ಹವ್ಯಾಸಕ್ಕಾಗಿ ಅನುರಾಧಾ ಒಂದು ಜಿಮ್ ಸ್ಥಾಪನೆ ಮಾಡಿದರು. ಅವರ ಈ ಹವ್ಯಾಸವೇ ಅವರಿಗೀಗ ಒಳ್ಳೆಯ ಆದಾಯದ ಮೂಲವಾಗಿದೆ. ಒಬ್ಬ ಗೃಹಿಣಿ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಅವರು ಅಲ್ಪಾವಧಿಯಲ್ಲಿಯೇ ತೋರಿಸಿಕೊಟ್ಟಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಚಿಕ್ಕ ಪ್ರಮಾಣದಲ್ಲಿ ಮನೆಯಲ್ಲಿ ಜಿಮ್ ಆರಂಭಿಸಬಹುದಾಗಿದೆ. ಬೆಂಗಳೂರಿನಲ್ಲಿ ಜಿಮ್ ನಡೆಸುವ ಅನುರಾಧಾ ಹೀಗೆ ಹೇಳುತ್ತಾರೆ, “ಫಿಟ್‌ ಆಗಿರಲು ಒಳ್ಳೆಯ ವಾತಾವರಣ ಅತ್ಯಗತ್ಯ. ಅದೇ ರೀತಿ ನಿಮ್ಮನ್ನು ನೀವು ಆರೋಗ್ಯದಿಂದಿಟ್ಟುಕೊಳ್ಳಲು ದಿನ ಕೆಲವು ಹೊತ್ತು ಜಿಮ್ ನಲ್ಲಿ ಕಳೆಯಬೇಕಾಗುತ್ತದೆ. ಒಬ್ಬ ಮಹಿಳೆ ಆರೋಗ್ಯದಿಂದಿದ್ದರೆ ಆಕೆಯ ಕುಟುಂಬ ಆರೋಗ್ಯದಿಂದಿರುತ್ತದೆ.

“ನನಗೆ ಕಾಲೇಜು ಜೀವನದಲ್ಲಿ ಅಥ್ಲೀಟ್‌ ಆಗುವ ಅಭಿಲಾಷೆ ಇತ್ತು. ಹೀಗಾಗಿ ನನ್ನಲ್ಲಿ ಆರೋಗ್ಯಪ್ರಜ್ಞೆ ಸ್ವಲ್ಪ ಜಾಸ್ತಿಯೇ ಇತ್ತು. ಆಗಲೇ ನಾನು ನನಗೆ ಅವಕಾಶ ಸಿಕ್ಕರೆ ನನ್ನ ಆಸುಪಾಸಿನ ಜನರಿಗೆ ಇಂತಹ ಒಳ್ಳೆಯ ವಾತಾವರಣ ಕಲ್ಪಿಸಲು ಪ್ರಯತ್ನ ಮಾಡ್ತೀನಿ. ಅದರಿಂದ ಜನರು ಫಿಟ್‌ ಆಗಿರುತ್ತಾರೆ ಮತ್ತು ಆರೋಗ್ಯದಿಂದ ಇರುತ್ತಾರೆ ಎಂಬ ಅಪೇಕ್ಷೆ ನನ್ನದಾಗಿತ್ತು. ಅದಕ್ಕಾಗಿ ಜಿಮ್ ಗಿಂತ ಬೇರೆ ಉತ್ತಮ ಉಪಾಯ ಯಾವುದಿರಲು ಸಾಧ್ಯ ಎಂದು ಯೋಚಿಸಿ ಜಿಮ್ ಆರಂಭಿಸಿದೆ.”

ಅನುರಾಧಾ ಮದುವೆಯ ಬಳಿಕ ತಮ್ಮ ಪತಿ ಸಂಜಯ್‌ರ ಸಹಕಾರದಿಂದ ಜಿಮ್ ಆರಂಭಿಸಿದರು. ಅದರಲ್ಲಿ ಎಲ್ಲಾ ಬಗೆಯ ವೇಟ್ಸ್, ಕಾರ್ಡಿಯೊ ಟ್ರೇಡ್‌ ಮಿಲ್‌, ಸೈಕಲ್, ವಾಕಿಂಗ್‌ ಬಾಲ್ಸ್ ಮುಂತಾದವೆಲ್ಲ ಲಭ್ಯ. ಇಲ್ಲಿ ವರ್ಕ್‌ಔಟ್‌ ಮಾಡಲು 100ಕ್ಕೂ ಹೆಚ್ಚು ಮಹಿಳೆಯರು ಬರುತ್ತಾರೆ. ನುರಿತ ಟ್ರೇನರ್‌ಗಳ ಮೇಲ್ವಿಚಾರಣೆಯಲ್ಲಿ ಈ ಎಲ್ಲ ತರಬೇತಿ ನೀಡಲಾಗುತ್ತದೆ. ಮುಂಜಾನೆ 7ಕ್ಕೆ ಶುರುವಾಗುವ ತರಬೇತಿ ರಾತ್ರಿ 9.30ರವರೆಗೆ ನಡೆಯುತ್ತಲೇ ಇರುತ್ತದೆ. ಈ ಜಿಮ್ ನಲ್ಲಿ ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಬರುತ್ತಾರೆ.

ಡ್ರೈ ಜಿಮ್ ನ ಸಕಲ ಸೌಲಭ್ಯಗಳು ಲಭ್ಯವಿರುವ ಈ ಜಿಮ್ ನಲ್ಲಿ ವರ್ಕ್‌ಔಟ್‌ ಮಾಡಲು ಬರುವ ಸವಿತಾ ಹೀಗೆ ಹೇಳುತ್ತಾರೆ, “ಈ ಜಿಮ್ ನ ಎಲ್ಲಕ್ಕೂ ಅತ್ಯುತ್ತಮ ಸಂಗತಿಯೆಂದರೆ, ಅದರ ಸ್ವಚ್ಛತೆ, ಮುಕ್ತ ವಾತಾವರಣ. ಇಲ್ಲಿ ಬಂದು ವರ್ಕ್‌ಔಟ್‌ ಮಾಡಲು ಬಹಳ ಖುಷಿಯಾಗುತ್ತದೆ. ಅಷ್ಟೇ ಅಲ್ಲ, ಕೆಲವೇ ತಿಂಗಳಲ್ಲಿ ತೂಕ ಕೂಡ ಕಡಿಮೆಯಾಗಿದೆ. ಈಗಂತೂ ನನ್ನ ಪತಿ ದಿನ ಜಿಮ್ ಗೆ ಹೋಗುವಂತೆ ಹೇಳುತ್ತಾರೆ. ನನ್ನಲ್ಲಾದ ಬದಲಾವಣೆಯಿಂದ ಅವರು ಸಾಕಷ್ಟು ಖುಷಿಗೊಂಡಿದ್ದಾರೆ.”

ಪ್ರತಿಯೊಂದು ವರ್ಗದವರಿಗಾಗಿ ಈ ಜಿಮ್ ನ ಮುಖ್ಯ ಆಕರ್ಷಣೆಯೆಂದರೆ ಸ್ಟೆಬಿಲಿಟಿ ಬಾಲ್ ‌ಅಥವಾ ಸ್ವಿಸ್‌ ಬಾಲ್ ಮುಖಾಂತರ ಮಾಂಸಖಂಡಗಳಿಗೆ ಟೋನ್‌ ಅಪ್‌ ಮಾಡುವುದು. ಬೆನ್ನು, ಭುಜ ಹಾಗೂ ಹೊಟ್ಟೆಯ ಕೆಳಭಾಗದ ಮಾಂಸಖಂಡಗಳ ಬಳಕುವಿಕೆಯನ್ನು ಕಾಯ್ದುಕೊಂಡು ಹೋಗಲು ನೆರವಾಗುವ ಈ ಬಾಲ್ ‌ಸೈಜ್‌ಗಳಲ್ಲಿ ಇರುತ್ತದೆ. ಮಕ್ಕಳಿಗಾಗಿ 45 ಸೆಂ.ಮೀ. ವಯಸ್ಕರಿಗಾಗಿ 55 ಸೆಂ.ಮೀ., 65 ಸೆಂ.ಮೀ. ಹಾಗೂ 75 ಸೆಂ.ಮೀ.ನ ಬಾಲ್ ಗಳು ಸಮರ್ಪಕವಾಗಿರುತ್ತವೆ. ನಿಮ್ಮ ಎತ್ತರ ಹೆಚ್ಚಾಗಿದ್ದರೆ 75 ಸೆಂ.ಮೀ. ಬಾಲ್ ‌ಉಪಯುಕ್ತ ಎನಿಸುತ್ತದೆ. ಆ ಬಾ್ಲ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಲು ಅದರ ಮೇಲೆ ಕುಳಿತು ಪರೀಕ್ಷಿಸಲಾಗುತ್ತದೆ.

ಆಕರ್ಷಕಗೊಳಿಸುವಲ್ಲಿ ಯಶಸ್ವಿ

ಬಾಲ್ ಮೇಲೆ ಸಮತೋಲನ ಕಾಯ್ದುಕೊಂಡು ಹೋಗುವುದು ಸವಾಲಿನಿಂದ ಕೂಡಿದ ಕಠಿಣ ಕೆಲಸವೇ ಸರಿ. ಹೊಟ್ಟೆಯ ಆಧಾರದಲ್ಲಿ ಬಾಲ್ ‌ನ ಮೇಲ್ಭಾಗದಲ್ಲಿ  ಬಗ್ಗಿ ವ್ಯಾಯಾಮ ಮಾಡುವುದು ಹೊಟ್ಟೆ, ಎದೆ ಭಾಗಕ್ಕೆ ಅತ್ಯಂತ ಉಪಯುಕ್ತ.

ಬಾಲ್ ‌ನಲ್ಲಿ ಎಲ್ಲ ಬಗೆಯ ಕ್ರಿಯೆಗಳನ್ನು ನುರಿತ ತರಬೇತುದಾರರ ಸಮ್ಮುಖದಲ್ಲಿಯೇ ಹೇಳಿಕೊಡಲಾಗುತ್ತದೆ. ಅನುರಾಧಾರ ಜಿಮ್ ಇರುವ ಪ್ರದೇಶ ಶ್ರೀಮಂತರು, ಸುಶಿಕ್ಷಿತರು ವಾಸಿಸುವ ಪ್ರದೇಶ. ಇಷ್ಟಿದ್ದಾಗ್ಯೂ ಆ ಪ್ರದೇಶದಲ್ಲಿ  ಹೇಳಿಕೊಳ್ಳುವಂತಹ ಜಿಮ್ ಗಳು ಇರಲಿಲ್ಲ. ಅವರ ಜಿಮ್ ಆರೋಗ್ಯ ಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಬ್ಬ ಯಶಸ್ವಿ ಉದ್ಯಮಿ ಪತ್ನಿಯಾಗಿರುವ ಕಾರಣದಿಂದ ಅನುರಾಧಾರ ಬಳಿ ಹಣಕಾಸಿನ ಕೊರತೆ ಇರಲಿಲ್ಲ. ಅವರಿಗಿದ್ದುದು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ. ಅವರಲ್ಲಿ ಬರುವ ಮಹಿಳೆಯರಿಗೆ ಆಹಾರದ ಬಗೆಗೂ ಗಮನ ಕೊಡಲು ಸಲಹೆ ನೀಡಲಾಗುತ್ತದೆ. ಹಸಿರು ಸೊಪ್ಪುಗಳು, ಸಲಾಡ್‌ ಮತ್ತು ಹಣ್ಣುಗಳ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ.

ಹವ್ಯಾಸದ ಉದ್ಯಮ

ಅವರು ದಂಪತಿಗಳಿಗೆ ವಿಶೇಷ ಸ್ಕೀಮುಗಳನ್ನು ಕೊಟ್ಟಿದ್ದರಿಂದ ಅವರ ಜಿಮ್ ಬಗ್ಗೆ ಜನರಲ್ಲಿ ವಿಶೇಷ ಆಸಕ್ತಿ ಮೂಡಿತು.

ಆರಂಭದಲ್ಲಿ ನನಗೆ ನನ್ನಂತಹ ಗೃಹಿಣಿ ಒಂದು ಜಿಮ್ ಹೇಗೆ ನಡೆಸಬಹುದು ಎನಿಸಿತ್ತು. ಆದರೆ ಬಳಿಕ `ಮನಸ್ಸಿದ್ದರೆ ಮಾರ್ಗ’ ಎಂದು ಸಾಬೀತಾಯಿತು. ಮನೆಯವರ ಸಹಕಾರ ಇದ್ದರೆ ಅದು ಇನ್ನಷ್ಟು ಸುಲಭವಾಗುತ್ತದೆ. ಈಗಂತೂ ನನ್ನ ಹವ್ಯಾಸ ಒಂದು ಉದ್ಯೋಗದ ರೂಪ ತಾಳಿದೆ. ಬರಲಿರುವ ದಿನಗಳಲ್ಲಿ ತನ್ನ ಗ್ರಾಹಕರಿಗೆ ಮತ್ತಷ್ಟು ಸೌಲಭ್ಯ ದೊರಕಿಸಿ ಕೊಡುವ ಆಸೆ ಎಂದು ಹೇಳುವ ಅನುರಾಧಾ, ಆದರೆ ಅದಕ್ಕಿಂತಲೂ ಮುಖ್ಯವಾಗಿ ಈಗಿರುವುದನ್ನು ಇನ್ನಷ್ಟು ಉತ್ತಮಗೊಳಿಸುವ ಅಭಿಲಾಷೆ ಹೊಂದಿದ್ದಾರೆ.

ಅನುರಾಧಾರ ಯಶಸ್ಸನ್ನು ಗಮನಿಸಿ ಒಂದು ಮಾತು ಹೇಳಬಹುದು, ಖಜಾನೆ ಎಲ್ಲೂ ಇಲ್ಲ, ಅದು ನಿಮ್ಮ ಮನೆಯಲ್ಲಿಯೇ ಇದೆ. ಸಾಕಷ್ಟು ಸ್ಥಳಾವಕಾಶ, ಹಣ ಮತ್ತು ದೃಢ ನಿರ್ಧಾರ ಇದ್ದರೆ ಮನೆಯಲ್ಲಿಯೇ ಒಂದು ಜಿಮ್ ಆರಂಭಿಸಿ ಹಾಗೂ ನಿಮ್ಮ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.

– ಜಿ. ಮನೋರಮಾ

Tags:
COMMENT