ಇಂಟರ್‌ನೆಟ್ ಎಂತಹ ಒಂದು ತಂತ್ರಜ್ಞಾನವೆಂದರೆ, ಅದರ ಲಾಭಗಳನ್ನು ಎಣಿಕೆ ಮಾಡುತ್ತಾ ಹೋದರೆ ಸಮಯ ಸಾಲುವುದಿಲ್ಲ. ಆದರೆ ಅದು ಮಾನವರ ಜೀವನದ ಮೇಲೆ ಬೀರುವ ಪರಿಣಾಮಗಳು ಕೂಡ ಕಡಿಮೆ ಏನಿಲ್ಲ. ಮುಂಚೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದರೆ, 4 ಜನ ಒಂದೆಡೆ ಸೇರಿದರೆ ಗದ್ದಲ ನಡೆದಂತೆ ಭಾಸವಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, 40 ಜನ ಒಂದೆಡೆ ಸೇರಿದರೂ ಶಾಂತಿ ಆವರಿಸಿರುತ್ತದೆ.
ಇಂಟರ್‌ನೆಟ್ ಕ್ರಾಂತಿ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿಬಿಟ್ಟಿದೆ. ಇದರ ನಕಾರಾತ್ಮಕ ಪ್ರಭಾವ ಗಂಡಹೆಂಡತಿಯ ಸಂಬಂಧದ ಮೇಲೂ ಆಗಿದೆ. ಏಕೆಂದರೆ ಮೊಬೈಲ್ ಬೆಡ್‌ರೂಮ್ ನಲ್ಲೂ ದಾಳಿ ಇಟ್ಟಿದೆ. ಮೊದಲು ಗಂಡಹೆಂಡತಿ ಪರಸ್ಪರರ ಮಾತು ಕೇಳಿಸಿಕೊಳ್ಳುತ್ತಿದ್ದರು ಅಥವಾ ಜಗಳವಾಡುತ್ತಿದ್ದರು. ಆದರೆ ಈಗ ಆ ಸಮಯವನ್ನು ಮೊಬೈಲ್ ಸ್ವಾಹಾ ಮಾಡಿಬಿಟ್ಟಿದೆ. ದೂರದ ವ್ಯಕ್ತಿಗಳ ಜೊತೆ ಮಾತನಾಡಲು ಖುಷಿ ಕೊಡುತ್ತದೆ. ಆದರೆ ಅದೇ ಸಮೀಪದ ವ್ಯಕ್ತಿಯ ಜೊತೆ ಮಾತಾಡುವುದು ಕಹಿಯನ್ನುಂಟು ಮಾಡುತ್ತದೆ.
ಗಂಡಹೆಂಡತಿಯ ಜೊತೆ ಯಾರೇ ಆಗಲಿ ಬರುವುದು ಇದು ಹಾನಿದಾಯಕವೇ ಹೌದು. ಅದು ಮೊಬೈಲ್ ಕೂಡ ಆಗಿರಬಹುದು.
ಬೆಡ್‌ರೂಮಿನ ಸಮಯ ಗಂಡಹೆಂಡತಿ ಇವರಿಬ್ಬರ ವೈಯಕ್ತಿಕ ಸಮಯವಾಗಿರುತ್ತದೆ. ಹಗಲು ಹೊತ್ತು ನೀವು ಏನೇ ಮಾಡಿ, ಎಷ್ಟೇ ಕೆಲಸದಲ್ಲಿ ವ್ಯಸ್ತರಾಗಿರಿ, ಆದರೆ ಬೆಡ್‌ರೂಮಿನೊಳಗಿನ ಸಮಯವನ್ನು ಪರಸ್ಪರರಿಗಾಗಿ ನೀಡಿದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ ಹಾಗೂ ಖುಷಿಯನ್ನು ಹಾಗೆಯೇ ಕಾಯ್ದುಕೊಂಡು ಹೋಗಲು ಅನುಕೂಲವಾಗುತ್ತದೆ.
ಬೆಡ್‌ರೂಮ್ ಹೊರತಾಗಿ ಗಂಡಹೆಂಡತಿ ಅತ್ಯುತ್ತಮ `ಕಪಲ್ ಟೈಮ್' ಕಳೆಯಲು ಇಲ್ಲಿ ಕೆಳಕಂಡ ವಿಧಾನಗಳು ಇವೆ :
ಲೇಟ್ ನೈಟ್ ಡ್ರೈವ್ : ಹೆಚ್ಚಿನ ದಂಪತಿಗಳು ರಾತ್ರಿ ಊಟದ ಬಳಿಕ ಬೆಡ್‌ರೂಮಿಗೆ ಹೋಗುತ್ತಿದ್ದಂತೆ ನೆಟ್ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. ಯಾವಾಗಾದರೊಮ್ಮೆ ನೆಟ್ ಬಿಟ್ಟು ಸಂಗಾತಿಯ ಜೊತೆಗೆ ನೈಟ್ ಡ್ರೈವ್ ಬಗ್ಗೆ ಯೋಚಿಸಿ. ಯಾವಾಗಾದರೂ ಐಸ್‌ಕ್ರೀಮ್ ತಿನ್ನುವ ನೆಪದಲ್ಲಿ ಇಲ್ಲವೇ ಹೊರಗಿನ ತಾಜಾ ಗಾಳಿ ಸೇವನೆಗಾದರೂ ಹೊರಗೆ ಹೋಗಿ.
ಕಾಫಿ ಮತ್ತು ನಾವಿಬ್ಬರೂ : ಡಿನ್ನರ್ ಬಳಿಕ ಟೆರೇಸ್ ಅಥವಾ ಬಾಲ್ಕನಿಯಲ್ಲಿ ಹಾಟ್ ಕಾಫಿಯ ಜೊತೆ ರೊಮ್ಯಾಂಟಿಕ್ ಮಾತುಕತೆ ನಡೆಸಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ.
ಕ್ವಿಕ್ ಔಟಿಂಗ್ : ಮನೆಯಿಂದ ಹೊರಗೆ ಹೋಗಲು ವೀಕೆಂಡ್‌ಗಾಗಿ ನಿರೀಕ್ಷಿಸಲು ಹೋಗಬೇಡಿ. ಯಾವಾಗಾದರೊಮ್ಮೆ ವಾರದ ದಿನಗಳಲ್ಲೂ ಆಫೀಸ್‌ನಿಂದ ಸ್ವಲ್ಪ ಬೇಗ ಹೊರಟು, ಮೊದಲೇ ನಿಗದಿಪಡಿಸಿದ ಸ್ಥಳಕ್ಕೆ ಸಂಗಾತಿಗೆ ಬರಲು ಹೇಳಿ. ಸಮೀಪದ ಮಾಲ್ ಅಥವಾ ಮಾರ್ಕೆಟ್‌ನಲ್ಲಿ ಸುತ್ತಾಟದ ಮಜ ಪಡೆದುಕೊಳ್ಳಿ.
ಸರ್ಫಿಂಗ್ ಜೊತೆಗೆ ಶಾಪಿಂಗ್ : ನೆಟ್‌ನಲ್ಲಿ ಒಬ್ಬರೇ ವ್ಯಸ್ತರಾಗಿರುವ ಬದಲು ಸಂಗಾತಿಯ ಜೊತೆಗೂ ಒಮ್ಮೊಮ್ಮೆ ಶಾಪಿಂಗ್ ಸೈಟ್ಸ್ ಗೆ ಭೇಟಿ ಕೊಡಿ. ಇದು ಸಂಗಾತಿಯ ಜೊತೆಗೆ ಸಮಯ ಕಳೆಯುವ ಒಂದು ಅತ್ಯುತ್ತಮ ಉಪಾಯ ಎನಿಸುತ್ತದೆ.
ಹೆಚ್ಚಿನ ಜನರು ಖುಷಿ ಅನುಭವಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಅಂತಹ ಖುಷಿಯನ್ನು ನೀಡುವ ಅದೆಷ್ಟೋ ಚಿಕ್ಕಪುಟ್ಟ ಕ್ಷಣಗಳು ಅವರಿಗೆ ದೊರಕುತ್ತಿರುತ್ತವೆ. ಅವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ದಂಪತಿಗಳಿಗೆ ಇರಬೇಕು.