ಮಗುವಿನ ಜನನ ಮನೆಯಲ್ಲಿ ನವೋಲ್ಲಾಸ ಮೂಡಿಸುವುದರ ಜೊತೆ ಹೆಚ್ಚಿನ ಜವಾಬ್ದಾರಿಗಳನ್ನೂ ಕೊಡುತ್ತದೆ. ಅದರಲ್ಲೂ ಮುಖ್ಯವಾಗಿ ನವಜಾತ ಶಿಶುವಿನ ಬೆಳವಣಿಗೆ ಹಾಗೂ ಅದರ ಕೋಮಲ ಚರ್ಮದ ಸಂರಕ್ಷಣೆ ಕಡೆ ಹೆಚ್ಚಿನ ಗಮನ ಕೊಡಬೇಕು. ಹೊಸ ತಾಯಂದಿರಿಗೆ ಇದಂತೂ ದೊಡ್ಡ ಸವಾಲೇ ಸರಿ. ಏಕೆಂದರೆ ಶಿಶುವಿನ ಸಂರಕ್ಷಣೆಯ ಕುರಿತಾದ ಎಷ್ಟೋ ವಿಷಯಗಳು ಅವರಿಗೆ ಗೊತ್ತಿರುವುದಿಲ್ಲ. ಸ್ತನ್ಯಪಾನದ ಮೂಲಕ ನವಜಾತ ಶಿಶುವಿನ ದೇಹದ ಆಂತರಿಕ ವಿಕಾಸ ಸಮರ್ಪಕವಾಗಿ ಆಗುತ್ತಿರುತ್ತದೆ, ಆದರೆ ಅದರ ಚರ್ಮವನ್ನು ಆರೋಗ್ಯಕರ ಹಾಗೂ ಸುರಕ್ಷಿತವಾಗಿಡಲು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ.

ಬೇಬಿ ಬಾಥ್

ಮಗುವಿಗೆ ಸ್ನಾನ ಮಾಡಿಸುವಾಗ ಹಾಗೂ ನಂತರ ಈ ಎಚ್ಚರಿಕೆಗಳನ್ನು ವಹಿಸಿ :

ಮಗುವಿಗಾಗಿ ಸ್ನಾನ ಮಾಡಿಸುವ ನೀರು ಬೆಚ್ಚಗೆ ಅಥವಾ ತುಸು ಬಿಸಿ ಇರಲಿ. ಅತಿ ಬಿಸಿ ಬೇಡ. ಇದನ್ನು ನಿಧಾನವಾಗಿ ಮಗುವಿನ ಮೈಗೆ ಕೈಯಿಂದ ಎರೆಯುತ್ತಾ, ಸ್ನಾನ ಮಾಡಿಸಿ.

ಮಗುವಿಗೆ ಸ್ನಾನ ಮಾಡಿಸಲು ಸೌಮ್ಯ ಬೇಬಿ ಸೋಪ್‌ ಯಾ ಲೋಶನ್‌ ಬಳಸಬೇಕು.
ಮಗುವಿನ ಕೂದಲನ್ನು ಶುಭ್ರವಾಗಿಡಲು, ಬೇಬಿ ಶ್ಯಾಂಪೂವನ್ನೇ ಬಳಸಿ. ಶ್ಯಾಂಪೂವಿನ ಕೆಲವು ಹನಿಗಳನ್ನು ಕೈ ಮೇಲೆ ಹಾಕಿಕೊಂಡು ಉಜ್ಜಿ, ಅದನ್ನು ಮಗುವಿನ ತಲೆಗೆ ಸವರಬೇಕು. ನೀರಿನಿಂದ ಶುಚಿಗೊಳಿಸಲು, ನೀವು ಕಾಲು ಚಾಚಿಕೊಂಡು ಮಗುವನ್ನು ಅಂಗಾತ, ನಂತರ ಬೋರಲು ಮಲಗಿಸಿ ಹೀಗೆ ಮಾಡಬಹುದು. ಮಗು ಬಯಸಿದರೆ ಕೂರಿಸಿಯೂ ಮಾಡಿಸಿ. ತಲೆಯ ಮುಂಭಾಗದಿಂದ ಹಿಂದಕ್ಕೆ ಮಸಾಜ್‌ ಮಾಡಿ.

ಸ್ನಾನ ಮಾಡಿಸಿದ ಮೇಲೆ ಮಗುವಿನ ಟವೆಲ್ ‌ಬಳಸಿ ಥಪಥಪ ತಟ್ಟುತ್ತಾ ಅದರ ಮೈ ಒಣಗಿಸಿ.

ಬೇಬಿ ಮಸಾಜ್

ಮಗುವಿನ ಸಂಪೂರ್ಣ ವಿಕಾಸಕ್ಕಾಗಿ ಅದಕ್ಕೆ ಮಸಾಜ್‌ಮಾಡುವುದು ಹೆಚ್ಚು ಮಹತ್ವಪೂರ್ಣವಾದುದು. ಈ ಮಸಾಜ್‌ನಿಂದ ಮಗುವಿನ ಚರ್ಮಕ್ಕೆ ಮಾತ್ರವಲ್ಲದೆ ಅದರ ಮೂಳೆಗಳಿಗೂ ಪೋಷಣೆ ಒದಗುತ್ತದೆ. ಹಾಗಾಗಿ ಈ ಸಲಹೆಗಳನ್ನು ಗಮನಿಸಿ :

ಮಗುವಿನ ಮಸಾಜ್‌ಗಾಗಿ ಕೆಮಿಕಲ್ಸ್ ರಹಿತ, ಪೋಷಕಾಂಶ ಸಹಿತ ಬೇಬಿ ಮಸಾಜ್‌ ಆಯಿಲ್‌ನ್ನೇ ಬಳಸಬೇಕು.

ಮಸಾಜ್‌ ಶುರು ಮಾಡುವ ಮೊದಲು ಮಗುವನ್ನು ಆರಾಮದಾಯಕ ಸ್ಥಿತಿಯಲ್ಲಿ ಮಲಗಿಸಿ. ನಂತರ ಕೈಗಳಿಗೆ ಎಣ್ಣೆ ಹಚ್ಚಿಕೊಂಡು ಎಲ್ಲಕ್ಕೂ ಮೊದಲು ಮಗುವಿನ ಕಾಲುಗಳ ಮಸಾಜ್‌ ಮಾಡಿ. ಇದಾದ ಮೇಲೆ ಕೈಗಳು, ಮುಖ, ಎದೆ, ಹೊಟ್ಟೆ, ಬೆನ್ನು, ನಿತಂಬ ಇತ್ಯಾದಿ ಮುಂದುವರಿಸಿ.

ಮಸಾಜ್‌ ಮಾಡುವಾಗ ಮಗುವಿನ ಮೈ ಮೇಲೆ ಒತ್ತಡ ಹೇರಬೇಡಿ.

ಮಗುವಿಗೆ ಆಹಾರ ಉಣಿಸುವ, ಸ್ನಾನ ಮಾಡಿಸುವ ಮೊದಲೇ ಮಸಾಜ್‌ ಮುಗಿಸಿರಬೇಕು.

ಮಗುವಿನ ಅಂಗೈ, ಪಾದಗಳಿಗೂ ಅಗತ್ಯ ಮಸಾಜ್‌ ಮಾಡಿ. ಅದೇ ತರಹ ಅದರ ಕೈಕಾಲುಗಳ ಬೆರಳುಗಳಿಗೂ ಹಗುರವಾಗಿ ನೀವುತ್ತಾ ಮಸಾಜ್‌ ಮಾಡಿ.

ಬೇಬಿ ಸ್ಕಿನ್‌ ಕೇರ್‌ ಹೈಜೀನ್‌

ಮಗುವಿನ ತ್ವಚೆಯ ಕೋಮಲತೆ ಕಾಯ್ದುಕೊಳ್ಳಲು ಈ ವಿಷಯಗಳು ನಿಮಗೆ ತಿಳಿದಿರಲಿ :

ಮಗುವಿನ ನಾಜೂಕು ಅಂಗಗಳನ್ನು ಶುಚಿಗೊಳಿಸಲು ಟವೆಲ್ ‌ಬಳಸುವ ಬದಲು ಸಾಫ್ಟ್ ಬೇಬಿ ವೈಪ್ಸ್ ಬಳಸುವುದು ಲೇಸು. ಆಗ ರಾಶೆಸ್‌ ಮೂಡದು.

ಸ್ನಾನದ ನಂತರ ಮಗುವಿಗೆ ಬಟ್ಟೆ ತೊಡಿಸುವ ಮುನ್ನ ಅದರ ದೇಹವಿಡೀ ಸೌಮ್ಯ ಬೇಬಿ ಟಾಲ್ಕಂ ಪೌಡರ್‌ ಉದುರಿಸಿ. ಇದರ ಸುಗಂಧ ಮಗುವಿಗೆ ಹಿತಕರ.

ಮಗುವಿನ ನ್ಯಾಪಿಯನ್ನು ಆಗಾಗ ಚೆಕ್‌ ಮಾಡುತ್ತಾ ಅಗತ್ಯವಿದ್ದಾಗ ಬದಲಾಯಿಸಬೇಕು. ಜೊತೆಗೆ ಮೂತ್ರ ವಿಸರ್ಜನೆಯಿಂದ ಸದಾ ಒದ್ದೆ ಇದ್ದು, ಅದರ ನಾಜೂಕು ಅಂಗಗಳಿಗೆ ಹಾನಿ ಆಗಬಾರದು.

ಮಗುವಿನ ಸ್ನಾನ ಆದ ನಂತರ, ಬೇಬಿ ಇಯರ್‌ ಬಡ್ಸ್ ಬಳಸಿ ಅದರ ಕಿವಿಯಲ್ಲಿನ ಶ್ಯಾಂಪೂ ನೀರನ್ನು ಶುಚಿಗೊಳಿಸಲು ಮರೆಯದಿರಿ.

– ಸೌಮ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ