ನಿಧಾನವಾಗಿ ಒಂದು ಯುಗ ನಮ್ಮ ಕಣ್ಣೆದುರೇ ಅಂತ್ಯವಾಗುತ್ತಿದೆ. ಮುಂದಿನ ಹತ್ತು–ಹದಿನೈದು ವರ್ಷಗಳಲ್ಲಿ ನಮ್ಮ ಬದುಕಿನಿಂದ ಒಂದು ಇಡೀ ಪೀಳಿಗೆ ನಿಧಾನವಾಗಿ ಮರೆಯಾಗಬಹುದು. ಅದು ಕೇವಲ ಕೆಲವು ಜನರ ನಿರ್ಗಮನವಲ್ಲ; ಅವರೊಂದಿಗೆ ಒಂದು ಜೀವನ ಪದ್ಧತಿ, ಸಂಸ್ಕೃತಿ, ಸರಳತೆ, ನಂಬಿಕೆ, ಮೌಲ್ಯಗಳು ಮತ್ತು ಅಪಾರವಾದ ಮಾನವೀಯತೆ ಕೂಡ ದೂರವಾಗಬಹುದು. ಸೂರ್ಯೋದಯಕ್ಕೂ ಮುನ್ನ ಎದ್ದು, ಬೆಳಗಿನ ನಡಿಗೆಗೆ ಹೋಗಿ, ಗಿಡಗಳಿಗೆ ನೀರು ಹಾಕಿ, ಕೈಯಾರೆ ಹೂಗಳನ್ನು ಕಿತ್ತು ದೇವರಿಗೆ ಅರ್ಪಿಸುವವರು. ಪ್ರತಿದಿನ ದೇವಾಲಯಕ್ಕೆ ಹೋಗುವವರು… ರಸ್ತೆಯಲ್ಲಿ ಸಿಕ್ಕವರನ್ನು “ಹೇಗಿದ್ದೀರಿ?” ಎಂದು ನಿಜವಾದ ಕಾಳಜಿಯಿಂದ ವಿಚಾರಿಸುವವರು. ಕೈಮುಗಿದು ನಮಸ್ಕರಿಸುವವರು… ಊಟಕ್ಕೂ ಮುನ್ನ ದೇವರನ್ನು ಸ್ಮರಿಸುವವರು. ಹಬ್ಬಗಳು, ಕುಟುಂಬದ ಕೂಟಗಳು, ಅತಿಥಿ ಸತ್ಕಾರ, ನೆರೆಹೊರೆಯವರ ಕಾಳಜಿ, ತೀರ್ಥಯಾತ್ರೆ—ಇವೆಲ್ಲವೂ ಅವರ ಬದುಕಿನ ಸಹಜ ಭಾಗವಾಗಿದ್ದವು. ಮೊಬೈಲ್‌ ನೆನಪಿಸುವ ಅಗತ್ಯವಿಲ್ಲದೆ ಏಕಾದಶಿ, ಅಮಾವಾಸ್ಯೆ, ಹುಣ್ಣಿಮೆಗಳನ್ನು ನೆನಪಿಟ್ಟುಕೊಂಡಿದ್ದ ಆ ಪೀಳಿಗೆ ನಮ್ಮ ನಡುವೆ ನಿಧಾನವಾಗಿ ಕಡಿಮೆಯಾಗುತ್ತಿದೆ.

ಹಳೆಯ ಚಪ್ಪಲಿ, ಸರಳ ಬಟ್ಟೆ, ದಪ್ಪ ಕನ್ನಡಕ, ಕೈಬರಹದ ಚಿಕ್ಕ ಡೈರಿಯಲ್ಲಿ ದೂರವಾಣಿ ಸಂಖ್ಯೆಗಳು—ಇಷ್ಟೇ ಸಾಕಾಗಿತ್ತು ಅವರಿಗೆ.

ಜಗತ್ತನ್ನು ಮೆಚ್ಚಿಸಬೇಕೆಂಬ ಹಂಬಲ ಅವರಿಗಿರಲಿಲ್ಲ. ತಪ್ಪು ಸಂಖ್ಯೆಗೆ ಕರೆ ಮಾಡಿದರೂ ಅರ್ಧ ಗಂಟೆ ಮಾತನಾಡಿ, ಕೊನೆಯಲ್ಲಿ ಹೊಸ ಸ್ನೇಹಿತನನ್ನು ಕಂಡುಕೊಂಡ ಸಂತೋಷದಿಂದ ಫೋನ್ ಇಡುವ ಹೃದಯ ಅವರದು! ದಿನಪತ್ರಿಕೆಯನ್ನು ದಿನಕ್ಕೆ ಎರಡು–ಮೂರು ಬಾರಿ ಓದುವವರು, ಬೇಸಿಗೆಯಲ್ಲಿ ಉಪ್ಪಿನಕಾಯಿ ಮತ್ತು ಸಾಂಪ್ರದಾಯಿಕ ಹಪ್ಪಳ–ಸಂಡಿಗೆಗಳನ್ನು ತಯಾರಿಸುವವರು, ಮನೆಯಲ್ಲೇ ಮಸಾಲೆಗಳನ್ನು ರುಬ್ಬುವವರು, ಸ್ಥಳೀಯ ತರಕಾರಿಗಳು, ಸೊಪ್ಪು, ನಾಟಿ ಟೊಮ್ಯಾಟೊ, ಬದನೆಕಾಯಿ ಮತ್ತು ಹಳೆಯ ಕಾಲದ ರುಚಿಯನ್ನು ಹುಡುಕುವವರು. ಅವರ ಬದುಕು ನಮಗೆ ಹೇಳಿಕೊಟ್ಟದ್ದು ಹೋಲಿಕೆಗಿಂತ ತೃಪ್ತಿ, ಭಯಕ್ಕಿಂತ ಭಕ್ತಿ, ಪ್ರದರ್ಶನಕ್ಕಿಂತ ಸರಳತೆ, ಸಾಮಾಜಿಕ ಜಾಲತಾಣಕ್ಕಿಂತ ಸಂಬಂಧಗಳು, ಕೃತಕತೆಯಿಗಿಂತ ಪ್ರಕೃತಿ ಮತ್ತು ಅನುಕೂಲಕ್ಕಿಂತ ನಿಜವಾದ ಕಾಳಜಿ ಮುಖ್ಯ ಎಂಬ ಸತ್ಯವನ್ನು. ಅವರು ನಮ್ಮನ್ನು ಬಿಟ್ಟುಹೋದಾಗ ಕೇವಲ ಒಬ್ಬ ವ್ಯಕ್ತಿ ನಮ್ಮಿಂದ ದೂರವಾಗುವುದಿಲ್ಲ; ಒಂದು ಜೀವಂತ ಗ್ರಂಥಾಲಯವೇ ಮುಚ್ಚಿಹೋಗುತ್ತದೆ. ಸಾವಿರಾರು ಕಥೆಗಳು, ಅನುಭವಗಳು, ನೆನಪುಗಳು ಮತ್ತು ಬದುಕಿನ ಪಾಠಗಳು ಅವರೊಂದಿಗೆ ಕಣ್ಮರೆಯಾಗುತ್ತವೆ.

ಆದ್ದರಿಂದ ನಿಮ್ಮ ಮನೆಯಲ್ಲಿ ಇಂತಹ ಹಿರಿಯರು ಇದ್ದರೆ, ಅವರನ್ನು ಪ್ರೀತಿಸಲು ವಿಶೇಷ ದಿನಕ್ಕಾಗಿ ಕಾಯಬೇಡಿ. ಅವರ ಬಳಿ ಕುಳಿತುಕೊಳ್ಳಿ. ಅವರ ಮಾತುಗಳನ್ನು ಕೇಳಿ. ಅವರ ಬಾಲ್ಯದ ಕಥೆಗಳನ್ನು ಕೇಳಿ. ಅವರೊಂದಿಗೆ ಊಟ ಮಾಡಿ. ಅವರ ಕೈ ಹಿಡಿಯಿರಿ. ನಿಮ್ಮ ಸಮಯವನ್ನು ನೀಡಿ. ಏಕೆಂದರೆ ಒಂದು ದಿನ ಅವರ ಖಾಲಿ ಕುರ್ಚಿ, “ಇನ್ನಷ್ಟು ಮಾತನಾಡಬಹುದಿತ್ತು… ಇನ್ನಷ್ಟು ಸಮಯ ಕೊಡಬಹುದಿತ್ತು…” ಎಂದು ನಮ್ಮ ಮನಸ್ಸನ್ನು ಕಾಡಬಹುದು. ಹಿರಿಯರು ಕೇವಲ ನಮ್ಮ ಕುಟುಂಬದ ಸದಸ್ಯರಲ್ಲ; ಅವರು ನಮ್ಮ ಬೇರುಗಳು, ನಮ್ಮ ಇತಿಹಾಸ, ನಮ್ಮ ಸಂಸ್ಕೃತಿ, ನಮ್ಮ ಗುರುತು—ನಾವು ಬಂದ ವಿಳಾಸ. ಬೇರುಗಳನ್ನು ಮರೆತಾಗ, ನಿಧಾನವಾಗಿ ನಾವು ಯಾರು ಎಂಬುದನ್ನೇ ಮರೆಯಲು ಆರಂಭಿಸುತ್ತೇವೆ. ಆದ್ದರಿಂದ ಅವರು ನಮ್ಮೊಂದಿಗಿರುವಾಗಲೇ ಅವರನ್ನು ಗೌರವಿಸೋಣ, ಪ್ರೀತಿಸೋಣ, ಅವರಿಂದ ಕಲಿಯೋಣ ಮತ್ತು ಅವರ ನೆನಪುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ