ಶಿಕ್ಷಕಿ ಆಗಿದ್ದ ಆಶಾರಾಣಿ ಶೆಫ್ ಆದ ಜರ್ನಿಯೇ ರೋಚಕ! ಈಕೆ ಈ ರೀತಿ ಪಾಕ ಪ್ರವೀಣೆಯಾಗಿ ಎಲ್ಲೆಲ್ಲೂ ಕೀರ್ತಿ ಪಡೆದಿದ್ದು ಹೇಗೆ ಎಂದು ವಿವರವಾಗಿ ತಿಳಿಯೋಣವೇ.....?
ಅಡುಗೆ ಅನ್ನೋದು ಕೇವಲ ಯಾವುದೋ ಆಹಾರವನ್ನು ಬೇಯಿಸಿ ಒಗ್ಗರಣೆ ಹಾಕೋದಲ್ಲ. ಅಡುಗೆ ಅನ್ನೋದು ಒಂದು ಅದ್ಭುತ ಕಲೆ. ಅದನ್ನು ಸಿದ್ಧಪಡಿಸಿ ಎಲ್ಲರನ್ನು ಸಂತೃಪ್ತಿಪಡಿಸುವುದು ಒಂದು ಮಹಾನ್ ವಿದ್ಯೆ. ಇಂತಹ ವಿದ್ಯೆ ಎಲ್ಲರಿಗೂ ಒಲಿಯೋದಿಲ್ಲ. ಇತ್ತೀಚೆಗಂತೂ ಅಡುಗೆ ಮಾಡುವ ವಿಧಾನವೇ ಒಂದು ಟ್ರೆಂಡ್ ಆಗಿದೆ. ಯಾವ ಐಟಿ, ಬಿಟಿಗೂ ಕಮ್ಮಿ ಇಲ್ಲದಂತೆ ಶೆಫ್ ಅನ್ನುವ ಹೆಸರಲ್ಲಿ ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಅಡುಗೆ ಮಾಡುವ ಕಲೆ, ರುಚಿ ಕೊಡುವ ತಂತ್ರ ಅದಕ್ಕೆ ಬಳಸುವ ಪದಾರ್ಥಗಳೂ ಕೂಡ ವಿಶ್ವಾದ್ಯಂತ ವ್ಯಾಪಕವಾಗಿ ಬದಲಾಗುತ್ತಲೇ ಇದೆ. ಇದೆಲ್ಲ ಅಡುಗೆ ಮಾಡುವವರ ಕೌಶಲ್ಯ ಮತ್ತು ಅದಕ್ಕೆ ಪಡೆದಿರುವ ತರಬೇತಿ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆ ಎನ್ನುವುದು ಕಲೆಯಾದರೆ, ಅದರಲ್ಲಿ ಬಳಸುವ ವಸ್ತುಗಳು ಕೂಡ ಅದೇ ರೀತಿ ಪರಿಗಣಿಸಿದಾಗ ಅದ್ಭುತವಾದ ಖಾದ್ಯ ಸೃಷ್ಟಿಯಾಗುತ್ತದೆ. ಅಂತೆಯೇ ಅಡುಗೆ ಮಾಡುವವರು ಸಂತೋಷದಿಂದ ಅಡುಗೆ ಮಾಡಿದರೆ ಅದನ್ನು ಎಲ್ಲರೂ ಸಂಭ್ರಮದಿಂದ ಸವಿಯುತ್ತಾರೆ. ಅಡುಗೆ ಬರೀ ಕಲೆ, ವಿಜ್ಞಾನ ಮಾತ್ರವಲ್ಲದೇ ಭಾವನಾತ್ಮಕ ವಿಚಾರಗಳಿಗೆ ಇಂಬು ಕೊಡುವ ಅದೊಂದು ಪಾಕ ಶಾಸ್ತ್ರವೇ ಹೌದು, ಎಂದು ಹೇಳಿದ್ರೂ ತಪ್ಪಾಗಲಿಕ್ಕಿಲ್ಲ.
ಅಡುಗೆಯ ಬಗ್ಗೆ ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ ತಿಳಿದೇ ಇರುತ್ತದೆ. ಆದರೆ, ಸ್ವಾದಿಷ್ಟವಾಗಿ, ಸಂತಸದಿಂದ, ಆಸಕ್ತಿಯಿಂದ ಅಡುಗೆ ಮಾಡುವವರು ಬಹಳ ವಿರಳ. ಒಬ್ಬ ಗೃಹಿಣಿ ಅಡುಗೆ ತಯಾರಿಸುತ್ತಿರುವಾಗ ಆಕೆ ಯಾವ ಮನಸ್ಥಿತಿ, ಭಾವನೆ ಇಟ್ಟುಕೊಂಡು ಅಡುಗೆ ಮಾಡುತ್ತಾಳೋ, ಆ ಆಹಾರವನ್ನು ಸೇವಿಸುವವರಿಗೂ ಅದೇ ರೀತಿಯ ಭಾವನೆಗಳು ಸೇರಿಕೊಳ್ಳುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಒಬ್ಬ ಗೃಹಿಣಿ ಸಂತೋಷದಿಂದ ಅಡುಗೆ ಮಾಡಿ ಉಣಬಡಿಸಿದರೆ, ತಿಂದವರಿಗೂ ತೃಪ್ತ ಭಾವ ಮೂಡುತ್ತದೆ. ಅಂತೆಯೇ ಕೋಪದಲ್ಲಿ ಮಾಡಿದ ಅಡುಗೆ ತಿಂದವರಿಗೂ ಕೋಪ ತರಿಸುತ್ತದೆ ಎಂಬುದೂ ಕೂಡ ಸಾಬೀತಾಗಿದೆ.
ಹಿಂದಿನ ಕಾಲದಲ್ಲಿ ತಾಯಂದಿರು ಅಡುಗೆ ಮಾಡುವಾಗ ಬಹಳ ಶಾಂತವಾಗಿ, ಕೆಲವು ಮಂತ್ರಗಳನ್ನು ಪಠಿಸುತ್ತಾ ಅಡುಗೆ ಮಾಡುತ್ತಿದ್ದರು. ಅದನ್ನು ಸೇವಿಸಿದ ಮನೆಯವರೆಲ್ಲರಲ್ಲೂ ಬಾಂಧವ್ಯ, ಪ್ರೀತಿ, ಒಗ್ಗಟ್ಟಿನ ಭಾವ ಇರುತ್ತಿತ್ತು. ಅದೇನೇ ಇರಲಿ, ನಾವು ಮಾಡುವ ಅಡುಗೆಯನ್ನು ಮತ್ತಷ್ಟು ಆಸಕ್ತಿಯಿಂದ ತಯಾರಿಸಿದರೆ, ಮನೆಯವರೆಲ್ಲರಲ್ಲೂ ಖಂಡಿತಾ ಪಾಸಿಟಿವ್ ಭಾವನೆ ಮೂಡುತ್ತದೆ. ಅಡುಗೆ ಮಾಡುವುದಂತೂ ದಿಟ, ಸೇವಿಸುವುದು ಸತ್ಯ. ಹಾಗಿದ್ದ ಮೇಲೆ ನಾವು ಮಾಡುವ ಅಡುಗೆಯನ್ನು ಒಂದಷ್ಟು ಪ್ರೀತಿ, ಉತ್ಸಾಹ, ಶ್ರದ್ಧೆ, ಕಾಳಜಿಯಿಂದ ಮಾಡಿದ್ದಲ್ಲಿ, ಅದನ್ನು ಸೇವಿಸುವವರಲ್ಲೂ ಸಂತೃಪ್ತ ಭಾವ ಮೂಡುತ್ತದೆ.
ಕುಕಿಂಗ್ ಕ್ವೀನ್ ಆಶಾರಾಣಿ ಶಿಕ್ಷಕಿ ಆಗಿದ್ದ ಇವರು ಶೆಫ್ ಆಗಿದ್ದು ಹೇಗೆ.....?
ಕೆಲವರಿಗೆ ಅಡುಗೆ ಮಾಡು ಕಲೆ ಜನ್ಮಗತವಾಗಿ ಬಂದಿದ್ದರೆ, ಅದರ ಬಗ್ಗೆ ಮೂಡುವ ಆಸಕ್ತಿಯಿಂದ, ಮತ್ತೆ ಕೆಲವರಿಗೆ ವಿಭಿನ್ನ ರೀತಿಯ ರುಚಿ ನೋಡುವ ಮೂಲಕ ಬರಬಹುದು. ಮತ್ತೆ ಕೆಲವರಿಗೆ ಅವರು ಮಾಡಿದ ಆಹಾರವನ್ನು ಸೇವಿಸಿ, ಸೂಪರ್ ಇದೆ ಎಂದು ಸೇವಿಸಿದವರು ಹೇಳಿದಾಗ, ತಾನು ಇನ್ನೇನೋ ಸೇರಿಸಿ ಬಹಳಷ್ಟು ರುಚಿಕರವಾಗಿ ಮಾಡಬಹುದಿತ್ತೇ ಎಂದೆನಿಸಿ ಮತ್ತಷ್ಟು ಅಡುಗೆ ಮಾಡುವಲ್ಲಿ ಆಸಕ್ತಿ ಮೂಡುತ್ತದೆ. ಅಂತಹರ ಸಾಲಿನಲ್ಲಿ ಶೆಫ್ ಆಶಾರಾಣಿ ಕೂಡಾ ಸೇರುತ್ತಾರೆ. ಹೆಚ್ಚು ಮಸಾಲೆ ಬಳಸದೇ, ಅತಿ ಕಡಿಮೆ ಪದಾರ್ಥಗಳಲ್ಲಿ ಅತಿ ಹೆಚ್ಚು ರುಚಿಕರವಾಗಿ ಆಹಾರ ತಯಾರಿಸುವ ಕಲೆ ಇವರಿಗೆ ಕರತಲಾಮಲಕವಾಗಿದೆ.





