ರೀ ಆಗಿದ್ದು, ಮಧುಮೇಹಿಗಳಿಗೆ ವರದಾನವಾಗಿದೆ.
ಸಜ್ಜೆ : ಇದು ರೊಟ್ಟಿಗೆ ಹೇಳಿ ಮಾಡಿಸಿದ ಧಾನ್ಯ. ಇದರಲ್ಲಿ ವಿಟಮಿನ್ಸ್ ಹೇರಳವಾಗಿದ್ದು, ಫಾಲೆಟ್‌ಆ್ಯಂಟಿ ಆಕ್ಸಿಡೆಂಟ್ಸ್ ಗಳು ಧಾರಾಳ ಅಡಗಿವೆ. ಇದರಿಂದ ಪೊಂಗಲ್ ತರಹದ ಖಿಚಡಿ, ಇದರ ಹಿಟ್ಟಿನ ದೋಸೆ ಸಹ ಅಷ್ಟೇ ಫೇಮಸ್.
ರಾಗಿ : ನಮ್ಮ ಕರ್ನಾಟಕದ ಮಂದಿಗೆ ರಾಗಿಯ ಪರಿಚಯ ಹೊಸದಾಗಿ ಆಗಬೇಕಿಲ್ಲ. ಅಂದಿಗೂ ಇಂದಿಗೂ ನಮ್ಮ ಹಳ್ಳಿಗಳಲ್ಲಿ ರಾಗಿಯ ಮುದ್ದೆ, ರೊಟ್ಟಿ, ದೋಸೆಗಳಿಲ್ಲದೆ ಏನೂ ನಡೆಯದು. ಇದು ಉಚ್ಚ ಪ್ರೋಟೀನ್, ಕ್ಯಾಲ್ಶಿಯಂಗಳಿಗೆ ಉತ್ತಮ ಆಕರವಾಗಿದೆ. ನಮ್ಮ ರಾಜ್ಯ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಎಲ್ಲೆಡೆ ಮನೆಮಾತಾಗಿರುವ ರಾಗಿ ಇದೀಗ `ಸಿರಿಧಾನ್ಯ'ವಾಗಿ ಉತ್ತರ ಭಾರತಕ್ಕೂ ದಾಂಗುಡಿ ಇಟ್ಟಿದೆ. ರಾಗಿಯ ಇಡ್ಲಿ, ಒತ್ತು ಶ್ಯಾವಿಗೆ ಸಹ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ.





