ಬಿಹಾರ್ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರು ಇತ್ತೀಚಿನ ವರ್ಷಗಳಲ್ಲಿ ಒಂದು ವಿಶೇಷ ಸುದ್ದಿಯಿಂದಾಗಿ ಜನರ ಗಮನವನ್ನು ಸೆಳೆದಿದ್ದರು. ತಮ್ಮ ಮಗ ಉತ್ಕರ್ಷ ತಥಾಗತನ ವಿವಾಹ ಸಮಾರಂಭವನ್ನು ಸರಳವಾಗಿ ನೆರವೇರಿಸಿ ಜನರು ಹುಬ್ಬೇರಿಸುವಂತೆ ಮಾಡಿದ್ದರು. ತಮ್ಮ ಕೆಲವೇ ಬಂಧು ಮಿತ್ರರು ಮತ್ತು ರಾಜಕೀಯ ಮುಖಂಡರನ್ನು ಇನ್ವಿಟೇಷನ್ ಕಾರ್ಡ್ ಮೂಲಕ ಆಮಂತ್ರಿಸಿದ್ದರು. ಆಮಂತ್ರಿತರಿಗೆ ಯಾವುದೇ ಗಿಫ್ಟ್ ಅಥವಾ ಕವರ್‌ಗಳನ್ನು ಹಿಡಿದು ಬರದಂತೆ ಮನವಿ ಮಾಡಿದ್ದರು. ಇತರೆ ರಾಜಕೀಯ ಮುಖಂಡರ ಕುಟುಂಬಗಳು ನೆರವೇರಿಸುವಂತಹ ಮೋಜುಮಸ್ತಿಯ ಅದ್ಧೂರಿ ಕಾರ್ಯವಾಗಿರದೆ ಅದೊಂದು ಸರಳ ಸಮಾರಂಭವಾಗಿದ್ದಿತು. ಅಲ್ಲಿ ಭೂರಿ ಭೋಜನದ ಬದಲು ಕೇವಲ ಉಪಾಹಾರದ ಏರ್ಪಾಡು ಮಾಡಲಾಗಿತ್ತು.
ಉತ್ತರ ಭಾರತದ ಒಬ್ಬ ರಾಜಕೀಯ ಮುಖಂಡರು ವಿಜೃಂಭಣೆಯ ವಿವಾಹ ಪದ್ಧತಿಯನ್ನು ಒಪ್ಪದೆ, `ಆದರ್ಶ ವಿವಾಹ ನಡೆಸಬೇಕು' ಎನ್ನುತ್ತಾರೆ.
ಒಬ್ಬ ವರನಿಗೆ ಕನ್ಯೆಯನ್ನು ಸೂಚಿಸುವಾಗ ಕೆಲವು ಷರತ್ತುಗಳನ್ನು ಮುಂದಿಡುತ್ತಾರೆ. ವರದಕ್ಷಿಣೆ ಪಡೆಯಬಾರದು ಎಂಬುದು ಮೊದಲನೆಯದಾದರೆ, ಅಂಗದಾನ ಮಾಡುವ ಸಂಕಲ್ಪ ತೊಡಬೇಕು ಎಂಬುದು ಎರಡನೇ ಷರತ್ತು. ಮುಂದಾಳುಗಳು ಇಂತಹ ಆದರ್ಶಗಳನ್ನು ಪಾಲಿಸಿದರೆ, ಸಾಮಾನ್ಯ ಜನರು ಅವುಗಳನ್ನು ಅನುಸರಿಸಲು ಮುಂದಾಗುವುದರಲ್ಲಿ ಸಂದೇಹವೇ ಇರುವುದಿಲ್ಲ. ಇದರಲ್ಲಿ ಎದುರಾಗುವ ಒಂದು ತೊಂದರೆಯೆಂದರೆ ಇಂತಹ ಬದಲಾವಣೆಯ ಪ್ರಯೋಗ ನಡೆಸಲು ಮದುವೆಯ ಪೂರ್ವದಲ್ಲಿ ಹುಡುಗ-ಹುಡುಗಿ ಮತ್ತು ಅವರ ಕುಟುಂಬದವರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕಾಗುತ್ತದೆ.
ದುಂದುಗಾರಿಕೆ
ನಾವು ವಿವಾಹಗಳಲ್ಲಿ ಅಲಂಕಾರ, ಶಾಸ್ತ್ರವಿಧಿ, ವಾದ್ಯ, ಅತಿಥಿಸತ್ಕಾರ, ಮೊದಲಾದವುಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತೇವೆ. ಶಾಸ್ತ್ರವಿಧಿಗಳಿಗಾಗಿ ಪಂಡಿತರು ಪ್ಯಾಕೇಜ್‌ಗಳನ್ನು ರೂಪಿಸಿ ಹಣ ಸುಲಿಗೆ ಮಾಡುತ್ತಾರೆ. ಮದುವೆ ಮನೆಯ ಹೂವಿನ ಅಲಂಕಾರಕ್ಕೆ ಲಕ್ಷ ಲಕ್ಷ ಹಣ ವ್ಯಯವಾಗುತ್ತದೆ. ಹಲವರು ಅತಿಥಿಗಳಿಗೆ ತಂಗುವ ವ್ಯವಸ್ಥೆ ಮತ್ತು ಉಡುಗೊರೆಗಳಿಗಾಗಿ ಲೆಕ್ಕವಿಲ್ಲದಂತೆ ಖರ್ಚು ಮಾಡುತ್ತಾರೆ. ಇಂತಹ ಪದ್ಧತಿಯಿಂದಾಗಿ ಮಧ್ಯಮ ವರ್ಗದ ಜನರು ಮಗಳ ಮದುವೆ ಮಾಡುವಾಗ ಸಾಲದಲ್ಲಿ ಮುಳುಗಿ ಹೋಗುತ್ತಾರೆ. ಸಿರಿವಂತರು, ಬಿಸ್‌ನೆಸ್‌ಮೆನ್ ಮತ್ತು ರಾಜಕೀಯ ವ್ಯಕ್ತಿಗಳು ಮಾತ್ರ ಯಾವ ಪರಿವೆಯೂ ಇಲ್ಲದೆ ವಿಜೃಂಭಣೆಯ ವಿವಾಹ ಕಾರ್ಯದಲ್ಲಿ ಪೈಪೋಟಿಯಿಂದ ಸಿದ್ಧತೆ ನಡೆಸುತ್ತಾರೆ.
ಬಿಜೆಪಿ ಮುಖಂಡರಾಗಿದ್ದ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರು. ನವೆಂಬರ್ 2016ರಲ್ಲಿ ಜರುಗಿದ ಈ ವಿವಾಹಕ್ಕೆ 40-50 ಸಾವಿರ ಜನರನ್ನು ಆಮಂತ್ರಿಸಲಾಗಿತ್ತು. ಸಾಧಾರಣ ಆಮಂತ್ರಣ ಪತ್ರಿಕೆಯಲ್ಲದೆ, ವಿಶೇಷವಾಗಿ ತಯಾರಿಸಿದ್ದ ಇನ್ವಿಟೇಶನ್, ವೀಡಿಯೋ ರೂಪಕದಲ್ಲಿತ್ತು. ಅತಿಥಿಗಳಿಗಾಗಿ ಪಂಚತಾರಾ ಹೋಟೆಲ್‌ಗಳಲ್ಲಿ 1500 ರೂಮ್ ಗಳನ್ನು ಬುಕ್ ಮಾಡಲಾಗಿತ್ತು. ಹೆಲಿಕಾಪ್ಟರ್‌ಗಳನ್ನು ಇಳಿಸುವುದಕ್ಕಾಗಿ 15 ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿತ್ತು. ವಿವಾಹ ಸ್ಥಳದಲ್ಲಿನ ರಕ್ಷಣೆಗಾಗಿ 3 ಸಾವಿರ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿತ್ತು. ಬಾಲಿವುಡ್‌ನಿಂದ ಕರೆಸಲಾಗಿದ್ದ ಆರ್ಟ್ ಡೈರೆಕ್ಟರ್‌ಗಳು ವಿಜಯನಗರ ಮಾದರಿಯ ಮಂದಿರ, ಕಟ್ಟಡಗಳ ಭವ್ಯವಾದ ಸೆಟ್‌ಗಳನ್ನು ತಯಾರಿಸಿದ್ದರು. ಮದುಮಗಳು ಉಟ್ಟಿದ್ದ ಸೀರೆಯ ಬೆಲೆಯೇ 17 ಕೋಟಿ ರೂಪಾಯಿಗಳು!
ವಿಡಂಬನೆ ಎಂದರೆ ಬೆಂಗಳೂರಿನಲ್ಲಿ ರೆಡ್ಡಿ 5 ದಿನಗಳ ಅದ್ಧೂರಿ ಸಮಾರಂಭವನ್ನು ನಡೆಸುತ್ತಿರುವ ಸಮಯದಲ್ಲಿ ದೇಶದೆಲ್ಲೆಡೆ ಜನರು ಡೀಮಾನಿಟೈಸೇಷನ್‌ನ ಕಾರಣದಿಂದಾಗಿ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಉದ್ದವಾದ ಸಾಲುಗಳಲ್ಲಿ ನಿಂತು ಹೆಣಗಾಡುತ್ತಿದ್ದರು.