``ನಿಮ್ಮ ಮಗಳು ಓದಿನಲ್ಲಿ ಬಹಳ ದುರ್ಬಲ ಆಗಿದ್ದಾಳೆ. ಕ್ಲಾಸಿನಲ್ಲಿ ಹೇಳಿದ ಪಾಠ ಅವಳ ನೆನಪಲ್ಲಿ ಉಳಿಯುವುದೇ ಇಲ್ಲ,'' ಎಂದು ರೀಮಾ ಟೀಚರ್, ಮಗಳ ಬಗ್ಗೆ ಹೇಳಿದಾಗ ಜಮುನಾಳಿಗೆ ನಂಬಲು ಆಗಲೇ ಇಲ್ಲ. 3 ವರ್ಷದ ಚಿನ್ಮಯಿ ನೋಡಲು ಆರೋಗ್ಯವಂತಳಾಗಿದ್ದಳು. ಅವಳ ವಯಸ್ಸಿಗೆ ತಕ್ಕಂತೆಯೇ ತೂಕ ಕೂಡ ಸಮರ್ಪಕವಾಗಿತ್ತು. ಆದರೆ ಓದಲು, ನೆನಪಿಟ್ಟುಕೊಳ್ಳಲು ಏನು ತೊಂದರೆ ಆಗಲು ಸಾಧ್ಯವಿತ್ತು? ಇದೇ ಯೋಚನೆಯಿಂದ ಜಮುನಾ ಚಿಂತೆಗೀಡಾಗಿದ್ದಳು.
ಜಮುನಾ ಮನೆಗೆ ಬಂದು ಚಿನ್ಮಯಿಯ ವರ್ತನೆಯ ಬಗ್ಗೆ ಗಮನಹರಿಸತೊಡಗಿದಳು. ಚಿನ್ಮಯಿ ಏಕಾಗ್ರತೆಯಿಂದ ಓದುತ್ತಿರಲಿಲ್ಲ ಹಾಗೂ ಆಡುತ್ತಲೂ ಇರಲಿಲ್ಲ. ತಾನು ಅವಳ ಈ ಸಂಗತಿಗಳ ಬಗ್ಗೆ ಗಮನ ಕೊಡದೇ ಇರುವುದರ ಬಗ್ಗೆ ಅವಳಿಗೆ ಅಚ್ಚರಿಯಾಯಿತು. ಅವಳ ಗಮನ ಯಾವಾಗಲೂ ಅವಳ ಎತ್ತರ ಹಾಗೂ ಮೈಕಟ್ಟಿನ ಮೇಲೆಯೇ ಇರುತ್ತಿತ್ತು. ಇದು ಕೇವಲ ಜಮುನಾಳದ್ದೊಂದೇ ಕಥೆಯಲ್ಲ. ಜಮುನಾಳಂತಹ ಅದೆಷ್ಟು ತಾಯಿಯರಿದ್ದಾರೆ, ಅವರು ಕೇವಲ ತಮ್ಮ ಮಕ್ಕಳ ದೈಹಿಕ ಬೆಳವಣಿಗೆಗಳ ಬಗೆಗಷ್ಟೇ ಗಮನ ಕೊಡುತ್ತಾರೆಯೇ ಹೊರತು, ಅವರೆಂದೂ ಅವರ ಮಾನಸಿಕ ಬೆಳವಣಿಗೆಗಳ ಬಗೆಗೆ ಗಮನ ಕೊಡುವುದಿಲ್ಲ.
ಯಾವುದೇ ಒಂದು ಮಗುವಿನ ಮೊದಲ 1000 ದಿನಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಅತ್ಯಂತ ಮುಖ್ಯವಾಗಿರುತ್ತದೆ. ಅದಕ್ಕಾಗಿ ಮಗುವಿಗೆ ಪೋಷಕಾಂಶಯುಕ್ತ ಆಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಆದರೆ ಬಹಳಷ್ಟು ಪೋಷಕರು ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ಗಮನ ಕೊಡುವುದೇ ಇಲ್ಲ.
ಪೋಷಕಾಂಶಗಳು ಅಗತ್ಯ
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಿಶು ತಜ್ಞರಾಗಿರುವ ಡಾ. ಸತೀಶ್ ಹೀಗೆ ಹೇಳುತ್ತಾರೆ, ``ಭಾರತದಲ್ಲಿನ ಬಹಳ ಕಡಿಮೆ ಪೋಷಕರು ಶಿಶು ತಜ್ಞರ ಜೊತೆ ತಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ತೂಕ ಮತ್ತು ಡಯೆಟ್ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತಾರೆ ಮತ್ತು ಆ ಕುರಿತ ಆಹಾರದ ಬಗೆಗಷ್ಟೇ ಪ್ರಶ್ನಿಸುತ್ತಾರೆ. ``ಸಾಮಾನ್ಯವಾಗಿ ತಮ್ಮ ಕುಟುಂಬದ ಆಹಾರ ಪದ್ಧತಿಗೆ ಅನುಗುಣವಾಗಿಯೇ ಮಗುವಿನ ಆಹಾರದ ಬಗ್ಗೆ ನಿರ್ಧರಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಅದೆಷ್ಟೋ ಮಕ್ಕಳು ಕಬ್ಬಿಣಾಂಶ, ಝಿಂಕ್ ಮತ್ತು ಕ್ಯಾಲ್ಶಿಯಂ ಕೊರತೆಯ ರೋಗಗಳಿಗೆ ತುತ್ತಾಗುತ್ತಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮಾನಸಿಕ ವಿಕಾಸಕ್ಕೆ ಸಂಬಂಧಿಸಿದ ಪೋಷಕಾಂಶಗಳ ಬಗ್ಗೆ ತಜ್ಞರಿಂದ ಕೇಳಿ ತಿಳಿದುಕೊಳ್ಳಬೇಕು.''
ಗಮನಿಸಬೇಕಾದ ಒಂದು ಸಂಗತಿಯೆಂದರೆ, ಭಾರತೀಯ ಪೋಷಕರು ತಮ್ಮ ಶಿಶುಗಳ ಮ್ಯಾಕ್ರೊ ನ್ಯೂಟ್ರಿಯೆಂಟ್ಸ್ ಅಂದರೆ ಪ್ರೋಟೀನ್ ಕಾರ್ಬೊಹೈಡ್ರೇಟ್ ಮತ್ತು ಫ್ಯಾಟ್ ಬಗ್ಗೆ ಗಮನಕೊಡುತ್ತಾರೆ. ಅದರಿಂದ ಅವರ ದೈಹಿಕ ವಿಕಾಸವೇನೊ ಗೊತ್ತಾಗುತ್ತದೆ. ಆದರೆ ಮೈಕ್ರೋ ನ್ಯೂಟ್ರಿಯೆಂಟ್ಸ್ ಅಂದರೆ ಝಿಂಕ್, ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್ಸ್ ಬಗ್ಗೆ ಕಡಿಮೆ ಗಮನ ಕೊಡುತ್ತಾರೆ.
ಇವುಗಳ ಕೊರತೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಗುವಿನ ಮಾನಸಿಕ ಬೆಳವಣಿಗೆ ಸಕಾಲದಲ್ಲಿ ಆಗದೇ ಇದ್ದಾಗ ಭವಿಷ್ಯದಲ್ಲಿ ಅದನ್ನು ಭರ್ತಿ ಮಾಡುವುದು ಕಷ್ಟ. ಭಾರತದಲ್ಲಿ 6 ತಿಂಗಳ ಮಗುವಿನಿಂದ ಹಿಡಿದು 2-3 ವರ್ಷಗಳ ಮಗುವಿನ ತನಕ ಅತಿ ಹೆಚ್ಚು ಅಂದರೆ 49.5% ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬರುತ್ತದೆ.