ಚಿಕೂನ್ ಗುನ್ಯಾ, ಡೆಂಗ್ಯೂ ಜ್ವರಗಳ ಹಾವಳಿಯ ಬಳಿಕ ಈಗ ಹೊಸದೊಂದು ವೈರಸ್ ಜ್ವರ ಜಗತ್ತಿನಾದ್ಯಂತ ಹೆಚ್ಚು ಸುದ್ದಿ ಮಾಡುತ್ತಿದೆ. ಅದರ ಹೆಸರು `ಝೀಕಾ ವೈರಸ್.' ಭಾರತದಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ವಹಿಸಲಾಗುತ್ತಿದೆ. ಅದಕ್ಕಾಗಿ ಒಂದು ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ.
ಈ ಹೆಸರು ಹೇಗೆ ಬಂತು?
ಆಫ್ರಿಕಾ ಖಂಡದಲ್ಲಿ `ಝೀಕಾ' ಹೆಸರಿನ ಕಾಡಿದೆ. ಅಲ್ಲಿ ಪ್ರಾಣಿಗಳ ಮೂಲಕ ಈ ವೈರಸ್ ಜ್ವರ ಕಾಣಿಸಿಕೊಂಡಿದ್ದರಿಂದ ಆ ಹೆಸರು ಬಂತು. ಇದು ಮೆಕ್ಸಿಕೊ, ಕೊಲಂಬಿಯಾ, ವೆನಿಜುಯೆಲಾ, ಬ್ರೆಜಿಲ್, ದಕ್ಷಿಣ ಅಮೆರಿಕಾ ಮುಂತಾದ ದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ.
ಝೀಕಾ ವೈರಾಣು ರೋಗದ ಮೊದಲ ಪ್ರಕರಣ ಪತ್ತೆಯಾದದ್ದು 1947ರಲ್ಲಿ ಉಗಾಂಡಾ ದೇಶದಲ್ಲಿ. 1960ರಲ್ಲಿ ನೈಜೀರಿಯಾದಲ್ಲಿ ಅದು ಮತ್ತೆ ಪ್ರತ್ಯಕ್ಷವಾಯಿತು. ಆ ಬಳಿಕ ಆಫ್ರಿಕಾದ 1-2 ದೇಶಗಳಲ್ಲಿ ಝೀಕಾ ವೈರಸ್‌ನ ಕೆಲವು ಪ್ರಕರಣಗಳು ಪತ್ತೆಯಾದವು. ಆ ಬಳಿಕ ಏಷ್ಯಾ ಖಂಡದ ಕೆಲವು ದೇಶಗಳಲ್ಲಿ ಈ ರೋಗದ ಲಕ್ಷಣಗಳುಳ್ಳ ಕೆಲವು ರೋಗಿಗಳು ಕಂಡುಬಂದರು. 2 ವರ್ಷಗಳ ಹಿಂದಷ್ಟೇ ಅಂದರೆ 2012ರಲ್ಲಿ ಪಾಲಿನೇಷಿಯಾದಲ್ಲಿ ಈ ರೋಗದ ಸಾವಿರಾರು ಪ್ರಕರಣಗಳು ಪತ್ತೆಯಾಗಿ ಜಗತ್ತಿನಾದ್ಯಂತ ಗುಲ್ಲೆದ್ದಿತು.
ಲಕ್ಷಣಗಳು
ಚಿಕೂನ್ ಗುನ್ಯಾ, ಡೆಂಗ್ಯೂ, ಹಳದಿ ಜ್ವರದ ಹಾಗೆಯೇ ಝೀಕಾ ವೈರಸ್ ರೋಗದ ಲಕ್ಷಣಗಳು ಕೂಡ ಇರುತ್ತವೆ.
ಜ್ವರ ಬರುವುದು, ತಲೆನೋವು, ಕಾಲುನೋವು, ಮೈ ಕೈ ನೋವು, ಕಣ್ಣು ಕೆಂಪಾಗುವಿಕೆ, ರಕ್ತ ತಪಾಸಣೆಯಿಂದಷ್ಟೇ ಅದು ಯಾವ ಬಗೆಯ ರೋಗ ಎಂಬುದನ್ನು ಪತ್ತೆ ಹಚ್ಚಬಹುದು.
ಭಾರತದಲ್ಲಿ ಈ ರೋಗ ಇನ್ನೂ ಪ್ರವೇಶ ಮಾಡಿಲ್ಲ. ಹಾಗಾಗಿ ಇದರ ಬಗ್ಗೆ ಅತೀ ಹೆಚ್ಚು ಭಯದ ವಾತಾವರಣ ಪಸರಿಸಿದೆ.
ಜ್ವರ ಹೇಗೆ ಪಸರಿಸುತ್ತದೆ?
`ಈಡಸ್' ಎಂಬ ಗಂಡು ಸೊಳ್ಳೆಯಿಂದ ಈ ರೋಗ ಪಸರಿಸುತ್ತದೆ. `ಝೀಕಾ' ವೈರಸ್ ರೋಗ ತಗುಲಿದ ವ್ಯಕ್ತಿಗೆ ಸೊಳ್ಳೆ ಕಚ್ಚಿದರೆ, ಅದು ಆರೋಗ್ಯವಂತ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಈ ರೋಗ ಪಸರಿಸುತ್ತದೆ. ಭಾರತದಲ್ಲಿ ಈ ಪ್ರಕಾರದ ಸೊಳ್ಳೆಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿರುವುದರಿಂದ, ಇಲ್ಲಿ ಸ್ವಚ್ಛತೆಯ ನಿರ್ವಹಣೆ ಕೂಡ ಅಷ್ಟಕಷ್ಟೇ ಇರುವುದರಿಂದ ಒಂದು ಸಲ ರೋಗ ಒಬ್ಬ ವ್ಯಕ್ತಿಗೆ ಬಂದರೆ ಅದು ಬಹುಬೇಗ ಅನೇಕ ಜನರಿಗೆ ಪಸರಿಸುತ್ತದೆ.
ಗರ್ಭಿಣಿಯರಿಗೆ ಏನೇನು ಸಮಸ್ಯೆ?
ಝೀಕಾ ವೈರಸ್ ರೋಗ ಗರ್ಭಿಣಿಯರಿಗೆ ಉಂಟಾದರೆ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಗರ್ಭಿಣಿಯಿಂದ ಆಕೆಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ರೋಗ ತಗಲುತ್ತದೆ. ಅದರಿಂದ ಆಕೆಗೆ ಹುಟ್ಟುವ ಮಗು ನರದೌರ್ಬಲ್ಯ, ಬುದ್ಧಿಮಾಂಧ್ಯತೆಯಿಂದ ಕೂಡಿರುತ್ತದೆ. ಜೊತೆಗೆ ತಲೆ ಸಣ್ಣಗಾಗಿಯೂ ಇರುತ್ತದೆ. ಇದನ್ನು ವೈದ್ಯ ಭಾಷೆಯಲ್ಲಿ `ಮೈಕ್ರೊ ಕಿಫಲಿ' ಎಂದು ಹೇಳಲಾಗುತ್ತದೆ. ಈ ಕಾರಣದಿಂದ ದಕ್ಷಿಣ ಅಮೆರಿಕಾ, ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ಸದ್ಯಕ್ಕೆ ಗರ್ಭ ಧರಿಸಬೇಡಿ ಎಂದು ಸಲಹೆ ನೀಡಲಾಗುತ್ತಿದೆ.
ಇದರ ತಡೆಗೆ ಏನು ಮಾಡಬೇಕು?
ಅಮೆರಿಕಾದಲ್ಲಿ ಝೀಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅದಕ್ಕೆ ಬೇಗನೆ ಲಸಿಕೆ ಕಂಡುಹಿಡಿಯಬೇಕೆಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಸೂಚಿಸಿದ್ದಾರೆ.