ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಕೆಟ್ಟ ಕಮೆಂಟ್ ಪೋಸ್ಟ್ ಮಾಡಿದ ಖಾತೆಗಳ ವಿರುದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದರ್ಶನ್ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮಾತನಾಡುತ್ತಾರೆ. ದರ್ಶನ್ ಇದ್ದಾಗ ಇವರೆಲ್ಲಾ ಇದ್ರೋ? ಇರಲಿಲ್ವೋ ಎಂದು ಪ್ರಶ್ನಿಸಿ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿದ ಬಳಿಕ ವಿಜಯಲಕ್ಷ್ಮಿ ಅವರ ವಿರುದ್ಧ ನಿಂದನೆಗಳ ಪೋಸ್ಟ್ ಪ್ರಕಟವಾಗುತ್ತಿದೆ. ನಿಂದನೆಯ ವಿರುದ್ಧ ಸಿಡಿದ ವಿಜಯಲಕ್ಷ್ಮಿ 15 ಇನ್‌ಸ್ಟಾಗ್ರಾಂ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್ ವಿರುದ್ಧ ಫೋಟೋ ಸಮೇತ ದೂರು ನೀಡಿದ್ದಾರೆ.
ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶದ ಪೋಸ್ಟ್ಗಳ ಸ್ಕ್ರೀನ್ ಶಾಟ್ ಸಮೇತ ದೂರು ನೀಡಿರುವ ವಿಜಯಲಕ್ಷ್ಮೀ, ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ ವಿರಾಟ್ ಕಿಚ್ಚ ಎಂಬ ಖಾತೆಗಳು ಸೇರಿದಂತೆ 18 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ “ಡೆವಿಲ್” ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನು ವೇದಿಕೆಯ ಮೇಲೆ ನನ್ನ ಪತಿ ದರ್ಶನ್ ಮತ್ತು ಅವರ ನಟನೆ ಬಗ್ಗೆ ಮಾತನಾಡಿದ್ದೆ. ದರ್ಶನ್ ಹೇಳಿದಂತೆ ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ನನ್ನ ಹಾಗೂ ನಮ್ಮ ಕಟುಂಬದ ವಿರುದ್ಧ ಅಶ್ಲೀಲ ಪೋಸ್ಟ್ಗಳನ್ನು ಹಾಕಲಾರಂಭಿಸಿದ್ದಾರೆ. ಇದರಿಂದ ನಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಈ ಸಾಮಾಜಿಕ ಜಾಲತಾಣ ಖಾತೆಗಳ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಜಯಲಕ್ಷ್ಮಿ ದೂರಿದಲ್ಲಿ ಕೋರಿದ್ದಾರೆ.





