ಗಂಡ ಹೆಂಡತಿಯ ಸಂಬಂಧ ಎನ್ನುವುದು ಪ್ರೀತಿ, ವಿಶ್ವಾಸ ಮತ್ತು ಸಮರ್ಪಣೆಯೊಂದಿಗೆ ಥಳಕು ಹಾಕಿಕೊಂಡಿದೆ. ಕಾಲಕ್ರಮೇಣ ಈ ಸಂಬಂಧ ಮತ್ತಷ್ಟು ಬಲಿಷ್ಠಗೊಳ್ಳುತ್ತಾ ಹೋಗುತ್ತದೆ. ದಂಪತಿಗಳಲ್ಲಿ ಯಾವುದೋ ಕಾರಣದಿಂದ ಉಂಟಾದ ಮನಸ್ತಾಪ ಸಂಬಂಧದಲ್ಲಿ ವಿಷ ಬೆರೆಸುವ ಕೆಲಸ ಮಾಡುತ್ತದೆ. ಅದರಲ್ಲೂ ಮಿತಿಮೀರಿದ ಪ್ರೀತಿ ಇಬ್ಬರಿಗೂ ಹಾನಿಕಾರಕವಾಗಿ ಪರಿಣಮಿಸಬಹುದು.

ಅಂದಹಾಗೆ, ಸಂಗಾತಿ ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಿದ್ದರೆ, ಆತ ನಿಮ್ಮಿಂದಲೂ ಅಷ್ಟೇ ಪ್ರೀತಿ ಅಪೇಕ್ಷಿಸುತ್ತಾನೆ. ಆದರೆ ಸಂಗಾತಿ ನಿಮ್ಮ ಮಾತುಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಸಮಸ್ಯೆ ಶುರುವಾಗುತ್ತದೆ. ಆಗ ನಿಮ್ಮ ಸಂಬಂಧ ಇಕ್ಕಟ್ಟಿಗೆ ಸಿಲುಕುತ್ತದೆ.

ಇಂತಹ ಸ್ಥಿತಿಯಲ್ಲಿ ಇಬ್ಬರೂ ಪರಸ್ಪರರ ಬಗ್ಗೆ ತಪ್ಪುಕಲ್ಪನೆ ಮಾಡಿಕೊಳ್ಳುತ್ತಾರೆ. ಒಬ್ಬರು ತನ್ನ ಪ್ರೀತಿಗೆ ಯಾವುದೇ ಬೆಲೆ ಇಲ್ಲವೆಂದು ಅಂದುಕೊಂಡರೆ, ಇನ್ನೊಬ್ಬರು ಸಂಗಾತಿ ತನ್ನ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾನೆ ಎಂದು ಯೋಚಿಸಬಹುದು. ಈ ಸ್ಥಿತಿಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತದೆ. ಒಮ್ಮೊಮ್ಮೆ ಪರಿಸ್ಥಿತಿ ಎಲ್ಲಿಯವರೆಗೆ ಹೋಗಿ ತಲುಪುತ್ತದೆ ಎಂದರೆ, ಇಬ್ಬರು ಬೇರೆಬೇರೆ ಆಗುವ ಪರಿಸ್ಥಿತಿ ಕೂಡ ಬರಬಹುದು. ಈ ಪರಿಸ್ಥಿತಿ ಬರದೇ ಇರಲು ಕೆಳಕಂಡ ಸಲಹೆಗಳ ಮೇಲೊಮ್ಮೆ ಗಮನಹರಿಸಿ :

ಅತಿಯಾದ ಗಮನ ಬೇಡ : ನಾವು ಒಬ್ಬರನ್ನು ಪ್ರೀತಿಸುತ್ತಿರುವಾಗ ಸದಾ ಅವರ ಬಗ್ಗೆ ಗಮನಹರಿಸುತ್ತ ಇರಬೇಕು ಎಂದು ಯೋಚಿಸುತ್ತೇವೆ. ಆದರೆ ಅತಿಯಾದ ಕಾಳಜಿ ಒಮ್ಮೊಮ್ಮೆ ಮುಳುವಾಗಿ ಪರಿಣಮಿಸಬಹುದು. ನಿಮ್ಮ ಅತಿಯಾದ ಮುತುವರ್ಜಿ ಸಂಗಾತಿಗೆ ಕಿರಿಕಿರಿ ಎನಿಸಬಹುದು. ನೀವು ಪ್ರತಿಸಲ ಅವನ ಊಟ, ತಿಂಡಿ, ಹೋಗುವ ಬರುವ ಬಗ್ಗೆ ಗಮನ ಇಡತೊಡಗಿದರೆ,  ಅವನಿಗೆ ತನ್ನ ಸ್ವಾತಂತ್ರ್ಯ ಕಿತ್ತುಕೊಂಡಂತೆ ಅನಿಸಬಹುದು. ತಾನು ಬಂಧಿಯಾಗಿರುವಂತೆ ಅನುಭವ ಮಾಡಿಕೊಳ್ಳಬಹುದು.

ಸ್ಪೇಸ್‌ ಕೊಡಿ : ಸಂಬಂಧ ಯಾವುದೇ ಇರಲಿ, ಅದರಲ್ಲಿ ಸ್ಪೇಸ್‌ ಇರುವುದು ಅತ್ಯವಶ್ಯ. ಇಲ್ಲದಿದ್ದರೆ ಆ ಸಂಬಂಧ ಹೆಚ್ಚು ದಿನ ಉಳಿಯುವುದು ಕಷ್ಟ. ಸ್ಪೇಸ್‌ ಕೊಡದೇ ಇರುವುದರಿಂದ ಪ್ರೀತಿ ಕಡಿಮೆಯಾಗುತ್ತದೆ. ಇಬ್ಬರ ನಡುವೆ ಜಗಳ ಮನಸ್ತಾಪ ಹೆಚ್ಚುತ್ತದೆ. ಇಬ್ಬರು ದೂರವಾಗಲು ಇದು ಕಾರಣವಾಗುತ್ತದೆ.

ಹಕ್ಕು ಪ್ರತಿಪಾದಿಸಬೇಡಿ : ಪ್ರೀತಿಯಲ್ಲಿ ಸ್ಪೇಸ್‌ ಕೊನೆಗೊಂಡರೆ ಸಂಗಾತಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಜೊತೆಗೆ ಅವನ ಮಾನಸಿಕ ಸಮತೋಲನ ಕೂಡ ಬಿಗಡಾಯಿಸುತ್ತಿರುವುದು ಗಮನಕ್ಕೆ ಬರುತ್ತದೆ. ಮಾತು ಮಾತಿಗೂ ಅವನಿಗೆ ಸಿಟ್ಟು ಬರುತ್ತದೆ. ಆ ಕಾರಣದಿಂದ ಸ್ವಭಾವದಲ್ಲಿ ಸಿಡಿಮಿಡಿತನ ಪ್ರತ್ಯಕ್ಷಗೊಳ್ಳುತ್ತದೆ. ಸಂಗಾತಿಯ ಮೇಲೆ ಪ್ರತಿಸಲ ಹಕ್ಕು ಪ್ರತಿಪಾದಿಸುವುದು ಅವನನ್ನು ಕೋಪಿಷ್ಟನಾಗಿಸುತ್ತದೆ.

ಸದಾ ಸಂಗಾತಿಯೊಂದಿಗೆ ಇರುವುದು : ಅತಿಯಾಗಿ ಪ್ರೀತಿ ಮಾಡುವವರು ಸಂಗಾತಿ ಎಲ್ಲ ಕಡೆಯೂ ಸದಾ ತನ್ನ  ಜೊತೆಗೇ ಇರಬೇಕೆಂದು ಬಯಸುತ್ತಾರೆ. ಸಂಗಾತಿ ತನ್ನ ಗೆಳೆಯರು, ಸಂಬಂಧಿಕರ ಜೊತೆ ಹೋಗಬೇಕೆಂದಾಗಲೇ ಹೆಂಡತಿ ನೀವು ನನ್ನ ಜೊತೆಗೇ ಇರಿ ಎಂದು ಹಠ ಹಿಡಿಯಬಹುದು. ಇಂತಹ ಸ್ಥಿತಿಯಲ್ಲಿ ನಿಮ್ಮ ಪ್ರೀತಿ ಸಂಗಾತಿಗೆ ಶಿಕ್ಷೆಯಂತೆ ತೋರುತ್ತದೆ.

ಅಪೇಕ್ಷೆಗಳಿಗೂ ಇರಲಿ ಇತಿಮಿತಿ : ಎಷ್ಟೋ ಸಲ ನಾವು ಸಂಗಾತಿಯ ಬಗ್ಗೆ ಅತಿಯಾಗಿ ಅಪೇಕ್ಷೆ ಇಟ್ಟುಕೊಳ್ಳುತ್ತೇವೆ. ಸಂಗಾತಿ ನನ್ನನ್ನು ಪ್ರೀತಿಸುತ್ತಾನೆಂದರೆ ಆತ ನನ್ನ ಅಪೇಕ್ಷೆಗೆ ತಕ್ಕಂತೆ ವರ್ತಿಸಬೇಕು, ನೀವು ಆತನನ್ನು ಎಷ್ಟೊಂದು ಆಳವಾಗಿ ಪ್ರೀತಿಸುತ್ತೀರೋ, ಅಷ್ಟೇ ಆಳವಾಗಿ ಆತ ನಿಮ್ಮನ್ನು ಪ್ರೀತಿಸಬೇಕು ಎಂದು ನೀವು ಬಯಸುತ್ತೀರಿ. ಇದು ಕೂಡ ಸಂಗಾತಿಗೆ ತಾನು ಬಂಧಿ ಎಂಬ ಭಾವನೆ ಬರಲು ಕಾರಣವಾಗುತ್ತದೆ. ಅದರಿಂದ ಹೊರಬರಲು ಆತ ದಾರಿ ಕಂಡುಕೊಳ್ಳಲು ಪ್ರಯತ್ನ ನಡೆಸಬಹುದು.

ಸಂದೇಹ ಪಡಬೇಡಿ : ನಿಮ್ಮ ಸಂಗಾತಿ ಎಲ್ಲ ಸಂದರ್ಭಗಳಲ್ಲೂ ನಿಮ್ಮನ್ನು ಕೇಳಿಯೇ ನಿರ್ಧಾರ ಕೈಗೊಳ್ಳಬೇಕೆಂದು ನೀವು ಬಯಸುವುದು ಸರಿಯಲ್ಲ. ಸಂಗಾತಿ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು ನೀವು ಆಗಾಗ ಫೋನ್‌ ಮಾಡಿ ಕೇಳುವುದು, ಅವನ ಮೇಲೆ ಸಂದೇಹ ಪಡುವುದು ಸಂಗಾತಿಗೆ ಸಿಡಿಮಿಡಿಯನ್ನುಂಟು ಮಾಡಬಹುದು.

ನಿಕಟತೆಗೆ ಇರಲಿ ಇತಿಮಿತಿ : ಅಗತ್ಯಕ್ಕಿಂತ ಹೆಚ್ಚು ನಿಕಟತೆ ಇದ್ದಾಗ ಅದು ನಿಮ್ಮಿಬ್ಬರಲ್ಲಿ ಜಗಳಕ್ಕೂ ಕಾರಣವಾಗಬಹುದು. ಏಕೆಂದರೆ ಹಕ್ಕು ಪ್ರತಿಪಾದಿಸುವುದು ಒಮ್ಮೊಮ್ಮೆ ಆದೇಶ ನೀಡುವಲ್ಲಿ ಬದಲಾಗಬಹುದು. ಸಂಗಾತಿಗೆ ಪ್ರೀತಿ ಕೊಡಿ, ಆದರೆ ಅದು ಅತಿಯಾಗದಿರಲಿ. ನಿಮ್ಮ ಹಾಗೂ ನಿಮ್ಮ ಸಂಬಂಧದ ಮಹತ್ವ ಏನು ಅಂತ ಸಂಗಾತಿಗೆ ತಾನಾಗಿಯೇ ಗೊತ್ತಾಗಲಿ ಬಿಡಿ.

ನಿಮ್ಮ ಪ್ರೀತಿ ಇಬ್ಬರಿಗೂ ತಲೆನೋವಾಗದಿರಲು ಕೆಳಕಂಡ ಸಂಗತಿಗಳ ಮೇಲೆ ಗಮನಹರಿಸಿ :

ನೀವು ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದರೆ, ಅದನ್ನು ಆತನ ಮೇಲೆ ಹೇರಲು ಹೋಗಬೇಡಿ.

ನೀವು ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರೊ, ಆತನ ಬಗ್ಗೆ ಎಷ್ಟು ಗಮನ ಕೊಡುತ್ತೀರೊ, ಅಷ್ಟೇ ಪ್ರೀತಿ ಮತ್ತು ಗಮನವನ್ನು ಆತ ನಿಮ್ಮ ಮೇಲೆ ಹರಿಸಬೇಕೆಂದು ನೀವು ಬಯಸುತ್ತೀರಿ. ಆದರೆ ವಾಸ್ತವದಲ್ಲಿ ನಾವು ಯಾರನ್ನಾದರೂ ಪ್ರೀತಿಸುತ್ತೇವೆಂದರೆ ಅವರೂ ಅಷ್ಟೇ ಪ್ರೀತಿಸಬೇಕೆಂದು ಉದ್ದೇಶ ಇಟ್ಟುಕೊಂಡಿರುವುದಿಲ್ಲ.

ನೀವು ಸದಾ ಸಂಗಾತಿಯೊಂದಿಗೆ ಅಂಟಿಕೊಂಡಿರಬೇಡಿ. ನಿಮ್ಮ ಪ್ರೀತಿಗೆ ಇತಿಮಿತಿ ಇರಲಿ.

ಸಂಗಾತಿ ನಿಮ್ಮ ಮೇಲೆ ಅತಿಯಾಗಿ ಒತ್ತಡ ಹೇರುತ್ತಿದ್ದರೆ, ಅವನಿಂದ ಪ್ರತ್ಯೇಕಗೊಳ್ಳುವುದೇ ಪರಿಹಾರ ಎಂದು ಭಾವಿಸಬೇಡಿ. ಅವನಿಗೆ ಒಂದಿಷ್ಟು ಸಮಯ ಕೊಡಿ. ಯಾರ ಒತ್ತಡದಲ್ಲೂ ಇಬ್ಬರ ಸಂಬಂಧ ಹೆಚ್ಚು ದಿನಗಳ ಕಾಲ ಮುಂದುವರಿಯಬಾರದು.

ನೀವು ಸಂಗಾತಿಯನ್ನು ಎಷ್ಟು ಪ್ರೀತಿಸುತ್ತಿದ್ದೀರೊ, ಆತ ನಿಮ್ಮನ್ನು ಅಷ್ಟು ಪ್ರೀತಿಸದಿದ್ದರೆ ಅಥವಾ ನಿಮಗೆ ಅನುಕೂಲಕರ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಧೈರ್ಯ ಕಳೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಸಂಬಂಧದಲ್ಲಿ ಕಾಲಕ್ರಮೇಣ ಬದಲಾವಣೆ ಉಂಟಾಗುತ್ತದೆ. ಕಾಲಕ್ಕೆ ತಕ್ಕಂತೆ ಎಲ್ಲ ಬದಲಾಗುತ್ತದೆ. ಆದರೆ ಪ್ರೀತಿಯಲ್ಲಿ ಮೊದಲಿನಂತೆ ಅಪೇಕ್ಷೆಗಳು ಜೀವಂತವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತುಕತೆ ನಡೆಸುತ್ತಾ ಇರಿ.

ಸದಾ ಮುನಿಸಿಕೊಳ್ಳುವುದು, ಜಗಳ ತೆಗೆಯುವುದರಿಂದ ಸಂಬಂಧ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ನೀವು ಸಂಗಾತಿಯ ಮೇಲೆ ಹದ್ದುಗಣ್ಣು ಇಡುವುದು ಪ್ರೀತಿಯಿಂದಲ್ಲ, ಅವಿಶ್ವಾಸದ ದೃಷ್ಟಿಯಿಂದ ಎನ್ನುವುದು ಖಚಿತವಾಗುತ್ತದೆ.

– ಕೆ. ಪ್ರಣೀತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ